Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೋಟು ಧರಿಸಲಿವೆ ಆಯೋಧ್ಯೆಯ ಹಸುಗಳು!

ಕೋಟು ಧರಿಸಲಿವೆ ಆಯೋಧ್ಯೆಯ ಹಸುಗಳು!
ಕೋಟು ಧರಿಸಲಿವೆ ಆಯೋಧ್ಯೆಯ ಹಸುಗಳು!

November 25, 2019
Share on FacebookShare on Twitter

ಮೂಳೆ ಕೊರೆವ ಚಳಿಗಾಲ ಉತ್ತರ ಭಾರತದ ಕದ ತಟ್ಟತೊಡಗಿದೆ. ಅಯೋಧ್ಯೆಯ ನಗರಪಾಲಿಕೆಯು ತನ್ನ ಗೋಶಾಲೆಯ 1200 ಗೋವುಗಳಿಗೆ ಸೆಣಬಿನ ನಾರಿನ ಕೋಟುಗಳನ್ನು ಹೊಲಿಸತೊಡಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಗೋವುಗಳಿಗೆ ಗೋಣಿ ಚೀಲಗಳನ್ನು ಹೊದಿಸಲಾಗುತ್ತಿತ್ತು. ಆದರೆ ಅವು ನಿಲ್ಲದೆ ಜಾರುತ್ತಿದ್ದವು. ಹೀಗಾಗಿ ಕೋಟುಗಳನ್ನು ಹೊಲಿಸುತ್ತಿದ್ದೇವೆ. ಹಸುಗಳನ್ನು ಚಳಿಯಿಂದ ಕಾಪಾಡುವಲ್ಲಿ ಈ ಕೋಟುಗಳು ಸಮರ್ಥವೆಂದು ಕಂಡು ಬಂದರೆ ಇಡೀ ಉತ್ತರಪ್ರದೇಶಕ್ಕೆ ಈ ಯೋಜನೆಯನ್ನು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನಗರಪಾಲಿಕೆಯ ಮೇಯರ್ ಮತ್ತು ಬಿಜೆಪಿ ತಲೆಯಾಳು ರಿಶಿಕೇಶ್ ಉಪಾಧ್ಯಾಯ ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

‘85 % ಸರ್ಕಾರ ನಡೆಸಿದವರು ಇಂದು ನಮ್ಮ ಮೇಲೆ ಕಮಿಷನ್​ ಆರೋಪ ಮಾಡ್ತಿದ್ದಾರೆ ’ : ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಕಿಡಿ

ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ

ಹಾಸನ ಜೆಡಿಎಸ್​ ಟಿಕೆಟ್​ ಹೈಡ್ರಾಮಾಗೆ ಬಿತ್ತಾ ತೆರೆ..? : ಕೆ.ಎಂ. ರಾಜೇಗೌಡರಿಗೆ ಟಿಕೆಟ್​ ಫಿಕ್ಸ್​..?

ಅಯೋಧ್ಯೆಯಿಂದ 16 ಕಿ.ಮೀ.ದೂರದ ಬೈಶಿಂಗಪುರದಲ್ಲಿರುವ ಈ ಗೋಶಾಲೆಯಲ್ಲಿ 1,200 ಜಾನುವಾರುಗಳಿವೆ. ಅವುಗಳ ಪೈಕಿ 700-800 ಹೋರಿಗಳು. ಉಳಿದವು ಹಸುಗಳು ಮತ್ತು ಕರುಗಳು.

