ಕಳೆದ ವರ್ಷ ಲೋಕಸಭಾ ಚುನಾವಣೆ ನಡೆದಿತ್ತು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತುಮಕೂರಿನಿಂದ ಅಖಾಡಕ್ಕೆ ಇಳಿದಿದ್ದರು. ಒಕ್ಕಲಿಗರ ಪ್ರಾಬಲ್ಯ ಇರುವ ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸೋಲುವ ಸಾಧ್ಯತೆ ಇಲ್ಲ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಲನ್ನು ಅಪ್ಪಿಕೊಳ್ಳಬೇಕಾಯ್ತು. ಇದಕ್ಕೆ ಎರಡು ಕಾರಣ. ಕಾಂಗ್ರೆಸ್ ನ ಒಳಬೇಗುದಿ ಗೌಡರ ಸೋಲಿಗೆ ಕಾರಣವಾದ ಮೊದಲನೇ ಅಂಶವಾದರೆ, ಎರಡನೇ ಅಂಶ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಹರಿಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ನಾಲೆ ಕೆಲಸ ಮಾಡುತ್ತಿದ್ದಲ್ಲಿ ಮಣ್ಣು ಸುರಿಸಿ ಕಾಮಗಾರಿಗೆ ತಡೆ ಮಾಡಿದರು. ತುಮಕೂರಿಗೆ ಹೇಮಾವತಿ ಡ್ಯಾಂನಿಂದ 25 ಟಿಎಂಸಿ ನೀರು ನಿಗದಿಯಾದರೂ ಸಂಪೂರ್ಣ ನೀರು ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕೂಡ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಅವರ ಕುಟುಂಬದ ಜನ ಎಂದು ಅಬ್ಬರದ ಪ್ರಚಾರ ಮಾಡಲಾಯ್ತು. ಒಂದು ಮಟ್ಟಕ್ಕೆ ತುಮಕೂರಿಗೆ ಗೌಡರ ಕುಟುಂಬ ದ್ರೋಹ ಎಸಗಿದೆ ಎನ್ನುವ ಮಟ್ಟಕ್ಕೆ ಪ್ರಚಾರ ಪಡೆದಿತ್ತು. ಆದರೆ ಇದೀಗ ತುಮಕೂರಿನತ್ತ ಹರಿಯುತ್ತಿದ್ದಾಳೆ ಜಿದ್ದಿಗೆ ಬಿದ್ದ ಹೇಮಾವತಿ.

ತುಮಕೂರಲ್ಲಿ ಗೌಡರನ್ನು ಸೋಲಿಸಿದ್ದ ಹೇಮಾವತಿ, ತುಮಕೂರು ಕಡೆಗೆ ಪಾದ ಬೆಳೆಸಿದ್ದಾಳೆ. ಈ ಬಗ್ಗೆ ಹಾಸನದಲ್ಲಿ ಮಾತನಾಡಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ, “ತುಮಕೂರಿಗೆ ಹೇಮಾವತಿ ಡ್ಯಾಂನಿಂದ ನೀರು ಬಿಡುತ್ತಿದ್ದಾರೆ. ಆದ್ರೆ ಮಂಡ್ಯ ಮತ್ತು ಹಾಸನ ಜಿಲ್ಲೆಗೆ ನೀರು ಬಿಡುತ್ತಿಲ್ಲ. ನೀರು ಬಿಟ್ಟ ಮೇಲೆ ಮೂರು ಜಿಲ್ಲೆಗಳಿಗೂ ನೀರು ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಹಾಸನದಲ್ಲಿ ಕುಡಿಯೋಕೆ ನೀರಿಲ್ಲ. ಆದರೆ ಪೊಲೀಸ್ ಇಲಾಖೆ ಬಳಸಿಕೊಂಡು ತುಮಕೂರಿಗೆ ನೀರು ಹರಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರನ್ನ ನಿಲ್ಲಿಸಿಕೊಂಡು ನೀರು ಹರಿಸಲಾಗುತ್ತಿದೆ. ಪೊಲೀಸ್ ಇಲಾಖೆ ಬಳಸಿಕೊಂಡು ಕೇವಲ ತುಮಕೂರಿಗೆ ನೀರು ಬಿಡುತ್ತಿದ್ದಾರೆ ಏನಾದ್ರೂ ಹೆಚ್ಚುಕಮ್ಮಿ ಆದರೆ ನಾನು ಹೊಣೆಯಲ್ಲ” ಎಂದಿದ್ದಾರೆ. “ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಜನ್ರು ಅಣ್ಣ ತಮ್ಮಂದಿರಂತೆ ಇದ್ದೀವಿ. ಹೇಮಾವತಿ ನೀರು ಮೂರು ಜಿಲ್ಲೆಗಳಿಗೂ ಸೇರಬೇಕು. ಹಾಗಾಗಿ ಮೂರು ಜಿಲ್ಲೆಯ ಜಲಾನಯನ ಪ್ರದೇಶಕ್ಕೆ ನೀರು ಹರಿಸಬೇಕು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿದರು.

