ಬೆಂಗಳೂರಿನ ಬೆಳ್ಳಂದೂರು, ಅಗರ, ವರ್ತೂರು ಮತ್ತಿತರ ಕೆರೆ ಮಾಲಿನ್ಯ ನಿಯಂತ್ರಣ ಮತ್ತು ಅತಿಕ್ರಮಣ ತಡೆಯುವಲ್ಲಿ ವಿಫಲರಾಗಿ, ತಮ್ಮ ಆದೇಶಗಳನ್ನು ಅನುಷ್ಠಾನ ಮಾಡದಿರುವ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ಪೀಠ ಬಿಸಿ ಮುಟ್ಟಿಸಿದೆ.
ರಾಜ್ಯ ಸರಕಾರ ಮತ್ತು ಅದರ ಪ್ರಾಧಿಕಾರಗಳು ಪರಿಸರ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ನಿರಂತರವಾಗಿ ಹಸೀರು ಪೀಠದ ಆದೇಶಗಳನ್ನು ಧಿಕ್ಕರಿಸುತ್ತಿರುವುದನ್ನು ಮನಗಂಡು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮತ್ತು ಬಿಡಿಎ ಆಯುಕ್ತರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸದಸ್ಯ ಕಾರ್ಯದರ್ಶಿ ಹಸಿರು ಪೀಠದ ಮುಂದಿನ ವಿಚಾರಣೆ ವೇಳೆ ಪಾಲನಾ ವರದಿಯೊಂದಿಗೆ ಖುದ್ದು ಹಾಜರಿರಬೇಕು ಎಂದು ಆದೇಶ ನೀಡಿದೆ. ನ್ಯಾಯಪೀಠದ ಆದೇಶಗಳ ಉಲ್ಲಂಘನೆಗಾಗಿ ಯಾಕೆ ಸಿವಿಲ್ ಜೈಲು ಸೇರಿದಂತೆ ಬಲವಂತದ ಕ್ರಮವನ್ನು ಆದೇಶಿಸಬಾರದು ಎಂದು ಹಸಿರು ಪೀಠ ತನ್ನ 2019 ಅಕ್ಟೋಬರ್ 21ರಂದು ನೀಡಿದ ತೀರ್ಪಿನಲ್ಲಿ ಎಚ್ಚರಿಕೆ ನೀಡಿದೆ.
ಈ ಹಿರಿಯ ಅಧಿಕಾರಿಗಳು 2018 ಡಿಸೆಂಬರ್ 6ರಂದು ಬೆಂಗಳೂರಿನ ಕೆರೆಗಳ ಸಂರಕ್ಷಣೆ ಕುರಿತಾಗಿ ನೀಡಿದ ಆದೇಶಗಳನ್ನು ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಪೀಠವು ಅತ್ಯಂತ ಗಂಭೀರ ಪರಿಸರ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪನ್ನು ರಾಜ್ಯ ಸರಕಾರವು ಅತ್ಯಂತ ಲಘುವಾಗಿ ಪರಿಗಣಿಸಿರುವುದು ದೇಶದ ಕಾನೂನಿನಡಿ ಸರಿಯಾದ ಕ್ರಮವಲ್ಲ ಎಂದು ಹಸಿರು ಪೀಠ ಹೇಳಿದೆ. “This is nothing short of a state of environmental emergency’’ ಎಂದಿರುವ ತೀರ್ಪು 183 ಎಂ ಎಲ್ ಡಿ ಕಲುಷಿತ ನೀರು ಕೆರೆಗಳಿಗೆ ಹರಿಯುವುದನ್ನು ನಿಯಂತ್ರಿಸಲು ಯುದ್ಧೋಪಾದಿಯಲ್ಲಿ ಕೊಳಚೆ ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸಬೇಕಾಗಿದೆ ಎಂದಿದೆ.
