ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (RCEP) ಸಮೂಹ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲು ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ತುದಿಗಾಲಲ್ಲಿ ನಿಂತಿರುವಂತೆಯೇ, ದೇಶವ್ಯಾಪಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ RCEP ವಿರುದ್ಧ ಅಸಮಾಧಾನದ ಕಿಡಿಗಳು ಅಂತರ್ಗತವಾಗಿ ಪ್ರವಹಿಸತೊಡಗಿವೆ. ಆಸಕ್ತ ಜನ ಸಮುದಾಯಗಳು RCEP ವಿರುದ್ಧ ಸಮಾಜಿಕ ಜಾಲತಾಣಗಳಲ್ಲಿ ಪ್ರಚಾರಾಂದೋಲನ ಪ್ರಾರಂಭಿಸಿದ್ದಾರೆ.
ದೇಶದ ಬೆನ್ನೆಲುಬಾಗಿರುವ ಕೃಷಿ ಮತ್ತು ಹೈನುಗಾರಿಕೆಯ ಬೆನ್ನುಮೂಳೆಯನ್ನು ಮುರಿಯುವ ದುಸ್ಸಾಹಸಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ. ಅತ್ತ ಬಾಂಕಾಂಕ್ ನಲ್ಲಿ RCEP ಸಮೂಹ ರಾಷ್ಟ್ರಗಳ ಜತೆಗೆ ಮುಕ್ತ ವ್ಯಾಪಾರಕ್ಕೆ ಒಪ್ಪಂದಕ್ಕೆ ಸಹಿ ಹಾಕುವ ಪೂರ್ವಭಾವಿ ಪ್ರಕ್ರಿಯೆ ಅಕ್ಟೋಬರ್ 23ಕ್ಕೆ ಪೂರ್ಣಗೊಂಡಿವೆ. ನವೆಂಬರ್ 1ರಂದು ಮೊದಲ ಹಂತದಲ್ಲಿ ಅಂತಿಮ ಸುತ್ತಿನ ಷರತ್ತುಗಳು, ಒಪ್ಪಂದಗಳು ಪೂರ್ಣಗೊಳ್ಳಲಿದ್ದು, ನವೆಂಬರ್ 4ಕ್ಕೆ ಭಾರತ, ಚೀನಾ ಸೇರಿದಂತೆ 16 ರಾಷ್ಟ್ರಗಳ ಮುಖ್ಯಸ್ಥರು ಸಹಿ ಹಾಕಲಿದ್ದಾರೆ.
ಒಂದು ವೇಳೆ, ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು RCEP ಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದರೆ, ಅದು ಕರ್ನಾಟಕ ಸೇರಿದಂತೆ ದೇಶದ ರೈತರ ಮರಣಶಾಸನಕ್ಕೆ ಸಹಿ ಹಾಕಿದಂತಾಗುತ್ತದೆ. ಮುಂಬರುವ ವರ್ಷಗಳಲ್ಲಿ ಕೃಷಿ, ಕೃಷಿ ಆಧಾರಿತ ಉದ್ಯಮಗಳು ಮತ್ತು ಹೈನು ಉದ್ಯಮ ಅವನತಿಯತ್ತ ಸಾಗಲಿದೆ. ಕೃಷಿಯನ್ನು ಅವಲಂಬಿಸಿರುವ ರೈತ, ಕೃಷಿ ಕಾರ್ಮಿಕ, ಕೃಷಿಯಾಧಾರಿತ ಉದ್ದಿಮೆಗಳು, ಅಲ್ಲಿನ ಕಾರ್ಮಿಕರು, ಹೈನೋದ್ಯಮ ಮತ್ತು ಹೈನೋದ್ಯಮದಲ್ಲಿ ಪೂರ್ಣ ಮತ್ತು ಅರೆ ಉದ್ಯೋಗ ಪಡೆದಿರುವವರು ದಿಕ್ಕಾಪಾಲಾಗುತ್ತಾರೆ. ಪ್ರಾಕೃತಿಕ ವಿಕೋಪಗಳಿಂದಾಗಿಯೇ ಆಗುತ್ತಿರುವ ನಷ್ಟವನ್ನು ತಡೆದುಕೊಳ್ಳಲಾಗದ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇನ್ನು ತಮ್ಮದೇ ನೆಲದಲ್ಲಿ ತಮ್ಮದೇ ಬೆಳೆಯ ಮುಂದೆ ವಿದೇಶಿ ಬೆಳೆಯನ್ನು ತಂದು ಕಡಮೆ ಬೆಲೆ ಮಾರಾಟ ಮಾಡಿದರೆ ರೈತರಿಗೆ ಬೇರೆ ದಾರಿಯಾವುದಿರಲು ಸಾಧ್ಯ?
