ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾದ ಕಾರಣ ಮುಂಬರುವ ರಾಜ್ಯ ಬಜೆಟ್‌ಗೆ ಹಣದ ಕೊರತೆಯಾಗುವ ಸಾಧ್ಯತೆ ಇರುವುದರೊಂದಿಗೆ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಇಳಿಕೆಯಾದ ಕಾರಣ, ವಿಶ್ವ ಬ್ಯಾಂಕ್ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಹಾಗೂ ದೇಶೀ ಸಂಸ್ಥೆಗಳಾದ NABARD ಹಾಗೂ ಇತರ ಮಾರುಕಟ್ಟೆ ಮೂಲಗಳಿಂದ ನಿಧಿ ಕ್ರೋಢಿಕರಿಸುವ ಸಾಧ್ಯತೆಗಳು ಇವೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಒದಗಿಸುವುದು, ಕೃಷಿ ಸಾಲ ಮನ್ನಾ, ನೀರಾವರಿ ಹಾಗೂ ಮೂಲ ಸೌಕರ್ಯ ಯೋಜನೆಗಳ ಸಂಬಂಧ ಮಹತ್ವದ ಯೋಜನೆಗಳನ್ನು ಮಾರ್ಚ್ 5ರ ಬಜೆಟ್ ಸಂದರ್ಭ ಘೋಷಣೆ ಮಾಡುವ ಸಾಧ್ಯತೆಗಳು ಇವೆ.
2019-20ರ ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಸಿಗಲಿರುವ ಹಣದ ಮೊತ್ತದಲ್ಲಿ 20,000 ಕೋಟಿಯಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಆರ್ಥಿಕ ಪ್ರಗತಿಯಲ್ಲಿ ನಿಧಾನಗತಿ ಮತ್ತು ಕೇಂದ್ರ ಹಾಗೂ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿರುವ ಕಾರಣ ಯೋಜನೆಗಳು ಹಾಗೂ ಯೋಜನೆಗಳಿಗೆ ಅನುದಾನ ನೀಡಲು ರಾಜ್ಯದ ಬೊಕ್ಕಸದಲ್ಲಿ ಹಣದ ಕೊರತೆ ಇದೆ ಎನ್ನಲಾಗುತ್ತಿದೆ.

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ ಮೌಲ್ಯದ(GSDP) 3%ನಷ್ಟನ್ನು (54,000 ಕೋಟಿ ರೂಗಳು) ರಾಜ್ಯ ಸರ್ಕಾರ ಸಾಲದ ರೂಪದಲ್ಲಿ ಪಡೆಯಬಹುದು ಎಂದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ ತಿಳಿಸುತ್ತದೆ. 2019-20ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು GSDPಯ 2.6%ರಷ್ಟು ಮೊತ್ತವನ್ನು ಸಾಲ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದೇ ಈ 3% ಮಿತಿಯನ್ನು ರಾಜ್ಯ ಸರ್ಕಾರ ದಾಟಲು ಸಾಧ್ಯವಿಲ್ಲ.
ಪ್ರಸಕ್ತ ವಿತ್ತೀಯ ವರ್ಷದ ಬಜೆಟ್‌ನಲ್ಲಿ ಹಣಕಾಸು ಕೊರತೆಯನ್ನು ನೀಗಿಸಲು 46,127 ಕೋಟಿ ರೂಗಳನ್ನು ಮಾರುಕಟ್ಟೆಗಳಿಂದ ಸಾಲ ಪಡೆಯಬೇಕಾಗಿತ್ತು. ಸುಜಲ ನೀರಾವರಿ ಯೋಜನೆಗೆ ವಿಶ್ವ ಬ್ಯಾಂಕ್ ಹಾಗೂ ಮೂಲಸೌಕರ್ಯ ಮತ್ತು ನೀರಾವರಿ ಅಭಿವೃದ್ಧಿಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕಾದ ಸಂದರ್ಭ ಬರುವುದಲ್ಲದೇ, NABARDನಿಂದ 1,100 ಕೋಟಿ ರೂಗಳ ನೆರವು ಪಡೆಯಬೇಕಾಗಬಹುದು ಎಂದು ಮೂಲಗಳು ತಿಳಿಸುತ್ತಿವೆ.
