ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370 ನೇ ವಿಧಿಯನ್ನು ಕಳೆದ ವರ್ಷದ ಆಗಸ್ಟ್ ನಲ್ಲಿ ರದ್ದು ಮಾಡಿದ್ದರಿಂದ ಭಾರತದೊಂದಿಗೆ ಮಲೇಷ್ಯಾ ಪ್ರಧಾನಮಂತ್ರಿ ಮುನಿಸಿಕೊಂಡಿದ್ದರೂ, ಅಲ್ಲಿನ ಸರ್ಕಾರ 2019ರಲ್ಲಿ ಕಾಶ್ಮೀರಕ್ಕೆ ಅತಿ ಹೆಚ್ಚಿನ ತನ್ನ ಪ್ರವಾಸಿಗರನ್ನು ಕಳುಹಿಸಿಕೊಟ್ಟಿದೆ.
ಕಾಶ್ಮೀರ ವಿಚಾರದಲ್ಲಿ ಚೀನಾ ಸಹ ಭಾರತದ ಮೇಲೆ ಕೆಂಗಣ್ಣು ಬೀರುತ್ತಲೇ ಬಂದಿದೆ. ಆದಾಗ್ಯೂ, 2019ರಲ್ಲಿ ಕಾಶ್ಮೀರ ಕಣಿವೆಯ ಪ್ರವಾಸಿ ತಾಣಗಳನ್ನು ನೋಡಲು ಬಂದ ಪ್ರವಾಸಿಗರ ಸಂಖ್ಯೆಯಲ್ಲಿ ಚೀನಾದ ಪ್ರವಾಸಿಗರೂ ಹೆಚ್ಚಿದ್ದಾರೆ. ಹೀಗೆ ಒಟ್ಟಾರೆ 2019ರಲ್ಲಿ ಕಾಶ್ಮೀರಕ್ಕೆ 106 ದೇಶಗಳ 26,662 ಪ್ರವಾಸಿಗರು ಬಂದು ಹೋಗಿದ್ದಾರೆ.
ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ ಮೆಂಟ್(ಸಿಐಡಿ) ಅಂಕಿಅಂಶಗಳ ಪ್ರಕಾರ 2019ರ ನವೆಂಬರ್ ವರೆಗೆ ಅತ್ಯಧಿಕ ಸಂಖ್ಯೆಯ ಅಂದರೆ 9,822 ಮಂದಿ ಮಲೇಷ್ಯಾದ ಪ್ರವಾಸಿಗರು ಕಾಶ್ಮೀರ ಕಣಿವೆಗೆ ಬಂದು ಅಲ್ಲಿ ಪ್ರವಾಸಿತಾಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಥೈಲ್ಯಾಂಡಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯ ಮಲೇಷ್ಯಾ ಪ್ರವಾಸಿಗರ ಎರಡರಷ್ಟು ಮಂದಿ ಕಾಶ್ಮೀರಕ್ಕೆ ಬಂದು ಹೋಗಿದ್ದಾರೆ. ಏಪ್ರಿಲ್ ತಿಂಗಳೊಂದರಲ್ಲಿಯೇ ಮಲೇಷ್ಯಾದ 3,145 ಮಂದಿ ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿಯ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿತು. ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಇದರ ಪರಿಣಾಮ ಆಗಸ್ಟ್ ತಿಂಗಳಲ್ಲಿ ಕಾಶ್ಮೀರಕ್ಕೆ ಕೇವಲ 126 ಮಂದಿ ಮಲೇಷ್ಯಾ ಪ್ರವಾಸಿಗರು ಬಂದು ಹೋದರು. ಆದಾಗ್ಯೂ, ಇವರ ಸಂಖ್ಯೆ ನವೆಂಬರ್ ನ ವೇಳೆಗೆ 460 ಕ್ಕೆ ಹೆಚ್ಚಳವಾಯಿತು.
ಆಗಸ್ಟ್ 5 ರಂದು ಸರ್ಕಾರ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಕಾಶ್ಮೀರಕ್ಕೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿತು. ಇಲ್ಲಿಗೆ ಆಗಮಿಸಬೇಕಿದ್ದ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರು ಹೆಚ್ಚಾಗಿ ಇತ್ತ ಮುಖ ಮಾಡಲೇ ಇಲ್ಲ. ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕಾಶ್ಮೀರಕ್ಕೆ ಮಲೇಷ್ಯಾದ 883 ಮಂದಿ ಬಂದಿದ್ದಾರೆ.
