ಅವಳು 8 ವರ್ಷದ ಪುಟ್ಟ ಬಾಲೆ. ಆದರೆ, ಅವಳ ಈ ಸಣ್ಣ ಹರೆಯದಲ್ಲೇ, ಜಗತ್ತೇ ಅವಳೆಡೆಗೆ ತಿರುಗಿ ನೋಡುವಂತಹ ಹೋರಾಟವನ್ನು ಮಾಡಿದಂತಹ ಹುಡುಗಿ. ಹವಾಮಾನ ಬದಲಾವಣೆಯ ಕುರಿತು ಜಗತ್ತಿನಾದ್ಯಂತ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವ ಈ ಹುಡುಗಿಯ ಹೆಸರು ಲಿಸಿಪ್ರಿಯಾ ಕಂಗುಜಮ್. ಇವಳ ದಿಟ್ಟತನ ಎಂತಹದ್ದೆಂದರೆ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣದ ಖಾತೆಯನ್ನು ನಿರ್ವಹಿಸುವ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದ್ದಾಳೆ. ಇದರ ಬದಲು, ಭಾರತದಲ್ಲಿ Climate Bill (ಹವಾಮಾನ ಮಸೂದೆ)ಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾಳೆ.
#SheInspireUs ಶೀರ್ಷಿಕೆಯಡಿ ನರೇಂದ್ರ ಮೋದಿಯವರು ಇನ್ನೊಬ್ಬರಿಗೆ ಸ್ಪೂರ್ತಿಯಾಗುವಂತಹ ಮಹಿಳೆಯರಿಗೆ ತಮ್ಮ ಸಾಮಾಜಿಕ ಜಾಲತಾಣಗಳನ್ನು ನಿಭಾಯಿಸುವ ಅವಕಾಸವನ್ನು ನೀಡುತ್ತೇನೆಂದು ಘೋಷಿಸಿದ್ದರು. ಇದಕ್ಕೆ ಹಲವು ವ್ಯಕ್ತಿಗಳ ಹೆಸರುಗಳು ಕೇಳಿ ಬಂದಿತ್ತು. ಅವರಲ್ಲಿ ಲಿಸಿಪ್ರಿಯಾ ಕೂಡಾ ಒಬ್ಬಳು. ಆದರೆ, ಪ್ರಧಾನಿಯವರ ಆಹ್ವಾನವನ್ನು ತಿರಸ್ಕರಿಸಿರುವ ಲಿಸಿಪ್ರಿಯಾ, ನನ್ನ ಮಾತುಗಳನ್ನು ಕೇಲಲು ನೀವು ಸಿದ್ದರಿಲ್ಲದೇ ಇರುವ ಕಾರಣಕ್ಕೆ ನಿಮ್ಮ ಆಹ್ವಾನವನ್ನು ನಾನು ತಿರಸ್ಕರಿಸುತ್ತಾ ಇದ್ದೇನೆಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಬಹಳಷ್ಟು ಸದ್ದು ಮಾಡಿರುವ ಲಿಸಿಪ್ರಿಯಾ ಅವಳ ಮಾತುಗಳಿಗೆ ಹಲವು ವ್ಯಕ್ತಿಗಳಿಂದ ಪ್ರಶಂಸೆಯ ಪೂರವೇ ಹರಿದು ಬಂದಿದೆ. ಈದನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಪ್ರಯತ್ನಿಸಿದ ಕಾಂಗ್ರೆಸ್‌ನ ಟ್ವೀಟ್‌ಗೆ ಖಾರವಾಗಿ ಉತ್ತರಿಸಿರುವ ಲಿಸಿಪ್ರಿಯಾ ಕಾಂಗ್ರೆಸ್‌ನ ಎಷ್ಟು ಜನ ಸಂಸದರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಹವಾಮಾನ ಬದಲಾವಣೆಯ ಕುರಿತಾಗಿ ಮಾತನ್ನು ಎತ್ತೀದ್ದೀರಿ? ಎಂದು ಪ್ರಶ್ನಿಸಿದ್ದಾರೆ. ನನ್ನ ಹೆಸರನ್ನು ಕೇವಲ ಟ್ವಿಟರ್ ಕಾಂಪೈನ್‌ಗಳಿಗಾಗಿ ಮಾತ್ರ ಬಳಸಿಕೊಳ್ಳಬೇಡಿ. ಎಷ್ಟು ಜನರು ನನ್ನ ಮಾತನ್ನು ಕೇಳಿದ್ದೀರಿ? ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೂ ಈ ವಿಷಯದ ಕುರಿತು ಪ್ರಸ್ತಾಪಿಸಿತ್ತು. ಮತ್ತೆ ನಾನು ಕೂಡಾ ಹವಮಾನ ಬದಲಾವಣೆಯ ಕುರಿತಾದ ಹಲವು ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.
