ಸುನಾಮಿಯಂತೆ ಅಪ್ಪಳಿಸಿರುವ ‘ಕೋವಿಡ್-19’ ಎಬ್ಬಿಸಿರುವ ತಲ್ಲಣಗಳಿಂದ ಜಾಗತಿಕ ಷೇರುಪೇಟೆ ಮತ್ತು ಹಣಕಾಸು ಮಾರುಕಟ್ಟೆ ತತ್ತರಿಸಿ ಹೋಗಿವೆ. ಕುಸಿಯುತ್ತಲೇ ಸಾಗಿರುವ ಜಾಗತಿಕ ಷೇರುಪೇಟೆಗಳ ಸೂಚ್ಯಂಕಗಳು ದಿನದಿನಕ್ಕೆ ಪಾತಾಳದತ್ತ ಶರವೇಗದಲ್ಲಿ ಸಾಗುತ್ತಿವೆ. ಹೂಡಿಕೆದಾರರ ಹಲವು ಲಕ್ಷ ಕೋಟಿಗಳಷ್ಟು ಸಂಪತ್ತು ತ್ವರಿತವಾಗಿ ನಾಶವಾಗಿದೆ. ದೇಶೀಯ ಮಾರುಕಟ್ಟೆಗಳು ಜಾಗತಿಕ ಮಾರುಕಟ್ಟೆಗಳಿಗಿಂತ ತ್ವರಿತವಾಗಿ ಕುಸಿಯುತ್ತಿವೆ. ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 36 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳೂ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಕುಸಿತದ ಅಂತ್ಯ ಎಲ್ಲಿ ಮತ್ತು ಯಾವಾಗ ಎಂಬುದು ಗೊತ್ತಾಗದೇ ಹೂಡಿಕೆದಾರರು ತತ್ತರಿಸಿದ್ದಾರೆ.
ಮಾರ್ಚ್ 18ರ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಪ್ರಬಲ ಸುಭದ್ರತಾ ಮಟ್ಟವಾದ 30,000 ಮತ್ತು 8,500 ಅಂಶಗಳ ಮಟ್ಟದಿಂದ ಕುಸಿದಿವೆ. ಹೀಗಾಗಿ ಪೇಟೆಯ ಕುಸಿತಕ್ಕೆ ಕೊನೆ ಎಂಬುದೇ ಇಲ್ಲವೆಂಬಂತೆ ಹೂಡಿಕೆದಾರರು ತೀವ್ರಗತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.5.59 ರಷ್ಟು ಅಂದರೆ 1709.58 ಅಂಶಗಳಷ್ಟು ಕುಸಿದು 28869ಕ್ಕೆ ಸ್ಥಿರಗೊಂಡಿದೆ. ನಿಫ್ಟಿ ಶೇ.5.56 ರಷ್ಟು ಅಂದರೆ 498.25 ಅಂಶಗಳಷ್ಟು ಕುಸಿದು 8468.8ಕ್ಕೆ ಸ್ಥಿರಗೊಂಡಿದೆ. ಷೇರುಪೇಟೆಯ ಮಾರಣಹೋಮದ ನಡುವೆ ಚಿನ್ನ ತನ್ನ ಹೊಳಪನ್ನೂ ರುಪಾಯಿ ತನ್ನ ಮೌಲ್ಯವನ್ನೂ ಕಳೆದುಕೊಂಡಿದೆ. ದಿನದ ವಹಿವಾಟಿನಲ್ಲಿ ಚಿನ್ನಪ್ರತಿ 10 ಗ್ರಾಮ್ ಗೆ 313 ರುಪಾಯಿ ಕುಸಿದು 39931ಕ್ಕೆ ಇಳಿದಿದೆ. ಹಿಂದಿನ ಐದುವಹಿವಾಟಿನಲ್ಲಿ ಸುಮಾರು 5000 ರುಪಾಯಿ ಕುಸಿತ ದಾಖಲಿಸಿತ್ತು. ಸತತ ಕುಸಿತದ ಹಾದಿಯಲ್ಲಿರುವ ರುಪಾಯಿ ದಿನದ ವಹಿವಾಟಿನಲ್ಲಿ ಮತ್ತಷ್ಟು ಕುಸಿತ ದಾಖಲಿಸಿದೆ. ದಿನದ ಅಂತ್ಯಕ್ಕೆ ಡಾಲರ್ ವಿರುದ್ಧ ರುಪಾಯಿ ಮೌಲ್ಯವು74.37ಕ್ಕೆ ಕುಸಿದಿದೆ.
