ದೇಶವನ್ನಾಳುತ್ತಿರುವ ಬಿಜೆಪಿ ಸರ್ಕಾರ ಪ್ರತಿದಿನ ಒಂದಲ್ಲಾ ಒಂದು ಆದೇಶ, ಹೇಳಿಕೆಗಳನ್ನು ನೀಡುತ್ತಾ ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆಸುತ್ತಲೇ ಬರುತ್ತಿದೆ. ಸಿಎಎ, ಎನ್ಆರ್ ಸಿ ಸೇರಿದಂತೆ ವಿವಿಧ ಕಾಯ್ದೆಗಳನ್ನು ಮುಂದಿಟ್ಟುಕೊಂಡು ಒಬ್ಬೊಬ್ಬ ಮಂತ್ರಿ ಒಂದೊಂದು ರೀತಿಯ ಹೇಳಿಯನ್ನು ನೀಡುತ್ತಿದ್ದಾರೆ.
ಇಂತಹ ಹೇಳಿಕೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹೊರತೇನಲ್ಲ.
ಬಹುತೇಕ ನಿರ್ಧಾರಗಳನ್ನು ಜನ ವಿರೋಧಿಯಾಗಿ ತೆಗೆದುಕೊಂಡು ಅವುಗಳನ್ನು ಬಲವಂತವಾಗಿ ಜನರ ಮೇಲೆ ಹೇರಲು ಹೊರಟಿದೆ ಸರ್ಕಾರ. ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಾಗ್ಯೂ ಬಿಜೆಪಿ ಸರ್ಕಾರ ತನ್ನ ಹಿಡನ್ ಅಜೆಂಡಾದಿಂದ ಒಂದೊಂದೇ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ.
ಸಿಎಎ, ಎನ್ಆರ್ ಸಿ ಸೇರಿದಂತೆ ವಿವಿಧ ಯೋಜನೆಗಳನ್ನು ಒತ್ತಾಯಪೂರ್ವಕವಾಗಿ ಜಾರಿಗೆ ತರಲು ಹೊರಟಿರುವ ಸರ್ಕಾರ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ಯಾವುದೇ ವ್ಯಕ್ತಿಗಾದರೂ ತನ್ನ ದೇಶ, ತನ್ನ ನೆಲ, ತನ್ನ ಮನೆ ಎಂಬ ಗೌರವ, ಹೆಮ್ಮೆ ಇರುತ್ತದೆ. ಒಂದು ಕುಟುಂಬದ ಸದಸ್ಯರೆಲ್ಲರೂ ತಮ್ಮ ಕುಟುಂಬದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಡೀ ಭಾರತವೇ ಒಂದು ಕುಟುಂಬವಿದ್ದಂತೆ. ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ತಾನು ಭಾರತೀಯ ಎಂಬ ಹೆಮ್ಮೆ ಇದ್ದೇ ಇರುತ್ತದೆ.
ಇದನ್ನು ಯಾರೂ ಬಲವಂತವಾಗಿ ಹೇರುವಂತಹದ್ದಲ್ಲ. ಒಂದು ರೀತಿಯಲ್ಲಿ ಭಾರತೀಯತೆ ರಕ್ತಗತವಾಗಿ ಬಂದಿರುತ್ತದೆ. ಅದು ಹಿಂದೂವಿರಲಿ, ಮುಸಲ್ಮಾನನಿರಲಿ, ಕ್ರೈಸ್ತನಿರಲಿ, ಬೌದ್ಧನಿರಲಿ, ಹೀಗೆ ಭಾರತೀಯತೆ ಎಂಬುದು ಯಾವುದೇ ಸಮುದಾಯ, ವರ್ಗಕ್ಕೆ ಸೀಮಿತವಾಗಿರುವುದಿಲ್ಲ.

ಎಲ್ಲರೂ ತಾನು ಭಾರತೀಯ ಎಂಬುದನ್ನು ಎದೆ ಉಬ್ಬಿಸಿಕೊಂಡು ಹೇಳಿಕೊಳ್ಳುತ್ತಾರೆ. ಆದರೆ, ಕೆಲವೇ ಕೆಲವು ಮಂದಿ ಭಾರತದಲ್ಲಿದ್ದುಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗುವ ಮೂಲಕ ಭಾರತೀಯತೆಯ ವಿರುದ್ಧ ಹೇಳಿಕೆಗಳನ್ನು ಕೊಡುತ್ತಾರೆ. ಇಂತಹ ವ್ಯಕ್ತಿಗಳಿಗೆ ಶಿಕ್ಷೆ ಆಗಬೇಕೆಂಬುದು ನಿರ್ವಿವಾದ. ಹಾಗಂತ ಇಂತಹ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ವ್ಯಕ್ತಿ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದಾನೆ. ಹೀಗಾಗಿ ಇಡೀ ಸಮುದಾಯವೇ ದೇಶ ವಿರೋಧಿ ಎಂದು ಪರಿಗಣಿಸುವುದು ತಪ್ಪು.
