ಕೊಡಗು ಜಿಲ್ಲೆ ಒಂದೆಡೆಯಲ್ಲಿ ಪ್ರವಾಸಿಗರ ಸ್ವರ್ಗ ಆಗಿದ್ದರೂ ಮತ್ತೊಂದೆಡೆಯಲ್ಲಿ ಇಲ್ಲಿನ ಜನತೆಗೆ ಸರ್ಕಾರಿ ಕಚೇರಿಗಳ ಕಾರ್ಯ ದಿನೇ ದಿನೇ ಕಷ್ಟಕರವಾಗುತ್ತಿದೆ. ಕಳೆದ ಎರಡು ವರ್ಷಗಳ ಭೂ ಕುಸಿತ ಹಾಗೂ ಭೀಕರ ಮಳೆಗೆ ತತ್ತರಿಸಿರುವ ಸಂತ್ರಸ್ಥರಿಗೆ ಇನ್ನೂ ಮನೆಗಳ ಹಂಚಿಕೆ ಅಗಿಲ್ಲ. ಮನೆಗಳ ನಿರ್ಮಾಣವೂ ಮಂದಗತಿಯಲ್ಲಿ ಸಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ನೌಕರರ ಕೊರತೆ ತೀವ್ರವಾಗಿದೆ. ಸಂತ್ರಸ್ಥರು ತಮಗೆ ಬೇಕಾದ ದಾಖಲಾತಿಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಹೋದರೆ ವಾರಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ಇದೆ.
ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಇಲ್ಲಿಗೆ ಇಷ್ಟ ಪಟ್ಟು ವರ್ಗ ಮಾಡಿಸಿಕೊಂಡು ಬರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರ ಸಂಖ್ಯೆ ಶೂನ್ಯ ಎಂದೇ ಹೇಳಬಹುದು. ವರ್ಗವಾದವರೂ ಕೂಡ ವರ್ಗವನ್ನು ಪ್ರಭಾವ ಬಳಸಿ ರದ್ದು ಮಾಡಿಕೊಂಡು ಬೇರೆಡೆಗೆ ತೆರಳುವ ಸಂದರ್ಭವೇ ಹೆಚ್ಚು. ಆದರಲ್ಲೂ ಹಿರಿಯ ಅಧಿಕಾರಿಗಳಂತೂ ಇಲ್ಲಿಗೆ ವರ್ಗವಾದರೆ ಶಿಕ್ಷೆ ಎಂಬಂತೆ ಭಾವಿಸಿದ್ದಾರೆ. ಮೂರು ತಿಂಗಳ ಮಳೆ ಗಾಳಿ ಶೀತ ಜತೆಗೇ ತಮ್ಮ ಅನುಕೂಲಗಳಿಗೆ ಹೊರ ನಗರಕ್ಕೆ ಹೋಗುವುದಾದರೆ ಮೈಸೂರಿಗೆ ತೆರಳಬೇಕೆಂದರೂ 100 ಕಿಲೋಮೀಟರ್ ಅಥವಾ ಮಂಗಳೂರಿಗೆ ತೆರಳಬೇಕೆಂದರೂ 140 ಕಿಲೋಮೀಟರ್ ಪ್ರಯಾಣಿಸಬೇಕಿದೆ. ನಗರ ಪ್ರದೇಶಗಳಲ್ಲಿನ ಅನುಕೂಲ ಅನುಭವಿಸಿದ ಜನ ಜಿಲ್ಲೆಗೆ ಬರಲು ಹಿಂಜರಿಯುವುದು ಸಹಜವೇ ಆಗಿದೆ.
ಆದರೆ ಜಿಲ್ಲೆಯಲ್ಲೂ ತೆರಿಗೆ ಪಾವತಿಸುವ ಜನರಿದ್ದು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಹೊಣೆ ಸರ್ಕಾರದ್ದೇ ಆಗಿರುವುದರಿಂದ ಇತರ ಜಿಲ್ಲೆಗಳಲ್ಲಿರುವಂತೆ ಇಲ್ಲಿಯೂ ಎಲ್ಲಾ ಇಲಾಖೆಗಳೂ ಇವೆ. ಆದರೆ ಈ ಇಲಾಖೆಗಳಲ್ಲಿ ಜನರಿಗೆ ಸೇವೆ ಮತ್ತು ಸೌಲಭ್ಯ ಒದಗಿಸಿಕೊಡಲು ಅಗತ್ಯ ನೌಕರರೇ ಇಲ್ಲ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ.
