ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗಳು ಕಾವೇರತೊಡಗಿವೆ. ಪ್ರತಿಭಟನೆಗಳು ಇಡೀ ದೇಶವನ್ನೇ ವ್ಯಾಪಿಸಿಕೊಳ್ಳುತ್ತಿದ್ದು, ಕೆಲವೆಡೆ ಹಿಂಸಾಚಾರಗಳೂ ನಡೆಯುತ್ತಿವೆ. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ಹಠಮಾರಿ ಧೋರಣೆಯನ್ನು ಪ್ರದರ್ಶಿಸುತ್ತಾ ಕಾನೂನನ್ನು ಜಾರಿಗೆ ತಂದೇ ತರುವುದಾಗಿ ಘೋಷಣೆ ಮಾಡುವ ಮೂಲಕ ಪ್ರತಿಭಟನೆಯೆಂಬ ಗಾಯಕ್ಕೆ ಉಪ್ಪು ಸುರಿಯುವ ಕೆಲಸ ಮಾಡುತ್ತಿದೆ.
ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕಾನೂನಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೇಂದ್ರ ಸರ್ಕಾರ ಎಷ್ಟೇ ಒತ್ತಡ ಹೇರಿದರೂ ತಮ್ಮ ರಾಜ್ಯಗಳಲ್ಲಿ ಈ ವಿವಾದಾತ್ಮಕ ಕಾನೂನನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿವೆ.
ಈ ಮೂಲಕ ಕೇಂದ್ರ ಸರ್ಕಾರದೊಂದಿಗೆ ನೇರವಾಗಿ ಸಂಘರ್ಷಕ್ಕೆ ಇಳಿದಿವೆ. ಹೀಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳು ಕೇಂದ್ರ ಸರ್ಕಾರದ ಉದ್ದೇಶಿತ ಸಿಎಎ ವಿರುದ್ಧ ಸೆಟೆದೆದ್ದು ನಿಂತಿವೆ. ಇಷ್ಟೇ ಅಲ್ಲ, ರಾಜ್ಯ ಸರ್ಕಾರಗಳೇ ಮುಂದಾಳತ್ವ ವಹಿಸಿ ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸುತ್ತಿವೆ.
ಮುಸ್ಲಿಂರನ್ನು ಕಡೆಗಣಿಸುವುದು ಮತ್ತು ಅವರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುವ ರೀತಿಯಲ್ಲಿರುವ ಹಾಗೂ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ಆಳುವ ನೀತಿಯು ಈ ಕಾನೂನಿನಲ್ಲಿ ಅಡಗಿದೆ ಎಂದು ಆರೋಪಿಸಿ ಈ ರಾಜ್ಯಗಳು ಮುಸ್ಲಿಂ ಬಾಂಧವರ ಪರ ನಿಂತಿವೆ.
ಕೇರಳದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳಾದ ಎಲ್ ಡಿಎಫ್ ಮತ್ತು ಯುಡಿಎಫ್ ಗಳೆರಡೂ ಜಂಟಿಯಾಗಿ ಸಿಎಎ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವ ಮೂಲಕ ಎರಡೂ ಕೂಟಗಳು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸುತ್ತಾ ಬರುತ್ತಿವೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೇರಳ ಸರ್ಕಾರ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರವನ್ನು ಕಟಕಟೆಗೇರಿಸುತ್ತಿದೆ. ಈ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಕೇರಳ ಸರ್ಕಾರ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದೆ.
ಈ ವಿವಾದಿತ ಸಿಎಎ ವಿರುದ್ಧ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲೆಂದೇ ಈ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಮುಸ್ಲಿಂರನ್ನು ತುಚ್ಛವಾಗಿ ಕಾಣುವ ಉದ್ದೇಶದಿಂದಲೇ ತರುತ್ತಿರುವ ಕಾನೂನು ಎಂಬ ಅನುಮಾನ ಎಲ್ಲರಲ್ಲೂ ಮನೆ ಮಾಡಿದೆ.
ಈ ಕಾರಣದಿಂದಲೇ ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಹಿಂದೂ ಧರ್ಮದ ಮತಗಳನ್ನು ಕ್ರೋಢೀಕರಿಸಲೆಂದು ಕಾನೂನನ್ನು ತಿದ್ದುಪಡಿ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಆದರೆ, ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವ ಕೇರಳ ಸರ್ಕಾರ, ಸಂವಿಧಾನದ 131 ನೇ ಪರಿಚ್ಛೇದದಡಿ ಕೇಂದ್ರ ಸರ್ಕಾರದ ಈ ನಿರ್ಧಾರ ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದೆ. ಅಲ್ಲದೇ, ಸಂವಿಧಾನದ 14, 21 ಮತ್ತು 25 ನೇ ವಿಧಿಯನ್ನು ಈ ಕಾನೂನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಇದೇ ವೇಳೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2015 ಕ್ಕಿಂತ ಮುನ್ನ ಭಾರತಕ್ಕೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದಾಗಿ ಸರ್ಕಾರ ಹೇಳಿದೆ. ಆದರೆ, ಪಾಸ್ ಪೋರ್ಟ್(ಭಾರತ ಪ್ರವೇಶಕ್ಕೆ) ತಿದ್ದುಪಡಿ ಕಾನೂನು 2015 ಮತ್ತು ಫಾರಿನರ್ಸ್ (ಅಮೆಂಡ್ಮೆಂಟ್) ಆರ್ಡರ್ ಗಳ ಸಿಂಧುತ್ವದ ಪ್ರಶ್ನೆ ಎದುರಾಗುತ್ತದೆ. ಈ ಎರಡೂ ಕಾನೂನುಗಳನ್ನು ಇಂತಹ ಅಕ್ರಮ ನಿವಾಸಿಗಳಿಗೆ ಪೌರತ್ವ ನೀಡಲು ಬಳಸಿಕೊಳ್ಳುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಕೇರಳ ಸರ್ಕಾರ ತನ್ನ ಅರ್ಜಿಯಲ್ಲಿ ಆರೋಪಿಸಿದೆ.

ಸಂವಿಧಾನದ 14, 21 ಮತ್ತು 25 ನೇ ವಿಧಿಗಳ ಪ್ರಕಾರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಕೇರಳ ಸರ್ಕಾರ ಈ ಮೂಲಕ ಕೇಂದ್ರ ಸರ್ಕಾರ ಸಕಾರಣವಿಲ್ಲದ ಅವಿವೇಕದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಸಿಎಎ ವಿರುದ್ಧ ಈಗಾಗಲೇ ಹಲವಾರು ಸಂಘಸಂಸ್ಥೆಗಳು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿವೆ. ಇದೀಗ ಕೇರಳ ಸರ್ಕಾರ ದಾವೆ ಹೂಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟಿಗೆ ಹೋದ ಮೊದಲ ರಾಜ್ಯವೆನಿಸಿದೆ.
ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕೇಂದ್ರ ಸರ್ಕಾರದ ಈ ನಿಲುವು ಜಾತ್ಯತೀತ ಪರಿಕಲ್ಪನೆಯಿರುವ ಭಾರತದ ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಿದೆ ಎಂದು ಕೇರಳ ಸರ್ಕಾರ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.