ಬಹುಶ: ಕನ್ನಡ ಮಾಧ್ಯಮ ಕ್ಷೇತ್ರ ಇಂತಹ ಸಂದಿಗ್ದ ಪರಿಸ್ಥಿತಿಯನ್ನು ಈವರೆಗೂ ಎದುರಿಸಿರಲಿಲ್ಲ. “ಅಯೋಧ್ಯ ಹಿಂಸಾಚಾರ ಸಂದರ್ಭದಲ್ಲಿ ಒಂದೆರಡು ದಿನ ಇಂತಹ ಸಮಸ್ಯೆ ಎದುರಾಗಿತ್ತೇ ವಿನಹ; ಮತ್ಯಾವತ್ತೂ ಪತ್ರಿಕೆಗಳು ಮುದ್ರಣಗೊಳ್ಳದ ದಿನವೇ ಇರಲಿಲ್ಲ,” ಎಂದು ಗತಕಾಲದ ನೆನಪಿನತ್ತ ಜಾರಿದರು ಹಿರಿಯ ಪತ್ರಕರ್ತರೊಬ್ಬರು. ಇದೀಗ ಅವರು ಸೇವೆ ಸಲ್ಲಿಸುತ್ತಿರುವ ʼಖ್ಯಾತ’ ಪತ್ರಿಕೆ ಒಂದು ವಾರದಿಂದ ರಾಜ್ಯದ ಯಾವುದೇ ಭಾಗದಲ್ಲಿ ಮುದ್ರಣಗೊಳ್ಳುತ್ತಿಲ್ಲ. “ಒಂದೊಮ್ಮೆ ಪರಿಸ್ಥಿತಿ ಇನ್ನು ಒಂದೆರಡು ವಾರದೊಳಗೆ ಸುಧಾರಿಸದಿದ್ದರೆ, ಬಹುಶ: ನೂರಾರು ಪತ್ರಕರ್ತರು ಬೀದಿಗೆ ಬೀಳುವುದು ಖಚಿತ. ಜಾಹೀರಾತು, ಮಾರಾಟ ಇಲ್ಲದೆ ಯಾವುದೇ ಪತ್ರಿಕೆ ಬದುಕಲಾರದು. ಪತ್ರಕರ್ತರ ಬದುಕಿನ ಅತ್ಯಂತ ನಿರ್ಣಾಯಕ ದಿನಗಳಿವು,” ಎನ್ನುತ್ತಾರೆ ಅವರು.
“2008-09ರ ಜಾಗತಿಕ ಕುಸಿತದ ಸಂದರ್ಭದಲ್ಲೂ ಪತ್ರಕರ್ತರ ಆತ್ಮವಿಶ್ವಾಸ ಇಷ್ಟು ಕುಸಿದಿರಲಿಲ್ಲ. ನಾಳೆ ಏನು ಎನ್ನುವುದು ಎಲ್ಲರಿಗೂ ಅನಿಶ್ಚಿತವಾಗಿದೆ,” ಎನ್ನುತ್ತಾರೆ ಅವರು.
ವೆಚ್ಚ ಕಡಿತಕ್ಕೆ ಸಿದ್ದತೆ:
ಕನ್ನಡದ ಪ್ರಮುಖ ಮುದ್ರಣ ಮಾಧ್ಯಮಗಳಲ್ಲಿನ ನಿಖರ ಸುದ್ದಿ ಮೂಲಗಳನ್ನು ಉಲ್ಲೇಖಿಸುವುದಾದರೆ, ಈಗಾಗಲೆ ಎಲ್ಲಾ ಪತ್ರಿಕೆಗಳು ದೊಡ್ಡ ಮಟ್ಟದ ವೆಚ್ಚ ಕಡಿತಕ್ಕೆ ಸಿದ್ದವಾಗಿವೆ. ವೆಚ್ಚ ಕಡಿತ ಎಂದರೆ ಪತ್ರಕರ್ತರ ಸಂಖ್ಯೆ ಕಡಿತ ಎಂದು ಬಹುತೇಕ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಭಾವನೆಯಾಗಿರುವುದರಿಂದ, ಹಲವಾರು ಹಿರಿ ತಲೆಗಳ ನಿರ್ಗಮನ ಖಚಿತ ಎನ್ನುತ್ತಾರೆ ಕನ್ನಡದ ಪ್ರಭಾವಶಾಲಿ ಪತ್ರಿಕೆಯೊಂದರ ಡೆಸ್ಕ್ ಪತ್ರಕರ್ತರು. “ಎಲ್ಲಾ ಪತ್ರಕರ್ತರ ಆತ್ಮವಿಶ್ವಾಸ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದಿದೆ. ಯಾರಿಗೂ ಏಪ್ರಿಲ್ ಬಳಿಕ ತಮ್ಮ ಉದ್ಯೋಗ ಉಳಿಯಲಿದೆಯೆ ಎಂಬ ಭೀತಿ ಕಾಡುತ್ತಿದೆ,” ಎನ್ನುತ್ತಾರೆ ಅವರು.
