ಇತ್ತೀಚೆಗೆ ಬೆಂಗಳೂರಿನಲ್ಲಿ ಬಂದಿಸಲಾದ ಶಂಕಿತ ಉಗ್ರರು ಕೊಡಗಿನ ಗೋಣಿಕೊಪ್ಪ ಸಮೀಪದ ಅರಣ್ಯದಲ್ಲಿ ತರಬೇತಿ ನೀಡಲು ಉದ್ದೇಶಿಸಿದ್ದ ವಿಚಾರ ಪತ್ರಿಕೆಗಳ ಮೂಲಕ ಬಹಿರಂಗಗೊಳ್ಳುತಿದ್ದಂತೆ ಪುಟ್ಟ ಜಿಲ್ಲೆ ಯಲ್ಲಿ ಸಂಚಲನವಾಯಿತು. ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುವ ಈ ಜಿಲ್ಲೆ ಹಚ್ಚ ಹಸಿರಿನ ಕಾಫಿ ತೋಟಗಳು ಮತ್ತು ದಟ್ಟ ಅರಣ್ಯಕ್ಕೆ ಹೆಸರುವಾಸಿ ಆಗಿದೆ. ಈ ಜಿಲ್ಲೆಯಲ್ಲಿ ಈಗ ಮೂಲನಿವಾಸಿಗಳಿಗಿಂತ ನೆರೆ ರಾಜ್ಯಗಳಿಂದ , ಜಿಲ್ಲೆಗಳಿಂದ ವಲಸೆ ಬಂದವರೇ ಹೆಚ್ಚಿದ್ದಾರೆ.
ಅದರಲ್ಲೂ ಕೊಡಗು ಕೇರಳದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಕೇರಳದಿಂದ ವಲಸೆ ಬಹಳ ಹೆಚ್ಚಾಗಿದೆ. ಇಂದಿಗೂ ದಕ್ಷಿಣ ಕೊಡಗಿನ ವೀರಾಜಪೇಟೆ , ಸಿದ್ದಾಪುರ, ಗೋಣಿಕೊಪ್ಪ ನಗರಗಳಿಗೆ ಭೇಟಿ ನೀಡಿದರೆ ಕೇರಳದ ಊರಿನಲ್ಲಿರುವಂತೆ ಭಾಸವಾಗುತ್ತದೆ. ಏಕೆಂದರೆ ಇಲ್ಲಿ ಬಹುತೇಕ ವ್ಯಾಪಾರಸ್ಥರ ವ್ಯಾವಹಾರಿಕ ಭಾಷೆ ಮಲೆಯಾಳವೇ ಆಗಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂದಿಸಿದ ನಂತರ ಸಿಸಿಬಿ ಪೋಲೀಸರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿಯೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ, ಇದರ ಬೆನ್ನಲ್ಲೇ ಸೋಮವಾರ ಕೋಲಾರದ ಪ್ರಶಾಂತನಗರದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.ಪುನಃ ಮಂಗಳೂರು ಸಮೀಪದಲ್ಲೂ ಮಂಗಳವಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಈ ಸರಣಿ ಬಂಧನದಿಂದ ಉಗ್ರರ ನೆಟ್ ವರ್ಕ್ ಬಹಳ ವಿಸ್ತಾರವಾಗಿರುವುದು ಸ್ಪಷ್ಟವಾಗಿದೆ.
ದಶಕಗಳ ಹಿಂದೆ ಉತ್ತರ ಭಾರತದ ನಗರಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಉಗ್ರರು ನಂತರ ಕೇರಳದ ಮೂಲಕ ದಕ್ಷಿಣದ ರಾಜ್ಯಗಳಿಗೂ ಪ್ರವೇಶಿಸಿದರು. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಯ ನಂತರ ಮೈಸೂರಿನಲ್ಲಿ 2006 ರ ನವೆಂಬರ್ 26 ರಂದು ಶಂಕಿತ ಉಗ್ರರಾದ ಫಹಾದ್ ಮತ್ತು ಮಹಮದ್ ಅಲಿ ಎಂಬುವವರನ್ನು ಗುಂಡಿನ ಧಾಳಿ ನಡೆಸಿ ವಿಜಯನಗರ ಹೊರವಲಯದ ರಿಂಗ್ ರೋಡ್ ನಲ್ಲಿ ಸೆರೆ ಹಿಡಿಯಲಾಯಿತು. ಇವರಿಬ್ಬರೂ ಈಗ ಬಳ್ಳಾರಿ ಜೈಲಿನಲ್ಲಿದ್ದಾರೆ.