ಉತ್ತರಪ್ರದೇಶದ, ಬಿಹಾರ, ಮಧ್ಯಪ್ರದೇಶ, ಪಂಜಾಬ್ ಹರಿಯಾಣ ಹಾಗೂ ದೆಹಲಿಯಲ್ಲಿ ಚಳಿಯ ಬಾಧೆಯಿಂದ ಜನ- ಜಾನುವಾರುಗಳ ಸಾವು ಪತ್ರಿಕೆಗಳಲ್ಲಿ ಪ್ರತಿ ವರ್ಷದ ತಲೆಬರೆಹಗಳು. ಸರ್ಕಾರಗಳು ಬೆಚ್ಚನೆಯ ಹೊದಿಕೆಗಳನ್ನು, ಬಟ್ಟೆ ಬರೆಗಳನ್ನು ಹಂಚುತ್ತದೆ. ಇರುಳು ಆಶ್ರಯ ತಾಣಗಳ ಏರ್ಪಾಡು ಮಾಡುತ್ತದೆ. ಬೆಂಕಿ ಕಾಯಿಸಿಕೊಳ್ಳಲು ರಾತ್ರಿ ಅಲ್ಲಲ್ಲಿ ಮರದ ದಿಮ್ಮಿಗಳನ್ನು ಉರಿಸುತ್ತದೆ. ಆದರೆ ಇದೆಲ್ಲವೂ ಅಸಮರ್ಪಕ ಮತ್ತು ಹಲವೆಡೆ ಕಾಟಾಚಾರದ ಕ್ರಮ. ಇನ್ನೂ ಹಲವೆಡೆ ಕಾಗದದ ಲೆಕ್ಕಾಚಾರಕ್ಕೆ ಸೀಮಿತ.

ಉಗ್ರ ಶೀತಮಾರುತಗಳ ಕಾರಣ ಎರಡು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಚಳಿಯನ್ನು ತಾಳದೆ 143 ಮಂದಿ ಪ್ರಾಣ ಬಿಟ್ಟಿದ್ದರು. ಉತ್ತರಪ್ರದೇಶದ ರಾಜಧಾನಿಯೊಂದರಲ್ಲೇ 700 ಪ್ರಾಣಿಗಳು ಸತ್ತಿದ್ದವು. ಇವುಗಳ ಪೈಕಿ ಬಹುತೇಕ ಬೀಡಾಡಿ ಹಸುಗಳು ಮತ್ತು ಬೀದಿ ನಾಯಿಗಳು. ಮೀರತ್ ನ ಉಷ್ಣಾಂಶ 2.9 ಡಿಗ್ರಿಗಳಿಗೆ ಕುಸಿದಿತ್ತು. ಲಖ್ನೋದಲ್ಲಿ 4.8 ಡಿಗ್ರಿಯಿತ್ತು.

2019-20ರ ಬಜೆಟ್ಟಿನಲ್ಲಿ ಗೋ ಸಂರಕ್ಷಣೆಗೆಂದು ಯೋಗಿ ಆದಿತ್ಯನಾಥ ಸರ್ಕಾರ 447 ಕೋಟಿ ರುಪಾಯಿಗಳನ್ನು ಮೀಸಲಿರಿಸಿದೆ. ಆದರೆ ನೆಲಮಟ್ಟದಲ್ಲಿ ಈ ಕ್ರಮದಿಂದ ಹೆಚ್ಚು ಉಪಯೋಗ ಆಗಿಲ್ಲ. ಹಸುಗಳು ಸಾವು ಮುಂದುವರೆದಿದೆ. ಅಲೀಗಢದಲ್ಲಿ ಚಳಿಯಿಂದಾಗಿ ಈ ವರ್ಷ 60 ಬೀಡಾಡಿ ದನಗಳು ಸತ್ತಿದ್ದವು. ಮೇವಿಲ್ಲದೆ ದನಗಳ ಸಾವಿನ ಪ್ರಕರಣಗಳು ಇನ್ನೂ ನಿಂತಿಲ್ಲ.

