ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಅಂತಿಮ ಘಟ್ಟದತ್ತ ಸಾಗುತ್ತಿದೆ. ಈ ಬಾರಿ ಆಮ್ ಆದ್ಮಿ ಪಾರ್ಟಿಯನ್ನು ಸೋಲಿಸಿ ಅಧಿಕಾರ ಹಿಡಿಯಲೇಬೇಕೆಂದು ಹೊರಟಿದ್ದ ನರೇಂದ್ರ ಮೋದಿ ಟೀಂಗೆ ಮುಖಭಂಗ ಆಗಿದೆ. ಈಗಿನ ಮುನ್ನಡೆ ಪ್ರಕಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ಸಾಗುತ್ತಿದೆ. ಆಮ್ ಆದ್ಮಿ ಪಾರ್ಟಿ 55ರ ಗಡಿ ದಾಟಿದ್ದು, ಬಿಜೆಪಿ 15ರ ಆಸುಪಾಸಿನಲ್ಲಿ ಗೆಲುವಿನ ಸರ್ಕಸ್ ನಡೆಸುತ್ತಿದೆ.
ದೆಹಲಿ ಚುನಾವಣಾ ಪ್ರಚಾರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದ ಆಮ್ ಆದ್ಮಿ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು, ಫಲಿತಾಂಶದಲ್ಲೂ ಭಾರೀ ಪೈಪೋಟಿ ಒಡ್ಡುತ್ತಿದ್ದಾರೆ. ಆಮ್ ಆದ್ಮಿ ಹಾಗೂ ಬಿಜೆಪಿ ಅಭ್ಯರ್ಥಿಗಳು ಕೇವಲ ನೂರು ಮತಗಳ ಅಂತರದಲ್ಲಿ ಹಿಂದೆ ಮುಂದೆ ಇರುವುದು ಫಲಿತಾಂಶದ ನಿಖರ ಅಂದಾಜಿಗೆ ಸಂಕಷ್ಟ ತಂದೊಡ್ಡಿದೆ. ಆಮ್ ಆದ್ಮಿ ಹಾಗು ಬಿಜೆಪಿ ಅಭ್ಯರ್ಥಿಗಳ ಅಬ್ಬರದ ನಡುವೆ ಕಾಂಗ್ರೆಸ್ ಪಕ್ಷ ಲೆಕ್ಕಕ್ಕೆ ಇಲ್ಲಂದಂತಾಗಿದೆ. ಈ ಮೂಲಕ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ.
ದೆಹಲಿಗೆ ರಾಜ್ಯದ ಸ್ಥಾನಮಾನ ಪಡೆದ ಬಳಿಕ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹ್ಯಾಟ್ರಿಕ್ ಬಾರಿಸಿ ಮೂರು ಬಾರಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಅದನ್ನು ಬಿಟ್ಟರೆ ಇದೀಗ ಆ ಸ್ಥಾನ ತುಂಬಲು ಅರವಿಂದ್ ಕೇಜ್ರಿವಾಲ್ ಹೊರಟಿದ್ದಾರೆ. ಮೊದಲ ಬಾರಿ ಕೇವಲ 49 ದಿನಗಳಿ ಕಾಲ ಅಧಿಕಾರ ನಡೆಸಿ ರಾಜೀನಾಮೆ ಕೊಟ್ಟಿದ್ದ ಅರವಿಂದ್ ಕೇಜ್ರಿವಾಲ್, ಎರಡನೇ ಬಾರಿ ಸಂಪೂರ್ಣ ಆಡಳಿತ ನಡೆಸಿ ಚುನಾವಣೆ ಹೋಗಿದ್ದರು. ಈ ಬಾರಿ ಅಭಿವೃದ್ಧಿ ಅಜೆಂಡ ಹಿಡಿದು ಚುನಾವಣಾ ಪ್ರಚಾರ ನಡೆಸಿದ್ದ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ಮುಖ್ಯಮಂತ್ರಿ ಆಗುವ ಲೆಕ್ಕಾಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ಆಮ್ ಆದ್ಮಿ ಪಾರ್ಟಿ 2015 ರಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ದರ್ಬಾರ್ ನಡೆಸುವ ಮುನ್ಸೂಚನೆ ನೀಡಿತ್ತು. ಕೆಂಪುಕೋಟೆ ಆದಿಪತ್ಯ ಸ್ಥಾಪಿಸುವ ಅರವಿಂದ್ ಕೇಜ್ರಿವಾಲ್ ಕನಸಿಗೆ ಬಿಜೆಪಿ ಪೆಟ್ಟು ಕೊಟ್ಟಿದೆ. ಈ ಬಾರಿ ಆಮ್ ಆದ್ಮಿ ಪಾರ್ಟಿ ಓಟಕ್ಕೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಬ್ರೇಕ್ ಹಾಕಿದ್ದು, ಅರವಿಂದ ಕೇಜ್ರಿವಾಲ್ ತನ್ನ ಆಡಳಿತವನ್ನು ಹಿಂತಿರುಗಿ ನೋಡುವಂತಾಗಿದೆ. ಆಮ್ ಆದ್ಮಿ ಪಕ್ಷ 60 ಸ್ಥಾನಗಳ ಆಸುಪಾಸಿನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಳೆದ ಬಾರಿಗಿಂತ 10 ಸ್ಥಾನ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆಮ್ ಆದ್ಮಿ ಕಳೆದುಕೊಂಡ ಸ್ಥಾನಗಳಲ್ಲಿ ಬಿಜೆಪಿಯ ಕಮಲ ಅರಳುತ್ತಿರೋದು ಕೇಜ್ರಿವಾಲ್‌ಗೆ ನುಂಗಲಾರದ ತುತ್ತಾಗಿದೆ.
2015 ರಲ್ಲಿ ಹೀನಾಯ ಸೋಲುಂಡಿದ್ದ ಕಾಂಗ್ರೆಸ್ ಪಕ್ಷ, ಈ ಬಾರಿ ಕೂಡ ಹೀನಾಯ ಸೋಲು ತಪ್ಪಿಸಿಕೊಳ್ಳಲು ಶ್ರಮವಿಸಿದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಆಮ್ ಆದ್ಮಿ ಪಾರ್ಟಿ ಶೇಕಡವಾರು ಮತದಾನದಲ್ಲೂ ಭರ್ಜರಿ ಮುನ್ನಡೆ ಸಾಧಿಸಿದ್ದು, ಇಲ್ಲೀವರೆಗೂ 53.29ರಷ್ಟು ಮತ ಗಳಿಸಿದೆ. ಅದೇ ರೀತಿ ಬಿಜೆಪಿ 39.07 ರಷ್ಟು ಮತ ಗಳಿಸಿದ್ದರೆ, ಕಾಂಗ್ರೆಸ್ ಕೇವಲ 4.25ರಷ್ಟು ಮತಗಳಿಕೆ ಮಾಡಿದೆ. ಆಮ್ ಆದ್ಮಿ ಪಾರ್ಟಿ ದೆಹಲಿಯ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಈ ಮೂಲಕ ಸರಳ ಬಹುಮತ ಗಳಿಸಿ ಅಧಿಕಾರವನ್ನೂ ಹಿಡಿಯಬಹುದು. ಆದರೂ ಸ್ಥಾನಗಳನ್ನು ಕಳೆದುಕೊಂಡು ಕಹಿ ಅನುಭವಿಸುವಂತಾಗಿದೆ. ಕಳೆದ ಬಾರಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟಿದ್ದ ಬಿಜೆಪಿ, ಈ ಬಾರಿ 10 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದ್ದು, ಮೂರಕ್ಕಿಂತ ಹೆಚ್ಚು ಸ್ಥಾನ ಗಳಿಸಿದ್ದು ಬೋನಸ್ ಎನ್ನುವಂತಾಗಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಗೆದ್ದು ಅಧಿಕಾರ ಹಿಡಿಯುತ್ತಿದ್ದರೂ ಬಿಜೆಪಿಗೆ ಹೆಚ್ಚು ಸ್ಥಾನ ಬಿಟ್ಟುಕೊಡುವ ಮೂಲಕ ಸೋಲುಂಡರೇ ಎನ್ನುವ ಪ್ರಶ್ನೆ ಎದುರಾಗಿದೆ.