ದಲಿತರು, ಮುಸ್ಲಿಮರ ಗುಂಪು ಹತ್ಯೆಯನ್ನು ತಡೆಗಟ್ಟಲು ತಕ್ಷಣವೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದದ್ದಕ್ಕಾಗಿ ದೇಶದ ಗಣ್ಯ ಚಿಂತಕರು ಮತ್ತು ಕಲಾವಿದರ ಮೇಲೆ ದೇಶದ್ರೋಹದ ಕೇಸು ದಾಖಲಿಸುವಂತೆ ಬಿಹಾರದ ಮುಝಫ್ಫರ್ಪುರದ ಅಧೀನ ನ್ಯಾಯಾಲಯವೊಂದು ಆದೇಶ ನೀಡಿರುವುದು ಏಕಕಾಲಕ್ಕೆ ಆಘಾತಕಾರಿ ಮತ್ತು ನಗೆಪಾಟಲಿನ ನಡೆ.
ದೇಶದ ಗಣ್ಯ ನಾಗರಿಕರು ಚುನಾಯಿತ ಸರ್ಕಾರದ ಕರ್ತವ್ಯವನ್ನು ನೆನಪಿಸಿ ನಾಗರಿಕ ಹೊಣೆಗಾರಿಕೆಯನ್ನು ನಿಭಾಯಿಸಿದರೆ ಅದು ದೇಶದ್ರೋಹ ಹೇಗಾದೀತು? ಸರ್ಕಾರದ ನಡೆ ನುಡಿಗಳನ್ನು ಒಪ್ಪದಿರುವವರಿಗೆ ಕಿರುಕುಳ ನೀಡುವ ಸಾಧನವಾಗಿ ರಾಜದ್ರೋಹದ ಕಾನೂನು ದುರುಪಯೋಗವಾಗುತ್ತಿರುವುದು ಈ ವಿದ್ಯಮಾನದಿಂದ ಇನ್ನಷ್ಟು ಸ್ಪಷ್ಟವಾಗಿದೆ.
ಈ ಪತ್ರವು ದೇಶದ ವರ್ಚಸ್ಸಿಗೆ ಮಸಿ ಬಳಿದಿದ್ದು, ಪ್ರಧಾನಿಯವರ ಪ್ರಭಾವೀ ಸಾಧನೆಯನ್ನು ಕಡೆಗಣಿಸಿದೆ. ವಿಚ್ಛಿದ್ರಕಾರಿ ಪ್ರವೃತ್ತಿಯನ್ನು ಪ್ರೋತ್ಸಾಹಿಸಿದೆ ಎಂಬುದಾಗಿ ಸ್ಥಳೀಯ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯಕಾಂತ ತಿವಾರಿ ಈ ಆದೇಶವನ್ನು ನೀಡಿದ್ದಾರೆ. ರಾಜಕೀಯ ದುರುದ್ದೇಶದ ಕ್ಷುಲ್ಲಕ ಅರ್ಜಿಯಿದು ಎಂದು ತಿರಸ್ಕರಿಸಬೇಕಿದ್ದ ಅರ್ಜಿಗೆ ಪುರಸ್ಕಾರ ದೊರೆತಿದೆ.
ಇತ್ತೀಚಿನ ವರದಿಯ ಪ್ರಕಾರ ಬಿಹಾರ ಪೋಲಿಸರು ಈ ದೂರನ್ನು ಮುಕ್ತಾಯಗೊಳಿಸುವವರಿದ್ದಾರೆ. ಅಲ್ಲದೆ, ಆಧಾರವಿಲ್ಲದೆ ದೂರು ನೀಡಿದ್ದಕ್ಕಾಗಿ ದೂರುದಾರ ವಕೀಲರ ಮೇಲೆ ಕ್ರಮತೆಗೆದುಕೊಳ್ಳುವುದಾಗಿ ಬಿಹಾರ ಪೋಲಿಸರು ಹೇಳಿದ್ದಾರೆ.
ಈ ಹಿಂದೆ ಇಂದಿರಾಗಾಂಧೀ ಅವರು ಜಾರಿಗೊಳಿಸಿದ್ದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸಂವಿಧಾನದತ್ತ ಮೂಲಭೂತ ಸ್ವಾತಂತ್ರ್ಯಗಳನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಈಗ ಪುನಃ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದೆಯೇ? ಅಂತಹ ಯಾವುದೇ ಘೋಷಣೆ ಹೊರಬಿದ್ದಿಲ್ಲವಲ್ಲ?
