ಮೇಲಿನ ತಲೆಬರಹವನ್ನು ಓದಿದಾಗ ಇದೇನು ಅಂತ ಅನ್ನಿಸಬಹುದು. ಆದರೆ ಹೌದು. ದೇಶದಲ್ಲಿ ಇಂದು ಕೋಮು ಸೌಹಾರ್ದತೆ ವಿಷಯದಲ್ಲಿ ಬಿರುಕು ಮೂಡುವಂತಹ ಪ್ರಸಂಗಗಳು ಉಂಟಾಗುತ್ತಿರುವ ಸಮಯದಲ್ಲಿ ಇಂತಹದೊಂದು ವಿಶಿಷ್ಟ ಘಟನೆ ಗದಗ್ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿ ಜರುಗುತ್ತಿದೆ. ಫೆಬ್ರುವರಿ 26 ರಂದು ಪೀಠಾರೋಹಣ ಕಾರ್ಯಕ್ರಮ ಜರುಗಲಿದೆ.
ಗುರು ಗೋವಿಂದ ಭಟ್ಟರ ತತ್ವಗಳಿಗೆ ಮಾರು ಹೋದ ಅಂದಿನ ಶಿಶುನಾಳ ಷರೀಫ ಸಮಾಜದಲ್ಲಿ ಸೌಹಾರ್ದತೆಯನ್ನು ಸಾರಿದ್ದರು. ಈಗ ಮತ್ತೆ ಇತಿಹಾಸ ಮರುಕಳಿಸಿದ್ದು ಇಂದು ಬಸವ ತತ್ವದ ಕೋರಣೇಶ್ವರ ಶ್ರೀಗಳ ಮಾರ್ಗದರ್ಶನಕ್ಕೆ ಮಾರು ಹೋದ ದಿವಾನ್ ಶರೀಫ ಸಮಾಜಕ್ಕೆ ಐಕ್ಯತೆಯ ಸಂದೇಶವನ್ನು ಸಾರಿದ್ದಾನೆ. ದಿವಾನ್ ಶರೀಫ್ ರ ಪೀಠಾರೋಹಣ ಇಂದು ಬುಧವಾರ ಮಧ್ಯಾಹ್ನ 12.30 ಯಿಂದ ಜರುಗಲಿದೆ. ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಇನ್ನಿತರ ಜನಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.
ಅಟೋ ಓಡಿಸುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದ ಒಬ್ಬ ಮುಸ್ಲಿಂ ಯುವಕ ಲಿಂಗಾಯತ ಮಠದ ಪೀಠಾಧಿಕಾರಿಯಾಗುತ್ತಿದ್ದಾರೆ ಎಂಬುದು ಈಗ ಮನೆ ಮನೆಯ ಮಾತಾಗಿದೆ. ಗದಗ್ ಜಿಲ್ಲೆಯ ಅಸೂಟಿ ಗ್ರಾಮದ ದಿವಾನ್ ಶರೀಫ, ಬಸವ ತತ್ವದ ಕೋರಣೇಶ್ವರ ಶ್ರೀಮಠದ ಪೀಠಾಧೀಪತಿಯಾಗುತ್ತಿರುವುದರಿಂದ ಈಗಾಗಲೇ ಗ್ರಾಮದಲ್ಲಿ ಈಗ ಸಂಚಾರ ನಡೆಸಿ ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತ ತಮ್ಮನ್ನು ಹರಸು ಎನ್ನುತ್ತಿದ್ದಾರೆ. ಗುರು ಕೋರಣೇಶ್ವರ ಶ್ರೀಗಳು ಈಗಾಗಲೇ ಬಸವ ತತ್ವಗಳನ್ನು ದಿವಾನ್ ಶರೀಫರಿಗೆ ಕರಗತ ಮಾಡಿಸಿದ್ದು, ಮಾನವೀಯತೆ ಎಂಬುದು ನಿಜವಾದ ಧರ್ಮ ಎನ್ನುವುದನ್ನು ಸಾರುತ್ತಾ ಹೊರಟಿದ್ದಾರೆ.