ಇದೇ ತಪ್ಪನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈ ಮೂಲಕ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಲು ಹೊರಟಿದೆ ಮತ್ತು ಬಹುಸಂಖ್ಯಾತ ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಳ್ಳುವ ಹುನ್ನಾರ ನಡೆಸಿದೆ. ಈ ಕಾರಣದಿಂದಲೇ ಪ್ರತಿದನ ಮಂತ್ರಿಗಳು, ಬಿಜೆಪಿ ನಾಯಕರು ಒಂದಲ್ಲಾ ಒಂದು ಹೇಳಿಕೆಯನ್ನು ನೀಡಿ ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ.
ಇಂತಹ ವಿವಾದಿತ ಹೇಳಿಕೆಗಳ ಪಟ್ಟಿಗೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ `ಭಾರತ್ ಮಾತಾ ಕೀ ಜೈ’ ಅವರ ಹೇಳಿಕೆ ಸೇರ್ಪಡೆಯಾಗಿದೆ.
ಮಾತಾ ಕೀ ಜೈ ಎಂದು ಹೇಳುವವರಿಗೆ ಮಾತ್ರ ಭಾರತದಲ್ಲಿರಲು ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಾಗಾದರೆ, ದೇಶಭಕ್ತಿಯನ್ನು ಘೋಷಣೆ ಕೂಗಿಯೇ ಪ್ರಚುರಪಡಿಸಬೇಕಾ? ಭಾರತೀಯ ನಾಗರಿಕರು ತಮ್ಮಲ್ಲಿರುವ ದೇಶಭಕ್ತಿಯನ್ನು ಈ ಮೂಲಕ ತೋರ್ಪಡಿಸಿಕೊಳ್ಳಬೇಕಾ? ಮತ್ತೊಬ್ಬರ ಮೇಲೆ ಹೇರಿ ದೇಶಭಕ್ತಿ ಎಂಬುದನ್ನು ಕಾಣಲು ಸಾಧ್ಯವೇ? ಹೀಗೆ ಹತ್ತಾರು ಪ್ರಶ್ನೆಗಳು ಮೂಡುತ್ತಿವೆ.
ಇದಲ್ಲದೇ, ಭಾರತ್ ಮಾತಾ ಕೀ ಜೈ ಎಂದು ಹೇಳಿದರೆ ಮಾತ್ರ ದೇಶಭಕ್ತಿ ಬರುವುದಿಲ್ಲ. ಹಾಗಾದರೆ, ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಾ ಇರುವವರಲ್ಲಿ ಎಷ್ಟು ಮಂದಿ ದೇಶಕ್ಕಾಗಿ, ಭಾರತ ಮಾತೆಗಾಗಿಯೇ ತಾವು ಇದ್ದೇವೆ ಎಂಬುದನ್ನು ಸಾಬೀತುಪಡಿಸಬಲ್ಲರು. ಅವರೆಲ್ಲಾ ಅಪ್ಪಟ ದೇಶಭಕ್ತರು ಎಂಬುದನ್ನು ಹೇಗೆ ಸಾಬೀತುಪಡಿಸುವರು? ಇದು ಸಾಧ್ಯವಾಗುತ್ತದೆಯೇ? ಅದೇ ರೀತಿ, ಭಾರತ್ ಮಾತಾ ಕೀ ಜೈ ಎಂದು ಹೇಳದಿರುವವರಲ್ಲಿ ದೇಶಭಕ್ತಿ ಇಲ್ಲ ಎಂಬುದನ್ನು ಸಾಬೀತುಪಡಿಸಲು ಸಾಧ್ಯವೇ ಆಗುವುದಿಲ್ಲ.

