ಹಾಕಿ ಕ್ರೀಡೆಯ ತವರೂರು ಆಗಿರುವ ಕೊಡಗು ಜಿಲ್ಲೆ ಸಾವಿರಾರು ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕೊಡಗಿನ ಪ್ರತೀ ಮನೆಮನೆಯಲ್ಲೂ ಸೈನಿಕರು ಇಲ್ಲವೇ ಕ್ರೀಡಾಪಟುಗಳು ಕಾಣುತ್ತಾರೆ ಎಂದರೆ ಅತಿಶಯೋಕ್ತಿ ಏನಲ್ಲ. ಜಿಲ್ಲೆಯಲ್ಲಿ ಪ್ರತೀ ವರ್ಷವೂ ಅದ್ದೂರಿಯಿಂದ ನಡೆಯುವ ಕೊಡವ ಕುಟುಂಬಗಳ ಹಾಕಿ ಉತ್ಸವಕ್ಕೆ ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡದಿರುವುದು ನಿಜಕ್ಕೂಶೋಚನೀಯ.
ಕೊಡವ ಕುಟುಂಬಗಳ ಹಾಕಿ ಉತ್ಸವದ ಪರಿಕಲ್ಪನೆ ಪಾಂಡಂಡ ಕುಟುಂಬದ ಕುಟಪ್ಪಅವರದ್ದಾಗಿದ್ದು 1997ರಿಂದಲೇ ಆರಂಭಗೊಂಡಿತು, 1997ರಲ್ಲಿ ಕೇವಲ 15 ತಂಡಗಳ ನಡುವೆ ಹಾಕಿ ಕ್ರೀಡಾಕೂಟ ನಡೆದಿದ್ದರೆ 2018ರಲ್ಲಿ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ತಂಡಗಳ ಸಂಖ್ಯೆ ಬರೋಬ್ಬರಿ 333 ಆಗಿತ್ತು. ಈದು ಈವರೆಗಿನ ದಾಖಲೆ ಆಗಿದ್ದು ಈ ಕುಟುಂಬ ಕ್ರೀಡಾಕೂಟ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೂ ಸೇರ್ಪಡೆಗೊಂಡಿರುವುದು ಹೆಗ್ಗಳಿಕೆ. ಕೊಡವ ಜನಾಂಗದ 10 ವರ್ಷದ ಬಾಲಕನಿಂದ ಹಿಡಿದು 70 ವಯಸ್ಸಿನ ವೃದ್ದರವರೆಗೂ ಒಂದು ತಂಡ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಇದರ ಇನ್ನೊಂದು ವಿಶೇಷ.
ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವ ಹಾಗೂ ಸಾವಿರಾರು ಕ್ರೀಡಾ ಪ್ರಿಯರಿಗೆ ಪ್ರತೀ ವರ್ಷ ತಿಂಗಳೀಗೂ ಅಧಿಕ ಸಮಯರಸದೌತಣ ನೀಡುವ ಈ ಕ್ರೀಡಾಕೂಟಕ್ಕೆರಾಜ್ಯ ಸರ್ಕಾರವೂ ಅನುದಾನ ನೀಡುತ್ತದೆ. ಏಕೆಂದರೆ ಪ್ರತೀ ವರ್ಷವೂ ಕ್ರೀಡಾಕೂಟದ ವೆಚ್ಚ ಹೆಚ್ಚು ಕಮ್ಮಿ ಒಂದು ಕೋಟಿ ರೂಪಾಯಿಗಳ ಹತ್ತಿರವೇ ಇರುತ್ತದೆ. ಆದರೆ ಎಂದಿನಂತೆ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಕ್ರೀಡಾ ಪ್ರೇಮಿಗಳಲ್ಲಿ ಆಕ್ರೋಶ ಹುಟ್ಟುಹಾಕಿದೆ. ಏಕೆಂದರೆ ಕೊಡಗು ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರದಿಂದ ಅಲ್ಪ ಹಣ ಪಡೆಯಬೇಕಾದರೂ ಕಂಬ ಸುತ್ತಬೇಕಿದೆ ಎಂದು ಬಿದ್ದಾಟಂಡ ತಮ್ಮಯ್ಯ ಹೇಳಿದರು.