ಇದಾದ ನಂತರ 2006 ರಲ್ಲಿ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟ ಎಂಬಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಅಡಗಿಕೊಂಡಿದ್ದ ತಡಿಯಂಡವಿಡೆ ನಸೀರ್ ಎಂಬ ಶಂಕಿತ ಉಗ್ರನನ್ನು ಸೆರೆ ಹಿಡಿಯಲಾಯಿತು. ಈತನು ಬೆಂಗಳೂರು ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಆಗಿದ್ದು ಕೊಯಮತ್ತೂರು ಬಾಂಬ್ ಸ್ಪೋಟದ ಮುಖ್ಯ ಅರೋಪಿಯಾಗಿದ್ದ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ (ಪಿಡಿಪಿ) ಯ ಅದ್ಯಕ್ಷ ಅಬ್ದುಲ್ ನಾಸಿರ್ ಮದನಿಯ ಶಿಷ್ಯನಾಗಿದ್ದ. 1992 ರಲ್ಲಿ ಬಾಬ್ರಿ ಮಸೀದಿ ಉರುಳಿಸಿದ ನಂತರ ಮದನಿಯು ಇಸ್ಲಾಮಿಕ್ ಸೇವಾ ಸಂಘ ವನ್ನು ಸ್ಥಾಫಿಸಿದ್ದ. ಕಾನೂನು ಬಾಹಿರ ಚಟುವಟಿಕೆಯ ಆರೋಪದಡಿಯಲ್ಲಿ ಅದನ್ನು ಕೇಂದ್ರ ಸರ್ಕಾರ ನಿಷೇಧಿಸಿದ ನಂತರ ಮದನಿಯು ಪಿಡಿಪಿ ಸ್ಥಾಫಿಸಿದ. ಅದರ ಸಕ್ರಿಯ ಸದಸ್ಯನಾಗಿದ್ದವನೇ ಈ ತಡಿಯಂಡವಿಡೆ ನಸೀರ್.
ಪೋಲೀಸ್ ತನಿಖೆಯ ಪ್ರಕಾರ ನಸೀರ್ ನು ಪಾಕಿಸ್ಥಾನ ಮೂಲದ ಲಷ್ಕರ್ ಏ ತೊಯ್ಬಾ ಸಂಘಟನೆಯ ದಕ್ಷಿಣ ಭಾರತ ಕಮಾಂಡರ್ ಅಗಿದ್ದ ಅಲ್ಲದೆ ಐಸಿಸ್ ಸಂಪರ್ಕವನ್ನೂ ಹೊಂದಿದ್ದು ಅವರಿಗೆ ಕೇರಳದಿಂದ ಯುವಕರನ್ನು ನೇಮಕಾತಿ ಮಾಡಿಕೊಡುತಿದ್ದ. ಕೇರಳದ 3-4 ಯುವಕರು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪೋಲೀಸರೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಹತರಾಗಿದ್ದರು. ನಸೀರ್ ನು ರಾತ್ರಿ ಹೊತ್ತಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ತನ್ನ ಸಹಚರರೊಂದಿಗೆ ವಿದ್ವಂಸಕ ಕೃತ್ಯ ನಡೆಸಿ ಪುನಃ ರಾತ್ರಿ ಶುಂಠಿ ಕೃಷಿ ನಡೆಸುತಿದ್ದ ಜಮೀನಿಗೆ ಬಂದು ಸೇರಿಕೊಳ್ಳುತಿದ್ದ. ಹಗಲು ಹೊತ್ತಿನಲ್ಲಿ ತನ್ನ ಶೆಡ್ ನಿಂದ ಹೊರಗೆ ಬಾರದ ನಸೀರ್ ಅಲ್ಲೇ ಮೀಟಿಂಗ್ ಗಳನ್ನೂ ನಡೆಸುತಿದ್ದ. ಪ್ರಸ್ತುತ ಈತ ಬೆಂಗಳೂರು ಜೈಲಿನಲ್ಲಿದ್ದಾನೆ. ಈಗ ಬಂಧಿತ ಶಂಕಿತ ಉಗ್ರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತಿದ್ದು ತಲೆಮರೆಸಿಕೊಂಡಿರುವವರ ಪತ್ತೆಗೆ ಬೆಂಗಳೂರಿನ ಆಂತರಿಕ ಭದ್ರತಾ ಘಟಕ ಮತ್ತು ಭಯೋತ್ಪಾದನಾ ನಿಗ್ರಹ ಘಟಕದ ಪೋಲೀಸರು ತೀವ್ರ ಶೋಧ ನಡೆಸಿದ್ದಾರೆ.
