ಸಂಘ ಪರಿವಾರ ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನೂ ಬಿಡಲಿಲ್ಲ ಎಂಬ ಆರೋಪವನ್ನು ಸ್ವಾತಂತ್ರ್ಯಾ ನಂತರದಿಂದಲೂ ತನ್ನ ಸೆರಗಿನಲ್ಲಿಟ್ಟುಕೊಂಡು ಬರುತ್ತಿದೆ. ಮಹಾತ್ಮಾ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಮಹಾನ್ ತ್ಯಾಗ ಮಾಡಿದವರು. ಅವರಿಲ್ಲದಿದ್ದರೆ ಬಹುಶಃ ಭಾರತ ಇಂದಿಗೂ ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆ ಆಗಲು ಸಾಧ್ಯವಾಗುತ್ತಿರಲಿಲ್ಲವೇನೋ?
ಇಂತಹ ಮಹಾನ್ ಚೇತನ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಫಲವೇ ಇಂದು ದೇಶ ಸುಭೀಕ್ಷವಾಗಿರಲು ಸಾಧ್ಯವಾಗಿದೆ. ಹೀಗಾಗಿಯೇ ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಕರೆಯುತ್ತಾ ಸ್ವಾತಂತ್ರ್ಯ ಬಂದ ದಿನದಿಂದಲೂ ಮನೆ ಮನಗಳಲ್ಲಿಯೂ ಅವರನ್ನು ಪೂಜಿಸಲಾಗುತ್ತಿದೆ.
ಆದರೆ, ಈ ಬಿಜೆಪಿಯವರು ಅವರ ನಿಧನಾ ನಂತರವೂ ಗಾಂಧೀಜಿಯನ್ನು ಬಿಡುತ್ತಿಲ್ಲ. ಗಾಂಧೀಜಿ ವಿಚಾರದಲ್ಲಿ ಒಂದಿಲ್ಲಾ ಒಂದು ವಿವಾದವನ್ನು ಸೃಷ್ಟಿಸುತ್ತಲೇ ಬರುತ್ತಿದ್ದಾರೆ. ಇದೀಗ ದೆಹಲಿಯಲ್ಲಿರುವ ಗಾಂಧಿಸ್ಮೃತಿಯಲ್ಲಿದ್ದ ಗಾಂಧೀಜಿಯವರ ಕೆಲವು ಪ್ರಮುಖ ಫೋಟೋಗಳನ್ನು ತೆಗೆದು ಹಾಕಿಸುವ ಮೂಲಕ ಬಿಜೆಪಿ ಸರ್ಕಾರ ಹೊಸ ವಿವಾದವನ್ನು ಸೃಷ್ಟಿಸಿದೆ.
1948 ರ ಜನವರಿ 31 ರಂದು ಹತ್ಯೆಯಾದ ನಂತರ ಅಂತ್ಯಕ್ರಿಯೆವರೆಗೆ ಸೆರೆ ಹಿಡಿಯಲಾಗಿದ್ದ ಅತ್ಯಮೂಲ್ಯವಾದ ಫೋಟೋಗಳನ್ನು ಹಾಕಲಾಗಿತ್ತು. ಆದರೆ, ಅವುಗಳನ್ನು ಡಿಜಿಟಲೀಕರಣದ ನೆಪದಲ್ಲಿ ತೆಗೆದು ಹಾಕಲಾಗಿದೆ. ಎಲ್ಇಡಿ ಮೂಲಕ ಫೋಟೋ ಗ್ಯಾಲರಿಯನ್ನು ತೋರಿಸಲಾಗುತ್ತಿದೆ. ಆದರೆ, ಅಲ್ಲಿ ಈ ಅತ್ಯಮೂಲ್ಯ ಫೋಟೋಗಳನ್ನು ತೋರಿಸುತ್ತಿಲ್ಲ. ಇದರ ಬದಲಾಗಿ ಇನ್ನಿತರೆ ಫೋಟೋಗಳನ್ನು ಅದೂ ಕೂಡ ಅಸ್ಪಷ್ಟವಾಗಿ ಮತ್ತು ಯಾವುದೇ ವಿವರಣೆಗಳಿಲ್ಲದೇ ಆ ಫೋಟೋಗಳನ್ನು ತೋರಿಸಲಾಗುತ್ತಿದೆ.
