ದೇಶದ ಆರ್ಥಿಕತೆಯ ವೇಗೋತ್ಕರ್ಷ ಹೆಚ್ಚಿಸಲು ಕೀಲೆಣ್ಣೆಯಾಗಿರುವ ಆಟೋಮೊಬೈಲ್ ವಲಯವು ಸತತ ಕುಸಿತದಿಂದ ನಲುಗಿದ್ದು, ನವೆಂಬರ್ ತಿಂಗಳ ಮಾರಾಟವೂ ಆಶಾದಾಯಕವಾಗಿಲ್ಲ. ಅತ್ತ ಜಿಡಿಪಿ ಆರು ವರ್ಷಗಳಲ್ಲೇ ಅತಿ ಕನಿಷ್ಠ ಮಟ್ಟದ ಬೆಳವಣಿಗೆ ದಾಖಲಿಸಿ ಆಘಾತ ನೀಡುತ್ತಿರುವ ಹೊತ್ತಿಗೆ ಆಟೋಮೊಬೈಲ್ ವಲಯವು ಸತತ ಋಣಾತ್ಮಕ ಬೆಳವಣಿಗೆಯಿಂದಾಗಿ ಮತ್ತಷ್ಟು ಆಘಾತ ನೀಡಿದೆ. ಸರ್ಕಾರ ಪ್ರಕಟಿಸಿರುವ ಯಾವುದೇ ಉತ್ತೇಜನಕಾರಿ ಕ್ರಮಗಳು ಆಟೋಮೊಬೈಲ್ ವಲಯಕ್ಕೆ ಚೇತರಿಕೆ ನೀಡಲು ಸಾಧ್ಯವಾಗಿಲ್ಲ. ಬಿಎಸ್- VI ಜಾರಿ ಮಾಡುವ ಹಂತದಲ್ಲಿರುವಾಗ ಇನ್ನೂ ಒಂದೆರಡು ತ್ರೈಮಾಸಿಕಗಳವರೆಗೆ ಯಾವುದೇ ಚೇತರಿಕೆ ದಕ್ಕುವ ಸಾಧ್ಯತೆ ಕಾಣುತ್ತಿಲ್ಲ.
ಆರ್ಥಿಕ ಹಿಂಜರಿತ, ನಗದು ಕೊರತೆ ಬಿಕ್ಕಟ್ಟು ಮತ್ತು ಗ್ರಾಹಕರಿಗೆ ಲಭ್ಯವಾಗದ ಸಾಲಸೌಲಭ್ಯಗಳಿಂದಾಗಿ ವಾಣಿಜ್ಯ ವಾಹನಗಳ ಮಾರಾಟ ತ್ವರಿತ ಕುಸಿದಿದೆ. ಮಧ್ಯಮ ಮತ್ತು ಭಾರಿ ವಾಹನಗಳ ಸಾಗಣೆ ಸಾಮರ್ಥ್ಯ ಏರಿಕೆಯು ಸಹ ಮಾರಾಟ ಕುಸಿತಕ್ಕೆ ಪರೋಕ್ಷ ಕಾರಣವಾಗಿದೆ. ಆದಾಗ್ಯು ತಿಂಗಳ ಮಾರಾಟ ಲೆಕ್ಕದಲ್ಲಿ ವಾಣಿಜ್ಯ ವಾಹನಗಳ ಮಾರಾಟ ಕೊಂಚ ಚೇತರಿಸಿದೆ. ಇದರಿಂದಾಗಿ ದಾಸ್ತಾನುಗಳಲ್ಲಿದ್ದ ವಾಹನಗಳ ಸಂಖ್ಯೆ ತಗ್ಗಿದೆ. ಟಾಟಾ ಮೋಟಾರ್ಸ್ ಆಡಳಿತ ಮಂಡಳಿ ಪ್ರಕಾರ, ಹಾಲಿ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಹೊಸ ವಾಹನಗಳಿಗೆ ಬದಲಿಸುತ್ತಿರುವುದರಿಂದ ಮಾರಾಟ ಚೇತರಿಕೆ ಕಂಡಿದೆ. ಹೀಗಾಗಿ ದಾಸ್ತಾನಗಳ ಪ್ರಮಾಣ ಬಹುತೇಕ ಕಡಮೆ ಆಗಿದೆ.