ಮುನಂಬರುವ ವಿತ್ತೀಯ ವರ್ಷಕ್ಕೆ (2020-21) ಕೇಂದ್ರದ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲನ್ನು 3.46%ಗೆ 15ನೇ ಹಣಕಾಸು ಆಯೋಗ ನಿಗದಿಪಡಿಸಿದ್ದು, ಇದು 14ನೇ ಹಣಕಾಸು ಆಯೋಗ ನಿಗದಿ ಮಾಡಿದ್ದ 4.71%ಗಿಂತಲೂ 1.07% ಕಡಿಮೆಯಾಗಿದೆ. ಇದರೊಂದಿಗೆ GST ಹಾಗೂ ರಾಜ್ಯದ ಆದಾಯ ಮೂಲಗಳಿಗೆ ಹಿನ್ನಡೆಯಾಗಿರುವ ಕಾರಣ ಸಂಪನ್ಮೂಲ ಕ್ರೋಢೀಕರಣದ ಮೇಲೆ ಪರಿಣಾಮವಾಗಿದ್ದು, ಅನ್ನ ಭಾಗ್ಯ & ಇಂದಿರಾ ಕ್ಯಾಂಟೀನ್‌ಗಳಂಥ ಜನಪ್ರಿಯ/ಸಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಹೊಂದಿಸುವುದು ಕಷ್ಟವಾಗಲಿದೆ.

2020-21ರ ವಿತ್ತೀಯ ವರ್ಷದ ಬಜೆಟ್‌ಅನ್ನು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಮಂಡನೆ ಮಾಡಲಿದ್ದು, ದೇಶೀ ಹಾಗೂ ಜಾಗತಿಕ ಸಂಸ್ಥೆಗಳಿಂದ ಸಂಪನ್ಮೂಲ ಕ್ರೋಢೀಕರಣದ ವಿವರಗಳನ್ನು ನೀಡುವ ನಿರೀಕ್ಷೆಯಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ. ಕಳೆದ ವರ್ಷದ ಬಜೆಟ್ ಗಾತ್ರವಾದ 2,34,153 ಕೋಟಿಗಿಂತ ಈ ಬಾರಿಯ ಬಜೆಟ್ ಗಾತ್ರದಲ್ಲಿ ಯಾವುದೇ ಇಳಿಕೆ ಮಾಡದಿರಲು ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.
GST ಸಂಗ್ರಹದಲ್ಲಿ ರಾಜ್ಯದ ಪಾಲೆಂದು ಕೇಂದ್ರ ಸರ್ಕಾರ 17,000 ಕೋಟಿ ರೂಗಳಷ್ಟನ್ನು ಬಿಡುಗಡೆ ಮಾಡಬೇಕಿದೆ. ಆದರೆ ಇದುವರೆಗೂ ಕೇವಲ 11,000 ಕೋಟಿ ರೂಗಳನ್ನು ಮಾತ್ರವೇ ರಾಜ್ಯ ಸರ್ಕಾರ ಪಡೆದುಕೊಂಡಿದೆ. ವಿಶೇಷ ಅನುದಾನದ ರೂಪದಲ್ಲಿ 15,000 ಕೋಟಿ ರೂಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ಕೊಟ್ಟಿದ್ದರೂ ಸಹ ಇದುವರೆಗೂ ಈ ಮೊತ್ತದ 50%ರಷ್ಟನ್ನು ಮಾತ್ರವೇ ಬಿಡುಗಡೆ ಮಾಡಿದೆ.
ಪ್ರಸಕ್ತ ವಿತ್ತೀಯ ವರ್ಷದ (2019-20) ಮೊದಲ ಮೂರು ತ್ರೈಮಾಸಿಕಗಳಲ್ಲಿ ರಾಜ್ಯ ಸರ್ಕಾರದ ಆದಾರ ಮೂಲದ ಸಾಮರ್ಥ್ಯದ 73.6%ನಷ್ಟು ಮಾತ್ರವೇ ತೆರಿಗೆ ಸಂಗ್ರಹಣೆಯಾಗಿದೆ. ಡಿಸೆಂಬರ್ 31, 2019ರ ವೇಳಗೆ ರಾಜ್ಯದ ಆದಾಯ ಸಂಗ್ರಹವು 87,862 ಕೋಟಿ ರೂಗಳಷ್ಟಿದೆ. ಇದೇ ಅವಧಿಯಲ್ಲಿ 1,19,274 ಕೋಟಿ ರೂಗಳ ಆದಾಯ ಸಂಗ್ರಹಣೆಯ ಗುರಿ ಇಟ್ಟುಕೊಳ್ಳಲಾಗಿತ್ತು.
ಈ ಗುರಿಯನ್ನು ಸಾಧ್ಯವಾಗಿಸಲು ಸ್ಟಾಂಪ್‌ಗಳು ಹಾಗೂ ನೋಂದಣಿ ಇಲಾಖೆಯು ರಾಜ್ಯದಲ್ಲಿರುವ ಎಲ್ಲಾ ಉಪನೋಂದಣಾಧಿಕಾರಿ ಕಾರ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿದ್ದು, ಪ್ರಸಕ್ತ ವಿತ್ತೀಯ ವರ್ಷದ ಅಂತ್ಯದವರೆಗೂ (ಮಾರ್ಚ್ 31) ಎಲ್ಲಾ ಕಾರ್ಯಾಲಯಗಳನ್ನೂ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6:30ರವರೆಗೂ ತೆರೆದಿರಲು ಸೂಚಿಸಿದೆ.