ಸೆನ್ಸೆಕ್ಸ್ ನ 30 ಷೇರುಗಳ ಪೈಕಿ ಒಎನ್ಜಿಸಿ ಮತ್ತು ಐಟಿಸಿ ಹೊರತು ಪಡಿಸಿದರೆ ಉಳಿದ 28 ಷೇರುಗಳು ಶೇ.2ರಿಂದ 23ರಷ್ಟು ಕುಸಿತ ದಾಖಲಿಸಿವೆ. ಷೇರುಪೇಟೆಯ ಸುರಕ್ಷಿತ ಮತ್ತು ಲಾಭದಾಯಕ ಷೇರುಗಳೆಂದೇ ಹೆಸರಾಗಿರುವ ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮಹಿಂದ್ರ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ ಶೇ.10-12ರಷ್ಟು ಕುಸಿತ ದಾಖಲಿಸಿವೆ. ಮತ್ತೊಂದು ಬ್ಲೂಚಿಪ್ ಷೇರು ಇಂಡಸ್ ಇಂಡ್ ಬ್ಯಾಂಕು ಶೇ.23ರಷ್ಟು ಕುಸಿತ ದಾಖಲಿಸಿದೆ. ಒಂದು ಹಂತದಲ್ಲಿ ಶೇ.36ರಷ್ಟು ಕುಸಿದಿದ್ದ ಇಂಡಸ್ ಇಂಡ್ ಬ್ಯಾಂಕ್ ದಿನದ ಅಂತ್ಯದ ವಹಿವಾಟಿನಲ್ಲಿ ಕೊಂಚ ಚೇತರಿಸಿಕೊಂಡಿತು. ಹೆಚ್ಚು ಏರಿಳಿತ ಇಲ್ಲದೇ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡುವ ಇನ್ಫೊಸಿಸ್, ರಿಲಯನ್ಸ್, ಟಿಸಿಎಸ್ ಸಹ ಸತತ ಕುಸಿತದ ಹಾದಿಯಿಂದ ಹೊರಬಂದಿಲ್ಲ.
50 ಷೇರುಗಳನ್ನೊಗೊಂಡ ನಿಫ್ಟಿ ಸೂಚ್ಯಂಕದ ಐದು ಷೇರುಗಳು ಶಾರ್ಟ್ ಕವರಿಂಗ್ ಕಾರಣಕ್ಕಾಗಿ ಏರು ಹಾದಿಯಲ್ಲಿ ಸಾಗಿದ್ದರೂ, ಉಳಿದ 45 ಷೇರುಗಳು ತ್ವರಿತವಾಗಿ ಕುಸಿತ ದಾಖಲಿಸಿವೆ. ಬಹುತೇಕ ಷೇರುಗಳು ಶೇ.3ರಿಂದ 23ರಷ್ಟು ಕುಸಿತ ದಾಖಲಿಸಿವೆ.
