ಅಂದು ಡಿಸೆಂಬರ್ 19, ಪೌರತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯಿತು. ಪೊಲೀಸ್ ಕಾರ್ಯಾಚರಣೆಯೂ ಶುರುವಾಯಿತು. ಅಂದು ಮಂಗಳೂರಿಗೆ ಯಾರ್ಯಾರು ಬಂದಿದ್ದರೋ ಎಲ್ಲರನ್ನು ವಿಚಾರಕ್ಕೆ ಪಡಿಸಲಾಯಿತು.
ಅಂದು ಹಲವರಿಗೆ ನೊಟೀಸ್ ಕಳುಹಿಸಲಾಯಿತು. ಅದರಲ್ಲಿ ಕೇರಳದ ಬೀಡಿ ಕಟ್ಟುವ ಮಹಿಳೆಯೋರ್ವಳಿಗೂ ನೊಟೀಸ್ ತಲುಪಿತು. ಆ ಮಹಿಳೆ ಯಾವುದೋ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಹೋಗಿದ್ದಳು. ಅದು ಅವಳ ವೈಯುಕ್ತಿಕ ಭೇಟಿಯೂ ಆಗಿತ್ತು.
ಅವಳ ಹೆಸರು ಶಫೀಯಾ, ಸುಮಾರು 55 ವಯಸ್ಸಿನ ಹಿರಿಯ ಮಹಿಳೆ. ಅವಳು ಇರುವುದು ಕೇರಳದ ಕಾಸರಗೋಡಿನ ಛತಿಪಡಪ್ಪು ಎಂಬ ಗ್ರಾಮದವರು. ಶಫಿಯಾ ಆ ಗ್ರಾಮದಲ್ಲಿ ಬಿಡಿ ಕಟ್ಟುವ ಕೆಲಸ ಮಾಡುತ್ತಾರೆ. ಆ ನೊಟೀಸ್ ಮೊದಲು ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ. ಅದೂ ಇಂಗ್ಲಿಷ್ ನಲ್ಲಿ ಕಳುಹಿಸಲಾಗಿತ್ತು. ಮೊದಲು ಶಫಿಯಾ ಗಾಭರಿಯಾದರು, ಯಾರೋ ಸಂಬಂಧಿಕರಿಗೆ ಏನೊ ತೊಂದರೆಯಾಗಿದೆಯಾ, ಕೇರಳದಲ್ಲಿರುವ ಇವರಿಗೆ ಮಂಗಳೂರಿನಿಂದ ಏಕೆ ಪತ್ರ ಬಂತು. ಅದರಲ್ಲೂ ಪೊಲೀಸ ಇಲಾಖೆಯ ಚಿಹ್ನೆ ಬೇರೆ. ತಕ್ಷಣ ಶಫಿಯಾ ತಮ್ಮ ಗ್ರಾಮದಲ್ಲಿ ಇಂಗ್ಲಿಷ ಬಲ್ಲವರ ಕಡೆಗೆ ತೆಗೆದುಕೊಂಡು ಹೋಗಿ ಆ ಪತ್ರವನ್ನು ತೋರಿಸಿದರು. ಆ ಗ್ರಾಮದವರು ಗಾಬರಿ ವ್ಯಕ್ತಪಡಿಸಿದರು. ಮಂಗಳೂರು ಎಲ್ಲಿ, ಕೇರಳದ ಈ ಗ್ರಾಮ ಎಲ್ಲಿ!!, ಬೀಡಿ ಕಟ್ಟಿಕೊಂಡು ಜೀವನದ ಬಂಡಿ ಸಾಗುತ್ತಿದ್ದ ಕಾರ್ಮಿಕ ಮಹಿಳೆಗೆ ಈ ನೊಟೀಸ್!! ಅಂತ ಇವರನ್ನು ಗ್ರಾಮದವರು ಕೇಳಿದಾಗ, ಶಫಿಯಾ, ಹೌದು ನಾನು ವೈಯುಕ್ತಿಕ ಕೆಲಸದ ಮೇಲೆ ಸಂಬಂಧಿಕರ ಕಡೆಗೆ ಹೋಗಿದ್ದೆ ಎಂಬುದನ್ನು ತಿಳಿಸಿದರು. ನಂತರ ಆ ಗ್ರಾಮದವರು ಇದು ಮಂಗಳೂರಿನಲ್ಲಿ ಆದ ಗಲಭೆಗೆ ಸಂಬಂಧಿಸಿದ್ದು ಎಂದಾಗ ಶಫಿಯಾ ಭಯಬೀತರಾದರು. ಆದರೂ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು ಶಫಿಯಾ.
ಆ ನೊಟೀಸ್ ನಲ್ಲಿ ಏನಿತ್ತು?