ಜಿಲ್ಲೆಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಕೆಲವು ವರ್ಷಗಳಿಂದಲೇ ಖಾಲಿ ಬಿದ್ದಿವೆ ಎಂದರೆ ಇದರ ತೀವ್ರತೆ ನಿಮಗೆ ಅರಿವಾಗಬಹುದು. ಕೊಡಗು ಗ್ರಾಮೀಣ ಪ್ರದೇಶ ಆಗಿರುವುದರಿಂದ ಹಳ್ಳಿ ಹಳ್ಳಿಗೂ ಸರ್ಕಾರದ ಸವಲತ್ತು ತಲುಪಬೇಕಾದರೆ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ನೌಕರರೇ ಇಲ್ಲದಿದ್ದರೆ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಯೋಜನೆ ಯಶಸ್ವಿ ಆಗಲಾರದು ಅಲ್ಲವೇ ?.
ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಹುದ್ದೆ ಸೇರಿದಂತೆ ಒಟ್ಟು 91 ಹುದ್ದೆಗಳು ಮಂಜೂರಾಗಿದ್ದು ಇದರಲ್ಲಿ ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ ಕೇವಲ 22 ಆಗಿದ್ದು ಉಳಿದ 69 ಹುದ್ದೆಗಳು ಕೆಲ ವರ್ಷಗಳಿಂದ ಖಾಲಿಯೇ ಇದೆ. ಈ ಖಾಲಿ ಹುದ್ದೆಗಳಲ್ಲಿ ಉಪ ಕಾರ್ಯದರ್ಶಿ , ಮುಖ್ಯ ಲೆಕ್ಕಾಧಿಕಾರಿ , ಯೋಜನಾಧಿಕಾರಿ ಹಾಗೂ ಇನ್ನಿತರ ಹುದ್ದೆಗಳಿವೆ. ಜಿಲ್ಲೆಯ ಎಲ್ಲಾ ತಾಲ್ಲುಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳ ಸಂಪೂರ್ಣ ನಿಯಂತ್ರಣ ಜಿಲ್ಲಾ ಪಂಚಾಯತ್ಗೆ ಇದ್ದು ಇಲ್ಲಿಯೇ ಸೂಕ್ತ ಸಿಬ್ಬಂದಿ ಇಲ್ಲದಿರುವುದರಿಂದ ಗ್ರಾಮೀಣ ಅಭಿವೃದ್ದಿಗೇ ತೊಡಕಾಗಿದೆ.
ಇಲ್ಲಿ ಇರುವ ಸೋಮವಾರಪೇಟೆ, ಮಡಿಕೇರಿ ಮತ್ತು ವೀರಾಜಪೇಟೆ ತಾಲ್ಲೂಕು ಪಂಚಾಯ್ತಿ ಕಚೇರಿಗಳಲ್ಲಿ ಒಟ್ಟು ಮಂಜೂರಾಗಿರುವ ಹುದ್ದೆಗಳ ಸಂಖ್ಯೆ 66 ಅಗಿದ್ದು ಇದರಲ್ಲಿ ಮೂರೂ ಪಂಚಾಯ್ತಿಗಳಲ್ಲಿ ಈಗ ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ ಕೇವಲ 20. ಉಳಿದ 46 ಹುದ್ದೆಗಳು ವರ್ಷಗಳಿಂದ ಖಾಲಿ ಬಿದ್ದಿವೆ.
ಇನ್ನು ಗ್ರಾಮ ಪಂಚಾಯತ್ ಗಳ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಒಟ್ಟು 104 ಗ್ರಾಮ ಪಂಚಾಯತ್ ಗಳಲ್ಲಿ 65 ಪಂಚಯತ್ ಅಭಿವೃದ್ದಿ ಅಧಿಕಾರಿಗಳ ಹುದ್ದೆಗಳು ಭರ್ತಿ ಆಗಿದ್ದು ಉಳಿದ 36 ಹುದ್ದೆಗಳು ಕೆಲ ವರ್ಷಗಳಿಂದ ಖಾಲಿ ಬಿದ್ದಿವೆ. ಒಬ್ಬೊಬ್ಬ ಅಧಿಕಾರಿಗೂ ಎರಡೆರಡು ಗ್ರಾಮ ಪಂಚಾಯ್ತಿಗಳ ಹೊಣೆ ನೀಡಲಾಗಿದೆ. ಇನ್ನು ಗ್ರಾಮ ಪಂಚಾಯ್ತಿಗಳಲ್ಲಿ ಗ್ರೇಡ್ 1 ಮತ್ತು ಗ್ರೇಡ್ 2 ಕಾರ್ಯದರ್ಶಿಗಳ ಹುದ್ದೆಗಳೂ ಸೇರಿದಂತೆ 68 ಹುದ್ದೆಗಳು ಖಾಲಿಯೇ ಇವೆ. ಹೀಗಾಗಿ ಜನರಿಗೆ ತಮ್ಮ ಮನೆ ಕಟ್ಟಲು, ಸರ್ಕಾರದ ವಸತಿ ಸೌಲಭ್ಯ ಪಡೆದುಕೊಳ್ಳಲು ತೊಡಕಾಗಿದೆ.