2017ರಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಶಾಂತೆಯಂಡ ಕುಟುಂಬದ ಹಾಕಿ ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ 40 ಲಕ್ಷ ರೂಪಾಯಿಗಳ ಅನುದಾನ ಘೋಷಣೆಮಾಡಿತ್ತು. ಅದರಲ್ಲಿ 30 ಲಕ್ಷ ರೂಪಾಯಿ ಮಾತ್ರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಇನ್ನೂ 10ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಲ್ಲ. 2018ರಲ್ಲಿ ನಾಪೋಕ್ಲುವಿನಲ್ಲಿ ಹಾಕಿ ಕ್ರೀಡಾಕೂಟ ಆಯೋಜಿಸಿದ್ದ ಬಿದ್ದಾಟಂಡ ಕುಟುಂಬಕ್ಕೆ ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ 5 ಲಕ್ಷ ರೂಪಾಯಿ. ಉಳಿದ 35ಲಕ್ಷ ರೂಪಾಯಿಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಈ ಕೌಟುಂಬಿಕ ಕ್ರೀಡಾಕೂಟಕ್ಕೆ ಪ್ರತೀ ವರ್ಷವೂ ಎರಡು ಅಥವಾ ಮೂರು ಮೈದಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಎರಡೂ ಮೈದಾನಗಳಿಗೆ 5-10 ಸಾವಿರ ಜನ ಕೂರಲು ಗ್ಯಾಲರಿ ನಿರ್ಮಾಣ ಮಾಡಬೇಕಾಗುತ್ತದೆ, ಕ್ರೀಡಾ ಪಟುಗಳಿಗೆ ಆಹಾರ ವ್ಯವಸ್ಥೆ, ವೀಡಿಯೋ ಗ್ರಾಫರ್ ವೆಚ್ಚ ಮತ್ತು ಪಾರಿ ತೋಷಕಗಳ ಖರ್ಚು ಸೇರಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ ಆದರೆ ಹಣ ಬಿಡುಗಡೆಯೇ ಆಗದ ಹಿನ್ನೆಲೆಯಲ್ಲಿ ಈ ಮೇಲಿನ ಗುತ್ತಿಗೆದಾರರಿಗೆ ಇನ್ನೂ ಹಣಪಾವತಿ ಮಾಡಲಾಗಿಲ್ಲ. ಗುತ್ತಿಗೆದಾರರು ಬಾಕಿ ಹಣ ಚುಕ್ತಾ ಮಾಡುವಂತೆ ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಬೆದರಿಸುತಿದ್ದಾರೆ ಎಂದು ಬಿದ್ದಾಟಂಡ ಕುಟುಂಬದ ತಿಮ್ಮಯ್ಯ ಪ್ರತಿಧ್ವನಿಗೆ ತಿಳಿಸಿದರು.
ಪ್ರತೀ ವರ್ಷ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಆಯೋಜಿಸಲಾಗುವ ಈ ಕೌಟುಂಬಿಕ ಕ್ರೀಡಾಕೂಟ ಈ ವರ್ಷ ಭೀಕರ ಮಳೆ ಹಾಗೂ ಭೂ ಕುಸಿತ ದುರಂತದಿಂದಾಗಿ ಸ್ಥಗಿತಗೊಂಡಿದೆ. ಸತತವಾಗಿ 22 ವರ್ಷಗಳಿಂದ ಈ ಕ್ರೀಡಾಕೂಟ ನಡೆಸಿಕೊಂಡು ಬರುತಿದ್ದು ಈ ಬಾರಿಯ ಕ್ರೀಡಾಕೂಟವನ್ನು ಮುಕ್ಕಾಟಿರ ಕುಟುಂಬವಹಿಸಿಕೊಂಡಿದ್ದು ಇದೇ ತಿಂಗಳಿನ ಅಂತ್ಯದಲ್ಲಿ ಕ್ರೀಡಾಕೂಟದ ಲೋಗೋ ಬಿಡುಗಡೆ ಮಾಡಲಿದೆ.
ಪ್ರತಿಧ್ವನಿಯೊಂದಿಗೆ ಮಾತನಾಡಿದ ಈ ಬಾರಿಯ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಮೋಟು ಉತ್ತಯ್ಯ ಅವರು ಕಳೆದ ವರ್ಷವೇ ನಮ್ಮ ಕುಟುಂಬಕ್ಕೆ ಕ್ರೀಡಾಕೂಟ ನಡೆಸುವ ಹಕ್ಕನ್ನು ನೀಡಲಾಗಿದ್ದು ದುರಂತದ ಹಿನ್ನೆಲೆ ಕಳೆದ ಏಪ್ರಿಲ್ ನಲ್ಲಿ ನಡೆಸಲಾಗಲಿಲ್ಲ ಹಾಗಾಗಿ ಈ ವರ್ಷ ನಡೆಸುತ್ತಿದ್ದೇವೆ ಎಂದರು. ಕಳೆದ ತಿಂಗಳ 22ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಶ್ರೀಲಂಕಾ ಟಿ-20 ಕ್ರೀಡಾಕೂಟದ ಮಧ್ಯೆ ಬೃಹತ್ ಎಲ್ಸಿಡಿ ಪರದೆಯಲ್ಲಿ ಕೊಡವ ಕೌಟುಂಬಿಕ ಕ್ರೀಡಾಕೂಟ-2020 ನಡೆಯುವ ಕುರಿತು ಪ್ರಚಾರವನ್ನೂ ನೀಡಲಾಗಿದೆ ಎಂದರು. ಕ್ರೀಡಾ ಕೂಟಕ್ಕೆ ಸರಿಯದ ಸಮಯಕ್ಕೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಬೆಂಗಳೂರಿಗೆ ನಿಯೋಗ ತೆರಳಲಿರುವುದಾಗಿಯೂ ಅವರು ತಿಳಿಸಿದರು. ಸಾವಿರಾರು ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಈ ಕೂಟಕ್ಕೆ ಈ ಬಾರಿಯಾದರೂ ಸರ್ಕಾರ ಸರಿಯಾದ ಸಮಯಕ್ಕೆ ಹಣ ಬಿಡುಗಡೆ ಮಾಡಿ ಕೊಡಗಿನ ಕೌಟುಂಬಿಕ ಕ್ರೀಡಾ ಕೂಟದ ಮೆರುಗನ್ನು ಹೆಚ್ಚಿಸಲಿ ಎಂದು ಆಶಿಸೋಣವೇ ?