ಇದೇ ಜನವರಿ- ಮಾರ್ಚ್ ನಡುವೆ ಗ್ರೇಟರ್ ನೋಯ್ಡಾದ ಗೋಶಾಲೆಯಲ್ಲಿ 200 ಹಸುಗಳು ಸತ್ತಿದ್ದವು. 450 ಹಸುಗಳಿಗೆ ಮಾತ್ರ ಜಾಗವಿದ್ದ ಈ ಗೋಶಾಲೆಯಲ್ಲಿ 1250 ಗೋವುಗಳನ್ನು ತುಂಬಿದ ಕಾರಣ ಜಾಗ-ಮೇವು- ವೈದ್ಯಕೀಯ ಶುಶ್ರೂಷೆ ಸಾಲದೆ ಈ ಸಾವುಗಳು ಸಂಭವಿಸಿದ್ದವು. ಗೋಶಾಲೆಯ ಹಿಂಸ್ರ ಹೋರಿಗಳು ಹಲವು ಹಸುಗಳನ್ನು ತಿವಿದು ಕೊಂದವು ಎಂದು ಗೋಶಾಲೆಯ ವ್ಯವಸ್ಥಾಪಕರು ತಿಳಿಸಿದ್ದರು. ಇದೇ ಫೆಬ್ರವರಿಯಲ್ಲಿ ಮುಝಫ್ಫರ್ನಗರದ ಗೋಶಾಲೆಯಲ್ಲಿ ನೂರು ಹಸುಗಳು ಸತ್ತಿದ್ದವು.

ಉತ್ತಪರಪ್ರದೇಶದಲ್ಲಿ 510 ನೋಂದಾಯಿತ ಗೋಶಾಲೆಗಳಿವೆ. 2012ರ ಜಾನುವಾರ ಗಣತಿಯ ಪ್ರಕಾರ ಇಲ್ಲಿನ ಹಸುಗಳ ಸಂಖ್ಯೆ ಸುಮಾರು ಎರಡು ಕೋಟಿ.

ಪಾಕ್ ನಲ್ಲೂ ಕೊಳೆತ ಗಾಳಿ, ದೆಹಲಿಯಂತೆ

ಪಾಕಿಸ್ತಾನದ ಪಂಜಾಬ್ ರಾಜಧಾನಿ ಲಾಹೋರ್ ನಗರ ಮತ್ತು ದೆಹಲಿಯ ನಡುವಣ ದೂರ 409 ಕಿ.ಮೀಗಳು. ಬೆಂಗಳೂರು- ಧಾರವಾಡದ ದೂರಕ್ಕಿಂತ (431.5 ಕಿ.ಮೀ) 22 ಕಿ.ಮೀ. ಕಡಿಮೆ. ದೆಹಲಿ- ಲಖ್ನೋ ದೂರಕ್ಕಿಂತ ಕಡಿಮೆ. ದೆಹಲಿಯನ್ನು ಕಾಡಿರುವ ವಾಯು ಮಾಲಿನ್ಯ ಲಾಹೋರನ್ನೂ ಬಿಟ್ಟಿಲ್ಲ. ಅಲ್ಲಿನ ಜನ ಕೂಡ ಧೂಳು ಸೋಸುವ ಮುಖವಾಡಗಳನ್ನು ಮೂಗಿಗೆ ತಗುಲಿಸಿಕೊಂಡು ಅಡ್ಡಾಡತೊಡಗಿದ್ದಾರೆ.

ವಿಶ್ವದ ಗಾಳಿ ಗುಣಮಟ್ಟ ವರದಿಯ ಪ್ರಕಾರ ಪಾಕಿಸ್ತಾನ ಎರಡನೆಯ ಅತಿಕಳಪೆ ಗಾಳಿಯನ್ನು ಹೊಂದಿರುವ ದೇಶ. ಬಾಂಗ್ಲಾದೇಶದ್ದು ಮೊದಲನೆಯ ಸ್ಥಾನ. ಭಾರತ ಮೂರನೆಯ ಸ್ಥಾನದಲ್ಲಿದೆ. ಒಂದು ಕೋಟಿ ಹತ್ತು ಲಕ್ಷ ಜನಸಂಖ್ಯೆ ಹೊಂದಿರುವ ಲಾಹೋರ್ ವಾಯು ಮಾಲಿನ್ಯದ ಹೊಡೆತಕ್ಕೆ ಸಿಕ್ಕಿ ಥರಗುಟ್ಟಿದೆ. ದೆಹಲಿಯ ಗಾಳಿ ಗುಣಮಟ್ಟ ಸೂಚ್ಯಂಕ ಮೊನ್ನೆ ದೀಪಾವಳಿಯ ನಂತರ ಸಾವಿರ ದಾಟಿತ್ತು. ಲಾಹೋರ್ ನ ಸೂಚ್ಯಂಕ 551 ಮುಟ್ಟಿದ ನಂತರ ಶಾಲೆಗಳನ್ನು ಮುಚ್ಚಲಾಗಿತ್ತು.