ಖ್ಯಾತ ಛಾಯಾಗ್ರಾಹಕ ಹೆನ್ರಿ ಕಾರ್ಟಿಯರ್ –ಬ್ರೆಸ್ಸನ್ ಅವರು ಮಹಾತ್ಮಾಗಾಂಧಿಯವರ ಹತ್ಯೆಯಾದ ನಂತರ ಅಂತ್ಯಕ್ರಿಯೆವರೆಗೆ ನಡೆದ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಈ ಫೋಟೋಗಳನ್ನು ಗಾಂಧಿ ಸ್ಮೃತಿಗೆ ಕೊಡುಗೆಯಾಗಿ ನೀಡಿದ್ದರು. ಈ ಫೋಟೋವನ್ನು ಗಾಂಧಿಸ್ಮೃತಿ ಮತ್ತು ದರ್ಶನ್ ಸಮಿತಿ ಲಾಬಿಯಲ್ಲಿ ಪ್ರದರ್ಶಿಸಲಾಗಿತ್ತು. ಈ ಎಲ್ಲಾ ಘಟನಾವಳಿಗಳ ಫೋಟೋಗಳನ್ನು ಒಳಗೊಂಡ ಒಂದು ದೊಡ್ಡ ಫ್ರೇಂ ಮಾಡಲಾಗಿತ್ತು. ಅದರ ಇಕ್ಕೆಲಗಳಲ್ಲಿಯೂ ಘಟನೆಗೆ ಸಂಭಂಧಿಸಿದ ವಿವರಗಳನ್ನು ಮುದ್ರಿಸಲಾಗಿತ್ತು. ಈ ವಿವರದಲ್ಲಿ ಗಾಂಧೀಜಿಯವರ ಹತ್ಯೆ ಹೇಗಾಯ್ತು ಎಂದೆಲ್ಲಾ ಹೇಳಲಾಗಿತ್ತು. ಗಾಂಧಿಗೆ ಗುಂಡಿಕ್ಕಿದವರು ನಾಥೂರಾಂ ಗೋಡ್ಸೆ ಎಂದು ನಮೂದಾಗಿದ್ದರಿಂದ ಬಹುಶಃ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೇಗಾದರೂ ಮಾಡಿ ಈ ಫೋಟೋಗಳನ್ನು ಅಲ್ಲಿಂದ ತೆರವು ಮಾಡಬೇಕೆಂಬ ಉದ್ದೇಶದಿಂದಲೇ ಡಿಜಿಟಲೀಕರಣದ ತಂತ್ರವನ್ನು ರೂಪಿಸಿ ಅದರಂತೆ ಆ ಫೋಟೋವನ್ನು ಅಲ್ಲಿಂದ ತೆಗೆದುಹಾಕಲಾಗಿದೆ.
ಇತ್ತೀಚೆಗೆ ಗಾಂಧಿ ಸ್ಮೃತಿಗೆ ಭೇಟಿ ನೀಡಿದ್ದ ಮಹಾತ್ಮಾಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿಯವರು ತಮ್ಮ ತಾತನ ಅಂತಿಮ ಯಾತ್ರೆಯ ಫೋಟೋಗಳು ಇರದಿರುವುದನ್ನು ಕಂಡು ದಂಗಾಗಿ ಹೋಗಿದ್ದಾರೆ. ಆ ದೊಡ್ಡ ಫೋಟೋ ಇದ್ದ ಜಾಗದಲ್ಲಿ ಎಲ್ಇಡಿ ಬಂದಿತ್ತು, ಅದರಲ್ಲಿ ಕೆಲವೇ ಕೆಲವು ಆಯ್ದ ಫೋಟೋಗಳನ್ನು ಬಿತ್ತರ ಮಾಡಲಾಗುತ್ತಿತ್ತು.
ಗಾಂಧಿಸ್ಮೃತಿಯಲ್ಲಿ ಫೋಟೋಗಳು ಕಾಣೆಯಾಗಿರುವುದು ನನಗೆ ಆಘಾತ ತಂದಿದೆ. ಪ್ರಧಾನ ಸೇವಕರೊಬ್ಬರ ಆದೇಶದನ್ವಯ ಈ ಫೋಟೋಗಳನ್ನು ತೆಗೆದು ಹಾಕಲಾಗಿದೆಯಂತೆ. ಈ ಮೂಲಕ ಗಾಂಧಿಯನ್ನು ಕೊಂದವರು ಐತಿಹಾಸಿಕ ಸಾಕ್ಷಿಗೆ ತಿಲಾಂಜಲಿ ಹಾಕಲು ಹೊರಟಿದ್ದಾರೆ. ಹೇ ರಾಂ ಎಂದು ತುಷಾರ್ ಗಾಂಧಿ ಉದ್ಘಾರ ತೆಗೆದಿದ್ದಾರೆ.
ಇದುವರೆಗೆ ಹಾಕಲಾಗಿದ್ದ ಫೋಟೋಗಳ ಶೀರ್ಷಿಕೆಗಳು ಇತಿಹಾಸವನ್ನು ಹೇಳುತ್ತಿದ್ದವು. ಈ ಮೂಲಕ ವೀಕ್ಷಕರಿಗೆ ಇತಿಹಾಸ ಮತ್ತು ಭಾವನಾತ್ಮಕ ವಿವರಗಳನ್ನು ಮುಂದಿಡುತ್ತಿದ್ದವು. ಆದರೆ, ಈ ಫೋಟೋಗಳನ್ನು ತೆರವುಗೊಳಿಸಿರುವ ಹಿಂದೆ ಪಿತೂರಿ ಇರುವುದು ಸ್ಪಷ್ಟವಾಗುತ್ತಿದೆ. ಈ ಮೂಲಕ ಗಾಂಧೀಜಿ ಹತ್ಯೆಯ ಮಾಹಿತಿಯನ್ನು ಮರೆ ಮಾಚುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತುಷಾರ್ ಗಾಂಧಿ ಆರೋಪಿಸಿದ್ದಾರೆ.