RCEP ಬಗ್ಗೆ ಆತಂಕ ಏಕೆ?
ಏಕೆಂದರೆ RCEP ಜತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ಎಲ್ಲಾ ಭಾಗೀದಾರರೊಂದಿಗೆ ಒಪ್ಪಂದಗಳಲ್ಲಿನ ಷರತ್ತು ಮತ್ತು ಅವಕಾಶಗಳ ಕುರಿತಂತೆ ಮಾಹಿತಿ ಹಂಚಿಕೊಂಡಿಲ್ಲ. ಅದನ್ನು ಅತ್ಯಂತ ಗೌಪ್ಯವಾಗಿಟ್ಟು ವ್ಯವಹರಿಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಿಕ ಸತ್ಸಂಪ್ರದಾಯಗಳನ್ನು ಇಲ್ಲಿ ನಿಚ್ಚಳವಾಗಿ ಉಲ್ಲಂಘಿಸಲಾಗಿದೆ. ಸದ್ಯಕ್ಕೆ ಸೋರಿಕೆಯಾಗಿರುವ ಕರಡು ಒಪ್ಪಂದಗಳ ಮಾಹಿತಿಯನುಸಾರ ಯಾವ ಯಾವ ವಲಯದಲ್ಲಿ ವಿದೇಶಿ ಸರಕುಗಳಿಗೆ ಇದುವರೆಗೆ ಮಾರಾಟಕ್ಕೆ ಮತ್ತು ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲವೋ ಅಂತಹ ಎಲ್ಲಾ ವಲಯಗಳಲ್ಲೂ ವಿದೇಶಿ ಸರಕುಗಳಿಗೆ ಅವಕಾಶ ನೀಡಲಾಗುತ್ತಿದೆ. ಅಂತಹ ವಲಯಗಳಲ್ಲಿ ಕೃಷಿ ಮತ್ತು ಹೈನು ಉದ್ಯಮ ಪ್ರಮುಖವಾದುದು.
ಕೃಷಿ ಮತ್ತು ಹೈನು ಅವಲಂಬಿಸಿರುವವರ ಮತ್ತು ಈ ಎರಡೂ ವಲಯವನ್ನು ಆಧರಿಸಿದ ಉದ್ಯಮವನ್ನು ಅವಲಂಬಿಸಿರುವವರ ಸಂಖ್ಯೆ ಬಹುದೊಡ್ಡದಿದೆ. ಸ್ವಂತ ಜಮೀನಿರುವ ಕೃಷಿಕರು ಮತ್ತು ಸ್ವಂತ ಜಮೀನಿಲ್ಲದೇ ಕೃಷಿ ವಲಯದಲ್ಲಿ ದುಡಿಯುವ ಕೃಷಿ ಕಾರ್ಮಿಕರ ಸಂಖ್ಯೆ 30ಕೋಟಿ ಮೀರುತ್ತದೆ. ಹೈನು ಉದ್ಯಮದಲ್ಲಿ ನೇರವಾಗಿ ತೊಡಗಿರುವರ ಸಂಖ್ಯೆ 5 ಕೋಟಿ ಮೀರಿದೆ. ಪರೋಕ್ಷವಾಗಿ ಅಷ್ಟೇ ಸಂಖ್ಯೆಯ ಉದ್ಯೋಗವನ್ನು ಈ ಉದ್ಯಮ ಒದಗಿಸಿದೆ.