ಇನ್ನು ಅಸೂಟಿ ಗ್ರಾಮದಲ್ಲಿ ಲಿಂಗಾಯತ, ರೆಡ್ಡಿ, ಕುರುಬ, ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಸಹ ಎಲ್ಲರು ಸೌಹಾರ್ದತೆಯಿಂದ ಜೀವನ ನಡೆಸುತ್ತಾ ಬಂದಿದ್ದಾರೆ,ಅಲ್ಲದೆ ದಿವಾನ್ ಶರೀಫರ ಕುಟುಂಬಕ್ಕೂ ಬಸವ ತತ್ವದ ಕೋರಣೇಶ್ವರ ಮಠಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧ, ಅಲ್ಲದೆ ದಿವಾನ್ ಶರೀಫರ ತಂದೆ ಕೂಡ ಜಾನುವಾರುಗಳಿಗೆ ಆರೋಗ್ಯ ಹದಗೆಟ್ಟಾಗ ಔಷಧಿ ನೀಡುವ ಮತ್ತು ಮಂತ್ರೋಪದೇಶವನ್ನು ಮಾಡುವ ವಿದ್ಯೆಯನ್ನು ಹೊಂದಿದ್ದರು, ಹಾಗೆ ದಿವಾನ್ ಶರೀಫ ಕೂಡ ಆಟೋ ಚಾಲಕನಾಗಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಪ್ರೀತಿಯನ್ನು ಸಹ ಸಂಪಾದಿಸಿದ್ದ, ಹಾಗೆ ಮಸೀದಿ, ದೇವಸ್ಥಾನ, ಚರ್ಚ್ ಗಳಿಗೆ ಭೇಟಿ ನೀಡುವ ಹವ್ಯಾಸವನ್ನು ಸಹ ಬೆಳಿಸಿಕೊಂಡಿದ್ದ, ಇದನ್ನು ಅರಿತ ತಂದೆತಾಯಿಗಳು ಶ್ರೀಮಠಕ್ಕೆ ದಿವಾನ್ ಶರೀಫರನ್ನು ಒಪ್ಪಿಸಿದಾಗ, ಶರೀಫನ ಚರಿತ್ರೆ ಬದಲಾಗುವ ಮೂಲಕ ಕುಲ ಕುಲ ಎನ್ನದಿರಿ, ಮಾನವೀಯತೆಯನ್ನು ಬೆಳಸಿಕೊಳ್ಳಿ, ಮಾನವರೆಲ್ಲ ಒಂದಾಗಿ,ಬಸವ ತತ್ವಗಳನ್ನು ಪಾಲಿಸಿ, ನಿಮ್ಮ ಧರ್ಮಗಳನ್ನು ಪ್ರೀತಿಸಿ ಜೊತೆಗೆ ಮತ್ತೊಬ್ಬರನ್ನು ಗೌರವಿಸಿ ಎಂಬ ವಾಕ್ಯಗಳೊಂದಿಗೆ ಸಂಚರಿಸುತ್ತಿರುವುದು ನಾಡಿನ ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಪ್ರೇರಣೆಯಾಗಿದೆ ಅಲ್ಲವೇ.
ದಿವಾನ್ ಶರೀಫ ಪ್ರತಿಧ್ವನಿ ತಂಡಕ್ಕೆ ಹೇಳಿದ್ದು, “ಕೋರಣೇಶ್ವರ ಶ್ರೀ ಮಠವು ಜಾತ್ಯಾತೀತ ಮಠವು. ನಮ್ಮ ಕುಟುಂಬದವರು ಶ್ರೀಮಠದ ಭಕ್ತರು, ಮಸೀದಿ, ಚರ್ಚ್, ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡಿದ್ದು, ಎಲ್ಲ ಧರ್ಮಗಳ ಸಾರ ಒಂದೇ. ಬಸವ ತತ್ವಗಳು ಎಲ್ಲ ಧರ್ಮದವರಿಗೂ ಬೇಕು, ಸ್ವ ಇಚ್ಛೆಯಿಂದ ದೀಕ್ಷೆ ಪಡೆದಿದ್ದೇನೆ, ಶ್ರೀಗಳ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಒಳಿತನ್ನು ಮಾಡುತ್ತೇನೆ”.
ದಿವಾನ್ ಶರೀಫರ ಗುರು ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳು ಹೇಳುವ ಪ್ರಕಾರ, “ದಿವಾನ್ ಶರೀಫ ಪೀಠ ಎರುತ್ತಿರುವುದು ಮಾನವ ಧರ್ಮದ ಅಸ್ತಿತ್ವಕ್ಕಾಗಿ ಹೊರತು ಆಸ್ತಿಗಾಗಿ ಅಲ್ಲ, ಈಗಂತೂ ಯಾರು ವಿರೋಧಿಸಿಲ್ಲ, ವಿರೋಧಿಸಿದರೆ ಅವರಿಗೆ ಸೌಹಾರ್ದಯುತ ರೀತಿಯಲ್ಲಿ ಮನವರಿಕೆ ಮಾಡುತ್ತೇವೆ”.
ಈ 33 ರ ಯುವಕ ಇಂದು ಫೆಬ್ರುವರಿ 26 ರಂದು ಐತಿಹಾಸಿಕ ಹೆಜ್ಜೆಯನ್ನಿಡುತ್ತಿದ್ದಾರೆ. ಧರ್ಮಗಳ ನಡುವೆ ಸೌಹಾರ್ದತೆ ಬೆಸೆಯುವ ನಡೆಯನ್ನು ಇನ್ನೂ ಅನೇಕ ಯುವಕರು ಇಡಲಿ. ಯಾವುದೇ ಜಾತಿ, ಮತ ಪಂಗಡವೆನ್ನದೇ ನಾವೆಲ್ಲಾ ಮಾನವರು ಎಂದು ತಿಳಿದು ಎಲ್ಲರೂ ನಡೆದರೆ ಜಗವು ಎಷ್ಟು ಚೆನ್ನ ಅಲ್ಲವೇ.