ಲಾಹೋರ್ ವಾಯುಮಾಲಿನ್ಯದ ತೀವ್ರತೆಯನ್ನು ಬೇಕೆಂದೇ ತಗ್ಗಿಸಿ ವರದಿ ಮಾಡಿದೆಯೆಂದೂ, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆಯೆಂದೂ ಆಪಾದಿಸಿ ಹದಿಹರೆಯದ ಮೂವರು ಪಂಜಾಬ್ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ರೂಪು ತಳೆಯುತ್ತಿರುವ ಎಳೆಯರ ದೇಹಗಳ ಮೇಲೆ ವಾಯು ಮಾಲಿನ್ಯ ತೀವ್ರ ಸ್ವರೂಪದ ದೂರಗಾಮಿ ದುಷ್ಪರಿಣಾಮಗಳನ್ನು ಬೀರಲಿದೆ. ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳು ಎಳೆಯ ವಯಸ್ಸಿಗೇ ಅವರನ್ನು ಕಾಡಲಿವೆ. ಬೆಳವಣಿಗೆ ಕುಂಠಿತವಾಗಲಿದೆ ಎಂದು ಅವರು ಮಕ್ಕಳ ಪರವಾಗಿ ನ್ಯಾಯಾಲಯದ ಕದ ಬಡಿದಿರುವುದಾಗಿ ಹೇಳಿದ್ದಾರೆ.

ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಕುಸಿಯುವ ಉಷ್ಣಾಂಶದ ಕಾರಣ ಚಳಿಗಾಲ ಇಳಿದು ಗಾಳಿ ಹೆಪ್ಪುಗಟ್ಟುತ್ತದೆ. ಮಲಿನ ವಾಯುವಿನ ದೈತ್ಯ ಚಾದರ ಆಗಸದಲ್ಲಿ ಭೂಮಿಗೆ ಬಹು ಸಮೀಪದ ಎತ್ತರದಲ್ಲಿ ಕವಿಯುತ್ತದೆ. ದೆಹಲಿ ಮುಂತಾದ ಉತ್ತರ ಭಾರತದ ನಗರಗಳಲ್ಲಿನ ವಿದ್ಯಮಾನವೂ ಥೇಟ್ ಇದೇ ಆಗಿದೆ. ಆದರೆ ಲಾಹೋರ್ ವಾಯುಮಾಲಿನ್ಯದ ಮುಖ್ಯ ಕಾರಣಗಳು, ಮೋಟಾರು ವಾಹನಗಳ ಸಂಚಾರ, ಕೈಗಾರಿಕೆಗಳು ಹಾಗೂ ಕಲ್ಲಿದ್ದಿಲು ಆಧಾರಿತ ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದನೆ ಎಂದು ಸಂಶೋಧನಾ ವರದಿಗಳು ಹೇಳಿವೆ. ವಿಶ್ವದಲ್ಲೇ ಅತ್ಯಂತ ಕಳಪೆ ಗುಣಮಟ್ಟದ ಡೀಸೆಲ್ ಎಣ್ಣೆಯನ್ನು ಇಲ್ಲಿ ಬಳಸಲಾಗುತ್ತಿದೆಯೆಂತೆ. ಈ ಅಂಶಗಳ ಜೊತೆಗೆ ಭಾರತದ ಪಂಜಾಬ್-ಹರಿಯಾಣದಲ್ಲಿ ರೈತರು ಭತ್ತದ ಕೂಳೆಗೆ ಬೆಂಕಿ ತಗುಲಿಸುವ ವಾಡಿಕೆ ಪಾಕಿಸ್ತಾನದಲ್ಲೂ ಆಚರಣೆಯಲ್ಲಿದೆ.

