ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಂತೆ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುವುದು ನಿರಂತರ ಪ್ರಕ್ರಿಯೆ. ಈ ಅವಿಷ್ಕಾರಗಳಿಂದಾಗಿ ಜನ ಜೀವನ ಸುಲಭವಾಗುತ್ತಿದೆ. ಆದರೆ ಇದರ ಜತೆಯಲ್ಲೇ ವಂಚಕರು ಕೂಡ ಹೊಸ ಹೊಸ ಅವಿಷ್ಕಾರಗಳ ಮೂಲಕ ಜನತೆಗೆ ಮೋಸ ಮಾಡಲು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ನಮ್ಮಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಕಾನೂನನ್ನು ಬಿಗಿ ಮಾಡಿದರೂ ವಿಧ ವಿಧದ ವಂಚನೆಗಳೇನೂ ಕಡಿಮೆ ಆಗುತ್ತಿಲ್ಲ. ಪುಟ್ಟ ಜಿಲ್ಲೆ ಕೊಡಗಿನಲ್ಲಿ ಅಪರಾಧಗಳ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ , ಅದರೆ ಈ ಬಾರಿ ವೆಬ್‌ಸೈಟ್ ಮೂಲಕ ವಂಚನೆ ಮಾಡಿರುವ ಪ್ರಕರಣ ಬಯಲಿಗೆ ಬರುತಿದ್ದಂತೆ ಜಿಲ್ಲೆ ಬೆಚ್ಚಿ ಬಿದ್ದಿದೆ.
ಮೂರು ದಿನಗಳ ಹಿಂದೆ ಕೊಡಗಿನ ಪೋಲೀಸರು ನಾಲ್ವರು ಐನಾತಿಗಳನ್ನು ಬಂಧಿಸಿ ಹೊಸ ಬಗೆಯ ವಂಚನೆಯಿಂದ ಜನರನ್ನು ರಕ್ಷಿಸಿದ್ದಾರೆ. ಆದರೆ ಈ ವಂಚಕರನ್ನು ಹಿಡಿಯುವುದಕ್ಕೂ ಮೊದಲು ನೂರಾರು ಜನರು ಇವರಿಂದ ಮೋಸ ಹೋಗಿದ್ದಾರೆ ಮತ್ತು ಸಾರ್ವಜನಿಕರಿಗೆ ಸುಮಾರು 15 ರಿಂದ 20 ಕೋಟಿ ರೂಪಾಯಿಗಳಷ್ಟು ಹಣ ವಂಚನೆ ಆಗಿದೆಯೆಂದು ಪೋಲೀಸರು ತಿಳಿಸಿದ್ದಾರೆ. ಈ ವಂಚಕರ ತಂಡ ಮೊಬೈಲ್ ಆಪ್ ಸಿದ್ದಪಡಿಸಿಕೊಂಡು ಹೈಟೆಕ್ ವಂಚನೆ ಮಾಡುತಿತ್ತು. ಈ ತಂಡ ಸಾರ್ವಜನಿಕರನ್ನು ಸಂಪರ್ಕಿಸಿ ದುಪ್ಪಟ್ಟು ಹಣದ ಆಮಿಷವೊಡ್ಡಿ ವೆಬ್‍ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ ಕೋಟ್ಯಾಂತರ ರೂಪಾಯಿ ವಂಚಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಂಚಕರ ತಂಡದಲ್ಲಿ ಒಟ್ಟು ಎಂಟು ಜನರಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಕುಶಾಲನಗರದ ನಿವಾಸಿಗಳಾದ ಎ.ಜಾನ್(45), ಶಶಿಕಾಂತ್ ಅಲಿಯಾಸ್ ಶಮ್ಮಿ(37), ಆಂಟೋನಿ ಡಿ. ಕುನ್ಹಾ ಅಲಿಯಾಸ್ ಡ್ಯಾನಿ(39) ಬಂಧಿತ ಆರೋಪಿಗಳು. ಇವರ ಬಳಿಯಿಂದ ವಂಚನೆಗೆ ಬಳಸುತ್ತಿದ್ದ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ಉಳಿದ ನಾಲ್ವರು ಆರೋಪಿಗಳು ಕೂಡ ಕೊಡಗಿನವರೇ ಆಗಿದ್ದು, ಶೀಘ್ರ ಬಂಧಿಸುವುದಾಗಿ ಪೋಲೀಸರು ತಿಳಿಸಿದರು.
