ಮಧ್ಯ ಪ್ರದೇಶದಲ್ಲಿಅಧಿಕಾರಕ್ಕೆ ಬಂದರೆ ಹತ್ತು ದಿನಗಳ ಒಳಗಾಗಿ ರೈತರ ಕೃಷಿ ಸಾಲ ಮನ್ನಾ ಮಾಡುವ ಭರವಸೆಯನ್ನು ನೀಡಿ ಡಿಸೆಂಬರ್ 2018ರಲ್ಲಿ ಗದ್ದುಗೆ ಏರಿದ್ದ ಕಾಂಗ್ರೆಸ್ ಸರ್ಕಾರ ಇಂದಿನವರೆಗೂ ತನ್ನ ಭರವಸೆಯನ್ನು ಈಡೇರಿಸದೇ, ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಈವರೆಗೆ ಸಾಲ ಮನ್ನಾ ಮಾಡುತ್ತೇವೆಂದು ಕೇವಲ ಪೇಪರ್‌ಗಳನ್ನು ತೋರಿಸಿ ಹೇಳಿಕೆಗಳನ್ನು ನೀಡುತ್ತಿದ್ದ ಕಮಲ್‌ನಾಥ್ ನೇತೃತ್ವದ ಸರ್ಕಾರದಿಂದ ಇನ್ನೂ 50 ಶೇಕಡಾ ರೈತರ ಸಾಲವನ್ನು ಮನ್ನಾ ಮಾಡಲಾಗಲಿಲ್ಲ.
ಕಮಲ್‌ನಾಥ್ ಅಧಿಕಾರ ವಹಿಸಿಕೊಂಡ ಎರಡನೇ ದಿನಕ್ಕೆ ಕೃಷಿ ಸಾಲ ಮನ್ನಾ ಮಾಡುವ ಯೋಜನೆಗೆ ಸಹಿ ಹಾಕಿದ ನಂತರ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದೆಯುಬ್ಬಿಸಿ ಟ್ವೀಟ್ ಮಾಡಿದ್ದರು. ಹತ್ತು ದಿನಗಳನ್ನು ಕೇಳಿದ್ದೆವು, ಆದರೆ ಎರಡೇ ದಿನದಲ್ಲಿ ಮಧ್ಯ ಪ್ರದೇಶ್, ಛತ್ತೀಸ್‌ಘಡ್ ಹಾಗೂ ರಾಜಸ್ತಾನದಲ್ಲಿ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ, ಮಧ್ಯ ಪ್ರದೇಶದ Ground Reality ನೋಡಿದರೆ ರಾಹುಲ್ ಗಾಂಧಿ ಮಾತಿಗೆ ತದ್ವಿರುದ್ದವಾಗಿದೆ. 36,500 ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ಸರ್ಕಾರ ಮೀಸಲಿಡಬೇಕಿತ್ತು. ಸರ್ಕಾರ ಮೀಸಲಿಟ್ಟಿದ್ದು ಬರೀ 13,000ಕೋಟಿಯಷ್ಟೇ.
ಇನ್ನು ಮುಖ್ಯಮಂತ್ರಿ ಕಮಲ್‌ನಾಥ್ ಹೇಳುವ ಪ್ರಕಾರ ರೈತರ ಸಾಲವನ್ನು ಮೂರು ಹಂತಗಳಲ್ಲಿ ಮನ್ನಾ ಮಾಡುವ ಯೋಜನೆ ಮಧ್ಯ ಪ್ರದೇಶದ ಕಾಂಗ್ರೆಸ್ ಹೊಂದಿದೆ. ಮೊದಲ ಹಂತದಲ್ಲಿ 50,000ರೂ. ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು, ಎರಡನೇ ಹಂತದಲ್ಲಿ 50,000 – 1,00,000ರೂ. ವರೆಗಿನ ಸಾಲ ಮನ್ನಾ ಮಾಡಲಾಗುವುದು ಹಾಗೂ ಮೂರನೇ ಹಂತದಲ್ಲಿ 1,00,000 – 2,00,000 ರೂ. ವರೆಗಿನ ಸಾಲ ಮನ್ನಾ ಮಾಡಲಾಗುವುದು. ಈಗಾಗಲೇ ಮೊದಲ ಹಂತ ಮುಗಿದಿದ್ದು ಸುಮಾರು 21 ಲಕ್ಷ ರೈತರ 50,000 ವರೆಗಿನ ಕೃಷಿ ಸಾಲ ಮನ್ನಾ ಆಗಿದೆ ಎಂದು ಮಧ್ಯಪ್ರದೇಶ ಸರ್ಕಾರ ವಿವರ ನೀಡಿದೆ. ಹಾಗಾದಲ್ಲಿ ಮನ್ನಾ ಆಗಿದ್ದು 10,500ಕೋಟಿ ರೂ. ಮಾತ್ರ. ಕೇವಲ ಹತ್ತೇ ದಿನಗಳಲ್ಲಿ ಎರಡು ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದ ಕಾಂಗ್ರೆಸ್, ಯೋಜನೆಯ ರೂಪು ರೇಷೆಗಳ ಕುರಿತು ಯೋಚಿಸಲೇ ಇಲ್ಲವೇ? ಎನ್ನುವ ಪ್ರಶ್ನೆ ಇಲ್ಲಿ ಉದ್ಬವವಾಗುತ್ತದೆ. ಸದ್ಯಕ್ಕೆ ಎರಡನೇ ಹಂತದ ಸಾಲ ಮನ್ನಾ ಕಾರ್ಯ ಸಾಗುತ್ತಿದೆ. ಮೂರನೇ ಹಂತದ ಸಾಲ ಮನ್ನಾ ಇನ್ನೂ ಶುರುವಾಗುವಾಗಲೇ ಇಲ್ಲ.