ದೆಹಲಿ-ಹೆಣ ಸುಡಲು ಲಕ್ಷ ಮರಗಳಿಗೆ ಕೊಡಲಿ

ದೇಶದ ರಾಜಧಾನಿ ದೆಹಲಿಯಲ್ಲಿ ಜರುಗುವ ಶೇ.95ರಷ್ಟು ಅಂತ್ಯ ಸಂಸ್ಕಾರಗಳಲ್ಲಿ ಕಟ್ಟಿಗೆಯನ್ನೇ ಬಳಸಲಾಗುತ್ತಿದೆ. ಲೋಧಿ ರಸ್ತೆ ಮತ್ತು ಸರೈ ಕಾಲೇ ಖಾನ್ ರುದ್ರಭೂಮಿಗಳಲ್ಲಿನ ಎರಡು ವಿದ್ಯುತ್ ಚಿತಾಗಾರಗಳು ಮತ್ತು ನಿಗಮಬೋಧ್ ಘಾಟ್ ಮತ್ತು ಪಂಜಾಬಿ ಬಾಗ್ ನ ಎರಡು ಸಿ.ಎನ್.ಜಿ. ಅನಿಲ ಆಧಾರಿತ ಕುಲುಮೆಗಳ ಬಳಕೆ ಅತಿ ಕಡಿಮೆ.

ದೆಹಲಿಯಲ್ಲಿ ಶೇ.2.5ರಷ್ಟು ಸೂಕ್ಷ್ಮ ಧೂಳಿನ ಕಣಗಳಿಂದಾಗಿ ಜರುಗುವ ವಾಯು ಮಾಲಿನ್ಯದ ಶೇ.11ರಷ್ಟು ಮಾಲಿನ್ಯ ಈ ಕಟ್ಟಿಗೆ ಬಳಕೆಯ ದಹನ ಸಂಸ್ಕಾರಗಳಿಂದಲೇ ಜರುಗುತ್ತಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.

ಕಟ್ಟಿಗೆ ಬಳಕೆಗೆ ಹೋಲಿಸಿದರೆ ಅನಿಲ ಮತ್ತು ವಿದ್ಯುತ್ ಚಿತಾಗಾರಗಳಲ್ಲಿನ ದಹನಕ್ರಿಯೆಗೆ ತಗಲುವ ವೆಚ್ಚ ಎರಡರಿಂದ ನಾಲ್ಕು ಪಟ್ಟು ಕಡಿಮೆ. ಆದರೂ ಮೃತರ ಬಂಧು ಬಳಗ ಧಾರ್ಮಿಕ- ಸಾಂಪ್ರದಾಯಿಕ ನಂಬಿಕೆಗಳನ್ನು ಕೈಬಿಡಲು ತಯಾರಿಲ್ಲ. ಅಗಲಿಕೆಯ ಶೋಕದ ಹೊತ್ತಿನಲ್ಲಿ ಪರಿಸರದ ಕುರಿತು ಬಹುತೇಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರತಿ ವರ್ಷ 80-90 ಸಾವಿರ ದಹನ ಕ್ರಿಯೆಗಳು ಕಟ್ಟಿಗೆಯನ್ನೇ ಬಳಸಿ ನಡೆಯುತ್ತವೆ. ಅಧ್ಯಯನಗಳ ಅಂದಾಜಿನ ಪ್ರಕಾರ ಈ ದಹನ ಕ್ರಿಯೆಗಳ ಕಟ್ಟಿಗೆ ಸಂಗ್ರಹಕ್ಕೆಂದು ಪ್ರತಿ ವರ್ಷ ಕಡಿಯಲಾಗುತ್ತಿರುವ ಮರಗಳ ಸಂಖ್ಯೆ 8ರಿಂದ 9 ಲಕ್ಷ. ಕಟ್ಟಿಗೆ ಉರಿಸಿ ನಡೆಯುವ ಈ ದಹನ ಸಂಸ್ಕಾರಗಳ ಕಾರಣ ದೆಹಲಿಯ ವಾಯು ಮಂಡಲಕ್ಕೆ ನಿತ್ಯ 2,129 ಕೇಜಿ ಕಾರ್ಬನ್ ಮಾನಾಕ್ಸೈಡ್, 33 ಕೇಜಿ ಸಲ್ಫರ್ ಡೈಯಾಕ್ಸೈಡ್ ಮುಂತಾದ ವಿಷಾನಿಲಗಳು ಬಿಡುಗಡೆಯಾಗುತ್ತಿವೆ. ಪರಿಸರಸ್ನೇಹಿ ಪರ್ಯಾಯಗಳನ್ನು ಹೆಚ್ಚು ಹೆಚ್ಚಾಗಿ ಒದಗಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2016ರಲ್ಲಿ ಕೇಂದ್ರ ಪರಿಸರ ಮಂತ್ರಾಲಯ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. 1960ರ ದಶಕದಿಂದಲೇ ವಿದ್ಯುತ್ ಚಿತಾಗಾರಗಳ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುತ್ತ ಬರಲಾಗಿದೆ. ಇತ್ತೀಚೆಗೆ ವಿದ್ಯುತ್ ಚಿತಾಗಾರಗಳ ಪಟ್ಟಿಗೆ ಅನಿಲ ಆಧಾರಿತ ಚಿತಾಗಾರಗಳೂ ಸೇರಿವೆ. ಆದರೆ ಇವುಗಳ ಬಳಕೆಗೆ ಮೃತರ ಬಂಧುಗಳು ಮನಸ್ಸು ಮಾಡುತ್ತಿಲ್ಲ.