ಬೆಂಗಳೂರಿನ ಬೆಳ್ಳಂದೂರು ಕೆರೆ, ವರ್ತೂರು ಕೆರೆ, ಅಗರ ಕೆರೆಗಳು ಕಲುಷಿತವಾಗಿದ್ದು, ಬೆಂಗಳೂರು ಮಹಾನಗರದ ವಾಣಿಜ್ಯ, ವಾಸದ ಮತ್ತು ಕೈಗಾರಿಕಾ ಸಮುಚ್ಛಯಗಳಿಂದ ಸಂಸ್ಕರಣೆ ನಡೆಸದ ಕೊಳಚೆ ನೀರನ್ನು ನೇರವಾಗಿ ಕೆರೆಗಳಿಗೆ ಹರಿಯ ಬಿಡುವುದರ ವಿರುದ್ಧ ಕಳೆದ ಹಲವು ವರ್ಷಗಳಿಂದ ಹಸಿರು ಪೀಠ ನೂರಾರು ಕೋಟಿ ರೂಪಾಯಿ ದಂಡ ಸಹಿತ ವಾಗ್ದಂಡನೆ ನೀಡುತ್ತಾ ಬಂದಿದೆ. ಆದರೆ, ದಪ್ಪ ಚರ್ಮದ ಅಧಿಕಾರಿಗಳು ಮಾತ್ರ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ.
ಕೆರೆಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಬಿಬಿಎಂಪಿಗೆ 25 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರಕ್ಕೆ 100 ಕೋಟಿ ರೂಪಾಯಿ ದಂಡ ವಿಧಿಸಿ ಕಳೆದ ಬಾರಿ ತೀರ್ಪು ನೀಡಿತ್ತು. ರಾಜ್ಯ ಸರ್ಕಾರ, ಬಿಬಿಎಂಪಿ ಮುಂತಾದ ನರಗಾಭಿವೃದ್ಧಿ ಏಜೆನ್ಸಿಗಳು ನಿರ್ಲಕ್ಷ್ಯ ವಹಿಸಿವೆ. ರಾಜಕಾಲುವೆ ಅತಿಕ್ರಮಣವನ್ನು ತಡೆಯುವಲ್ಲಿ ವಿಫಲವಾಗಿವೆ. ಜಲಮಾಲಿನ್ಯ ಅಕ್ಷಮ್ಯ ಅಪರಾಧ ಎಂದು ಕಳವಳ ವ್ಯಕ್ತಪಡಿಸಲಾಗಿತ್ತು. ಆದರೆ, ಪಾಲನಾ ವರದಿ ಪ್ರಕಾರ ಇವೆರಡು ದಂಡದ ಮೊತ್ತಗಳನ್ನು ಪಾವತಿಸಲಾಗಿಲ್ಲ.
ಬೆಂಗಳೂರಿನ ಬೆಳ್ಳಂದೂರು ಕೆರೆ, ವರ್ತೂರು ಕೆರೆ, ಅಗರ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಉನ್ನತ ಸಮಿತಿ ನೀಡಿರುವ ಶಿಫಾರಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆ ಉಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಕುರಿತ ವಿವರಗಳನ್ನು ನೀಡಲು ವೆಬ್ ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿತ್ತು.
ನ್ಯಾ. ಆದರ್ಶ ಕುಮಾರ್ ಗೋಯಲ್ ಅಧ್ಯಕ್ಷತೆಯ ತ್ರಿಸದಸ್ಯ ನ್ಯಾಯಪೀಠಕ್ಕೆ ಸಹಾಯ ಮಾಡಲು ನ್ಯಾಯಾಲಯದ ಸ್ನೇಹಿತನಾಗಿ ನೇಮಕವಾಗಿದರುವ ರಾಜ್ ಪನ್ವಾನಿ ಅವರು ಪಾಲನಾ ವರದಿ ಮತ್ತು ಉಸ್ತುವಾರಿ ಸಮಿತಿ ನೀಡಿರುವ ವರದಿಯನ್ನು ಅಧ್ಯಯನ ಮಾಡಿ ಹಸಿರು ಪೀಠಕ್ಕೆ ವರದಿ ಸಲ್ಲಿಸಿದ್ದರು.