ಈಗಾಗಲೇ ಬೃಹತ್ ಪ್ರಮಾಣದಲ್ಲಿ ಯಾಂತ್ರೀಕರಣ ಅಳವಡಿಸಿಕೊಂಡಿರುವ ದೇಶಗಳಲ್ಲಿನ ಕೃಷಿ ಉತ್ಪನ್ನಗಳು ಮತ್ತು ಹೈನು ಉತ್ಪನ್ನಗಳ ಉತ್ಪಾದನಾ ವೆಚ್ಚವು ಭಾರತದಲ್ಲಿನ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಕಡಮೆ ಇರುತ್ತದೆ. ಉದಾಹರಣೆಗೆ ಭಾರತದಲ್ಲಿ ಉತ್ಪಾದನೆಯಾಗುವ ಸಂಸ್ಕರಿತ ಬೆಣ್ಣೆ 1ಕೆಜಿಗೆ ಸರಾಸರಿ 400 ರೂಪಾಯಿ ಎಂದಿಟ್ಟುಕೊಂಡರೆ, ಅದೇ ಚೀನಾದಿಂದ ಬರುವ ಸಂಸ್ಕರಿತ ಬೆಣ್ಣೆ 100 ರೂಪಾಯಿಗಳಾಗಿರುತ್ತದೆ. ಅಲ್ಲದೇ ಯಾಂತ್ರೀಕರಣ ಅಳವಡಿಸಿಕೊಂಡು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವುದರಿಂದ ಅಲ್ಲಿನ ಎಲ್ಲಾ ಹೆಚ್ಚುವರಿ ಉತ್ಪನ್ನಗಳನ್ನು ತಂದು ಭಾರತಕ್ಕೆ ಸುರಿಯಲಾಗುತ್ತದೆ. ಆಗ ಭಾರತದ ದೇಶೀಯ ಉತ್ಪನ್ನಗಳ ಬೆಲೆಗೂ ಆಮದಾದ ಉತ್ಪನ್ನಗಳ ಬೆಲೆಯ ನಡುವೆ ಭಾರಿ ಅಂತರ ಇರುತ್ತದೆ. ಗ್ರಾಹಕರು ಕಡಮೆ ಬೆಲೆಯ ಆಮದಾದ ಸರಕನ್ನೇ ಖರೀದಿಸುತ್ತಾರೆ. ಭಾರತದ ಸಮಸ್ಯೆ ಏನೆಂದರೆ- ಹಾಲು ಉತ್ಪಾದಿಸುವವರು ಬಳಕೆ ಮಾಡುವ ಹಾಲಿನ ಪ್ರಮಾಣ ಅತ್ಯಲ್ಪ. ಹೀಗಾಗಿ ತಮ್ಮ ಸರಕಿನ ಮಾರಾಟ ಮೇಲೆ ಅವರಿಗೆ ನಿಯಂತ್ರಣ ಇರುವುದಿಲ್ಲ. ಇದು ಬರೀ ಬೆಣ್ಣೆಯ ವಿಷಯವಲ್ಲ. ಹಾಲು, ಮೊಸರು, ಮಜ್ಜಿಗೆ, ತುಪ್ಪ, ಸಿಹಿಪದಾರ್ಥಗಳ ಸ್ಥಿತಿಯೂ ಹೀಗೆ ಆಗುತ್ತದೆ.
ಮೊಬೈಲ್ ಮಾರುಕಟ್ಟೆ ನೋಡಿ:
ಹಾಗೆ ಮೈಕ್ರೊಮ್ಯಾಕ್ಸ್ ಮತ್ತು ಇಂಟೆಕ್ಸ್ ಮೊಬೈಲ್ ಗಳನ್ನು ನೆನಪು ಮಾಡಿಕೊಳ್ಳಿ. ಐದು ವರ್ಷಗಳ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಮೈಕ್ರೊಮ್ಯಾಕ್ಸ್ ಶೇ.30ರಷ್ಟು ಮತ್ತು ಇಂಟೆಕ್ಸ್ ಸುಮಾರು ಶೇ.10ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು. ಮೈಕ್ರೋಮ್ಯಾಕ್ಸ್ ಅಂತೂ ಭಾರತದ ಮಾರುಕಟ್ಟೆಯಲ್ಲಿ ಬೇರು ಬಿಟ್ಟಿದ್ದ ಸ್ಯಾಮ್ಸಂಗ್ ಮತ್ತು ನೊಕಿಯಾಗೆ ಸೆಡ್ಡುಹೊಡೆದಿತ್ತು. ಐದೇ ವರ್ಷದಲ್ಲಿ ಆ ಎರಡೂ ಕಂಪನಿಗಳ ಮೊಬೈಲ್ ಗಳು ಹೇಳಹೆಸರಿಲ್ಲದಂತಾಗಿವೆ. ಈಗ ಮಾರುಕಟ್ಟೆಯಲ್ಲಿ ಏನಿದ್ದರೂ ಬಹುಪಾಲು ಚೀನದಲ್ಲಿ ತಯಾರಾದ ಶವೊಮಿ, ರಿಯಲ್ ಮಿ, ಒಪ್ಪೊ ಮೊಬೈಲ್ ಗಳದ್ದೇ ದರ್ಬಾರು. ಕೊರಿಯಾದ ಸಾಮ್ಸಂಗ್, ಅಮೆರಿಕದ ಆಪಲ್ ಸಹ ಚೀನ ಕಂಪನಿಗಳ ವಿರುದ್ಧ ಸ್ಪರ್ಧಿಸಲು ಹೆಣಗಾಡುತ್ತಿವೆ. ಕನಿಷ್ಠ ಶೇ. 2ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಯಾವುದೇ ಭಾರತೀಯ ಮೊಬೈಲ್ ಈಗ ನಮ್ಮ ಮಾರುಕಟ್ಟೆಯಲ್ಲಿ ಇಲ್ಲ.