ಪ್ರತಿಯೊಂದು ದಹನ ಸಂಸ್ಕಾರಕ್ಕೆ 400-500 ಕೇಜಿಗಳಷ್ಟು ಕಟ್ಟಿಗೆ ಬೇಕು. ವರ್ಷಕ್ಕೆ ದೇಶಾದ್ಯಂತ ಸುಮಾರು 50 ಲಕ್ಷ ದಹನ ಸಂಸ್ಕಾರಗಳು ನಡೆಯುತ್ತವೆ. ಇವುಗಳಿಗಾಗಿ 5-6 ಕೋಟಿ ಮರಗಳನ್ನು ಕಡಿಯಲಾಗುತ್ತಿದೆ. 80 ಲಕ್ಷ ಟನ್ನುಗಳಷ್ಟು ಇಂಗಾಲಾಮ್ಲ ಗಾಳಿ ಸೇರುತ್ತಿದೆ.

ದೇಶದ ಜನಸಂಖ್ಯೆ 1.3 ಶತಕೋಟಿ ಮುಟ್ಟಿದೆ. ಈ ಸಂಖ್ಯೆಗೆ ಅನುಗುಣವಾಗಿ ಸಾವುಗಳ ಸಂಖ್ಯೆಯೂ ಹೆಚ್ಚಿದೆ. ಮೋಕ್ಷದಾ ಎಂಬ ಸ್ವಯಂಸೇವಾ ಸಂಸ್ಥೆ ಪರಿಸರ ಸ್ನೇಹಿ ದಹನ ಸಂಸ್ಕಾರಗಳಿಗೆ ಜನಮನವನ್ನು ಒಲಿಸುವ ಕಠಿಣ ಕೆಲಸದಲ್ಲಿ ತೊಡಗಿದೆ. ಹೆಚ್ಚು ಆಮ್ಲಜನಕವನ್ನು ಪೂರೈಕೆ ಮಾಡಿ ದಹನ ಸಾಮರ್ಥ್ಯವನ್ನು ಹೆಚ್ಚಿಸುವ ವಿಧಾನವನ್ನು ರೂಪಿಸಿದೆ. ಈ ವಿಧಾನದಲ್ಲಿ ಜನರ ಸಾಂಪ್ರದಾಯಿಕ ಭಾವನೆಗಳನ್ನು ಆದರಿಸಿ ಕಟ್ಟಿಗೆಯನ್ನೇ ಬಳಸಲಾಗುತ್ತದೆ. ಆದರೆ ಸುಡಲು ಬಳಸಲಾಗುವ ಕಟ್ಟಿಗೆಯ ಪ್ರಮಾಣ ಅರ್ಧದಷ್ಟು ತಗ್ಗುತ್ತದೆ. 400-500 ಕೇಜಿಗೆ ಬದಲು 150-200 ಕೇಜಿ ಕಟ್ಟಿಗೆ ಬಳಸಲಾಗುತ್ತಿದೆ. ಆದರೆ ಈ ವಿಧಾನವನ್ನೂ ಒಪ್ಪಿ ಅನುಸರಿಸುವವರು ಬಹಳ ಕಡಿಮೆ ಮಂದಿ ಎನ್ನುತ್ತದ ಮೋಕ್ಷದಾ.