ಪ್ರಶ್ನಿಸುವುದು, ಚರ್ಚಿಸುವುದು, ಭಿನ್ನಾಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಜನತಂತ್ರದ ಜೀವಾಳ. ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದೆಂದು ಬೆನ್ನು ತಟ್ಟಿಕೊಳ್ಳುತ್ತೇವೆ ನಾವು. ದೇಶದ ವರ್ಚಸ್ಸಿಗೆ ಮಸಿ ಬಳಿದಿರುವುದು ರಾಜದ್ರೋಹದ ಕಾನೂನಿನ ದುರುಪಯೋಗವೇ ವಿನಾ ಗಣ್ಯರು ಪ್ರಧಾನಿಗೆ ಬರೆದ ಪತ್ರವಲ್ಲ. ರಾಷ್ಟ್ರೀಯ ಸಮಗ್ರತೆಗೆ ಭಂಗ ತರುವ ಅಸ್ಪಷ್ಟ ಅಂಶ ಕೂಡ ಈ ಪತ್ರದಲ್ಲಿ ಕಂಡು ಬರುವುದಿಲ್ಲ.
ಕೇಸು ಹಾಕಿರುವುದು ಅಪ್ಪಟ ಅಸಂಬದ್ಧ. ಗುಂಪು ಹತ್ಯೆಯನ್ನು ತಡೆಯಬೇಕೆಂದು ವಿನಂತಿಸುವ ನಿರುಪದ್ರವಿ ಮನವಿ ಅದು. ಶಾಂತಿಯನ್ನು ಕದಡುವ ಯಾವುದೇ ಬೆದರಿಕೆಯೂ ಅದರಲ್ಲಿ ಇಲ್ಲ. ಈ ಮನವಿಗೆ ಪ್ರಧಾನಿ ಕಚೇರಿಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಅಥವಾ ಉತ್ತರ ಬಂದಿಲ್ಲ. ಎಂದು ಮನವಿಗೆ ಸಹಿ ಹಾಕಿರುವ ಗಣ್ಯ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನೆಗಲ್ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಮರು, ದಲಿತರು, ಇತರೆ ಅಲ್ಪಸಂಖ್ಯಾತರ ಗುಂಪು ಹತ್ಯೆಯನ್ನು ತಕ್ಷಣ ತಡೆಯಬೇಕು. ಭಿನ್ನಮತವಿಲ್ಲದೆ ಜನತಂತ್ರವಿಲ್ಲ. ಜೈ ಶ್ರೀರಾಮ್ ಎಂಬ ಘೋಷಣೆಯು ಸಮರ ಘೋಷಣೆಯಾಗಿ ಪರಿಣಿಸಿದೆ ಎಂದು ಕಳೆದ ಜುಲೈ ತಿಂಗಳಲ್ಲಿ ಬರೆದಿದ್ದ ಈ ಮನವಿಪತ್ರದಲ್ಲಿ ಆಗ್ರಹಪಡಿಸಲಾಗಿತ್ತು.
ಅಂತಾರಾಷ್ಟ್ರೀಯ ಖ್ಯಾತಿಯ ಗಣ್ಯ ಚಲನಚಿತ್ರ ನಿರ್ದೇಶಕರಾದ ಶ್ಯಾಮ್ ಬೆನೆಗಲ್, ಆಡೂರು ಗೋಪಾಲಕೃಷ್ಣನ್, ಮಣಿರತ್ನಂ, ಹಿರಿಯ ನಟ ಸೌಮಿತ್ರ ಚಟರ್ಜಿ, ಇತಿಹಾಸಕಾರ ರಾಮಚಂದ್ರ ಗುಹಾ, ಅಪರ್ಣಾಸೇನ್, ಸಂಗೀತ ಕಲಾವಿದೆ ಶುಭಾ ಮುದ್ಗಲ್ ಮುಂತಾದ49 ಮಂದಿ ಗಣ್ಯರು ಈ ಬಹಿರಂಗ ಪತ್ರಕ್ಕೆ ಸಹಿ ಮಾಡಿದ್ದರು.