ಜಾಗತಿಕ ಷೇರುಪೇಟೆಗಳ ಪೈಕಿ ನಾಸ್ಡಾಕ್ ಹೊರತಾಗಿ ಉಳಿದೆಲ್ಲ ಸೂಚ್ಯಂಕಗಳು ಕುಸಿತದ ಹಾದಿಯಲ್ಲೇ ಸಾಗಿವೆ. ಎಫ್ಟಿಎಸ್ಇ, ಸಿಎಸಿ, ಡಿಎಎಕ್ಸ್, ನಿಕ್ಕೀ, ಸ್ಟ್ರೈಟ್ ಟೈಮ್ಸ್, ಕೋಪ್ಸಿ, ಜಕಾರ್ತಾ ಕಾಂಪೋಸಿಟ್, ಶಾಂಗೈ ಕಾಂಪೋಸಿಟ್ ಶೇ.2ರಿಂದ 5ರಷ್ಟು ಕುಸಿತ ದಾಖಲಿಸಿವೆ. ನ್ಯಾಸ್ಡಾಕ್ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಅಲ್ಲಿ ಲಿಸ್ಟಾಗಿರುವ ಭಾರತೀಯ ಕಂಪನಿಗಳ ಎಡಿಆರ್ (ಅಮೆರಿಕನ್ ಡಿಪಾಸಿಟರಿ ರಿಸಿಪ್ಟ್) ಏರುಹಾದಿಯಲ್ಲಿ ಸಾಗಿದವು. ಡಾ.ರೆಡ್ಡಿ ಎಡಿಆರ್, ಎಚ್ಡಿಎಫ್ಸಿ ಬ್ಯಾಂಕ್ ಎಡಿಆರ್, ಇನ್ಫೊಸಿಸ್ ಎಡಿಆರ್, ಟಾಟಾ ಮೋಟಾರ್ಸ್ ಎಡಿಆರ್ ಮತ್ತು ವಿಪ್ರೊ ಎಡಿಆರ್ ಶೇ.1ರಿಂದ 6ರಷ್ಟು ಏರಿಕೆ ದಾಖಲಿಸಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಪುನಾನಿರ್ಮಾಣ ಯೋಜನೆ ಸಿದ್ದವಾಗಿರುವ ಯೆಸ್ ಬ್ಯಾಂಕ್ ದಿನದ ವಹಿವಾಟಿನಲ್ಲಿ ಶೇ.50ರಷ್ಟು ಏರಿಕೆ ದಾಖಲಿಸಿತ್ತು. ನಂತರ ಬಹಳಷ್ಟು ಏರಿಕೆ ಕುಸಿದು ಶೇ.10ರಷ್ಟು ಏರಿಕೆಯೊಂದಿಗೆ ವಹಿವಾಟು ಮುಗಿಸಿದೆ. ಕೆಲವೇ ವಹಿವಾಟು ದಿನಗಳಲ್ಲಿ ಶೇ.1,400ರಷ್ಟು ಏರಿಕೆ ದಾಖಲಿಸಿದೆ. ಒಂದು ಹಂತದಲ್ಲಿ 5.50 ರುಪಾಯಿಗೆ ಕುಸಿದಿದ್ದ ಯೆಸ್ ಬ್ಯಾಂಕ್ ಈಗ 60 ರುಪಾಯಿಗಳ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ.