37 ಲಕ್ಷ ರೈತರಿಂದ 48ಲಕ್ಷ ಅರ್ಜಿ!
ಮಧ್ಯಪ್ರದೇಶದಲ್ಲಿ ಜಾರಿಯಾಗುತ್ತಿರುವ ಯೋಜನೆಯ ಪ್ರಕಾರ, ಒಂದು ಕುಟುಂಬದ ಒಂದೇ ಸಾಲವನ್ನು ಮನ್ನಾ ಮಾಡಲಾಗುವುದು. ಆದರೆ ಕೆಲವು ರೈತರು, ಒಂದೇ ಕೃಷಿ ಭೂಮಿಯ ದಾಖಲೆಗಳನ್ನು ಬೇರೆ ಬೇರೆ ಬ್ಯಾಂಕುಗಳಿಗೆ ನೀಡಿ ಹೆಚ್ಚುವರಿ ಸಾಲ ಪಡೆದಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಅವುಗಳ ವಿಲೇವಾರಿ ಮಾಡುವುದು ಕೂಡಾ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಗಳ ಕುರಿತ ಅರ್ಜಿ ವಿಲೇವಾರಿ ಇನ್ನೂ ಬಾಕಿ ಇದ್ದು ಸಹಕಾರಿ ಹಾಗೂ ಗ್ರಾಮೀಣ ಬ್ಯಾಂಕುಗಳ ಅರ್ಜಿಯನ್ನು ಮಾತ್ರ ಈವರೆಗೆ ವಿಲೇವಾರಿ ಮಾಡಲಾಗಿದೆ. ಇನ್ನು ಎರಡನೇ ಹಂತದಲ್ಲಿ ಸಹಕಾರಿ ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ ಸಾಲ ಮನ್ನಾ ಮಾಡಲು ಹೆಚ್ಚು ಒತ್ತು ನೀಡುತ್ತಿದ್ದು ನಂತರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಸಿಎಂ ಕಮಲ್‌ನಾಥ್ ಹೇಳಿದ್ದಾರೆ. ಎರಡನೇ ಹಂತದಲ್ಲಿಯೂ, 7000ಕೋ ರೂಪಾಯಿಗಳಷ್ಟು ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮೊದಲನೇ ಹಂತದಲ್ಲೇ ಸಾಲ ಮನ್ನಾ ಆಗಬೇಕಿದ್ದ ಹಲವು ರೈತರಿಗೆ ಇನ್ನೂ ಸಾಲ ಮನ್ನಾ ಆಗಿರುವ ಕುರಿತು ಯಾವುದೇ ಅಧಿಕೃತ ದಾಖಲೆ ನೀಡಿಲ್ಲ. ಈ ಕುರಿತು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ರೈತರೊಬ್ಬರು ಅಳಲು ತೋಡಿಕೊಂಡಿದ್ದು, ಸಾಲ ಮನ್ನಾ ಅಗುತ್ತೆ ಎನ್ನುವ ಕಾರಣಕ್ಕೆ ಸಾಲದ ಕಂತು ಕಟ್ಟಲಿಲ್ಲ. ಈಗ ಚಕ್ರಬಡ್ಡಿ ಕಟ್ಟುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ. ಇವರಂತೆಯೇ ಹಲವು ರೈತರು ಕೂಡಾ ಈಗ ಚಕ್ರಬಡ್ಡಿಯ ಸುಳಿಯಲ್ಲಿ ಸಿಲುಕಿದ್ದು ಒಳ್ಳೆ ಪೈರು ಮತ್ತು ಬೆಲೆ ಸಿಕ್ಕಿದರೂ ಎಲ್ಲಾ ಕಾಸನ್ನು ಬ್ಯಾಂಕಿಗೆ ಸುರಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ತಡವಾದಕ್ಕೆ ಕ್ಷಮೆಯಾಚಿಸಿದ ಮಂತ್ರಿ