ಈ ಪತ್ರ ದೂರ ದೂರಕ್ಕೂ ರಾಜದ್ರೋಹದ ಅಪರಾಧವನ್ನು ಆಕರ್ಷಿಸುವುದಿಲ್ಲ. ಸರ್ಕಾರದ ಟೀಕೆ ದೇಶದ್ರೋಹ ಅಲ್ಲ ಎಂದು ಕಾನೂನು ನಿಚ್ಚಳವಾಗಿ ಹೇಳಿದೆ. ಅವ್ಯವಸ್ಥೆಯನ್ನು ಸೃಷ್ಟಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಉದ್ದೇಶ ಇಲ್ಲವೇ ಪ್ರವೃತ್ತಿಯ ಕೃತ್ಯಗಳಿಗೆ ಮಾತ್ರವೇ ರಾಜದ್ರೋಹದ ಆಪಾದನೆ ಅನ್ವಯಿಸುತ್ತದೆ ಎಂದು ಸುಪ್ರೀಮ್ ಕೋರ್ಟ್ 1962ರ ಕೇದಾರ್ ನಾಥ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್ ಮೊಕದ್ದಮೆಯಲ್ಲಿ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಸರ್ಕಾರದ ವಿರುದ್ಧ ಎಷ್ಟೇ ತೀಕ್ಷ್ಣ ಟೀಕೆಯ ಪದಗಳನ್ನು ಬಳಸಿದರೂ ಅದು ರಾಜದ್ರೋಹ ಆಗುವುದಿಲ್ಲ ಎಂದಿತ್ತು.
ಇಂದಿರಾಗಾಂಧೀ ಅವರ ಹತ್ಯೆಯ ನಂತರ ಸಿನೆಮಾ ಥಿಯೇಟರ್ ಒಂದರ ಮುಂದೆ ‘ಖಾಲಿಸ್ತಾನ್ ಜಿಂದಾಬಾದ್, ರಾಜ್ ಕರೇಗಾ ಖಾಲ್ಸಾ’ ಎಂಬುದಾಗಿ ಘೋಷಣೆ ಕೂಗಿದ್ದ ರಾಜದ್ರೋಹವಲ್ಲ ಎಂದು ಸುಪ್ರೀಮ್ ಕೋರ್ಟ್ 1995ರಲ್ಲಿ ತೀರ್ಪು ನೀಡಿತ್ತು.
ಸರ್ಕಾರದ ವಿರುದ್ಧ ಮಾಡಲಾಗುವ ಸರಳ ಟೀಕೆಗೂ ರಾಜದ್ರೋಹದ ಆಪಾದನೆ ಹೊರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜದ್ರೋಹದ ಕಾನೂನನ್ನೇ ಮರುವಿಮರ್ಶೆಗೆ ಒಳಪಡಿಸುವುದು ಸೂಕ್ತ ಎಂದು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತ ಇತ್ತೀಚೆಗೆ ವಿಚಾರಸಂಕಿರಣವೊಂದರಲ್ಲಿ ಅಭಿಪ್ರಾಯಪಟ್ಟಿದ್ದರು. ರಾಜದ್ರೋಹದ ಕಾನೂನಿನ ತೀವ್ರ ದುರುಪಯೋಗ ಕುರಿತ ಚರ್ಚೆ ಮುಝಫ್ಫರ್ಪುರದ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟರ ಗಮನಕ್ಕೆ ಬಾರದಿರುವುದು ಅಚ್ಚರಿಯ ಸಂಗತಿ. ಅಥವಾ ಗೊತ್ತಿದ್ದೂ ಸುಪ್ರೀಮ್ ಕೋರ್ಟಿನ ನಿರ್ದೇಶನಗಳನ್ನು ನಿರ್ಲಕ್ಷಿಸಿದ್ದರೆ ಅದು ದುರದೃಷ್ಟಕರ ಸಂಗತಿ. ಈ ವಿದ್ಯಮಾನವು ದೇಶದಾದ್ಯಂತ ಕವಿದಿರುವ ನಂಜುಭರಿತ ರಾಜಕೀಯ ವಾತಾವರಣದ ಪರಿಣಾಮವೂ ಇದ್ದೀತು.
ರಾಜದ್ರೋಹದ ಕಾನೂನಿನ ಮುಂದುವರೆದ ದುರ್ಬಳಕೆ ಕುರಿತು ಕೇಂದ್ರ ಸರ್ಕಾರ ತುಟಿ ಬಿಚ್ಚದಿರುವುದು ಖಂಡನೀಯ. ಈ ಪ್ರವೃತ್ತಿಯನ್ನು ತಾನು ಬೆಂಬಲಿಸುವುದೇ ಇಲ್ಲವೇ ಎಂಬುದನ್ನು ಬಹಿರಂಗಪಡಿಸಬೇಕು.