ಆದರೆ, ಕಳೆದ ವರ್ಷದಲ್ಲಿ ನವೆಂಬರ್ ತಿಂಗಳಲ್ಲಿ ಮಾರಾಟವಾಗಿದ್ದ ಪ್ರಮಾಣಕ್ಕೆ ಹೋಲಿಸಿದರೆ ಭಾರಿ ಕುಸಿತ ಕಂಡಿತೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಶೇ.17ರಷ್ಟು ಕುಸಿತ ಕಂಡಿದ್ದರೆ, ಮಧ್ಯಮ ಮತ್ತು ಭಾರಿವಾಹನಗಳ ಮಾರಾಟದಲ್ಲಿ ಶೇ.38.2ರಷ್ಟು ಕುಸಿತ ಕಂಡಿದೆ. ಲಘುವಾಣಿಜ್ಯ ವಾಹನಗಳ ಮಾರಾಟ ಕುಸಿತವು ಶೇ.8ರಷ್ಟಾಗಿದೆ. ಐಷರ್ ವೋಲ್ವೊ ಕಂಪನಿಯ ಮಾರಾಟ ಶೇ.25ರಷ್ಟು ಕುಸಿದಿದ್ದರೆ, ಅಶೋಕ್ ಲೇಲ್ಯಾಂಡ್ ಮತ್ತು ಮಹಿಂದ್ರ ಅಂಡ್ ಮಹಿಂದ್ರಾ ಕಂಪನಿಗಳ ವಾಣಿಜ್ಯ ವಾಹನಗಳ ಮಾರಾಟವು ಶೇ.25 ಮತ್ತು ಶೇ.12ರಷ್ಟು ಕುಗ್ಗಿದೆ.
ವಾಣಿಜ್ಯ ವಾಹನಗಳು, ಮಧ್ಯಮ ಮತ್ತು ಭಾರಿ ಹಾಗೂ ಲಘು ವಾಣಿಜ್ಯ ವಾಹನಗಳ ಮಾರಾಟಕ್ಕೆ ಹೋಲಿಸಿದರೆ, ಕಾರುಗಳ ಮಾರಾಟದಲ್ಲಿ ಕೊಂಚ ಸುಧಾರಣೆ ಕಂಡಿದೆ. ಕಾರು ಮಾರಾಟದಲ್ಲಿ ಅಗ್ರಗಣ್ಯರಾಗಿರುವ ಮಾರುತಿ ಕಂಪನಿಯ ಕಾರುಗಳ ಮಾರಟ ಸಂಖ್ಯೆ ಶೇ.1ರಷ್ಟು ಮಾತ್ರ ಕುಸಿತವಾಗಿದೆ. ಮಹಿಂದ್ರ ಅಂಡ್ ಮಹಿಂದ್ರ ಕಾರುಗಳ ಮಾರಾಟ ಶೇ.9.6ರಷ್ಟು ಕುಸಿದಿದ್ದರೆ, ಟಾಟಾ ಮೋಟಾರ್ಸ್ ಶೇ.38.8ರಷ್ಟು ಕುಸಿತ ದಾಖಲಿಸಿದೆ. ಅಷ್ಟರ ಮಟ್ಟಿಗೆ ನವೆಂಬರ್ ತಿಂಗಳು ಟಾಟಾ ಮೋಟಾರ್ಸ್ ಪಾಲಿಗೆ ದುಃಸ್ವಪ್ನವಾಗಿದೆ.