AICCಯ ಹಿಂದಿನ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ನೀಡಿದ ಭರವಸೆಯನ್ನು ನಮ್ಮಿಂದ ಸಕಾಲದಲ್ಲಿ ಈಡೆರಿಸಲು ಆಗದ್ದಕ್ಕೆ ಕ್ಷಮೆ ಯಾಚಿಸುತ್ತೇನೆಂದು ಮಧ್ಯಪ್ರದೇಶ ಸರ್ಕಾರದ ಮಂತ್ರಿ ಗೋವಿಂದ್ ಸಿಂಗ್ ಫೆಬ್ರುವರಿ 15ರಂದು ಹೇಳಿದ್ದಾರೆ. ಇವರು ಮೊದಲ ಬಾರಿ ಕ್ಷಮೆ ಯಾಚಿಸುತ್ತಿರುವುದಲ್ಲ. ಈ ಹಿಂದೆ 2019ರ ಸೆಪ್ಟೆಂಬರ್‌ನಲ್ಲಿ ಕೂಡಾ ಸಾಲ ಮನ್ನಾ ಮಾಡಲು ತಡವಾಗಿದ್ದಕ್ಕೆ ಕ್ಷಮೆಯನ್ನು ಕೇಳಿದ್ದರು. ಯೋಜನೆ ಅನುಷ್ಠಾನ ವಿಳಂಬವಾಗಲು ಹಿಂದಿನ ಬಿಜೆಪಿ ಸರ್ಕಾರವನ್ನು ಗೋವಿಂದ್ ಸಿಂಗ್ ದೂರಿದ್ದಾರೆ.
ಇನ್ನು ಕಮಲ್‌ನಾಥ್ ಕೂಡಾ ತಮ್ಮ ಸರ್ಕಾರದ ವೈಫಲ್ಯಕ್ಕೆ ಬಿಜೆಪಿಯೆಡೆಗೆ ಬೊಟ್ಟು ಮಾಡಿ ತೋರಿಸಿದ್ದು ಕಳೆದ ಸರ್ಕಾರ ಬೊಕ್ಕಸವನ್ನು ಖಾಲಿ ಮಾಡಿತ್ತು, ಹಾಗಾಗಿ ಸಾಲ ಮನ್ನಾ ಯೋಜನೆ ಸಕಾಲದಲ್ಲಿ ಅನುಷ್ಠಾನವಾಗಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಬೊಕ್ಕಸವನ್ನು ಬರಿದು ಮಾಡಿ, ಸಾಲದ ಹೊರೆಯನ್ನು ಹೆಚ್ಚಿಸಿದೆ ಎಂದು ಕಮಲ್‌ನಾಥ್ ಆರೋಪಿಸಿದ್ದಾರೆ.
ಏನೇ ಆದರೂ, ಹತ್ತು ದಿನಗಳಲ್ಲಿ ಸಾಲ ಮನ್ನಾ ಆಗದೇ ಹೋದಲ್ಲಿ ಮುಖ್ಯಮಂತ್ರಿಯನ್ನೇ ಬದಲಾಯಿಸುತ್ತೇವೆಂದು ಘರ್ಜಿಸಿದ್ದ ರಾಹುಲ್ ಗಾಂಧಿ ಈಗ ಈ ವಿಚಾರವಾಗಿ ಮೌನಕ್ಕೆ ಶರಣಾಗಿದ್ದಾರೆ. ಯಾವುದೇ, ರೀತಿಯ ಹೇಳಿಕೆಗಳು ಇನ್ನೂ ಅವರಿಂದ ಬರದೇ ಇರುವುದು ಸರ್ಕಾರದ ವೈಫ್ಯಲ್ಯವನ್ನು ಒಪ್ಪಿಕೊಂಡಂತಾಗುವುದಿಲ್ಲವೇ? ನಿಜವಾದ ವಸ್ತು ಸ್ಥಿತಿಯನ್ನು ಅರಿಯದೇ ವೋಟು ಗಿಟ್ಟಿಸಿಕೊಳ್ಳುವುದಕ್ಕಾಗಿ ರೈತರಿಗೆ ಭರವಸೆ ನೀಡಿದರೆ ಸಾಕೇ? ಅವುಗಳನ್ನು ಸಕಾಲದಲ್ಲಿ ನೆರವೇರಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಇನ್ನುವ ಪ್ರಶ್ನೆಗಳನ್ನು ಮಧ್ಯಪ್ರದೇಶ ಕಾಂಗ್ರೆಸ್ ತನಗೆ ತಾನೇ ಕೇಳಿಕೊಳ್ಳಬೇಕಾಗಿದೆ.