ಇವತ್ತು ಮೊಬೈಲ್ ಗೆ ಆದ ಗತಿ ಮುಂದೆ ಕೃಷಿ ಉತ್ಪನ್ನಗಳಿಗೂ ಹೈನು ಉತ್ಪನ್ನಗಳಿಗೂ ಆಗುತ್ತದೆ. ಮೈಕ್ರೊಮ್ಯಾಕ್ಸ್, ಇಂಟೆಕ್ಸ್ ಮೊಬೈಲ್ ಮಾರುಕಟ್ಟೆ ಕಳೆದುಕೊಂಡಿದ್ದರಿಂದ ದೇಶದ ಆರ್ಥಿಕತೆ ಮೇಲೆ ಅಂತಹ ಪರಿಣಾಮವೇನೂ ಆಗಿಲ್ಲ. ಸುಮಾರು 2-3 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿರಬಹುದು ಅಷ್ಟೇ. ಆದರೆ, ಮೊಬೈಲ್ ಗೆ ಬಂದ ಪರಿಸ್ಥಿತಿ ಕೃಷಿ ಮತ್ತು ಹೈನು ಉತ್ಪನ್ನಗಳಿಗೂ ಬಂದರೆ, ದೇಶದಲ್ಲಿರುವ ಕೋಟ್ಯಂತರ ರೈತರು ಬೀದಿ ಪಾಲಾಗುತ್ತಾರೆ. ಕೃಷಿ ಮತ್ತು ಹೈನು ಉದ್ಯಮವನ್ನೇ ನಂಬಿಕೊಂಡವರು ಬದುಕುವ ದಾರಿಯಿಲ್ಲದೇ ಹತಾಶರಾಗುತ್ತಾರೆ.
ಇಲ್ಲಿ ಮೊಬೈಲ್ ಮತ್ತು ಹೈನು ಉತ್ಪನ್ನಗಳನ್ನು ಸಾಂಕೇತಿಕವಾಗಿ ಮಾತ್ರ ವಿವರಿಸಲಾಗಿದೆ. ಒಂದು ಬಾರಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬಿದ್ದ ನಂತರ ಚೀನಾದ ಎಲ್ಲಾ ಗೃಹೋಪಯೋಗಿ ವಸ್ತುಗಳೂ ನಮ್ಮ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತವೆ. ದರ ಸಮರದಲ್ಲಿ ಅಮೆರಿಕವನ್ನೇ ಅಲುಗಾಡಿಸುವ ಚೀನಾಕ್ಕೆ ಭಾರತದ ಗ್ರಾಹಕರು ಮತ್ತು ಮಾರುಕಟ್ಟೆ ಯಾವ ಲೆಕ್ಕ?
RCEP ಗೆ ತಕರಾರು ಏಕೆ?