ಆರ್ಥಿಕ ಹಿಂಜರಿತ, ನಗದು ಕೊರತೆ, ಸಾಲ ಅಲಭ್ಯತೆ ಜತೆಗೆ ಒಟ್ಟಾರೆ ಕಾರಿನ ವೆಚ್ಚವು ಕಡ್ಡಾಯ ದೀರ್ಘಾವಧಿ ವಿಮೆಯಿಂದಾಗಿ ಹೆಚ್ಚಳವಾಗಿರುವುದು ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ. ಸುರಕ್ಷತಾ ಕ್ರಮಗಳ ಕಟ್ಟುನಿಟ್ಟಿನ ಜಾರಿಯಿಂದಾಗಿಯೂ ವಾಹನಗಳ ಒಟ್ಟಾರೆ ವೆಚ್ಚವು ಹೆಚ್ಚಿದ್ದು ಗ್ರಾಹಕರ ಕೈಗೆಟಕದಂತಾಗಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ದ್ವಿಚಕ್ರ ವಾಹನಗಳ ನಿರಾಶದಾಯಕ ಮಾರಾಟ
ವಾಹನಗಳ ಮಾರಾಟದ ಪೈಕಿ ಯಾವಾಗಲೂ ದ್ವಿಚಕ್ರವಾಹನಗಳ ಮಾರಾಟ ಗರಿಷ್ಠ ಪ್ರಮಾಣದಲ್ಲಿರುತ್ತದೆ. ದ್ವಿಚಕ್ರವಾಹನಗಳ ಮಾರಾಟವು ಆಯಾ ಕಾಲಘಟ್ಟದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಮಾನದಂಡವೂ ಆಗಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ದ್ವಿಚಕ್ರವಾಹನಗಳ ಮಾರಾಟದಲ್ಲೂ ಪ್ರತಿಬಿಂಬಿತವಾಗಿದೆ. ನವೆಂಬರ್ ತಿಂಗಳಲ್ಲಿ, ದ್ವಿಚಕ್ರವಾಹಗಳ ಮಾರುಕಟ್ಟೆಯಲ್ಲಿ ಅಗ್ರಗಣ್ಯರಾಗಿರುವ ಹಿರೋ ಕಂಪನಿಯು ಮಾರಾಟವು ಶೇ.15.8ರಷ್ಟು ಕುಸಿದಿದೆ. ಬಜಾಟ್ ಆಟೋ ಮತ್ತು ಟಿವಿಎಸ್ ಮೋಟಾರ್ಸ್ ಕ್ರಮವಾಗಿ ಶೇ.14.1 ಮತ್ತು ಶೇ.19ರಷ್ಟು ಕುಸಿತ ದಾಖಲಿಸಿವೆ. ಪ್ರಿಮಿಯಮ್ ಬೈಕ್ ಗಳನ್ನು ಉತ್ಪಾದಿಸುವ ಐಷರ್ ಮೋಟಾರ್ಸ್ ಮಾರಟ ಶೇ.8.1ರಷ್ಟು ತಗ್ಗಿದೆ. ಸಾಮಾನ್ಯವಾಗಿ ದ್ವಿಚಕ್ರವಾಹನಗಳನ್ನು ಆರ್ಥಿಕವಾಗಿ ಕೆಳವರ್ಗ ಮತ್ತು ಕೆಳಮಧ್ಯಮವರ್ಗದ ಜನರು ಖರೀದಿಸುತ್ತಾರೆ. ಅಂದರೆ, ರೈತರು,ಕಾರ್ಮಿಕರು ಸಣ್ಣ ವ್ಯಾಪಾರಿಗಳು ಇತ್ಯಾದಿ. ಆದರೆ, ಆರ್ಥಿಕತೆ ಕುಸಿತವು ಈ ವರ್ಗದ ಮೇಲೆ ತೀವ್ರ ಪರಿಣಾಮ ಬೀರಿರುವುದು ಮಾರಾಟ ಕುಸಿತಕ್ಕೆ ಕಾರಣವಾಗಿದೆ.
ಟ್ರ್ಯಾಕ್ಟರ್ ಬೇಡಿಕೆ ಕುಸಿತ
ಸುಧೀರ್ಘವಾಗಿ ಸುರಿದ ಮುಂಗಾರು ಮಳೆಯು ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮತ್ತು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೃಷಿ ಉತ್ಪಾದನೆಯು ತಗ್ಗುವ ನಿರೀಕ್ಷೆ ಇದೆ. ಇದು ಟ್ರ್ಯಾಕ್ಟರ್ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಮಹಿಂದ್ರ ಅಂಡ್ ಮಹಿಂದ್ರ ಶೇ.18.9ರಷ್ಟು ಕುಸಿತ ದಾಖಲಿಸಿದ್ದರೆ, ಎಸ್ಕಾರ್ಟ್ ಶೇ.3.4ರಷ್ಟು ಮಾರಾಟ ತಗ್ಗಿದೆ. ಬಹುತೇಕ ಜಲಾಶಯಗಳು ಭರ್ತಿ ಆಗಿರುವುದರಿಂದ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಮಾರಾಟ ದರ ಹೆಚ್ಚಿಸಿರುವುದರಿಂದ ಮುಂದಿನ ತ್ರೈಮಾಸಿಕದ ವೇಳೆಗೆ ಮಾರಾಟದಲ್ಲಿ ಚೇತರಿಕೆ ಕಾಣಬಹುದೆಂಬ ಅಂದಾಜು ಮಹಿಂದ್ರ ಅಂಡ್ ಮಹಿಂದ್ರ ಕಂಪನಿಯದ್ದಾಗಿದೆ. ಜಲಾಶಯಗಳು ಭರ್ತಿ ಆಗಿರುವುದರಿಂದ ಹಿಂಗಾರು ಹಂಗಾಮಿನ ಬೆಳೆಗೂ ಬಹುತೇಕ ಪ್ರದೇಶದಲ್ಲಿ ನೀರು ದಕ್ಕುವ ಸಾಧ್ಯತೆ ಇರುವುದರಿಂದ ಬೇಡಿಕೆ ಹೆಚ್ಚಲಿದೆ ಎಂಬ ಲೆಕ್ಕಚಾರ ಆ ಕಂಪನಿಯದ್ದಾಗಿದೆ.