ಇನ್ನು ನ್ಯಾಷನಲ್ ಗಾಂಧಿ ಮ್ಯೂಸಿಯಂ ನಿರ್ದೇಶಕರಾದ ಎ.ಅಣ್ಣಾಮಲೈ ಅವರು, ಗಾಂಧೀಜಿಯವರ ಮೂಲವನ್ನು ರಕ್ಷಿಸಿಡಬೇಕು. ಮೇಲ್ದರ್ಜೆಗೇರಿಸುವುದು ಒಂದು ಭಾಗವಾದರೆ, ಗಾಂಧೀಜಿಯವರ ಸರಳತೆ, ತ್ಯಾಗ, ಬಲಿದಾನವನ್ನು ಬಿಂಬಿಸುವಂತಹ ವಿಚಾರಗಳನ್ನು ಸಂರಕ್ಷಿಡಬೇಕಾಗಿದೆ ಎಂದಿದ್ದಾರೆ.
ಆದರೆ, ಗಾಂಧಿಸ್ಮೃತಿಯ ಅಧಿಕಾರಿಗಳು ಹೇಳುವಂತೆ ಗಾಂಧೀಜಿಯವರ ಅಮೂಲ್ಯವಾದ ಫೋಟೋಗಳು ಹಾನಿಗೊಂಡಿದ್ದವು. ಹೀಗಾಗಿ ಅವುಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಕೆಲಸವನ್ನು ಕೆಲವೇ ಗಂಟೆಯಲ್ಲಿ ಮುಗಿಸಬಹುದಾಗಿದೆ. ಗಾಂಧೀಜಿ ಫೋಟೋಗಳನ್ನೂ ಸಹ ಹಾಗೆಯೇ ದುರಸ್ತಿ ಮಾಡಿ ಮತ್ತೆ ಪ್ರದರ್ಶಿಸಲು ಯಾವುದೇ ಅಡ್ಡಿ ಇಲ್ಲ ಎಂದಿದ್ದಾರೆ ಅಣ್ಣಾಮಲೈ.
ಒಂದು ವೇಳೆ ಹಾನಿಯನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ಕಾರ್ಟಿಯರ್ ಬ್ರೆಸ್ಸನ್ ಅವರು ತೆಗೆದಿದ್ದ ಇನ್ನೂ ಹಲವಾರು ಫೋಟೋಗಳು ಇತರೆ ಗಾಂಧೀಯನ್ ಸಂಸ್ಥೆಗಳಲ್ಲಿವೆ. ಅವುಗಳನ್ನು ನಕಲು ಮಾಡಿ ಇಲ್ಲಿ ತಕ್ಷಣವೇ ಪ್ರದರ್ಶಿಸಬಹುದಾಗಿದೆ ಎಂದು ಅಣ್ಣಾಮಲೈ ಸಲಹೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಾಂಧಿ ಸ್ಮೃತಿಯ ನಿರ್ದೇಶಕ ದೀಪಾಂಕರ್ ಗ್ಯಾನ್ ಅವರು, ಇತಿಹಾಸವನ್ನು ತಿರುಚುವ ಪ್ರಶ್ನೆಯೇ ಇಲ್ಲ. ಎಲ್ಲವೂ ಡಿಜಿಟಲ್ ಮಾದರಿಯಲ್ಲಿ ಲಭ್ಯವಿದೆ. ನಾವು ಡಿಜಿಟಲೀಕರಣದ ಹಂತದಲ್ಲಿದ್ದೇವೆ, ಎಲ್ಲವೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಡಿಜಿಟಲೀಕರಣದ ನೆಪದಲ್ಲಿ ಎಲ್ಇಡಿಯಲ್ಲಿ ಪ್ರದರ್ಶಿಸುತ್ತಿರುವ ಗಾಂಧೀಜಿಯವರು ಅಂತಿಮಯಾತ್ರೆಯ ಎರಡು ಫೋಟೋಗಳಲ್ಲಿ ಸವಿವರವಾದ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಮೊದಲಿನ ರೀತಿಯಲ್ಲಿಯೇ ಫೋಟೋಗಳನ್ನೇ ಹಾಕಿ ಅದರಲ್ಲಿ ವಿವರಗಳನ್ನು ನೀಡಬೇಕೆಂದು ಅಣ್ಣಾಮಲೈ ಸೇರಿದಂತೆ ಹಲವಾರು ಗಾಂಧೀವಾದಿಗಳು ಆಗ್ರಹಿಸಿದ್ದಾರೆ.
ಕೃಪೆ: ಟೆಲಿಗ್ರಾಫ್