ಪೊಲೀಸ್ ಇಲಾಖೆಯಿಂದ ಬಂದ ನೊಟೀಸ್ ನಲ್ಲಿ, “ನಮ್ಮ ತನಿಖೆಯ ಪ್ರಕಾರ, ಮಂಗಳೂರಿನಲ್ಲಿ ನಡೆದ ಗಲಭೆಯ ಮೂಲಗಳಿಂದ ಹಾಗೂ ತನಿಖಾ ತಂಡದಿಂದ ತಿಳಿದು ಬಂದಿದ್ದು ಏನೆಂದರೆ ಗಲಭೆ ಸಮಯದಲ್ಲಿ ತಾವು (ಶಫಿಯಾ) ಅಲ್ಲಿದ್ದದ್ದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಅಂದು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಕೊಟ್ಟ ಎಚ್ಚರಿಕೆ ಮೇಲೂ ತಾವು ಆ ಗಲಭೆಯ ಹತ್ತಿರ ಇದ್ದಿರಿ. ಆ ಪ್ರಕಾರ ಭಾರತೀಯ ದಂಡ ಸಂಹಿತೆ 143, 147, 148, 188, 353, 332, 324, 427, 307, 120 ಬಿ ಹಾಗೂ ಸಿಆರ್ ಪಿಸಿ 174 ಪ್ರಕಾರ ಅದು ತಪ್ಪು. ಆದ ಕಾರಣ ತಾವು ಖುದ್ದು ವಿಚಾರಣೆಗೆ ಹಾಜರಾಗಿ ಮಂಗಳೂರಿಗೆ ಏಕೆ ಬಂದಿದ್ದು ಎಂದು ತಿಳಿಸಲು ಕೋರಲಾಗಿದೆ”.
ಮುಂದೆ?
ನೊಟೀಸ್ ನೋಡಿದ ಕೂಡಲೇ ಗ್ರಾಮದ ಹಿರಿಯರ ಸಲಹೆಯ ಪ್ರಕಾರ ಡಿವೈಎಫ್ ಆಯ್ ಅಧ್ಯಕ್ಷರನ್ನು ಶಫಿಯಾ ಭೇಟಿಯಾಗಿ ಎಲ್ಲವನ್ನೂ ವಿವರಿಸಿದರು. ಅಧ್ಯಕ್ಷ ಮುನೀರ್ ಕಟಿಪಲ್ಲಾ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಅವರು ಏಕೆ ಮತ್ತು ಯಾರನ್ನು ಕಾಣಲು ಬಂದಿದ್ದರೆಂಬುದು ವಿವರಿಸಿದರು. ನಂತರ ಪೊಲೀಸರು ಅವರನ್ನು ವಾಪಸ್ ಕಳುಹಿಸಿದರು.
ಆ ಘಟನೆ ನಂತರ ಇಂಥಹ ಹಲವಾರು ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೊಟೀಸ್ ಬಂದಿದ್ದು ಅವರೆಲ್ಲ ಈಗ ಮಂಗಳೂರಿಗೆ ಬರುವುದೇ ಬೇಡ ಎಂದು ನಿರ್ಧರಿಸಿದ್ದಾರಂತೆ.
ನಂತರ ಇಂತಹ ನೂರಾರು ನೊಟೀಸ್ ಗಳು ಹಲವರಿಗೆ ತಲುಪಿದರ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಪಿ. ಎಸ್. ಹರ್ಷ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ, “ಎಷ್ಟು ನೊಟೀಸ್ ಕಳುಹಿಸಿದ್ದೇವೆ ಹಾಗೂ ಯಾರ್ಯಾರಿಗೆ ಎಂಬುದು ತಿಳಿಸಲಾಗುವುದಿಲ್ಲ ಕಾರಣ ಪ್ರಕರಣ ಈಗ ಸಿಬಿಐ ಗೆ ಹಸ್ತಾಂತರಿಸಲಾಗಿದೆ. ಈ ಘಟನೆಯ ನಂತರ ಪೊಲೀಸರ ಮೇಲೆ ಹಲವು ಆರೋಪಗಳು ಕೇಳಿ ಬಂದವು. ಕೇರಳದ ಬೀಡಿ ಕಟ್ಟುವವರಷ್ಟೇ ಅಲ್ಲ, ಅಂದು ಬೇಟಿ ನೀಡಿದ್ದ ವ್ಯಾಪಾರಿಗಳು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ವಿಚಾರಿಸಿದ್ದೇವೆ. ಅಂದು ಆ ಸೂಕ್ಷ್ಮ ಜಾಗದಲ್ಲಿ ನೆರೆದಿದ್ದ ಎಲ್ಲಾ ಮೊಬೈಲ್ ನಂಬರಗಳನ್ನು ತೆಗೆದುಕೊಂಡು ಅವರಿಗೆಲ್ಲ ನೊಟಿಸ್ ಕೊಡಲಾಗಿತ್ತು”. ಎಂದವರು ತಿಳಿಸಿದರು.
ಇಲ್ಲಿ ಬೀಡಿ ಕಟ್ಟುವಂತಹ ಹಾಗೂ ದಿನಗೂಲಿ ಕೆಲಸ ಮಾಡುವವರು ಒಂದೆರಡು ದಿನ ಮಂಗಳೂರಿಗೆ ಬಂದು ಸಮಯ ಕಳೆಯುವುದು ಅಂದರೆ ಇತ್ತ ದುಡಿಮೆಯೂ ಇಲ್ಲ, ಖರ್ಚು ಬೇರೆ…ಇದರತ್ತ ಯಾರೂ ಗಮನಹರಿಸುವುದಿಲ್ಲ. ಅವರ ಕಷ್ಟ ಅವರಿಗೆ ಇವರ ಕಷ್ಟ ಇವರಿಗೆ. ಇತ್ತ ಪೊಲೀಸರಿಗೂ ಏನೆನ್ನುವಂತಿಲ್ಲ.