ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆ ಪಕ್ಕಾ. ಘೋಷಣೆಯೊಂದೇ ಬಾಕಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿ ಹಲವು ದಿನಗಳು ಕಳೆದರೂ ಅಧ್ಯಕ್ಷರ ಹೆಸರು ಪ್ರಕಟವಾಗುತ್ತಿಲ್ಲ. ಬದಲಾಗಿ ಅಧ್ಯಕ್ಷರ ಆಯ್ಕೆ ಗೊಂದಲ ದಿನಕ್ಕೊಂದು ಊಹಾಪೋಹಗಳನ್ನು ಸೃಷ್ಟಿ ಮಾಡುತ್ತಿದೆ. ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಭಿ ಆಜಾದ್ ಅವರು ಬೆಂಗಳೂರಿಗೆ ಬಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಇನ್ನೊಂದು ವಾರದೊಳಗೆ ಅಧ್ಯಕ್ಷರ ಆಯ್ಕೆ ಅಧಿಕೃತವಾಗುತ್ತದೆ ಎಂದು ಸ್ವತಃ ರಾಜ್ಯ ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ, ಮತ್ತೆ ಆ ಕುರಿತಂತೆ ಗೊಂದಲ ಎದುರಾಗಿದ್ದು, ಎಐಸಿಸಿಗೆ ನೂತನ ಅಧ್ಯಕ್ಷರ ಆಯ್ಕೆಯಾಗದೆ ಕೆಪಿಸಿಸಿ ಅಧ್ಯಕ್ಷರನ್ನು ಘೋಷಣೆ ಮಾಡುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಡಿ.ಕೆ.ಶಿವಕುಮಾರ್ ಬದಲು ಬೇರೆಯವರ ಹೆಸರು ಬರುತ್ತದೆ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಈ ಎಲ್ಲಾ ಗೊಂದಲಗಳಿಗೆ ಕಾರಣವೇನು ಎಂಬುದು ಇನ್ನೂ ರಾಜ್ಯ ಕಾಂಗ್ರೆಸ್ಸಿಗರಿಗೆ ಅರ್ಥವಾಗುತ್ತಿಲ್ಲ. ಜತೆಗೆ ಯಾಕಾಗಿ ಎಐಸಿಸಿ ಈ ವಿಚಾರದಲ್ಲಿ ವಿಳಂಬ ಮಾಡುತ್ತಿದೆ ಎಂಬುದೂ ಗೊತ್ತಾಗುತ್ತಿಲ್ಲ. ಇದರ ಪರಿಣಾಮ ಮುಂದಿನ ಏಪ್ರಿಲ್ ಅಂತ್ಯದವರೆಗೆ ಅಧ್ಯಕ್ಷ ಸ್ಥಾನಕ್ಕೆ ಕಳೆದ ನವೆಂಬರ್ ತಿಂಗಳಲ್ಲಿ ರಾಜೀನಾಮೆ ನೀಡಿದ ದಿನೇಶ್ ಗುಂಡೂರಾವ್ ಅವರೇ ಮುಂದುವರಿಯಲಿದ್ದಾರೆ. ಇದರ ಜತೆಗೆ ಗುಲಾಂ ನಭಿ ಆಜಾದ್ ಅವರು ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕಲ್ಲ, ಬದಲಾಗಿ ನಿಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪುತ್ತದೆ ಎಂದು ಹೇಳಿ ಅವರನ್ನು ಸಮಾಧಾನಪಡಿಸಲು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ರೀತಿಯ ಮಾತುಗಳು ಕೇಳಿಬರಲು ಕೇವಲ ಗೊಂದಲಗಳಷ್ಟೇ ಅಲ್ಲ, ಡಿ.ಕೆ.