“ಕೋವಿಡ್ 19 ಕನ್ನಡ ಮಾಧ್ಯಮ ಲೋಕದ ಎದುರು ತೆರೆದಿಟ್ಟಿರುವ ಸವಾಲುಗಳು ಒಂದೆರಡಲ್ಲ. ಇದೇ ಮೊದಲ ಬಾರಿಗೆ, ಕನ್ನಡ ಪತ್ರಕರ್ತರು “ವರ್ಕ್ ಫ್ರಂ ಹೋಮ್” ಅವಕಾಶ ನೀಡಲಾಯಿತು. ಪ್ರಿಂಟ್ ಬದಲಿಗೆ ಆನ್‍ಲೈನ್ ಕಂಟೆಂಟ್ ಬಗ್ಗೆ ಹೆಚ್ಚಿನ ಒತ್ತು ನೀಡಲು ಈಗಾಗಲೆ ಎಲ್ಲಾ ಪತ್ರಕರ್ತರಿಗೆ ಸೂಚನೆ ನೀಡಲಾಗಿದೆ. ಆದರೆ ಸಮಸ್ಯೆ ಇರುವುದು ಆನ್‍ಲೈನ್ ಜಾಹೀರಾತು. ಸಾಂಪ್ರದಾಯಿಕ ಜಾಹೀರಾತುದಾರರು ಅನ್‍ಲೈನ್ ಜಾಹೀರಾತು ನೀಡಲು ಸಿದ್ಧರಿಲ್ಲ. ಗೂಗಲ್ ಆಡ್‍ಸೆನ್ಸ್ ಕನ್ನಡದಲ್ಲಿಲ್ಲ. ಪರಿಣಾಮ ಕನ್ನಡ ಮಾಧ್ಯಮ ಲೋಕದ ಜಾಹೀರಾತು ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ,” ಎನ್ನುತ್ತಾರೆ ಅವರು.
ಪತ್ರಕರ್ತರ ಹಾಗೂ ಮುದ್ರಣ ಮಾಧ್ಯಮ ಸಂಸ್ಥೆಗಳ ಮುಖ್ಯ ಭೀತಿಯೆಂದರೆ, ಪತ್ರಿಕೆಗಳ ಮುದ್ರಣ ನಿಂತಿರುವುದರಿಂದ, ಕೈ ತಪ್ಪಿ ಹೋಗಿರುವ ಓದುಗರು ಮತ್ತೆ ಹಿಂತಿರುಗದಿದ್ದರೆ ಎಂಬುದು. “ಈಗಾಗಲೆ ಪತ್ರಿಕೆಗಳ ಪುಟದಲ್ಲಿ ಕಡಿತ ಮಾಡಲಾಗಿದೆ. ಅನ್‍ಲೈನ್‍ನಲ್ಲಿ ಪತ್ರಿಕೆಗಳಿಂದ ಉತ್ತಮ ಗುಣಮಟ್ಟದ ಸುದ್ದಿ ಲಭ್ಯವಾಗುತ್ತಿದೆ. ಇಂತಹ ಅಭಿಪ್ರಾಯ ಮೂಡುತ್ತಿರುವ ಸಂದರ್ಭದಲ್ಲೇ ಈ ಕ್ರೈಸಿಸ್ ಉಂಟಾಗಿದೆ,” ಎನ್ನುವ ವಿಶ್ಲೇಷಣೆ ಸಂಪಾದಕರ ಕೊಠಡಿಗಳಿಂದ ಕೇಳಿಬರುತ್ತಿದೆ.
