ಕೊಡಗಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಅದರಲ್ಲೂ ಬಂಟ್ವಾಳ -ಮೈಸೂರು ರಾಷ್ಟ್ರೀಯ ಹೆದ್ದಾರಿ ಯಾವತ್ತೂ ಅತ್ಯಂತ ಹೆಚ್ಚು ವಾಹನ ದಟ್ಟಣೆ ಇರುವ ಹೆದ್ದಾರಿ ಆಗಿದ್ದು, ಇದನ್ನು ಈಗಿರುವ ದ್ವಿಪಥ ರಸ್ತೆಯಿಂದ ಚತುಷ್ಪಥ ರಸ್ತೆಗೆ ವಿಸ್ತರಣೆ ಮಾಡಬೇಕೆಂದು ವಾಹನ ಚಾಲಕರು ಸಂಘ ಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದರು. ಏಕೆಂದರೆ ಜಿಲ್ಲೆಯಲ್ಲಿ ಕಡಿದಾದ ಪ್ರದೇಶ ಇರುವುದರಿಂದಲೂ ಮತ್ತು ತಿರುವುಗಳು ಜಾಸ್ತಿ ಇರುವುದರಿಂದಲೂ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
ಅದರಲ್ಲೂ ಬಂಟ್ವಾಳ-ಮೈಸೂರು ಹೆದ್ದಾರಿಯ ಕುಶಾಲನಗರದಿಂದ ಮಡಿಕೇರಿಗೆ ತೆರಳುವಾಗ ಗುಡ್ಡೆಹೊಸೂರು, ಆನೆ ಕಾಡಿನ ಬಳಿ ಪ್ರವಾಸಿಗರ ವಾಹನಗಳು ಅಪಘಾತಕ್ಕೀಡಾಗಿ ಈ ವರ್ಷದಲ್ಲೇ ಸುಮಾರು 6 ಮಂದಿ ಜೀವ ಕಳೆದುಕೊಂಡಿದ್ದಾರೆ. ಕೊಡಗಿಗೆ ಬೆಂಗಳೂರು ಮತ್ತು ಮೈಸೂರಿನಿಂದ ನಿಂದ ಆಗಮಿಸುವ ಸಾವಿರಾರು ಪ್ರವಾಸಿಗರು ಇದೇ ರಸ್ತೆಯನ್ನೇ ಬಳಸುತ್ತಾರೆ. ನಿತ್ಯ ಸಾವಿರಾರು ವಾಹನಗಳುಓಡಾಡುವ ಈ ರಸ್ತೆಯಲ್ಲಿ ಅಪಘಾತಗಳು ಸಾಮಾನ್ಯ ಎಂದು ತಳ್ಳಿ ಹಾಕುವಂತೆಯೂ ಇಲ್ಲ. ಆನೆ ಕಾಡಿನ ಬಳಿ ಅಪಘಾತಗಳ ಸಂಖ್ಯೆ ಜಾಸ್ತಿ ಅಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಇಲಾಖೆ ಅಲ್ಲಲ್ಲಿ ರಸ್ತೆ ಫಲಕಗಳನ್ನೂ ಹಾಕಿದ್ದಾರೆ.
ಮೈಸೂರಿಗೆ ಮಂಗಳೂರನ್ನು ಸಂಪರ್ಕಿಸುವ ಈ ಹೆದ್ದಾರಿ ಮಡಿಕೇರಿಯಿಂದ ಮಂಗಳೂರಿನ ಕಡೆಗೆ ಸಾಗುವಾಗ ರಸ್ತೆ ಅಗಲ ಕಡಿಮೆ ಇದ್ದು ತಿರುವುಗಳನ್ನೂ ಹೊಂದಿದೆ. ಈ ಹೆದ್ದಾರಿ ಕಳೆದ ವರ್ಷದ ಭೀಕರ ಮಳೆ ಹಾಗೂ ಭೂ ಕುಸಿತಕ್ಕೆ ಸಿಲುಕಿ ಸಂಪೂರ್ಣ ಹಾಳಾಗಿ ಹೋಗಿತ್ತು. ಜಿಲ್ಲಾಡಳಿತ ಇಲ್ಲಿ ಸುಮಾರು ಒಂದು ತಿಂಗಳ ಕಾಲ ಸಂಚಾರವನ್ನೇ ನಿಷೇಧಿಸಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು ಹಾಸನ ಮೂಲಕವೇ ಹೋಗಬೇಕಿತ್ತು. ಮಡಿಕೇರಿಯಿಂದ 50 ಕಿಲೋಮೀಟರ್ ದೂರವಿರುವ ಸುಳ್ಯಕ್ಕೆ ತೆರಳಲು ಕರಿಕೆ ಮಾರ್ಗದಲ್ಲಿ ಒಟ್ಟು 85 ಕಿಲೋಮೀಟರ್ ಬಳಸಿಕೊಂಡು ವಾಹನಗಳು ತೆರಳಬೇಕಿತ್ತು. ಮಳೆಗಾಲದ ಈ ಸಂಭಾವ್ಯ ಅನಾನುಕೂಲವನ್ನು ಪರಿಹರಿಸಲೆಂದೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಕುಶಾಲನಗರದಿಂದ 70 ಕಿಲೋಮೀಟರ್ ದೂರದ ಗಡಿ ಗ್ರಾಮ ಸಂಪಾಜೆಯವರೆಗೆ ಈ ಹೆದ್ದಾರಿಯನ್ನು ಈಗಿರುವ ದ್ವಿಪಥದಿಂದ ಚತುಷ್ಪಥದವರೆಗೆ ಮೇಲ್ದರ್ಜೆಗೆ ಏರಿಸುವ ಯೋಜನೆಯನ್ನೂ ಹಾಕಿಕೊಂಡಿದ್ದರು.