ಸಾಂಭಾರ ಸರೋವರದಲ್ಲಿ ಹಕ್ಕಿಗಳ ‘ಮಾರಣ ಹೋಮ’

ರಾಜಸ್ತಾನದ ರಾಜಧಾನಿ ಜೈಪುರದಿಂದ 80 ಕಿ.ಮೀ.ದೂರದಲ್ಲಿರುವ ಸಾಂಭಾರ್ ಉಪ್ಪು ನೀರಿನ ಸರೋವರದಲ್ಲಿ ಕಳೆದ ಎರಡು ವಾರಗಳಲ್ಲಿ ಪತ್ತೆಯಾಗಿ ದಫನು ಮಾಡಲಾಗಿರುವ ವಲಸೆ ಪಕ್ಷಿಗಳು 18 ಸಾವಿರ!

ನಂಜು ಪದಾರ್ಥಗಳು ಅವುಗಳ ದೇಹ ಸೇರಿ ತಗುಲಿದ ‘ಏವಿಯನ್ ಬಾಟ್ಯುಲಿಸಂ’ ಎಂಬ ಮಾರಣಾಂತಿಕ ರೋಗವೇ ಈ ಹಕ್ಕಿಗಳ ಸಾವಿಗೆ ಕಾರಣವೆನ್ನಲಾಗಿದೆ.

ಭಾರತದ ಒಳನಾಡಿನ ಈ ಅತಿ ವಿಶಾಲ ಉಪ್ಪು ನೀರಿನ ಸರೋವರದ ವಿಸ್ತೀರ್ಣ 230 ಚದರ ಕಿ.ಮೀ.ಗಳು. 83 ನೀರು ಹಕ್ಕಿ ಪ್ರಭೇದಗಳ ಇರವನ್ನು ಇಲ್ಲಿ ದಾಖಲಿಸಲಾಗಿದೆ. ಪ್ರತಿ ವರ್ಷ ಸಾವಿರಾರು ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ರೋಗದ ಸೋಂಕು ತಗುಲಿ ಸತ್ತ 25-30 ಪ್ರಭೇದಗಳ 18 ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ಸುಣ್ಣದ ಕಲ್ಲು ತುಂಬಿಸಿದ ಆಳ ಗುಂಡಿಗಳಲ್ಲಿ ಹೂಳಲಾಗಿದೆ. ಅಮೆರಿಕಾ ಮತ್ತು ಕೆನಡಾದಲ್ಲಿ 60ರ ದಶಕ ಮತ್ತು 90ರ ದಶಕಗಳಲ್ಲಿ ಈ ಸೋಂಕಿಗೆ ಹತ್ತಾರು ಲಕ್ಷ ಹಕ್ಕಿಗಳು ಬಲಿಯಾಗಿರುವ ಪೂರ್ವನಿದರ್ಶನಗಳಿವೆ. ಈ ಸೋಂಕು ತಗುಲಿದ ಪಕ್ಷಿಗಳು ಮತ್ತು ಮೀನುಗಳ ಸೇವನೆ ಮನುಷ್ಯರಿಗೂ ಮಾರಕ.