ಧರ್ಮೇಂದ್ರ ಪ್ರಧಾನ್ ಅವರು ಭಾರತ್ ಮಾತಾ ಕೀ ಜೈ ಎಂದು ಹೇಳುವವರು ಮಾತ್ರ ದೇಶಭಕ್ತರು. ಇಂತಹವರು ಮಾತ್ರ ದೇಶದಲ್ಲಿರಬೇಕು. ಹೀಗೆ ಹೇಳದಿರುವವರು ಭಾರತದಲ್ಲಿ ಇರಲು ಅವಕಾಶ ನೀಡಬಾರದು ಎಂಬ ಹೇಳಿಕೆ ಕೊಟ್ಟಿದ್ದಾರೆ. ಆಂತರ್ಯದಲ್ಲಿ, ಶುದ್ಧ ಅಂತಃಕರಣದಲ್ಲಿ ದೇಶಭಕ್ತಿಯನ್ನು ಇಟ್ಟುಕೊಂಡು ಬಹಿರಂಗವಾಗಿ ತೋರ್ಪಡಿಸಿಕೊಳ್ಳುವುದಿಲ್ಲ ಎಂಬ ಮನೋಭಾವನೆ ಇರುವ ಅಸಂಖ್ಯಾತ ಭಾರತೀಯರಿದ್ದಾರೆ. ಅವರು ಭಾರತ್ ಮಾತಾ ಕೀ ಜೈ ಎಂದು ಹೇಳಿಕೆ ನೀಡಿ ನಾವು ದೇಶಭಕ್ತಿಯನ್ನು ತೋರಿಸಿಕೊಳ್ಳಲು ಇಚ್ಛೆಪಡುವುದಿಲ್ಲ. ದೇಶಭಕ್ತಿ, ಭಾರತ್ ಮಾತಾ ಕೀ ಜೈ ಎನ್ನುವುದು ನಮ್ಮ ಅಜನ್ಮ ಸಿದ್ಧ ಹಕ್ಕು, ಅದು ನಮ್ಮ ರಕ್ತದ ಪ್ರತಿ ಕಣದಲ್ಲಿಯೂ ಇದೆ. ಆದರೆ, ಈ ದೇಶಭಕ್ತಿಯನ್ನು ಘೋಷಣೆ ಕೂಗಿ ಹೇಳಿಕೊಂಡು ಸಾಬೀತುಪಡಿಸುವ ಅಗತ್ಯವಿಲ್ಲ. ಹಾಗೊಂದು ವೇಳೆ ಹೇಳಿದರೆ ಅದು ತೋರ್ಪಡಿಕೆಯ ದೇಶಭಕ್ತಿಯಾಗುತ್ತದೆ ಎಂಬ ಭಾವನೆ ಇದ್ದವರ ಸಂಖ್ಯೆ ಬಹಳಷ್ಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಹೇಳುತ್ತಾರೆಂಬ ಕಾರಣಕ್ಕೆ ನಾವು ನಮ್ಮಲ್ಲಿರುವ ದೇಶಭಕ್ತಿಯನ್ನು ಘೋಷಣೆ ಮೂಲಕ ತೋರ್ಪಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಇವರು.
ಹಾಗಾದರೆ, ಧರ್ಮೇಂದ್ರ ಪ್ರಧಾನ್ ರಂತಹ ನಿರಂಕುಶ ಭಾವನೆ ಇರುವವರು ಘೋಷಣೆ ಮೂಲಕ ದೇಶಭಕ್ತಿಯನ್ನು ತೋರಿಸದಿರುವವರೆಲ್ಲರನ್ನೂ ದೇಶದಿಂದ ಓಡಿಸುತ್ತಾರೆಯೇ? ಓಡಿಸಲು ಸಾಧ್ಯವೇ?
ಹೀಗಾಗಿ ದೇಶಭಕ್ತಿಯನ್ನು ಒತ್ತಾಯಪೂರ್ವಕವಾಗಿ ಒಬ್ಬರ ಮೇಲೆ ಹೇರುವುದಲ್ಲ. ಯಾವುದೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶದ್ರೋಹದ ಕೆಲಸ ಮಾಡುತ್ತವೆ ಎಂಬ ಕಾರಣಕ್ಕೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಎಷ್ಟರ ಮಟ್ಟಿಗೆ ಸರಿ. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯ ತಪ್ಪು ಮಾಡುತ್ತಾನೆಂಬ ಕಾರಣಕ್ಕೆ ಇಡೀ ಕುಟುಂಬವನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ? ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಭಾರತವನ್ನು ಒಂದಾಗಿ ಕಾಣಬೇಕೇ ಹೊರತು ಅದನ್ನು ಮತ್ತೊಮ್ಮೆ ಧರ್ಮದ ಆಧಾರದಲ್ಲಿ ವಿಭಜನೆ ಮಾಡುವುದು ತರವಲ್ಲ. ಇದು ಶೋಭೆಯನ್ನೂ ತರುವುದಿಲ್ಲ. ಒಂದು ವೇಳೆ ಹೀಗೆ ಮಾತಿನಲ್ಲಿ ಹೇಳುವ ಹೇಳಿಕೆಗಳು ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ ಬಿಜೆಪಿಯ ಮತ್ತೊಂದು ಹಿಡನ್ ಅಜೆಂಡಾ ಬಹಿರಂಗವಾದಂತಾಗುತ್ತದೆ.