ಬೆಂಗಳೂರಿನ ವೆಬ್ ಸೈಟ್ ಡೆವಲಪರ್ಸ್ ಸಂಸ್ಥೆಯೊಂದರ ಮೂಲಕ ವಂಚನೆಗಾಗಿ ವೆಬ್ಸೈಟ್‍ವೊಂದನ್ನು ರಚಿಸಿಕೊಂಡ ಆರೋಪಿಗಳು, ಆಪ್ತ ಸ್ನೇಹಿತರ ಸಹಕಾರದೊಂದಿಗೆ ಸಾರ್ವಜನಿಕರನ್ನು ‘ಕ್ಯಾಪಿಟಲ್ ರಿಲೇಷನ್ಸ್ ಡಾಟ್ ಇನ್’ ಎನ್ನುವ ವೆಬ್‍ಸೈಟಿಗೆ ಸುಮಾರು 4 ಸಾವಿರ ಮಂದಿಯನ್ನು ಹೂಡಿಕೆದಾರರನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮ ಜನರು ಹಣ ದ್ವಿಗುಣಗೊಳ್ಳುತ್ತದೆ ಎಂದರೆ ಸಾಕು ಹಿಂದೆ ಮುಂದೆ ನೋಡದೆ ಹಣ ಕಟ್ಟುತ್ತಾರೆ. ಬೆಂಗಳುರಿನ ಐಎಂಏ , ಅನೇಕ ಫೈನಾನ್ಸ್ ಕಂಪೆನಿಗಳೂ ಇದೇ ರೀತಿ ಹೆಚ್ಚಿನ ಬಡ್ಡಿ ಅಮಿಷ ತೋರಿ ಕೋಟ್ಯಾಂತರ ರೂಪಅಯಿಗನ್ನು ವಂಚಿಸಿ ಪರಾರಿ ಆಗಿದ್ದರೂ ಜನರು ಇನ್ನೂ ಬುದ್ದಿ ಕಲಿತಿಲ್ಲ . ಈ ಪ್ರಕರಣದಲ್ಲೂ ವೆಬ್‍ಸೈಟ್ ಮೂಲಕ ಹೂಡಿಕೆ ಮಾಡುವ ಹಣಕ್ಕೆ ದುಪ್ಪಟ್ಟು ಹಣ ನೀಡುವ ಆಮಿಷವೊಡ್ಡಿ ಸುಮಾರು 15 ಕೋಟಿ ರೂ.ಗಳಷ್ಟು ವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವಂಚನೆಯ ಜಾಲ ಕರ್ನಾಟಕ ರಾಜ್ಯದಾದ್ಯಂತ ಹಬ್ಬಿಕೊಂಡಿರುವ ಬಗ್ಗೆ ಸಂಶಯಗಳಿದೆ ಎಂದು ಎಸ್‍ಪಿ ಡಾ ಸುಮನ್ ಪನ್ನೇಕರ್ ತಿಳಿಸಿದರು.