ರಾಜ್ಯ ಸರಕಾರ, ನಗರಾಭಿವೃದ್ಧಿ ಇಲಾಖೆಯ ವಿವಿಧ ಏಜೆನ್ಸಿಗಳು ಮತ್ತು ಪರಿಸರ ನಿಯಂತ್ರಣ ಮಂಡಳಿ ನ್ಯಾಯಪೀಠದ ಆದೇಶಗಳನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದಿರುವ ಪೀಠವು ಹಿರಿಯ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿ, ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಇ-ಮೇಲ್ ಸಂದೇಶ ಕೂಡ ಕಳುಹಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆ ನವೆಂಬರ್ 27, 2019 ರಂದು ನಡೆಯಲಿದೆ.
ಬೆಂಗಳೂರು ನಗರದಲ್ಲಿ ಪ್ರಮುಖವಾಗಿ ಬೆಳ್ಳಂದೂರು ಕೆರೆ ಮತ್ತು ಕೆಸಿ ವ್ಯಾಲಿ ಪ್ರದೇಶಗಳಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ (STP) ಸ್ಥಾಪನೆ ಮಾಡುವಲ್ಲಿ ವಿಫಲ ಆಗಿರುವುದು ನ್ಯಾಯಪೀಠದ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ. ಬೆಳ್ಳಂದೂರು ಕೆರೆ ಪರಿಸರದಲ್ಲಿ 873 ಕಟ್ಟಡಗಳು ಅಥವಾ ಸಂಕೀರ್ಣಗಳಲ್ಲಿ STP ಸ್ಥಾಪನೆ ಆಗಬೇಕಾಗಿದ್ದು, ಅವುಗಳಲ್ಲಿ 496 STP ಹೊಂದಿತ್ತು. ಇನ್ನುಳಿದ 326 ಯೋಜನೆಗಳಲ್ಲಿ STP ಇರಲಿಲ್ಲ. ಈ 326ರಲ್ಲಿ 271 ಕೇಂದ್ರಗಳಿಂದ ಒಳಚರಂಡಿಗೆ ಕೊಳಚೆ ನೀರನ್ನು ಬಿಡಲಾಗುತಿತ್ತು. ಇನ್ನುಳಿದ 55 ಕಟ್ಟಡ ಸಂಕೀರ್ಣಗಳಲ್ಲಿ ಕೊಳಚೆ ನೀರು ಸಂಸ್ಕರಣ ಘಟಕಗಳು ಇಲ್ಲವೇ ಇಲ್ಲ.
ಬೆಳ್ಳಂದೂರು ಕೆರೆಗೆ 480 ಎಂ ಎಲ್ ಡಿ (ಮಿಲಿಯನ್ಸ್ ಲೀಟರ್ ಪರ್ ಡೇ) ಕಲುಷಿತ ನೀರು ಹರಿದು ಬರುತ್ತದೆ. ಅನಂತರ ವರ್ತೂರು ಕೆರೆ ಮೂಲಕ ಹರಿದು ಕಾವೇರಿ ನದಿಯ ಉಪ ನದಿಯಾದ ದಕ್ಷಿಣ ಪಿನಾಕಿನಿ ನದಿಗೆ ಸೇರುತ್ತದೆ. ಈ ಹಿನ್ನೆಲೆಯಲ್ಲಿ ಕೆರೆ ನೀರಿನ ಮಾಲಿನ್ಯ ನಿಯಂತ್ರಣ ಮಾತ್ರವಲ್ಲದೆ, ಕಲುಷಿತ ಪ್ರಮಾಣವನ್ನು ಕಡಿತ ಮಾಡುವ ಅಗತ್ಯವಿದೆ ಎಂದು ಅಧ್ಯಯನ ನಡೆಸಿದ ತಂಡ ಅಭಿಪ್ರಾಯಪಟ್ಟಿದೆ. ಸದ್ಯ ಬೆಳ್ಳಂದೂರು ಕೆರೆಯ ನೀರು ಸಂಗ್ರಹಣಾ ಪ್ರಮಾಣ ಶೇಕಡ 70ರಷ್ಟು ಕುಂಠಿತವಾಗಿದೆ.