ತಕರಾರು ಏಕೆಂದರೆ, ಭಾಗೀದಾರ ರಾಷ್ಟ್ರಗಳೊಂದಿಗೆ ಭಾರತವು ಈಗಾಗಲೇ ಮುಕ್ತ ಮಾರುಕಟ್ಟೆ ಪ್ರವೇಶ ಪಡೆದಿದೆ. ಹೊಸದಾಗಿ ಪ್ರವೇಶಿಸುವ ಅಗತ್ಯವಿಲ್ಲ. ಈಗ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಇತರ ಭಾಗೀದಾರ ರಾಷ್ಟ್ರಗಳಿಗೆ ಮುಕ್ತ ಹೆಬ್ಬಾಗಿಲು ತೆರೆದಂತಾಗುತ್ತದೆ. ವಿಶೇಷ ಎಂದರೆ ಈಗ ಅಧಿಕಾರದಲ್ಲಿರುವ ಬಿಜೆಪಿ ತಾನು ವಿರೋಧ ಪಕ್ಷದಲ್ಲಿ ಇದ್ದಾಗ ಇಂತಹ ಮುಕ್ತ ವ್ಯಾಪಾರ ಒಪ್ಪಂದಗಳನ್ನು ತೀವ್ರವಾಗಿ ವಿರೋಧಿಸಿತ್ತು. ಆದರೆ, ಈಗ ಬಿಜೆಪಿ ಮುಕ್ತ ವ್ಯಾಪಾರ ಒಪ್ಪಂದ ಕುರಿತಾದ ಮಾಹಿತಿಯನ್ನೇ ತನ್ನ ದೇಶದ ಜನರಿಗೆ ನೀಡದೇ ಗೌಪ್ಯವಾಗಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. RCEP ಕರಡು ಒಪ್ಪಂದವನ್ನು ಎಲ್ಲಾ ರಾಷ್ಟ್ರಗಳೂ ಮುಂಚಿತವಾಗಿ ಪ್ರಕಟಿಸಿ ಜನರ ಅಭಿಪ್ರಾಯ ಪಡೆದು ನಂತರ ಮುಂದುವರೆಯಬೇಕೆಂಬುದು ನಿಯಮ. ಆದರೆ, ಭಾರತ ಸರ್ಕಾರ ಈ ಮೂಲಭೂತ ನಿಯಮವನ್ನೇ ಉಲ್ಲಂಘಿಸಿದೆ. RCEP ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಭಾರತ ಸರ್ಕಾರ ಬಹುದೂರ ಸಾಗಿದ್ದರೂ ಜನರಿಗೆ ಅಂದರೆ ಮುಖ್ಯ ಭಾಗೀದಾರರು ಮತ್ತು ಪಾಲುದಾರರಿಗೆ ಮಾತ್ರ ಪೂರ್ಣಮಾಹಿತಿಯೇ ಸಿಕ್ಕಿಲ್ಲ.
ಕೃಷಿ ಉತ್ಪನ್ನ, ಹೈನು ಉತ್ಪನ್ನ, ವಾಣಿಜ್ಯ ಬೆಳೆಗಳಾದ ಅಡಕೆ, ಕೋಕೋವಾ, ವೆನಿಲಾ, ಕೊನೆಗೆ ನಾವು ನಿತ್ಯ ಬಳಸುವ ಅಕ್ಕಿ, ಗೋಧಿ, ಮಕ್ಕೆ ಜೋಳವೂ ನಮ್ಮ ಮಾರುಕಟ್ಟೆಗೆ ದಾಳಿ ಇಡಬಹುದು. ಇಡೀ ದೇಶದ ಅರ್ಧದಷ್ಟು ಜನಸಂಖ್ಯೆಯೇ ಸಂಕಷ್ಟಕ್ಕೆ ಸಿಲುಕಿದಾಗ, ಉಳಿದರ್ಧ ಜನರು ಕಡಮೆ ಬೆಲೆಯ ಸರಕು ಖರೀದಿಸಿ ಸಂತುಷ್ಟರಾಗಿರಲು ಸಾಧ್ಯವೇ? ಹಾಗಾದಾಗ ದೇಶ ಉದ್ದಾರ ಆಗುತ್ತದಾ? ನಮ್ಮದು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುತ್ತದಾ? ಕುಸಿದು ಹೋಗಿರುವ ಆರ್ಥಿಕತೆಗೆ ಚೇತರಿಕೆ ಬರುತ್ತದಾ? ಈ ಪ್ರಶ್ನೆಗಳನ್ನು ನರೇಂದ್ರ ಮೋದಿ ಸರ್ಕಾರದಲ್ಲಿರುವ ಆರ್ಥಿಕ ತಜ್ಞರು ಮತ್ತು ಆರ್ಥಿಕ ಸಲಹೆಗಾರರು ತಮಗೆ ತಾವೇ ಕೇಳಿಕೊಳ್ಳಬೇಕಿದೆ!