ಅವಳಿನ್ನೂ ಎರಡನೆಯ ತರಗತಿ, ಆದರೂ ಗೌರವ ಡಾಕ್ಟರೇಟ್ ಪಡೆದಿದ್ದಾಳೆ. ಗದಗ್ ಜಿಲ್ಲೆಯ ನರಗುಂದ ಪಟ್ಟಣದ ಈ ಪುಟ್ಟ ಬಾಲಕಿ ಅತಿ ಚಿಕ್ಕ ವಯಸ್ಸಿನಲ್ಲೇ ಡಾಕ್ಟರ್ ಎನಿಸಿಕೊಂಡಿದ್ದಾಳೆ.
ಹೌದು, ಮುದ್ರಣ ಕಾಶಿ ಗದಗ ಜಿಲ್ಲೆಯ 7 ವರ್ಷದ ಬಾಲಕಿಗೆ ತಮಿಳುನಾಡಿನ ಯೂನಿವರ್ಸಲ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಜಿಲ್ಲೆಯ ನರಗುಂದ ಪಟ್ಟಣದ ಸರ್ ಎಂ. ವಿಶ್ವೇಶ್ವರಯ್ಯ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವೈದೃತಿ ನಾಗರಾಜ ಕೋರಿಶೆಟ್ಟರ್ ಬಾಲಕಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಯೂನಿವರ್ಸಲ್ ವಿವಿ ಗೌರವ ಡಾಕ್ಟರೇಟ್ ನೀಡಿದೆ.
ಅಗಾಧ ಸ್ಮರಣ ಶಕ್ತಿ:
ಕೇವಲ 7 ವರ್ಷದವಳಾದ ವೈದೃತಿ ಆಗಾಧವಾದ ಜ್ಞಾನ ಹಾಗೂ ನೆನಪಿನ ಶಕ್ತಿ ಹೊಂದುವುದರೊಂದಿಗೆ ಎಲ್ಲರ ಗಮನ ಸೆಳೆದಿದ್ದಾಳೆ. ರಾಜಕೀಯ, ಅರ್ಥಶಾಸ್ತ್ರ, ಇತಿಹಾಸ, ಕನ್ನಡ, ಪ್ರಾದೇಶಿಕ ಹಾಗೂ ಅಂತರಾಷ್ಟ್ರ ಹೀಗೇ ವಿವಿಧ ವಿಷಯಗಳ ಸಂಬಂಧಪಟ್ಟಂತೆ ಅಪಾರ ಜ್ಞಾನ ಹೊಂದಿರುವ ಈ ಬಾಲಕಿಯು ಯಾವುದೇ ಪ್ರಶ್ನೇ ಕೇಳಿದರೂ ಪಟಪಟನೆ ಉತ್ತರ ನೀಡುತ್ತಾಳೆ. ಬಾಲಕಿಯು ಜನರು ಕೇಳುವ ಪ್ರಶ್ನೆಗೆ ತಟ್ ಅಂತ ಉತ್ತರಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿ ಕೊಂಡಿರುವ ವೈದೃತಿ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಗೌರವ ಡಾಕ್ಟರೇಟ್ ಪಡೆದು ಗಮನ ಸೆಳೆದಿದ್ದಾಳೆ. ಮೂಲತ ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿಯವರಾದ ವೈದೃತಿ ಕುಟುಂಬದವರು ಸಧ್ಯ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ವಾಸವಾಗಿದ್ದಾರೆ. ತಾಯಿ ಭಾರತಿ ನರಗುಂದ ದಲ್ಲಿ ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಂದೆ ನಾಗರಾಜ ಖಾಸಗಿ ವೃತ್ತಿಯಲ್ಲಿ ತೊಡಗಿದ್ದು, ತಮ್ಮ ಮಗಳ ಈ ಸಾಧನೆಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ವೈದೃತಿ ಚಿಕ್ಕ ವಯಸ್ಸಿನಲ್ಲಿರುವಾಗಲೇ ಎಲ್ಲವನ್ನು ನೆನಪಿಟ್ಟುಕೊಳ್ಳುತ್ತಿದ್ದಳು. ಈ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿದ ಪಾಲಕರು ಅವಳಿಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಿಳಿಸಿದರು. ಈಗ ಅವಳು ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ, ಕರ್ನಾಟಕದ ಮುಖ್ಯಮಂತ್ರಿಗಳು ಹೆಸರು, ಕರ್ನಾಟಕದ ಜಿಲ್ಲೆಗಳು, ಭಾರತದ ಮಂತ್ರಿಗಳು ಹೀಗೆ ಎಲ್ಲ ಪ್ರಶ್ನೆಗಳಿಗೆ ುಸಿರು ಬಿಡದೇ ಉತ್ತರಿಸುತ್ತಾಳೆ.