ಬುಧವಾರದ ವಹಿವಾಟಿನಲ್ಲಿ ಅತಿ ಹೆಚ್ಚು ನಷ್ಟಕ್ಕೀಡಾಗಿದ್ದು ನಿಫ್ಟಿ ಬ್ಯಾಂಕ್ ಸೂಚ್ಯಂಕ. ಶೇ.7.25ರಷ್ಟು ಕುಸಿತ ದಾಖಲಿಸಿ 20,580ಕ್ಕೆ ಸ್ಥಿರಗೊಂಡಿದೆ. ಸರಾಸರಿ ಒಟ್ಟು ಆದಾಯ (ಕುರಿತಂತೆ) ತಾನು ನೀಡಿರುವ ಆದೇಶವನ್ನು ಪಾಲಿಸುವಲ್ಲಿ ಕೇಂದ್ರ ದೂರಸಂಪರ್ಕ ಸಚಿವಾಲಯ ಮತ್ತು ಟೆಲಿಕಾಂ ಕಂಪನಿಗಳು ಹಿಂದೇಟು ಹಾಕುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದು, ಈ ಬಾಕಿ ಪಾವತಿ ಕುರಿತಂತೆ ಈ ಹಿಂದೆ ನೀಡಿರುವ ಆದೇಶವನ್ನು ತ್ವರಿತ ಪಾಲಿಸುವಂತೆ ತಾಕೀತು ಮಾಡಿದೆ. ಇದರ ಪರಿಣಾಮವಾಗಿ ಟೆಲಿಕಾಂ ಕಂಪನಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿರುವ ಬ್ಯಾಂಕುಗಳ ಷೇರುಗಳು ತೀವ್ರ ಹಾನಿ ಅನುಭವಿಸಿದವು. ಇಂಡಸ್ ಇಂಡ್, ಕೊಟಕ್ ಮಹಿಂದ್ರ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಐಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ತೀವ್ರ ಮಾರಾಟ ಒತ್ತಡಕ್ಕೆ ಸಿಲುಕಿದವು. ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಇಡಿಲ್ವೀಸ್, ಎಲ್ಅಂಡ್ ಟಿ ಫೈನಾನ್ಸ್, ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ, ಆದಿತ್ಯ ಬಿರ್ಲಾ ಫೈನಾನ್ಸ್ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳು ತೀವ್ರ ಕುಸಿತ ದಾಖಲಿಸಿವೆ.
‘ಕೋವಿಡ್-19’ ಹರಡಿರುವ ಭೀತಿಯಿಂದಾಗಿ ಜಾಗತಿಕವಾಗಿ ತೈಲ ಬಳಕೆ ತಗ್ಗುವ ಹಿನ್ನೆಲೆಯಲ್ಲಿ ಈಗಾಗಲೇ ಪಾತಾಳಕ್ಕೆ ಇಳಿದಿರುವ ಕಚ್ಚಾ ತೈಲ ಬೆಲೆಯು ಮತ್ತಷ್ಟು ಕುಸಿದಿದೆ. ಡಬ್ಲ್ಯುಟಿಐ ಕ್ರೂಡ್ 25.62 ಡಾಲರ್ ಗೆ ಮತ್ತು ಬ್ರೆಂಟ್ ಕ್ರೂಡ್ 29 ಡಾಲರ್ ಗೆ ಕುಸಿದಿವೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಮಂದಗತಿಯಲ್ಲಿರುವ ಆರ್ಥಿಕತೆಯು ಹಿಂಜರಿತವಾಗಿ ಪರಿವರ್ತನೆಗೊಳ್ಳುವ ಅಪಾಯದ ಮುನ್ಸೂಚನೆಯಿಂದಾಗಿ ಷೇರುಪೇಟೆಗಳಲ್ಲಿ ತಕ್ಷಣಕ್ಕೆ ಚೇತರಿಕೆ ಕಾಣುವ ಸಾಧ್ಯತೆ ಇಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ‘ಕೋವಿಡ್-19’ ಸಂಪೂರ್ಣವಾಗಿ ನಿವಾರಣೆ ಆಗುವವರೆಗೂ ಈಗಿರುವ ಅಸ್ಥಿರತೆ ಮುಂದುವರೆಯಲಿದೆ ಮತ್ತು ಅಂದರಿಂದಾಗುವ ಆರ್ಥಿಕ ನಷ್ಟವು 2008ರಲ್ಲಾದ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾದ ನಷ್ಟದ ಬಹಳಷ್ಟು ಪಟ್ಟು ಹೆಚ್ಚಿರುತ್ತದೆ ಎಂಬ ಎಚ್ಚರಿಕೆಯನ್ನೂ ಮಾರುಕಟ್ಟೆ ತಜ್ಞರು ನೀಡಿದ್ದಾರೆ.