ಶಿವಕುಮಾರ್ ಅವರ ನಡವಳಿಕೆಯೂ ಕಾರಣವಾಗಿದೆ. ಏಕೆಂದರೆ, ಇನ್ನೇನು ಶಿವಕುಮಾರ್ ಹೆಸರು ಘೋಷಣೆಯಾಗುತ್ತದೆ ಎಂದು ಹೇಳಲಾಗುತ್ತಿತ್ತಾದರೂ ನಂತರದಲ್ಲಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ತೆರೆಮರೆಗೆ ಸರಿಯಿತು. ಅಂದಿನಿಂದ ಶಿವಕುಮಾರ್ ಅವರು ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದು ತತ್ವಜ್ಞಾನಿಯಂತೆ ಮಾತನಾಡಲಾರಂಭಿಸಿದರು. ರಾಜಕೀಯಕ್ಕಿಂತ ದೇವಸ್ಥಾನ ಸುತ್ತಾಟ, ವಿಶೇಷ ಪೂಜೆ, ಹರಕೆ ತೀರಿಕೆಯಲ್ಲೇ ಕಾಲ ಕಳೆದರು. ಪಕ್ಷದ ವರಿಷ್ಠರ ನಡವಳಿಕೆಗಳು ತಮಗೆ ಬೇಸರ ತರಿಸಿದೆ ಎಂಬುದನ್ನು ಪರೋಕ್ಷವಾಗಿ ಹೇಳಲಾರಂಭಿಸಿದರು.
ಪಕ್ಷ ನಿಷ್ಠೆಯೇ ಅವರಿಗೆ ಪಕ್ಷದಲ್ಲೂ ಮುಳುವಾಯಿತೇ?
ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಇಷ್ಟೊಂದು ಗೊಂದಲ, ತಿಕ್ಕಾಟ ಕಾಣಿಸಿಕೊಳ್ಳಲು ಪಕ್ಷ ನಿಷ್ಠೆಯೇ ಅವರಿಗೆ ಮುಳುವಾಯಿತೇ? ಅದೂ ಕೂಡ ಪಕ್ಷ ಮತ್ತು ನಾಯಕರ ಮೇಲಿನ ನಿಷ್ಠೆಯಿಂದಾಗಿ ತೆಗೆದುಕೊಂಡ ಕೆಲವು ನಿರ್ಧಾರಗಳು ಪಕ್ಷದೊಳಗೆ ಅವರಿಗೆ ವಿರೋಧಿಗಳನ್ನು ಸೃಷ್ಟಿ ಮಾಡಿದೆಯೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಏಕೆಂದರೆ, ಪಕ್ಷದ ಮೇಲಿನ ನಿಷ್ಠೆಯಿಂದಾಗಿ ಅವರು ಮಾಡಿದ ಕೆಲಸಗಳೇ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದವು. ಇದೀಗ ಈ ಆರೋಪಿ ಎಂಬ ಮಾತನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ಸಿನ ಒಂದು ಗುಂಪು ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ.
2017ರ ಜುಲೈ ತಿಂಗಳಲ್ಲಿ ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ಆಪರೇಷನ್ ಕಮಲದ ಭೀತಿಯಲ್ಲಿದ್ದ ಅಲ್ಲಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ಆಶ್ರಯ ಕೊಟ್ಟವರೇ ಡಿ.ಕೆ.ಶಿವಕುಮಾರ್. ಇದೇ ಅವಧಿಯಲ್ಲಿ ಶಿವಕುಮಾರ್ ಅವರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಅವರ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆಯ ತೂಗುಗತ್ತಿ ನೇತಾಡುತ್ತಿತ್ತು. ಇನ್ನೇನು ಈ ಪ್ರಕರಣ ತೆರೆಮರೆಗೆ ಸರಿಯುತ್ತಿದೆ ಎನ್ನುವಷ್ಟರಲ್ಲಿ ಜಾರಿ ನಿರ್ದೇಶನಾಲಯ ಶಿವಕುಮಾರ್ ವಿರುದ್ಧ ತನಿಖೆ ಆರಂಭಿಸಿತು. ತನಿಖೆ ಹೆಸರಿನಲ್ಲಿ ಅವರನ್ನು ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ. ಪಕ್ಷದ ಮೇಲಿನ ಅಭಿಮಾನದಿಂದ ಅವರು ಗುಜರಾತ್ ಶಾಸಕರಿಗೆ ಆತಿಥ್ಯ ನೀಡದೇ ಇದ್ದಲ್ಲಿ ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿರಲಿಲ್ಲ. ನಂತರದಲ್ಲಿ ಅವರು ಪಕ್ಷದ ಮೇಲೆ ನಿಷ್ಠೆಯನ್ನು ಪ್ರದರ್ಶಿಸದೆ “ಕಾಂಪ್ರಮೈಸ್ ಪೊಲಿಟಿಕ್ಸ್” ಮಾಡಿದ್ದರೆ ಜಾರಿ ನಿರ್ದೇಶನಾಲಯದವರು ಅವರನ್ನು ಬಂಧಿಸುತ್ತಲೂ ಇರಲಿಲ್ಲ. ಅಂದರೆ, ಇಲ್ಲಿ ಪಕ್ಷ ನಿಷ್ಠೆಯೇ ಅವರನ್ನು ಅಪಾಯಕ್ಕೆ ತಳ್ಳಿದ್ದು ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನು ಶಿವಕುಮಾರ್ ಅವರು ಜೈಲಿನಲ್ಲಿ ಇದ್ದಾಗ ಮತ್ತು ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಅವರಿಗೆ ವ್ಯಕ್ತವಾದ ಜನಬೆಂಬಲ ಕಾಂಗ್ರೆಸ್ ಮಾತ್ರವಲ್ಲ, ಇತರೆ ಪಕ್ಷಗಳ ನಾಯಕರೂ ಬೆಚ್ಚಿಬೀಳುವಂತಿತ್ತು. ಹೀಗಾಗಿ ಜೈಲಿನಿಂದ ಬಂದ ಬಳಿಕ ಶಿವಕುಮಾರ್ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ ಎಂಬ ನಿರೀಕ್ಷೆಯೂ ಹುಟ್ಟಿತ್ತು. ಅದಕ್ಕೆ ತಕ್ಕಂತೆ ಅವರು ಗಟ್ಟಿಯಾಗಿಯೇ ಮುಂದುವರಿದಿದ್ದರು. ಆದರೆ, ಯಾವಾಗ ತಮ್ಮ ಕ್ಷೇತ್ರವಾಗಿರುವ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ವಿವಾದಿತ ಏಸು ಪ್ರತಿಮೆ ನಿರ್ಮಾಣಕ್ಕೆ ಸಹಕರಿಸಿ ಪಾಯ ಹಾಕಿದರೋ ಮತ್ತೊಂದು ವಿವಾದ ಅವರನ್ನು ಸುತ್ತಿಕೊಂಡಿತ್ತು. ಗೋಮಮಾಳ ಜಾಗದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಶಿವಕುಮಾರ್ ನೇತೃತ್ವದಲ್ಲೇ ಕೆಲಸಗಳು ನಡೆಯುತ್ತಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರನ್ನು ಓಲೈಸಲು ಅವರು ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಯಿತು. ಹಾಗೇನಾದರೂ ಹೈಕಮಾಂಡ್ ನಾಯಕರನ್ನು ಓಲೈಸುವುದಾದರೆ ಶಿವಕುಮಾರ್ ಅವರಿಗೆ ಏಸು ಪ್ರತಿಮೆ ಬೇಕಾಗಿರಲಿಲ್ಲ. ತಮ್ಮ ಪಕ್ಷ ನಿಷ್ಠೆ ಮೂಲಕವೇ ಅವರು ಒಲಿಸಿಕೊಳ್ಳಲು ಸಮರ್ಥರಿದ್ದರು. ಆದರೆ, ರಾಜಕೀಯ ವಿರೋಧಿಗಳಿಗಿಂತ ಹೆಚ್ಚಾಗಿ ಪಕ್ಷದೊಳಗಿನ ಅವರ ವಿರೋಧಿಗಳೇ ಶಿವಕುಮಾರ್ ಬಗ್ಗೆ ನಾನಾ ಊಹಾಪೋಹಗಳನ್ನು ಸೃಷ್ಟಿ ಮಾಡಿ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದರು.
ಈ ಎರಡು ಅಂಶ ಮುದಿಟ್ಟುಕೊಂಡು ಕೆಪಿಸಿಸಿ ಸ್ಥಾನ ತಪ್ಪಿಸಲು ಯತ್ನ
ಆದರೆ, ಡಿ.ಕೆ.ಶಿವಕುಮಾರ್ ಅವರ ಸಾಮರ್ಥ್ಯದ ಅರಿವಿರುವ ಕಾಂಗ್ರೆಸ್ ವರಿಷ್ಠರು ಈ ಎರಡೂ ಪ್ರಕರಣಗಳನ್ನು ಬದಿಗಿಟ್ಟು ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿಸಲು ಸಿದ್ಧರಾಗಿದ್ದಾರೆ. ಆದರೆ, ರಾಜ್ಯ ಮತ್ತು ಕೇಂದ್ರದಲ್ಲಿರುವ ಕೆಲವು ನಾಯಕರು ಇದೇ ಪ್ರಕರಣಗಳನ್ನು ಮುಂದಿಟ್ಟುಕೊಂಡು ಹುದ್ದೆ ತಪ್ಪಿಸಲು ಹಾತೊರೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಾನೂನು ಅಸ್ತ್ರಗಳನ್ನು ಹೂಡಲು ಸಮಯ ಕಾಯುತ್ತಿವೆ. ಒಂದೊಮ್ಮೆ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಿದ ಬಳಿಕ ಮತ್ತೆ ಜಾರಿ ನಿರ್ದೇಶನಾಲಯ ಪ್ರಕರಣವನ್ನು ದಾಳವಾಗಿ ಬಳಸಿಕೊಂಡು ಸೇಡು ತೀರಿಸಿಕೊಳ್ಳಬಹುದು. ಅದೇ ರೀತಿ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವರದಿ ಸರ್ಕಾರದ ಕೈಯ್ಯಲ್ಲಿದ್ದು, ಈ ವರದಿ ಆಧರಿಸಿ ಶಿವಕುಮಾರ್ ಮತ್ತು ಪಕ್ಷವನ್ನು ಮುಜುಗರಕ್ಕೆ ತಳ್ಳಬಹುದು ಎಂದು ಕಾಂಗ್ರೆಸ್ ವರಿಷ್ಠರ ಕಿವಿಯೂದುವ ಕೆಲಸಗಳು ನಡೆಯುತ್ತಿವೆ.
ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ಘೋಷಣೆ ಮುಂದಕ್ಕೆ ಹೋಗುತ್ತಿದೆ. ಸದ್ಯ ಎಐಸಿಸಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಶುರುವಾಗಲಿದ್ದು, ಇದು ಮುಗಿದ ಬಳಿಕ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸೋಣ. ಅಷ್ಟ ವೇಳೆಗೆ ಶಿವಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿರುವ ಪ್ರಕರಣ ಮತ್ತು ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ಒಂದು ಹಂತಕ್ಕೆ ಬರಬಹುದು. ಅಲ್ಲಿ ಶಿವಕುಮಾರ್ ಅವರಿಗೆ ನೆಮ್ಮದಿ ಸಿಕ್ಕಿದರೆ ನಂತರ ಅಧ್ಯಕ್ಷರನ್ನು ನೇಮಿಸೋಣ ಎಂಬ ತೀರ್ಮಾನಕ್ಕೆ ಹೈಕಮಾಂಡ್ ನಾಯಕರು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಿಜವಾಗಿ ಹೈಕಮಾಂಡ್ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬುದು ಅಧ್ಯಕ್ಷರ ನೇಮಕದ ಬಳಿಕವೇ ಗೊತ್ತಾಗಲಿದೆ.