ವಾಹನಗಳ ರಫ್ತು ಮಾರಾಟ ಸಂಖ್ಯೆಯು ಮಿಶ್ರಫಲ ನೀಡಿದೆ. ಐಷರ್, ಟಿವಿಎಸ್ ಮತ್ತು ಬಜಾಜ್ ಆಟೋ ರಫ್ತು ಮಾರಾಟ ಗಣನೀಯವಾಗಿ ಹೆಚ್ಚಳವಾಗಿದ್ದರೆ, ಉಳಿದ ಕಂಪನಿಗಳ ರಫ್ತು ಮಾರಾಟ ಕುಗ್ಗಿದೆ.
ತ್ರಿಚಕ್ರ ವಾಹನಗಳ ಜಿಗಿತ
ಬಹುತೇಕ ಎಲ್ಲಾ ವರ್ಗದ ವಾಹನಗಳ ಮಾರಾಟವು ಇಳಿಜಾರಿನಲ್ಲಿದ್ದರೆ, ನವೆಂಬರ್ ತಿಂಗಳಲ್ಲಿ ತ್ರಿಚಕ್ರವಾಹನಗಳ ಮಾರಾಟವು ಅಚ್ಚರಿ ಮೂಡಿಸಿದೆ. ಮಾರುಕಟ್ಟೆಯಲ್ಲಿ ಅಗ್ರಗಣ್ಯರಾಗಿರುವ ಬಜಾಜ್ ಶೇ.6.4ರಷ್ಟು ಹೆಚ್ಚಳ ಸಾಧಿಸಿದ್ದರೆ, ಮಹಿಂದ್ರ ಅಂಡ್ ಮಹಿಂದ್ರ ಶೇ.15.6 ಮತ್ತು ಟಿವಿಎಸ್ ಶೇ.34.4ರಷ್ಟು ಹೆಚ್ಚಳ ದಾಖಲಿಸಿದೆ. ಈ ವರ್ಗದಲ್ಲೂ ಸಹ ಬಹುತೇಕ ಹಳೆಯ ಆಟೋಗಳನ್ನು ಮಾರಾಟ ಮಾಡಿ ಹೊಸ ಆಟೋಗಳನ್ನು ಖರೀದಿಸುವ ಪ್ರಕ್ರಿಯೆ ತ್ವರಿತವಾಗಿ ಆರಂಭವಾಗಿದೆ. ಇದಕ್ಕೆ ಮುಖ್ಯ ಕಾರಣ ಹಳೆಯ ಆಟೋಗಳ ಇಂಧನ ಕ್ಷಮತೆಯು ಕುಂದಿದ್ದು ಆಟೋ ಮಾಲೀಕರಿಗೆ ಇಂಧನ ವೆಚ್ಚವು ಭರಿಸಲಾಗುತ್ತಿಲ್ಲ. ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಏರುತ್ತಿರುವ ಈ ಹೊತ್ತಿನಲ್ಲಿ ಇಂಧನ ಕ್ಷಮತೆ ಹೆಚ್ಚಿರುವ ಆಟೋಗಳಿಗೆ ಬೇಡಿಕೆ ಬಂದಿದೆ. ಹೀಗಾಗಿ ಇಂಧನ ಕ್ಷಮತೆ ಇಲ್ಲದ ಹಳೆಯ ಆಟೋಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳ ಖರೀದಿಗೆ ಮುಂದಾಗಿರುವುದು ತ್ರಿಚಕ್ರವಾಹನಗಳ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.