ಸುಮಾರು 130 ವರ್ಷಗಳ ಹಿಂದೆ ಬೆಳ್ಳಂದೂರು ಕೆರೆಯು 9,000 ಎಕರೆ ವಿಸ್ತೀರ್ಣ ಹೊಂದಿತ್ತು ಎನ್ನುತ್ತದೆ ಸರಕಾರ ದಾಖಲೆಗಳು. ಬಹುತೇಕ ಪ್ರದೇಶಗಳನ್ನು ಸರಕಾರದ ಇಲಾಖೆಗಳು ಮತ್ತು ಖಾಸಗಿ ವ್ಯಕ್ತಿಗಳು ಅತಿಕ್ರಮಣ ನಡೆಸಿ ಕಟ್ಟಡಗಳನ್ನುನಿರ್ಮಾಣ ಮಾಡಿದ್ದಾರೆ. ಮಾತ್ರವಲ್ಲದೆ, ಕೆರೆಯತ್ತ ಮಳೆ ನೀರು ಹರಿಯುವ ರಾಜ ಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ.
ಕೆರೆಗಳಿಗೆ ಘನ ತ್ಯಾಜ್ಯಗಳನ್ನು ಸುರಿಯದಂತೆ ಸಿಸಿಟಿವಿ ಕ್ಯಾಮರಾ ಹಾಕಲು ಸೂಚನೆ ನೀಡಲಾಗಿತ್ತಾದರೂ ಯಾವುದೇ ಪ್ರಗತಿ ಆಗಿಲ್ಲ. ಕಾವಲು ಗೋಪುರ ಸಹಿತ ಕಾವಲುಗಾರರನ್ನು ನೇಮಿಸುವ ಕೆಲಸ ಕೂಡ ಮಾಡಲಾಗಿಲ್ಲ. ಕೆರೆ ದಂಡೆಯಲ್ಲಿ ವಾಸಿಸುವ ಕುಟುಂಗಳ ಸ್ಥಳಾಂತರ ಮಾಡದಿರುವುದು, ಕೆರೆಯ ಕಳೆಗಳ ತೆರವು ಮತ್ತು ಹೂಳೆತ್ತದೆ ಇರುವುದು, ಕೆರೆಯಲ್ಲಿ ಅಕ್ರಮವಾಗಿ ಕಟ್ಟಡದ ಡೆಬ್ರಿಗಳನ್ನು ಪೇರಿಸಿ ನಿರ್ಮಿಸಲಾದ ರಸ್ತೆಯನ್ನು ತೆರವು ಮಾಡದಿರುವುದು ಇತ್ಯಾದಿ ನ್ಯಾಯಪೀಠದ ಆಕ್ರೋಶಕ್ಕೆ ಕಾರಣವಾಗಿದೆ.
ವರ್ತೂರು ಕೆರೆ ಬೆಳ್ಳಂದೂರು ಕೆರೆಯ ಕೆಳಭಾಗದಲ್ಲಿದ್ದು, ಸುಮಾರು 96 ಕೆರೆಗಳೊಂದಿಗೆ ಸಂಪರ್ಕ ಹೊಂದಿದೆ. ಬೆಂಗಳೂರಿನ ಎರಡನೇ ದೊಡ್ಡ ಕೆರೆಯಾದ ಇದು 279 ಚದ ಕಿಲೋ ಮೀಟರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ವರ್ತೂರು ಕೆರೆಯಲ್ಲಿ ಕಟ್ಟಡದ ಡೆಬ್ರಿಗಳನ್ನು ಸುರಿದು ಒಂದು ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡಿರುವ ಅಧ್ಯಯನ ತಂಡಕ್ಕೆ ಅಚ್ಚರಿ ಉಂಟು ಮಾಡಿತ್ತು.
ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿವೆ ಎಂದು ನ್ಯಾಯಮೂರ್ತಿ ಗೋಯಲ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳ್ಳಂದೂರು ಕೆರೆಯಲ್ಲಿ ಮಳೆ ಸಂದರ್ಭದಲ್ಲಿ ರಾಸಾಯನಿಕಯುಕ್ತ ನೀರು ಮೇಲೆ ಉಕ್ಕಿಹರಿದು ನೊರೆ ರಸ್ತೆಯ ತನಕ ಹರಿಯುತ್ತಿರುವುದು, ಕೆಲವು ಬಾರಿ ಕೆರೆಯ ಮಧ್ಯೆಯೇ ಬೆಂಕಿಯೂ ಹೊತ್ತಿಕೊಂಡಿರುವುದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿ ಆಗಿರುವುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.