ಅಕ್ರಮ ಉಪ್ಪು ತಯಾರಿಕೆ ಈ ಸರೋವರದ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿರುವ ವರದಿಗಳಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ನಂತರವೂ ಇಲ್ಲಿ ಅಕ್ರಮ ಉಪ್ಪು ಗಣಿಗಾರಿಕೆ ಮುಂದುವರೆದಿತ್ತು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಕಿರುತೆರೆಯಲ್ಲಿ ಬರ್ತಿದೆ ʻವೀಕೆಂಡ್‌ ವಿತ್‌ ರಮೇಶ್‌ʼ… ಮೊದಲ ಸಾಧಕರು ಯಾರು..?
ಸಿನಿಮಾ

ಕಿರುತೆರೆಯಲ್ಲಿ ಬರ್ತಿದೆ ʻವೀಕೆಂಡ್‌ ವಿತ್‌ ರಮೇಶ್‌ʼ… ಮೊದಲ ಸಾಧಕರು ಯಾರು..?

by ಮಂಜುನಾಥ ಬಿ
March 18, 2023
Kolar : BJP ಯವರು ಭ್ರಷ್ಟಾಚಾರಿಗಳು ಎಂದು ಜಗತ್ ಜಾಹೀರಾತಾಗಿದೆ
ಇದೀಗ

Kolar : BJP ಯವರು ಭ್ರಷ್ಟಾಚಾರಿಗಳು ಎಂದು ಜಗತ್ ಜಾಹೀರಾತಾಗಿದೆ

by ಪ್ರತಿಧ್ವನಿ
March 18, 2023
SIDDARAMAIAH | ಸಿದ್ದರಾಮಯ್ಯ ಬಾದಾಮಿ‌ ಅಭಿವೃದ್ಧಿ ಮಾಡಿದ್ದರೆ ವಲಸೆ ಬರುವ ಅವಶ್ಯಕತೆಯಿರಲಿಲ್ಲ : #PRATIDHVANI
ಇದೀಗ

SIDDARAMAIAH | ಸಿದ್ದರಾಮಯ್ಯ ಬಾದಾಮಿ‌ ಅಭಿವೃದ್ಧಿ ಮಾಡಿದ್ದರೆ ವಲಸೆ ಬರುವ ಅವಶ್ಯಕತೆಯಿರಲಿಲ್ಲ : #PRATIDHVANI

by ಪ್ರತಿಧ್ವನಿ
March 18, 2023
ಅಮಿತ್‌ ಶಾರಿಗೆ ಬಿಎಸ್‌ವೈಗಿಂತ ವಿಜಯೇಂದ್ರ ಮುಖ್ಯವಾದರಾ?
Top Story

ಅಮಿತ್‌ ಶಾರಿಗೆ ಬಿಎಸ್‌ವೈಗಿಂತ ವಿಜಯೇಂದ್ರ ಮುಖ್ಯವಾದರಾ?

by ಪ್ರತಿಧ್ವನಿ
March 24, 2023
‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​
ಕರ್ನಾಟಕ

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​

by ಮಂಜುನಾಥ ಬಿ
March 24, 2023
Next Post
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆತಂಕ ತಂದಿದೆ ಬಿಜೆಪಿಯ  ಒಗ್ಗಟ್ಟು

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆತಂಕ ತಂದಿದೆ ಬಿಜೆಪಿಯ ಒಗ್ಗಟ್ಟು

ಅಯೋಧ್ಯೆ ವಿವಾದ ಮುಂದುವರಿಸಿದರೆ ಭಾರತೀಯ ಮುಸ್ಲಿಂರಿಗೆ ಮಾರಕ

ಅಯೋಧ್ಯೆ ವಿವಾದ ಮುಂದುವರಿಸಿದರೆ ಭಾರತೀಯ ಮುಸ್ಲಿಂರಿಗೆ ಮಾರಕ

ಆರ್ಥಿಕತೆ  ಕುಸಿಯುತ್ತಿದ್ದರೂ ಷೇರುಪೇಟೆ ಜಿಗಿಯುತ್ತಿರುವುದು ಏಕೆ?

ಆರ್ಥಿಕತೆ ಕುಸಿಯುತ್ತಿದ್ದರೂ ಷೇರುಪೇಟೆ ಜಿಗಿಯುತ್ತಿರುವುದು ಏಕೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist