ಜಾಗತಿಕ ಆರ್ಥಿಕತೆಯನ್ನು ಹಿಂಜರಿತದತ್ತ ತಳ್ಳುತ್ತಿರುವ ಮಾರಕ ಸೋಂಕು ‘ಕೋವಿಡ್-19’ ವಿರುದ್ಧ ತುರ್ತು ಕಾರ್ಯಾಚರಣೆ ನಡೆಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ಮಾರುಕಟ್ಟೆಯಲ್ಲಿ ಸತತ ನಗದು ಹರಿವು ಕಾಯ್ದುಕೊಳ್ಳಲು ಎರಡು ಕ್ರಮಗಳನ್ನು ಪ್ರಕಟಿಸಿದೆ. ಒಂದು ಲಕ್ಷ ಕೋಟಿ ರುಪಾಯಿಗಳಷ್ಟು ದೀರ್ಘಕಾಲದ ರೆಪೊ ಕಾರ್ಯಚರಣೆ (LTRO) ಮತ್ತು 5 ಬಿಲಿಯನ್ ಡಾಲರ್ ವಿನಿಮಯ (ಡಾಲರ್ ಸ್ವಾಪ್)ವನ್ನು ಬ್ಯಾಂಕುಗಳಿಗೆ ಒದಗಿಸಲಿದೆ. ಸೋಮವಾರ ತುರ್ತಾಗಿ ಕರೆದ ಸುದ್ಧಿಗೋಷ್ಠಿಯಲ್ಲಿ RBI ಗವರ್ನರ್ ಶಕ್ತಿಕಾಂತ ದಾಸ್ ಈ ಕ್ರಮಗಳನ್ನು ಪ್ರಕಟಿಸಿದರು. ಆದರೆ, ಎಲ್ಲರೂ ನಿರೀಕ್ಷಿಸಿದಂತೆ ಬಡ್ಡಿದರ ಕಡಿತವನ್ನು ಪ್ರಕಟಿಸಲಿಲ್ಲ. ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರ ಕಡಿತ ಮಾಡುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದೂ ಶಕ್ತಿಕಾಂತ ದಾಸ್ ಹೇಳಿದ್ದಾರೆ.
‘ಕೋವಿಡ್-19’ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ RBI ಎಲ್ಲಾ ಅಗತ್ಯ ತುರ್ತುಕ್ರಮಗಳನ್ನು ಕೈಗೊಳ್ಳುತ್ತದೆ ಎಂದರು. ಆ ಮೂಲಕ ಅಗತ್ಯ ಬಿದ್ದರೆ, ಏಪ್ರಿಲ್ ಮೊದಲವಾರ ನಡೆಯಲಿರುವ ಹಣಕಾಸು ನೀತಿ ಸಮಿತಿ ಸಭೆಗಿಂತ ಮುಂಚಿತವಾಗಿಯೇ ಬಡ್ಡಿದರ ಕಡಿತ ಮಾಡುವ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ. ಸುದ್ಧಿಗೋಷ್ಠಿಯಲ್ಲಿ ಅವರು ಪ್ರಕಟಿಸಿದ ಮತ್ತೊಂದು ಪ್ರಮುಖ ಅಂಶ ಎಂದರೆ- ಗಂಡಾಂತರದಲ್ಲಿರುವ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಠೇವಣಿಗಳ ಬಗ್ಗೆ ಆತಂಕ ಪಡಬೇಕಿಲ್ಲ. ಯೆಸ್ ಬ್ಯಾಂಕ್ ಅನ್ನು ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಸಂಯೋಜನೆಯಡಿ ಪುನಾನಿರ್ಮಾಣ ಮಾಡಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯುತ್ತಿರುವ ಪುನಾನಿರ್ಮಾಣ ಕಾರ್ಯದಲ್ಲಿ ₹10,000 ಕೋಟಿ ವಿನಿಯೋಗಿಸಲಾಗುತ್ತಿದೆ.
SBI ₹6500 ಕೋಟಿ ದೊಡ್ಡಪಾಲು ವಿನಿಯೋಗಿಸುತ್ತಿದ್ದು, ಉಳಿದ ₹3500 ಕೋಟಿಯನ್ನು ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್ ಗಳು ಹೂಡಿಕೆ ಮಾಡುತ್ತಿವೆ. ಯೆಸ್ ಬ್ಯಾಂಕ್ ಪುನಾನಿರ್ಮಾಣದ ಪೂರ್ವಷರತ್ತಾಗಿ ಹೂಡಿಕೆದಾರರ ಶೇ.75ರಷ್ಟು ಷೇರುಗಳನ್ನು ಮಾರಾಟ ಮಾಡಲು ಮೂರುವರ್ಷಗಳ ಕಾಲ ನಿರ್ಬಂಧ ಹೇರಲಾಗಿದೆ. ಯೆಸ್ ಬ್ಯಾಂಕ್ ಬಳಿ ತನ್ನ ವಹಿವಾಟಿಗೆ ಬೇಕಾದಷ್ಟು ನಗದು ಇದೆ. ಅಗತ್ಯ ಬಿದ್ದರೆ RBI ನಗದು ನೆರವು ನೀಡುತ್ತದೆ ಎಂದು ಶಕ್ತಿಕಾಂತ ದಾಸ್ ಪ್ರಕಟಿಸಿದರು. ಸರ್ಕಾರದ ವಿವಿಧ ಏಜೆನ್ಸಿಗಳು ಯೆಸ್ ಬ್ಯಾಂಕ್ ನಲ್ಲಿರುವ ಠೇವಣಿಯನ್ನು ಹಿಂದಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿವೆ ಎಂಬುದು ಗೊತ್ತಾಗಿದೆ. ಯೆಸ್ ಬ್ಯಾಂಕ್ ನಲ್ಲಿ ಇರುವ ಎಲ್ಲಾ ಠೇವಣಿಗಳು ಸುರಕ್ಷಿತವಾಗಿವೆ. ಹೀಗಾಗಿ ಠೇವಣಿ ಹಿಂಪಡೆಯುವ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಆರ್ಬಿಐ ಗವರ್ನರ್ ಉದ್ದೇಶವೇನು?
ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ನಗದು ಹರಿವಿನ ಕೊರತೆ ತೀವ್ರವಾಗಿದೆ. ಇದು ಈಗಾಗಲೇ ಮಂದಗತಿಯಲ್ಲಿರುವ ಆರ್ಥಿಕತೆಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಅಂತಹ ಸಂಭವನೀಯ ಸಂಕಷ್ಟಗಳನ್ನು ತಡೆಯುವ ಸಲುವಾಗಿ RBI ಒಂದು ಲಕ್ಷ ಕೋಟಿ ರುಪಾಯಿಗಳಷ್ಟು ದೀರ್ಘಕಾಲದ ರೆಪೊ ಕಾರ್ಯಚರಣೆ (LTRO) ಮತ್ತು 5 ಬಿಲಿಯನ್ ಡಾಲರ್ ವಿನಿಮಯ (ಡಾಲರ್ ಸ್ವಾಪ್)ವನ್ನು ಬ್ಯಾಂಕುಗಳಿಗೆ ಒದಗಿಸಲಿದೆ.
ದೀರ್ಘಕಾಲದ ರೆಪೊ ಕಾರ್ಯಾಚರಣೆ ಎಂದರೆ RBI ಘೋಷಿಸಿದ ರೆಪೊ ದರದಲ್ಲೇ ಬ್ಯಾಂಕುಗಳು ದೀರ್ಘಕಾಲದವರೆಗೆ ಅಂದರೆ ಗರಿಷ್ಠ ಮೂರು ವರ್ಷಗಳವರೆಗೆ RBI ನಿಂದ ಸಾಲ ಪಡೆಯಬಹುದಾಗಿದೆ. ಅಂದರೆ, ಕಡಮೆ ಬಡ್ಡಿದರದಲ್ಲಿ ಬ್ಯಾಂಕುಗಳಿಗೆ ನಗದು ಹರಿದು ಬರುತ್ತದೆ. ಪ್ರಸ್ತುತ ರೆಪೊ ದರ ಶೇ.5.15ರಷ್ಟಿದೆ. ಅಂದರೆ ಇಷ್ಟು ಕಡಮೆ ಬಡ್ಡಿದರದಲ್ಲಿ ಬ್ಯಾಂಕುಗಳು ಸುಮಾರು 1 ಲಕ್ಷ ಕೋಟಿ ರುಪಾಯಿ ಸಾಲ ಪಡೆಯಬಹುದಾಗಿದೆ. ಹೀಗಾಗಿ ಬ್ಯಾಂಕುಗಳು ಸಹ ಕಡಮೆ ಬಡ್ಡಿದರದಲ್ಲೇ ಗ್ರಾಹಕರಿಗೆ ಸಾಲ ಒದಗಿಸುತ್ತವೆ. ಇದರಿಂದ ಮಾರುಕಟ್ಟೆಯಲ್ಲಿ ನಗದುಕೊರತೆಯಾಗುವುದು ತಪ್ಪುತ್ತದೆ.
ಡಾಲರ್ ವಿನಿಮಯ ಯೋಜನೆಯಡಿ ಬ್ಯಾಂಕುಗಳು ತಮ್ಮ ವಿದೇಶಿ ಕರೆನ್ಸಿ ವಹಿವಾಟು ನಡೆಸಲು RBIನಿಂದ ನಿರ್ಧಿಷ್ಟ ಮೊತ್ತದ ಡಾಲರ್ ಗಳನ್ನು ಪಡೆದುಕೊಂಡು ತಮ್ಮ ವಹಿವಾಟು ನಿರ್ವಹಿಸುತ್ತವೆ. ನಿರ್ಧಿಷ್ಟ ಅವಧಿಯ ನಂತರ ಪಡೆದಷ್ಟೂ ಡಾಲರ್ ಹಿಂತಿರುಗಿಸುತ್ತವೆ. ಡಾಲರ್ ಗಳನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡದೇ ನೇರವಾಗಿ RBIನಿಂದ ಪಡೆಯುವುದರಿಂದ ಬ್ಯಾಂಕುಗಳಿಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಮತ್ತು ರುಪಾಯಿ ಡಾಲರ್ ವಿರುದ್ಧ ಕುಸಿಯುವುದನ್ನು ತಡೆಯುವುದು ಸಾಧ್ಯವಾಗುತ್ತದೆ. ಈ ಎರಡೂ ಕ್ರಮಗಳಿಂದ ಮಾರುಕಟ್ಟೆಗೆ ಹೆಚ್ಚಿನ ನಗದು ಹರಿದು ಬರುವುದರಿಂದ ಸಂಭವನೀಯ ನಗದು ಸಂಕಷ್ಟಗಳನ್ನು ನಿವಾರಿಸಲು ಸಾಧ್ಯ.
ಕೋವಿಡ್-19 ತಂದೊಡ್ಡಬಹುದಾದ ಆರ್ಥಿಕ ಸಂಕಷ್ಟಗಳನ್ನು ತ್ವರಿತವಾಗಿ ಎದುರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಶೂನ್ಯಮಟ್ಟಕ್ಕೆ ಪರಿಷ್ಕರಿಸಿದೆ. ಬಹುತೇಕ ಬ್ಯಾಂಕುಗಳು ಇದೇ ಹಾದಿಯಲ್ಲಿವೆ. ಈ ಹಿನ್ನೆಲೆಯಲ್ಲಿ RBI ಕೂಡಾ ಬಡ್ಡಿದರ ಕಡಿತ ಮಾಡುವ ನಿರೀಕ್ಷೆ ಮಾರುಕಟ್ಟೆಯಲ್ಲಿತ್ತು. ಆದರೆ, RBI ಸದ್ಯಕ್ಕೆ ನಗದು ಕೊರತೆ ಆಗುವುದನ್ನು ತಡೆಯಲು ಕ್ರಮಕೈಗೊಂಡಿದೆ. ಅಗತ್ಯ ಬಿದ್ದರೆ, ಯಾವಾಗ ಬೇಕಾದರೂ ಬಡ್ಡಿದರ ಕಡಿತ ಮಾಡುವ ಮುಕ್ತ ಅವಕಾಶವನ್ನು ಹೊಂದಿದೆ.