ವಂಚನಾ ಜಾಲದ ವೆಬ್‍ಸೈಟ್ ಪ್ರಕಾರ ಯೂಸರ್ ಐಡಿ ಪಾಸ್ ವರ್ಡ್‍ನೊಂದಿಗೆ ಹೂಡಿಕೆದಾರರು ಮೊದಲಿಗೆ 3 ಇ-ಪಿನ್ ಖರೀದಿಸಬೇಕಾಗುತ್ತದೆ. ತಲಾ 1 ಸಾವಿರ ರೂ.ನಂತೆ 3 ಸಾವಿರ ರೂ.ಗಳನ್ನು ಆರೋಪಿಗಳ ಖಾತೆಗೆ ಜಮಾವಣೆ ಮಾಡಬೇಕಾಗುತ್ತದೆ. ಹಣ ಸಂದಾಯ ಮಾಡಿದ ರಶೀದಿಯನ್ನು ಅಪ್‍ಲೋಡ್ ಮಾಡಿದ ನಂತರ ಏಳು ದಿನಗಳ ಒಳಗೆ 3 ಸಾವಿರ ರೂ.ಗಳಿಗೆ ದುಪ್ಪಟ್ಟಾಗಿ 6 ಸಾವಿರ ರೂ.ಗಳನ್ನು ಹೂಡಿಕೆದಾರನ ಖಾತೆಗೆ ಸಂದಾಯ ಮಾಡಲಾಗುತ್ತದೆ. ಈ ಪ್ರಕಾರವಾಗಿ ಆರಂಭದಲ್ಲಿ ಇ-ಪಿನ್ ಪಡೆಯಲೆಂದು ಹೂಡಿಕೆ ಮಾಡಿದ ಸಾರ್ವಜನಿಕರು ಮೊದ ಮೊದಲು ಲಾಭ ಬಂತೆಂದು ನಂತರದ ದಿನಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಹಣ ಹೂಡಿಕೆ ಮಾಡಿ ಕೊನೆಯ ಕ್ಷಣದಲ್ಲಿ ಹಣ ಸಿಗದೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ .
ಈ ವ್ಯವಹಾರ ಬ್ಯಾಂಕ್ ಖಾತೆಗಳ ಮೂಲಕ ನಡೆಯುತ್ತಿದ್ದರೂ ಇಂತಹ ವ್ಯವಹಾರಗಳು ಕಾನೂನು ಬಾಹಿರವಾಗಿದೆ. ಇಂತಹ ವ್ಯವಹಾರಗಳನ್ನು ಮಾಡುವ ಅನೇಕ ವೆಬ್‍ಸೈಟ್‍ಗಳು ಅಂತರ್ಜಾಲದಲ್ಲಿ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿ ಇದೆ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿ ಹಣದ ಆಮಿಷಗಳನ್ನೊಡ್ಡುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ಸಹಕಾರ ನೀಡಬೇಕೆಂದು ಎಸ್‍ಪಿ ಹೇಳಿದರು. ವೆಬ್‍ಸೈಟ್‍ಗಳ ಮೂಲಕ ನಡೆಸುವ ವಂಚನೆ ಪ್ರಕರಣಗಳಲ್ಲಿ ಹಣ ಹೂಡಿಕೆ ಮಾಡುವವರು ಕೂಡ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇಂದು ಕೊಡಗಿನಂತ ಪುಟ್ಟ ಜಿಲ್ಲೆಯನ್ನು ವಂಚಕರು ತಮ್ಮ ಕೇಂದ್ರ ಸ್ಥಾನ ವನ್ನಾಗಿ ಮಾಡಿಕೊಂಡು ವಂಚನಾ ಜಾಲ ವಿಸ್ತರಿಸಿರುವುದು ಆತಂಕಕಾರಿ ಅಗಿದೆ. 70-80ರ ದಶಕದಲ್ಲಿ ಕೊಡಗಿನ ಅರಣ್ಯಗಳಲ್ಲಿ ಹೇರಳವಾಗಿದ್ದ ಶ್ರೀಗಂದವನ್ನು ಕಳ್ಳರ ಕೊಡಲಿಗಳಿಗೆ ಬಲಿಯಾಗಿ ಇಂದು ಅರಣ್ಯದಲ್ಲಿ ಶ್ರೀಗಂದದ ಕುರುಹೇ ಇಲ್ಲ. ನಂತರ ಕಳ್ಳರ ದೃಷ್ಟಿ ಬೆಲೆಬಾಳುವ ಬೀಟಿ, ತೇಗ ಮರಗಳೆಡೆ ಬಿದ್ದಿದ್ದು ಇದೂ ಕೂಡ ವಿನಾಶದ ಅಂಚಿನಲ್ಲೇ ಇದೆ. ನಂತರ ಕಳ್ಳರ ದೃಷ್ಟಿ ಅರಣ್ಯದೊಲಗೆ ಸಿಗುತಿದ್ದ ಹರಳು ಕಲ್ಲಿನ ಮೇಲೆ ಬಿತ್ತು. ಬಣ್ಣದ ಹರಳು ಕಲ್ಲುಗಳು ಮೊದಲು ಪತ್ತೆ ಆಗಿದ್ದು ಮಡಿಕೇರಿ ಹೊರವಲಯದಲ್ಲಿ ಪಟ್ಟಿ ಘಾಟ್ ಮೀಸಲು ಅರಣ್ಯದಲ್ಲಿ. ಇಲ್ಲಿ ೨೦೦೬ ರಲ್ಲಿ ಪತ್ತೆಯಾದ ಹರಳು ಕಲ್ಲು ದಂಧೆ ಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಂಡವರಿದ್ದಾರೆ.ಏಕೆಂದರೆ ಒಂದು ಕೆಜಿ ಹರಳು ಕಲ್ಲಿಗೆ ಬರೋಬ್ಬರಿ ೧೦ ಸಾವಿರ ಬೆಲೆ ಸಿಗುತಿತ್ತು. ಕೆಲವು ದುಷ್ಕರ್ಮಿಗಳು ಕಾಡಿನಲ್ಲೇ ಟೆಂಟ್ ಹಾಕಿಕೊಂಡು ಮಣ್ಣನ್ನು 6-8 ಅಡಿಗಳಷ್ಟು ಅಗೆದು ಹರಳು ಕಲ್ಲನ್ನು ತೆಗೆದು ಸಾಗಟದಲ್ಲಿ ತೊಡಗಿದ್ದು ಈಗ ಅದು ನಿಂತು ಹೋಗಿದೆ.
ನಂತರ ಕೊಡಗಿನಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೆ ಸಿಂಗಲ್ ನಂಬರ್ ಲಾಟರಿ ದಂಧೆ ಎಗ್ಗು ಸಿಗ್ಗಿಲ್ಲದೆ ನಡೆಯುತಿತ್ತು. ಪೋಲೀಸರು ಅದನ್ನೂ ರೇಡ್ ಮಾಡಿ ಬಂದ್ ಮಾಡಿಸಿದ್ದಾರೆ. ಇದೀಗ ಮೈಸೂರಿನಿಂದ ಗಾಂಜಾ ಬರುತಿದ್ದು ಅದನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಅರೋಪವಿದೆ. ಅದರೆ ಕಳೆದ ತಿಂಗಳಷ್ಟೆ ಪೋಲೀಸರು ಎರಡು ಬಾರಿ ಕಿಂಗ್ ಪಿನ್ ಗಳ ಮನೆಗಳ ಮೇಲೆ ರೈಡ್ ಮಾಡಿ ಗಾಂಜಾ ದಂದೆಗೂ ಕಡಿವಾಣ ಹಾಕಿದ್ದಾರೆ. ಇನ್ನು ವಂಚಕರು ಸುಲಭದಲ್ಲಿ ಹಣ ಸಂಪಾದಿಸಲು ಯಾವ ವಂಚನಾ ತಂತ್ರ ಬಳಸುತ್ತರೋ ಇನ್ನು ಆ ತಂತ್ರಗಳಿಗೆ ಎಷ್ಟು ಜನ ಅಮಾಯಕರು ಸಿಲುಕಿಕೊಳ್ಳುತ್ತಾರೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.