ಪೊಲೀಸರನ್ನ ಬಳಸಿಕೊಂಡು ಎಷ್ಟು ದಿನ ತುಮಕೂರಿಗೆ ನೀರು ಬಿಡಲು ಸಾಧ್ಯ ಎಂದು ಪ್ರಶ್ನೆ ಮಾಡಿರುವ ಹೆಚ್.ಡಿ ರೇವಣ್ಣ, ಪೊಲೀಸ್ ಫೋರ್ಸ್ ಬಳಸಿಕೊಂಡು ಮಿನಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿದಂತೆ ಆಗಿದೆ. ಹೇಮಾವತಿ ಜಲಾಶಯದಲ್ಲಿ 14 ಟಿಎಂಸಿ ನೀರು ಇದೆ. ಈಗ ತುಮಕೂರಿಗೆ 2 ಟಿಎಂಸಿ ನೀರು ಹರಿಸುತ್ತಿದ್ದಾರೆ. ತುಮಕೂರು ನಾಲೆಯಲ್ಲಿ ಸಂಪೂರ್ಣವಾಗಿ ದೊಡ್ಡದೊಡ್ಡ ಮರಗಳು ಬೆಳೆದಿವೆ. ದೊಡ್ಡದೊಡ್ಡ ಕಲ್ಲುಗಳು ಬಿದ್ದಿವೆ. ತುಮಕೂರಿಗೆ ಹೇಮಾವತಿ ನೀರೇ ತಲುಪುತ್ತಿಲ್ಲಾ ಆದರೂ ಉದ್ದೇಶಪೂರ್ವಕವಾಗಿ ನಾಲೆಗೆ ನೀರು ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಜನರ ತಾಳ್ಮೆ ಕೆಟ್ಟರೆ ನಾವು ಜವಾಬ್ದಾರಿಯಲ್ಲ ಎಂದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಹೇಮಾವತಿ ಚೀಫ್ ಎಂಜಿನಿಯರ್ ಕೇಳಿದರೆ, ನಮಗೆ ಯಾವುದೇ ಆದೇಶ ಬಂದಿಲ್ಲ ಎನ್ನುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೇಳುತ್ತಾರೆ. ತುಮಕೂರು ಕಾಲುವೆಯನ್ನು ದುರಸ್ಥಿ ಮಾಡಿದ ಬಳಿಕ ಕಾಲುವೆಗೆ ನೀರು ಬಿಡಿ, ಜೊತೆಗೆ ಮಂಡ್ಯ ಮತ್ತು ಹಾಸನ ಜಿಲ್ಲೆಗೂ ನೀರು ಬಿಡಿ. ತುಮಕೂರಿಗೆ ತುಸು ಹೆಚ್ಚಾಗಿಯೇ ಬಿಡಿ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ.
ಜಲಾಶಯದಿಂದ ನಾಲೆಗೆ ನೀರು ಬಿಡುವುದು. ಮಳೆಗಾಲ ಆರಂಭವಾಗಿ ಡ್ಯಾಂಗೆ ನೀರು ಹರಿದು ಬರುವುದಕ್ಕೆ ಶುರುವಾದ ಬಳಿಕ ಮಾತ್ರ. ಹೇಮಾವತಿ ನಾಲೆಯಿಂದಲೂ ಜುಲೈ ಮಧ್ಯದಲ್ಲಿ ಕಾಲುವೆಗೆ ನೀರು ಬಿಡಲಾಗ್ತಿತ್ತು. ಜಲಾಶಯದಲ್ಲಿ ನೀರಿನ ಸಂಗ್ರಹ ನೋಡಿಕೊಂಡು ಜನವರಿ ತನಕವೂ ನೀರು ಹರಿಯುತ್ತಿತ್ತು. ಆದರೆ ಇದೀಗ ಬೇಸಿಗೆ ಅವಧಿ, ಇನ್ನೂ ಮುಂಗಾರು ಶುರುವಾಗಿಲ್ಲ. ಆದರೂ ಕುಡಿಯುವ ನೀರಿನ ಹೆಸರಲ್ಲಿ ಉಸ್ತುವಾರಿ ಸಚಿವರು ತುಮಕೂರಿಗೆ ನೀರು ಹರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಂದು ಜೆಡಿಎಸ್ ಪ್ರತಿಭಟನೆ ಹಿನ್ನೆಲೆ ನಾಲೆಗೆ ನೀರು ಹರಿಸುವ ನಿರ್ಧಾರ ಮುಂದಕ್ಕೆ ಹೋಗಿದೆ. ಆದರೆ ತುಮಕೂರಿಗೆ ಮಾತ್ರ ನೀರು ಇಂದಲ್ಲ ನಾಳೆ ಹರಿಯುವುದು ಶತಸಿದ್ಧ. ಆದರೆ ಮಂಡ್ಯ, ಹಾಸನದಲ್ಲೂ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಾಲೆಗೆ ನೀರು ಬಿಟ್ಟರೆ, ಮೂರೂ ಜಿಲ್ಲೆಯ ನಾಲೆಗೆ ನೀರು ಹರಿಸಿ, ತುಮಕೂರಿಗೆ ಬೇಕಿದ್ದರೆ ಸ್ವಲ್ಪ ಹೆಚ್ಚಾಗಿಯೇ ಬಿಟ್ಟುಕೊಳ್ಳಿ ಎಂದು ಹೊಸ ಸೂತ್ರವನ್ನೇ ಮುಂದಿಟ್ಟಿದ್ದಾರೆ. ಇದೀಗ ಉಸ್ತುವಾರಿ ಸಚಿವರು ಏನು ಮಾಡ್ತಾರೆ ಎನ್ನುವುದನ್ನು ಕಾದು ನೋಡ್ಬೇಕು. ಒಂದಂತೂ ಸತ್ಯ. ಹಾಸನ, ಮಂಡ್ಯವನ್ನು ಹೊರತುಪಡಿಸಿ ತುಮಕೂರಿಗೆ ನೀರು ಬಿಟ್ಟರೆ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ರಾಜಕಾರಣ ನಡೆಯುವುದಂತೂ ಸತ್ಯ.