ಆದರೆ ಸ್ಥಳೀಯ ಪರಿಸರವಾದಿಗಳು ಈ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೆದ್ದಾರಿ ಇಲಾಖೆ ಈ ಯೋಜನೆಯನ್ನೇ ಕೈ ಬಿಡುವ ಸಾಧ್ಯತೆಗಳಿವೆ. ಕಳೆದ ವರ್ಷದ ಭೀಕರ ಮಳೆ ಹಾಗೂಭೂ ಕುಸಿತದ ಹಿನ್ನೆಲೆಯಲ್ಲಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದು ಕೊಡಗಿನೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮಾಡಬಾರದೆಂದು ಕೋರಿದ್ದರು. ಇದಕ್ಕೆ ಉತ್ತರಿಸಿರುವ ಹೆದ್ದರಿ ಸಚಿವಾಲಯದ ಮುಖ್ಯ ಎಂಜಿನಿಯರ್ ಒ ಪಿ ಶ್ರೀವಾಸ್ತವ ಅವರು ಈ ರಸ್ತೆಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಅಲ್ಲದೆ ಪತ್ರದಲ್ಲಿ ಈ ರಸ್ತೆಯ ಅಗಲೀಕರಣ ಮಾಡುವುದಕ್ಕೂ ಮೊದಲು ಭೂ ವಿಜ್ಞಾನಿಗಳ ಸಲಹೆ ಪಡೆಯಲಾಗುವುದು ಮತ್ತು ಅರಣ್ಯ ಇಲಾಖೆ ನಿರ್ದೇಶನ ನೀಡಿದರೆ ಗಿಡಗಳನ್ನೂ ನಡಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ.
ರಸ್ತೆ ಎಷ್ಟು ಅತ್ಯವಶ್ಯಕವೋ ಪರಿಸರವೂ ಅಷ್ಟೇ ಅವಶ್ಯ. ಪರಿಸರ ನಾಶ ಅಗುವ ಹಿನ್ನೆಲೆಯಲ್ಲಿ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು ಈಗಾಗಲೇ ಸಾಕಷ್ಟು ಪರಿಸರ ಹಾನಿಗೀಡಾಗಿದೆ ಮತ್ತೂ ಹಾನಿಯಾದರೆ ಮಾನವ ವಾಸ್ತವ್ಯಕ್ಕೆ ಅಪಾಯ ಎದುರಾಗಲಿದೆ ಎನ್ನುತ್ತಾರೆ. ಈ ಕುರಿತು ಪ್ರತಿಧ್ವನಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಮಾಜಿ ಅದ್ಯಕ್ಷ ನಿವೃತ್ತ ಕರ್ನಲ್ ಚೆಪ್ಪುಡೀರ ಮುತ್ತಣ್ಣ ಅವರನ್ನು ಪ್ರಶ್ನಿಸಿದಾಗ ಕೊಡಗಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಗೆ ಸರ್ಕಾರ ಕಡಿವಾಣ ಹಾಕಿದರೆ ಮಾತ್ರ ಮುಂದಿನ ಜನಾಂಗಕ್ಕೆ ಕೊಡಗು ಉಳಿದೀತು ಎಂದರು. ಜಿಲ್ಲೆಯ ಜನಸಂಖ್ಯೆ ಸುಮಾರು 6 ಲಕ್ಷ ಇದ್ದು ವಾರ್ಷಿಕವಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ 18 ಲಕ್ಷ ಮೀರಿದ್ದು ಪ್ರವಾಸಿಗರ ಕಾರಣದಿಂದಲೇ ಹೆದ್ದಾರಿ ದಟ್ಟಣೆ ಉಂಟಾಗುತ್ತಿದ್ದು ಇದನ್ನು ನಿಯಂತ್ರಿಸಿದಲ್ಲಿ ರಸ್ತೆ ವಿಸ್ತರಣೆ ಅವಶ್ಯಕತೆ ಇಲ್ಲ ಎಂದರು. ಇದಕ್ಕೆ ಉದಾಹರಣೆಯೊಂದನ್ನು ನೀಡಿದ ಅವರು ಉತ್ತರಖಾಂಡ್ ನಲ್ಲಿ ಗಂಗಾ ನದಿಯ ಉಗಮ ಸ್ಥಾನಕ್ಕೆ ಭೇಟಿ ನೀಡಲು ಅಲ್ಲಿನ ಅರಣ್ಯ ಇಲಾಖೆ ದಿನವೊಂದಕ್ಕೆ 150 ಜನರಿಗೆ ಮಾತ್ರ ಅವಕಾಶ ಕಲ್ಪಿಸಿದೆ ಎಂದರು. ಇದೇ ಮಾದರಿಯಲ್ಲಿ ಕೊಡಗಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೂ ಆನ್ ಲೈನ್ ಮುಖಾಂತರ ಪ್ರವಾಸಿಗರಿಗೆ ಸೂಕ್ತ ಪಾಸ್ ನೀಡಿ ಸಂಖ್ಯೆ ನಿಯಂತ್ರಿಸಲೇಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಕುಶಾಲನಗರದಿಂದ ಸಂಪಾಜೆವರೆಗೆ ರಸ್ತೆಯ ಇಕ್ಕೆಲಗಳಲ್ಲೂ ಸಾವಿರಾರು ಮರಗಳಿದ್ದು ಹೆದ್ದಾರಿಯ ಮಧ್ಯ ಭಾಗದಿಂದ ಎರಡೂ ಬದಿಗೆ ತಲಾ 40 ಮೀಟರ್ ಗಳಷ್ಟು ಅಗಲ ಮಾಡಿದರೆ ಅಮೂಲ್ಯ ಅರಣ್ಯ ಸಂಪತ್ತೇ ನಾಶಗೊಳ್ಳುತ್ತದೆ ಮತ್ತು ಹೆಚ್ಚಿನ ಭೂ ಕುಸಿತ ಉಂಟಾಗುವ ಸಾದ್ಯತೆ ಇದೆ ಎನ್ನುವ ಆತಂಕ ವ್ಯಕ್ತಪಡಿಸಿದರು.
ಆದರೆ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಅವರು ಹೆದ್ದರಿ ವಿಸ್ತರಣೆ ಆಗಲೇಬೇಕಿದೆ ಎಂದರಲ್ಲದೆ ಇದರಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಅಗಲಿದೆ ಎಂದರು. ವಿರಾಜಪೇಟೆ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಅವರೂ ಕೂಡ ರಸ್ತೆ ವಿಸ್ತರಣೆ ಆಗಲೇಬೇಕಿದ್ದು ಇದನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿ ಆಗದಂತೆ ಮಾಡಬೇಕಿದೆ ಎನ್ನುತ್ತಾರೆ.
ಬಹುತೇಕ ಅವಘಡಗಳಿಗೆ ಮದ್ಯಪಾನ ಸೇವನೆ ಮತ್ತು ಅತಿವೇಗದ ಚಾಲನೆಯೇ ಕಾರಣವಾಗಿದೆ ಎಂದು ಕುಶಾಲನಗರದ ಡಿವೈಎಸ್ಪಿ ಮುರಳೀಧರ ಅವರು ಹೇಳುತ್ತಾರೆ. ಬಹಳಷ್ಟು ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನೇ ಪಾಲಿಸುವುದಿಲ್ಲ. ತಿರುವುಗಳಲ್ಲಿ ವೇಗ ಜಾಸ್ತಿಯಾಗಿ ಎದುರಿನಿಂದ ಬಂದ ವಾಹನಗಳಿಗೂ ಢಿಕ್ಕಿಯಾಗಿ ಸಾಕಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದೂ ಅವರು ಹೇಳಿದರು.