ಇಷ್ಟೇ ಅಲ್ಲದೆ ಕೊಡಗಿನಲ್ಲಿ ಕೃಷಿ ಇಲಾಖೆಯಲ್ಲಿಯೂ ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯೇ ಇವೆ. ಒಟ್ಟು ಜಿಲ್ಲೆಯ 144 ಹುದ್ದೆಗಳಲ್ಲಿ ಕೇವಲ 48 ಮಾತ್ರ ಭರ್ತಿ ಆಗಿದ್ದು 30 ಕೃಷಿ ಅಧಿಕಾರಿಗಳ ಹುದ್ದೆಗಳಲ್ಲಿ 23 ಖಾಲಿ ಇವೆ.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯದ್ದು ತೀರಾ ದಯನೀಯ ಪರಿಸ್ಥಿತಿ. ಈ ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಉಪನಿರ್ದೇಶಕರ ಹುದ್ದೆ ಖಾಲಿ ಬಿದ್ದೇ ಅನೇಕ ವರ್ಷಗಳಾಗಿವೆ. ಹೋಗಲಿ ಇಲಾಖೆಯ ತಾಲ್ಲೂಕಿನ ಶಿಶು ಅಭಿವೃದ್ದಿ ಅಧಿಕಾರಿಗಳಾದರೂ ಇದ್ದಾರಾ ಎಂದು ನೋಡಿದರೆ ಇಲ್ಲಿನ ಮೂರೂ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಹುದ್ದೆ ಖಾಲಿ ಬಿದ್ದೇ ವರ್ಷಗಳು ಉರುಳಿವೆ. ಅಧಿಕಾರಿ ಮಟ್ಟದ ಎಲ್ಲ ಹುದ್ದೆಗಳನ್ನೂ ಇನ್ ಚಾರ್ಜ್ ಗಳೇ ನಿಭಾಯಿಸುತಿದ್ದಾರೆ. ಇಲಾಖೆಯ ಒಟ್ಟು 28 ಮೇಲ್ವಿಚಾರಕ ಹುದ್ದೆಗಳಲ್ಲಿ ಕೇವಲ 4 ಹುದ್ದೆಗಳಲ್ಲಿ ಮಾತ್ರ ಭರ್ತಿ ಆಗಿವೆ. ಜಿಲ್ಲೆಯಲ್ಲಿ ಒಟ್ಟು 87 ಅಂಗನವಾಡಿ ಕೇಂದ್ರಗಳಿದ್ದು ಇವುಗಳಲ್ಲಿ 59 ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇದೆ. ಅಂಗನವಾಡಿ ಯ ಸಹಾಯಕಿಯರ ಹುದ್ದೆಗಳಲ್ಲಿ 50 ಕ್ಕಿಂತ ಹೆಚ್ಚು ಖಾಲಿ ಇವೆ.
ಈ ಹುದ್ದೆಗಳ ಖಾಲಿ ಇರುವ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಿಯ ಅವರನ್ನು ಮಾತಾಡಿಸಿದಾಗ ಈ ಹುದ್ದೆಗಳು ಕೆಲ ವರ್ಷಗಳಿಂದಲೇ ಖಾಲಿ ಇದ್ದು ಹುದ್ದೆಗಳ ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದಾರೆ ಇಬ್ಬರು ವಿಧಾನ ಪರಿಷತ್ ಸದಸ್ಯರೂ ಇದ್ದಾರೆ. ಖಾಲಿ ಇರುವ ಹುದ್ದೆಗಳ ಕುರಿತು ಯಾರೂ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರ ಯಾವಾಗ ನೇಮಕಾತಿ ಮಾಡುತ್ತದೆ ಎಂದು ಜನತೆ ಕಾತರದಿಂದ ಕಾಯುತ್ತಿದ್ದಾರೆ.