2009 ರ ನಂತರ ಕೊಡಗಿನಲ್ಲೆಲ್ಲೂ ಉಗ್ರರ ಚಟುವಟಿಕೆ ಪತ್ತೆಯಾಗಿರಲಿಲ್ಲ. ಆದರೆ ಮೊನ್ನೆ ಬಂಧಿಸಲಾದ ಶಂಕಿತ ಉಗ್ರರು ಬಾಯಿ ಬಿಟ್ಟಿರುವ ಮಾಹಿತಿಯು ಜನತೆಯನ್ನು ಆತಂಕಕ್ಕೀಡುಮಾಡಿದೆ. ಗುಡ್ಡ ಗಾಡು ಪ್ರದೇಶವಾದ ಜಿಲ್ಲೆಯು ಬಹುತೇಕ ಕಾಫಿ ತೋಟಗಳಿಂದ ಆವೃತವಾಗಿದ್ದು ತೋಟದಲ್ಲಿ ಕಾರ್ಮಿಕರು ವಾಸಿಸಲು ನಿರ್ಮಿಸಲಾಗಿರುವ ಲೈನ್ ಮನೆಗಳೂ ಉಗ್ರರಿಗೆ ಆಶ್ರಯ ನೀಡುವ ಸಾಧ್ಯತೆಗಳೂ ಇವೆ. ಏಕೆಂದರೆ ಕೊಡಗಿನ ಕಾಫಿ ತೋಟಗಳಲ್ಲಿ ಸಾವಿರಾರು ಜನ ಉತ್ತರ ಭಾರತದ ಕಾರ್ಮಿಕರು ದುಡಿಯಿತಿದ್ದಾರೆ. ಈ ಕಾರ್ಮಿಕರು ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದಿಂದ ವಿತರಿಸಲಾದ ಆಧಾರ್ ಕಾರ್ಡನ್ನೂ ಹೊಂದಿದ್ದಾರೆ. ಅದರೆ ಈ ಆಧಾರ್ ಕಾರ್ಡ್ ಗಳ ಸತ್ಯಾ ಸತ್ಯತೆಯನ್ನು ಪರಿಶೀಲಿಸುವುದು ಕಷ್ಟಕರ. ಏಕೆಂದರೆ ಕೊಡಗಿನಲ್ಲಿ ಬಾಂಗ್ಲಾದೇಶದ ಕಾರ್ಮಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಬಾಂಗ್ಲಾದೇಶೀ ಅಕ್ರಮ ವಲಸಿಗರು ದೇಶ ಪ್ರವೇಶಿಸುವಾಗಲೇ ಅವರಿಗೆ ಏಜೆಂಟನು ಓಡಾಡಲು , ಕೆಲಸ ಮಾಡಲು ಆಧಾರ್ ಕಾರ್ಡ್ ಮಾಡಿಸಿಕೊಟ್ಟೇ ಕಳಿಸುತ್ತಿರುವುದು ಇತ್ತೀಚೆಗೆ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಬಹಿರಂಗಗೊಂಡಿತ್ತು.
ಅದರಲ್ಲೂ ಗೋಣಿಕೊಪ್ಪ ಸಮೀಪದ ಅರಣ್ಯ ಎಂದರೆ ಅದು ನೆರೆಯ ಕೇರಳಕ್ಕೂ ಅಂಟಿಕೊಂಡಿದೆ. ಇಲ್ಲಿ ಪೋಲೀಸರು ಹುಡುಕಾಟ ನಡೆಸಿದರೆ ಪಕ್ಕದ ಕೇರಳಕ್ಕೆ ದಾಟಿಕೊಳ್ಳಬಹುದು. ಸಾವಿರಾರು ಎಕರೆ ಅರಣ್ಯವಾಗಿರುವುದರಿಂದ ಹುಡುಕಾಟ ಕೂಡ ಕಷ್ಟಕರ. ಜತೆಗೇ ತೋಟಗಳೂ ಇರುವುದರಿಂದ ಅಲ್ಲಿನ ಲೈನ್ ಮನೆ ಸೇರಿಕೊಂಡರೂ ಗೊತ್ತಾಗುವುದಿಲ್ಲ . ಪೋಲೀಸರು ಎಲ್ಲಾ ತೋಟಗಳ ಮಾಲೀಕರಿಗೆ ಬಹಳ ಹಿಂದೆಯೇ ಉತ್ತರ ಭಾರತದ ಕಾರ್ಮಿಕರ ಕುರಿತು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಮಾಹಿತಿ ನೀಡುವವರ ಸಂಖ್ಯೆ ಕಡಿಮೆಯೇ ಇದೆ.
ಈ ಉಗ್ರ ಚಟುವಟಿಕೆ ಕುರಿತು ಮಾತನಾಡಿದ ಜಿಲ್ಲಾ ಪೋಲೀಸ್ ಅಧಿಕಾರಿ ಸುಮನ ಪನ್ನೇಕರ್ ಅವರು ಕೊಡಗಿನಲ್ಲಿ 2015 ರಲ್ಲಿ ಕೊಡಗಿನ ಕಾಡಿನಲ್ಲಿ ಉಗ್ರರ ತರಬೇತಿ ನಡೆದಿತ್ತು ಎಂಬ ಮಾಹಿತಿ ಇತ್ತು. ಆದರೆ ಅಂತಹ ಯಾವುದೇ ತರಬೇತಿ ನಡೆದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೆ ಇಲಾಖೆ ಕಟ್ಟೆಚ್ಚರದಲ್ಲಿ ಇದೆ ಎಂದು ಹೇಳಿದರು.