ಯಾರು ಈ ಲಿಸಿಪ್ರಿಯಾ?
ಅಕ್ಟೋಬರ್ 2, 2011ರಲ್ಲಿ ಮಣಿಪುರ್‌ನ ಬಾಷಿಖಾಂಗ್‌ನಲ್ಲಿ ಜನಿಸಿದ ಲಿಸಿಪ್ರಿಯಾಗೆ ಈವರೆಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಏಳು ವಯಸ್ಸಿನಲ್ಲೇ ಸಂಸತ್ತಿನ ಎದುರು ಹವಮಾನ ಬದಲಾವಣೆಯ ಕುರಿತು ಪ್ರತಿಭಟನೆಯನ್ನು ನಡೆಸಿ ದೇಶದ ಗಮನ ಸೆಳೆದವಳು ಈಕೆ. 2019ರಲ್ಲಿ ಅಂಗೋಲಾದಲ್ಲಿ ಸುಮಾರು 50,000 ಮಕ್ಕಳು ಹಾಗೂ ಯುವಕರನ್ನು ಜೊತೆ ಸೇರಿಸಿ ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸಲು ಯಶಸ್ವಿ ಜಾಥಾವನ್ನು ಕೂಡಾ ಕೈಗೊಂಡಿದ್ದಳು. ನಂತರ ಅಂಗೋಲದಲ್ಲಿ UNESCO ಸಹಭಾಗಿತ್ವದೊಂದಿಗೆ ನಡೆದ ಸಮಾವೇಶದಲ್ಲಿ ಅಂಗೋಲಾ ದೇಶದ ಅಧ್ಯಕ್ಷ, ಮಾಲಿ ದೇಶದ ಅಧ್ಯಕ್ಷ, ರಿಪಬ್ಲಿಕ್ ಆಫ್ ಕಾಮಗೋ ಅಧ್ಯಕ್ಷ, UNESCO ಡೈರೆಕ್ಟರ್ ಜನರಲ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ಲಿಸಿಪ್ರಿಯಾಗೆ ಸಿಕ್ಕಿತ್ತು.
ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ʼGreat October March 2019′ ಆರಂಭಿಸಿದ ಲಿಸಿಪ್ರಿಯಾ, ಅಕ್ಟೋಬರ್ 21ರಿಂದ 27ರವರೆಗೆ ಸತತವಾಗಿ ಹವಾಮಾನ ಬದಲಾವಣೆಯ ಕುರಿತು ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಪಟ್ಟಿದ್ದಳು. ಹವಾಮಾನ ಮಸೂದೆಯ ಕುರಿತು ಮಾತನಾಡಿರುವ ಲಿಸಿಪ್ರಿಯಾ “ಪ್ರಪಂಚದ ಕೇವಲ ಐದು ರಾಷ್ಟ್ರಗಳು ಮಾತ್ರ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿವೆ. ಆ ಪಟ್ಟಿಯಲ್ಲಿ ಇನ್ನೂ ಭಾರತದ ಹೆಸರಿಲ್ಲ. ನಮ್ಮ ಭವಿಷ್ಯವನ್ನು ಸುಭಧ್ರವಾಗಿಸಲು ಆದಷ್ಟು ತ್ವರಿತವಾಗಿ ಹವಾಮಾನ ಬದಲಾವಣೆಯ ಕುರಿತಾದ ಮಸೂದೆಯನ್ನು ಜಾರಿಗೆ ತರಲೇ ಬೇಕು,” ಎಂದು ಹೇಳಿದ್ದಾಳೆ.
ಈ ಪುಟ್ಟ ಪೋರಿಯ ದಿಟ್ಟತನಕ್ಕೊಂದು ಸಲಾಮ್ ಇರಲಿ. ಇಂತಹ ದಿಟ್ಟತನ ದೇಶದ ಎಲ್ಲಾ ಹೆಣ್ಣು ಮಕ್ಕಳಲ್ಲಿ ಬಂದರೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುವ ಉದ್ದೇಶವೂ ಈಡೇರಿದಂತಾಗುತ್ತದೆ.