ನಾಗರಾಜ ಕೋರಿಶೆಟ್ಟರ್, ವೈದೃತಿ ತಂದೆ, ಪ್ರತಿಧ್ವನಿ ತಂಡಕ್ಕೆ ಹೇಳಿದ್ದು ಹೀಗೆ, “ನನ್ನ ಮಗಳು ಇಷ್ಟು ಚಿಕ್ಕ ವಯಸ್ಸಿನಲ್ಲೇ ಡಾಕ್ಟರೇಟ್ ಪಡೆದಿದ್ದು ಖುಷಿ ತಂದಿದೆ. ಹೆಣ್ಣು ಮಕ್ಕಳು ಏನು ಬೇಕಾದದ್ದನ್ನು ಸಾಧಿಸುತ್ತಾರೆ. ಹೆಣ್ಣೆಂದು ಹೀಯಾಳಿಸದಿರಿ. ಇವತ್ತು ನಾನು ವೈದೃತಿ ತಂದೆ ಎಂದು ಎಲ್ಲರೂ ಗುರುತಿಸುತ್ತಾರೆ. ಮುಂದೆ ಅವಳು ಯು.ಪಿ.ಎಸ್. ಸಿ. ಪರೀಕ್ಷೆಗೆ ತಯಾರಿ ನಡೆಸಿ ದೊಡ್ಡ ಹುದ್ದೆ ಪಡೆದು ಸಮಾಜ ಮುಖಿ ಕೆಲಸ ಮಾಡಲಿ ಎಂಬುದು ನಮ್ಮ ಹಾರೈಕೆ. ವೈದೃತಿಯ ಸ್ಮರಣ ಶಕ್ತಿ ಅವಳಿಗೆ ವರವಾಗಿ ಪರಿಣಮಿಸಿದೆ. ಇದೀಗ ಹತ್ತು ಹಲವು ಪ್ರಶಸ್ತಿಗಳು ಸನ್ಮಾನಗಳು ಅವಳ ಮುಡಿಗೇರಿದ್ದು, ಈಗ ಡಾಕ್ಟರೇಟ್ ಸಿಕ್ಕಿದೆ. ನಾವಷ್ಟೇ ಅಲ್ಲ, ನರಗುಂದ ಹಾಗೂ ಗದಗ್ ಜಿಲ್ಲೆಯೇ ಈ ಸಂತೋಷವನ್ನು ಸಂಭ್ರಮಿಸುತ್ತಿದೆ. ಒಬ್ಬ ತಂದೆಯಾಗಿ ನನಗೆ ಇನ್ನೇನು ಬೇಕು”.
ಮುತ್ತಣ್ಣ ತಿರ್ಲಾಪುರ, ನರಗುಂದ ಗಾಂಧಿ ವೇಷಧಾರಿ ಎಂದೇ ಪರಿಚಿತರು ಹೇಳಿದ್ದು, “ವೈದೃತಿಯನ್ನು ನಾನು ಮೂರು ವರ್ಷಗಳಿಂದ ನೋಡುತ್ತಿದ್ದೇನೆ. ಅವಳು ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಹಾಗೂ ಅನೇಕ ಕಡೆಗೆ ಅತಿಥಿಯಾಗಿ ಪಾಲ್ಗೊಂಡಿದ್ದಳೆ ಹಾಗೂ ಸನ್ಮಾನಗಳಂತೂ ಲೆಕ್ಕವೇ ಇಲ್ಲ. ಈಗ ಮದುರೈಗೆ ಹೋಗಿ ಡಾಕ್ಟರೇಟ್ ತಂದಿದ್ದು ಕೇಳಿದ ಕೂಡಲೇ ಖುಷಿ ತಡೆಯದೇ ಅವಳ ಮನೆಗೆ ಹೋಗಿ ಶುಭಾಶಯ ತಿಳಿಸಿದೆ, ಇವಳು ಗದಗ್ ಜಿಲ್ಲೆಗೆ ಹೆಮ್ಮೆ”.
ಫಾರೂಕ್, ಸರ್ ಎಂ. ವಿಶ್ವೇಶ್ವರಯ್ಯ ಶಾಲೆಯ ಮುಖ್ಯ ಶಿಕ್ಷಕರು ಅಭಿಪ್ರಾಯ ಹಂಚಿಕೊಂಡರು, “ವೈದೃತಿ ಡಾಕ್ಟರೇಟ್ ಹಲವು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದೆ. ಏನಾದರೂ ಸಾಧನೆ ಮಾಡಬೇಕು ಎಂಬ ಛಲವನ್ನು ಬಿತ್ತಿದೆ. ಅವಳು ನಮ್ಮ ಶಾಲೆಉ ವಿದ್ಯಾರ್ಥಿ ಎಂದು ಹೇಳುವುದಕ್ಕೆ ಅತೀವ ಸಂತೋಷವೆನಿಸುತ್ತದೆ. ಅವಳು ಇನ್ನೂ ಹಲವು ಪ್ರಶಸ್ತಿ ಪಡೆಯಲಿ, ಉತ್ತಮ ಭವಿಷ್ಯ ಪಡೆಯಲಿ ಎಂದು ತುಂಬು ಹೃದಯದೊಂದಿಗೆ ಹಾರೈಸುತ್ತೇವೆ”.