ಹಾಗಾದರೆ ಮುಂದೇನು? ಕನ್ನಡ ಮುದ್ರಣ ಮಾಧ್ಯಮ ಜಗತ್ತಿನ ಯಾವುದೇ ಹಿರಿಯ ಪತ್ರಕರ್ತರು ಭವಿಷ್ಯದ ಬಗ್ಗೆ ಯಾವುದೇ ಭರವಸೆ ಹೊಂದಿದಂತಿಲ್ಲ. “ಅನುವಾದ, ಡಿಜಿಟಲ್ ಕಂಟೆಂಟ್ ಬರೆಯಲು ಯತ್ನಿಸುತ್ತಿದ್ದೇನೆ. ಅದಕ್ಕೆ ಅಂತರ್ಜಾಲದಲ್ಲಿ ಒಳ್ಳೆಯ ಡಿಮಾಂಡ್ ಇದೆ,” ಎನ್ನುತ್ತಾರೆ ಬೆಂಗಳೂರಿನ ಹಿರಿಯ ಪತ್ರಕರ್ತರೊಬ್ಬರು. “ವೆಬ್ ಸಿರೀಸ್, ಧಾರವಾಹಿ, ಟಿವಿ ಕಂಟೆಂಟ್ ಮುಂದಿನ ಗುರಿಗಳು,” ಅನ್ನುವುದು ಅವರ ಭವಿಷ್ಯದ ಗುರಿ.
ಆದರೆ ವಾಸ್ತವದಲ್ಲಿ ಹಾಗಿಲ್ಲ. ಸದ್ಯಕ್ಕೆ ಕನ್ನಡ ಜಾಹೀರಾತು ಲೋಕದಲ್ಲಿ ಅನುವಾದಕರಾಗಿ ಕೆಲಸ ಮಾಡುತ್ತಿರುವವರ ಪ್ರಕಾರ ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಕ್ಕೆ ಈಗ ಸಂಸ್ಥೆಗಳು ಬರೀ ಶಬ್ದವೊಂದಕ್ಕೆ 30 ಪೈಸೆ ನೀಡುತ್ತಿವೆ. ಇನ್ನು ಕನ್ನಡ-ಇಂಗ್ಲೀಷ್ ಅನುವಾದ ದರ 50 ಪೈಸೆ-75 ಪೈಸೆ ಲೆಕ್ಕಾಚಾರದಲ್ಲಿದೆ.
ಸದ್ಯಕ್ಕೆ ಕನ್ನಡದಲ್ಲಿ ಲೈಟ್ ಕಂಟೆಂಟ್ ನೀಡುತ್ತಿರುವ ವೆಬ್‍ಸೈಟ್ ಒಂದರ ನಿರ್ವಾಹಕರ ಪ್ರಕಾರ, ಕಂಟೆಂಟ್ ಶೇರ್ ಆಧಾರದಲ್ಲಿ ನಾವೀಗ ಹಣ ನೀಡುತ್ತಿದ್ದೇವೆ. ಬರಹಗಾರನೊಬ್ಬರ ಲೇಖನ 1,00ಕ್ಕಿಂತ ಹೆಚ್ಚು ಶೇರ್ ಆದರೆ ನಾವೀಗ 150 ರೂಪಾಯಿ ನೀಡುತ್ತಿದ್ದೇವೆ. “ಕಂಟೆಂಟ್ ಕ್ವಾಲಿಟಿ ಉಳಿಸಿಕೊಳ್ಳಲು ಇದು ಅಗತ್ಯ ಎನ್ನುತ್ತಾರೆ,” ಅವರು.
ವೆಬ್ ಸಿರೀಸ್ ನಿರ್ಮಾಪಕಿಯೊಬ್ಬರ ಪ್ರಕಾರ, ಲಾಭ ಬಂದರೆ ಮಾತ್ರ ಲೇಖಕರಿಗೆ ಸಂಭಾವನೆ ನೀಡುತ್ತಿದ್ದೇವೆ. “ಉಳಿದಂತೆ ವೆಬ್ ಸಿರೀಸ್‍ಗಳ ಲೋಕ ಆಕರ್ಷಕವಾಗಿಲ್ಲ. ಇಂಗ್ಲೀಷ್ ಭಾಷೆಯಲ್ಲಿ ಪ್ರಭುತ್ವವಿದ್ದರೆ ಮಾತ್ರ ಉಳಿವು,” ಎನ್ನುತ್ತಾರೆ ಅವರು.
“Future is Unpredictable” ಅನ್ನುವುದು ಎಲ್ಲಾ ಸುದ್ದಿಮನೆಗಳ ಈಗಿನ ತಲ್ಲಣ.