ಯೆಸ್ ಬ್ಯಾಂಕ್ ರಕ್ಷಣೆಗೆ ಮುಂದಾಗಲು ಕಾರಣವೇನು?
ಗಂಡಾಂತರದಲ್ಲಿರುವ ಯೆಸ್ ಬ್ಯಾಂಕ್ ರಕ್ಷಣೆಗೆ RBI ಮುಂದಾಗಿರುವುದು ಮತ್ತು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ನೇತೃತ್ವದಲ್ಲಿ ಪುನಾನಿರ್ಮಾನ ಯೋಜನೆ ರೂಪಿಸಿರುವುದಕ್ಕೆ ಮುಖ್ಯ ಕಾರಣ ಎಂದರೆ ಯೆಸ್ ಬ್ಯಾಂಕಿನ ಉಳಿವು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಉಳಿಸುತ್ತದೆ. ದೇಶದ ಅತಿದೊಡ್ಡ ಐದನೇ ಬ್ಯಾಂಕ್ ದಿವಾಳಿ ಎದ್ದರೆ ಅದು ಇಡೀ ಬ್ಯಾಂಕಿಂಗ್ ವ್ಯವಸ್ಥೆಗೆ ಕಳಂಕ ತಂದುಬಿಡುತ್ತದೆ. ಬ್ಯಾಂಕುಗಳ ಮೇಲೆ ಜನರಿಗಿರುವ ವಿಶ್ವಾಸಾರ್ಹತೆ ಕುಂದುತ್ತದೆ. ಜನರು ಬ್ಯಾಂಕಿನಲ್ಲಿ ಠೇವಣಿ ಇಡಲು ಆತಂಕಪಡಬಹುದು. ಈಗಾಗಲೇ ಇಟ್ಟಿರುವ ಠೇವಣಿಗಳನ್ನು ಪಡೆಯಲು ಮುಂದಾಗಬಹುದು. ಅಂತಹ ಪರಿಸ್ಥಿತಿ ಬಂದರೆ ಇತರ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಈ ಎಲ್ಲಾ ಕಾರಣಗಳಿಗಾಗಿ ಯೆಸ್ ಬ್ಯಾಂಕ್ ರಕ್ಷಣೆಗೆ ಆರ್ಬಿಐ ಮುಂದಾಗಿದೆ. ಮತ್ತು ಖುದ್ಧು RBI ಗವರ್ನರ್ ಗ್ರಾಹಕರ ಠೇವಣಿಗಳು ಸುರಕ್ಷಿತವಾಗಿವೆ ಎಂದು ಭರವಸೆ ನೀಡಿದ್ದಾರೆ. ಯೆಸ್ ಬ್ಯಾಂಕ್ ಹರಗಣದ ನಂತರ ಎಲ್ಲಾ ಬ್ಯಾಂಕುಗಳ ಮೇಲಿನ ಆರ್ಬಿಐ ನಿಗಾ ಹೆಚ್ಚಾಗಿದೆ. ಬ್ಯಾಂಕುಗಳು ಒತ್ತಡದ ಸಾಲ ಮತ್ತು ನಿಷ್ಕ್ರಿಯ ಸಾಲಗಳನ್ನು ಮುಚ್ಚಿಡುವುದನ್ನು ತಡೆಯಲು RBI ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.