ಈ ವಿಷಯದಲ್ಲಿ ನಿತೀಶ್ ಕುಮಾರ್ ಸರ್ಕಾರದ ಮೌನ ಕಿವಿ ಗಡಚಿಕ್ಕುವಂತಿದೆ. ನ್ಯಾಯಾಧೀಶರು ಕಾನೂನನ್ನು ತಪ್ಪಾಗಿ ತಿಳಿದುಕೊಂಡಿರುವುದಕ್ಕೆ ಸರ್ಕಾರ ಮೌನ ಸಮ್ಮತಿ ನೀಡಿದಂತಿದೆ. ಪಟ್ನಾ ಹೈಕೋರ್ಟ್ ಮಧ್ಯಪ್ರವೇಶಿಸಬೇಕು. ಅಧೀನ ನ್ಯಾಯಾಲಯದ ಈ ನಡವಳಿಕೆಯನ್ನು ತಿದ್ದಬೇಕು.
ಭಿನ್ನಾಭಿಪ್ರಾಯವನ್ನು ಗೌರವಿಸುತ್ತಿದ್ದ ಮಹಾತ್ಮಾ ಗಾಂಧೀಜಿಯ 150ನೆಯ ಜನ್ಮದಿನೋತ್ಸವ ಸಂದರ್ಭದಲ್ಲಿ ಇಂತಹ ಆದೇಶವೊಂದು ಹೊರಬಿದ್ದಿರುವುದು ಬಹುದೊಡ್ಡ ವಿಡಂಬನೆ.
ರಾಜದ್ರೋಹದ ಬೆದರಿಕೆ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅನಧಿಕೃತ ಸ್ವಯಂವಿಧಿತ ಸೆನ್ಸಾರ್ ಶಿಪ್ ಹೇರಿಕೆಗೆ ದಾರಿ ಮಾಡುತ್ತದೆ. ಮುಕ್ತ ಮಾತುಕತೆಯ ವಾತಾವರಣವನ್ನು ಗಂಡಾಂತರಕ್ಕೆ ಈಡು ಮಾಡುತ್ತದೆ. ಈ ಕಾನೂನು ತೊಲಗಬೇಕು. ಯಾವ ಸರ್ಕಾರವೂ ಕೈಯಲ್ಲಿನ ಈ ಅಸ್ತ್ರವನ್ನು ಸಲೀಸಾಗಿ ಬಿಟ್ಟುಕೊಡುವುದಿಲ್ಲ. ನಾಗರಿಕ ಸಮಾಜವೇ ಈ ಕಾನೂನನ್ನು ನೇರವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಹೇಳಿದ್ದಾರೆ.
ಹದಿನೇಳನೆಯ ಶತಮಾನದ ಇಂಗ್ಲೆಂಡ್ ರಾಜದ್ರೋಹದ ಕಾನೂನನ್ನು ಜಾರಿ ಮಾಡಿತ್ತು. ಸರ್ಕಾರದ ಕುರಿತ ಸದಭಿಪ್ರಾಯಗಳು ಮಾತ್ರವೇ ಉಳಿಯಬೇಕು. ದುರಭಿಪ್ರಾಯಗಳು ಸರ್ಕಾರ ಮತ್ತು ಅರಸೊತ್ತಿಗೆಗೆ ಹಾನಿಕಾರಿ ಎಂಬುದು ಅಂದಿನ ನಿಲುವಾಗಿತ್ತು. ಈ ಕಾನೂನನ್ನು ಭಾರತದಲ್ಲಿನ ಬ್ರಿಟಿಷ್ ಸರ್ಕಾರ ಭಾರತೀಯ ದಂಡ ಸಂಹಿತೆಗೂ ಸೇರಿಸಿಬಿಟ್ಟಿತು. ರಾಜದ್ರೋಹದ ಕಾನೂನನ್ನು ಇಂಗ್ಲೆಂಡ್ 2009ರಲ್ಲಿ ರದ್ದು ಮಾಡಿತು.
ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗೆ ತಳ್ಳಲು ಬಳಸಿದ್ದ ರಾಜದ್ರೋಹದ ಕಾನೂನು ವಸಾಹತುಶಾಹಿ ಪಳಿಯುಳಿಕೆ. ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮಾಗಾಂಧೀ ಅವರ ವಿರುದ್ಧ ಬ್ರಿಟಿಷ್ ಸರ್ಕಾರ ರಾಜದ್ರೋಹದ ಅಸ್ತ್ರ ಪ್ರಯೋಗಿಸಿತ್ತು. ಇಂತಹ ಕರಾಳ ಕಾನೂನು ಸ್ವತಂತ್ರ ಭಾರತದಲ್ಲೂ ಉಳಿದುಕೊಂಡಿರುವುದೇ ಒಂದು ಸೋಜಿಗ. ಇದರ ಜಾಗ ಇತಿಹಾಸದ ಕಸದ ಬುಟ್ಟಿಯೇ ವಿನಾ ಕಾಯಿದೆ ಕಾನೂನುಗಳ ಹೊತ್ತಿಗೆಯಲ್ಲ.