ಮಲೇಷ್ಯಾದ ಪ್ರಧಾನಿ ಮಹತೀರ್ ಮೊಹ್ಮದ್ ಅವರು 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿ ಸಭೆಯಲ್ಲಿ ಭಾರತ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ ಎಂದು ಆಪಾದಿಸಿದ್ದರು. ಅಲ್ಲಿಂದ ಉಭಯ ದೇಶಗಳ ನಡುವೆ ಒಂದು ರೀತಿಯಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ನಿರ್ಣಯ ಇದ್ದಾಗ್ಯೂ ಭಾರತ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ, ಇದು ತಪ್ಪು. ಈ ಕಾಶ್ಮೀರದ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕಿದೆ. ಈ ಪರಿಹಾರಕ್ಕಾಗಿ ಭಾರತ ದೇಶವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಮಹತೀರ್ ಹೇಳಿದ್ದರು.
ಕಳೆದ ವರ್ಷದ ನವೆಂಬರ್ ನಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ತ್ವೇಷಮಯ ವಾತಾವರಣವಿತ್ತು. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು ಮಲೇಷ್ಯಾದ ಪ್ರವಾಸಿಗರನ್ನು ಆಕರ್ಷಿಸುವ ಅಭಿಯಾನದ ಬಗ್ಗೆ ಮೌನಕ್ಕೆ ಶರಣಾಗಿತ್ತು. ಇದಕ್ಕೆ ಪರ್ಯಾಯವಾಗಿ ಸೌದಿ ಅರೇಬಿಯಾ ಮತ್ತು ಯುಎಇ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿತ್ತು. ಹೀಗಿದ್ದಾಗ್ಯೂ, 2019 ರಲ್ಲಿ ಸೌದಿ ಅರೇಬಿಯಾ ಮತ್ತು ಯುಎಇಯಿಂದ ಕಾಶ್ಮೀರಕ್ಕೆ ಬಂದ ಪ್ರವಾಸಿಗರ ಸಂಖ್ಯೆ ಕೇವಲ 100 ರಷ್ಟಿತ್ತು.
2019 ರ ನವೆಂಬರ್ ವರೆಗೆ ಕಾಶ್ಮೀರಕ್ಕೆ 543 ಚೀನಾ ದೇಶದ ಪ್ರವಾಸಿಗರು ಬಂದು ಹೋಗಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಆಗಸ್ಟ್ 5 ರ ನಂತರ ರಜಾ ದಿನಗಳ ಸಂದರ್ಭದಲ್ಲಿ ಚೀನಾದ 75 ಮಂದಿ ಪ್ರವಾಸಿಗರು ಕಾಶ್ಮೀರ ಕಣಿವೆಗೆ ಬಂದು ಹೋಗಿದ್ದಾರೆ.
ಈಶಾನ್ಯ ಭಾರತದ ಗಡಿಯಲ್ಲಿ ಭಾರತ ಮತ್ತು ಚೀನಾ ದೇಶದ ಸೈನಿಕರು ಪರಸ್ಪರ ಕತ್ತಿ ಮಸೆಯುತ್ತಾ ನಿಂತಿದ್ದಾರೆ. ನಿರಂತರವಾಗಿ ಕಾಶ್ಮೀರದ ವಿಚಾರದಲ್ಲಿ ಚೀನಾ ದೇಶವು ಪಾಕಿಸ್ತಾನದ ಪರವಾಗಿ ನಿಲ್ಲುತ್ತಾ ಬಂದಿದೆ. ಜಾಗತಿಕ ಮಟ್ಟದ ಭಯೋತ್ಪಾದಕ ಅಜರ್ ಮಸೂದ್ ನನ್ನು ದೇಶಕ್ಕೆ ಕರೆ ತರುವ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕುತ್ತಲೇ ಬಂದಿದೆ.
ಚೀನಾದ ಹೊರತಾಗಿ ಸದಾ ಒಂದಿಲ್ಲೊಂದು ಗಲಭೆಗಳಿಂದ ನಲುಗುತ್ತಿರುವ ಪಾಕಿಸ್ತಾನ, ಸಿರಿಯಾ, ಇರಾಕ್ ಮತ್ತು ಯೆಮೆನ್ ದೇಶದ ಪ್ರವಾಸಿಗರೂ ಸಹ ಕಾಶ್ಮೀರವನ್ನು ತಮ್ಮ ನೆಚ್ಚಿನ ಪ್ರವಾಸಿ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 2019 ರಲ್ಲಿ 11 ಪಾಕಿಸ್ತಾನಿಯರು, 24 ಯೆಮೆನ್ ದೇಶದವರು, 13 ಇರಾಕಿಗಳು ಮತ್ತು ನಾಲ್ವರು ಸಿರಿಯನ್ನರು ಕಾಶ್ಮೀರಕ್ಕೆ ಬಂದು ಅಲ್ಲಿನ ನೈಸರ್ಗಿಕ ಸೌಂದರ್ಯವನ್ನು ಸವಿದಿದ್ದಾರೆ. 11 ಮಂದಿ ಪಾಕಿಸ್ತಾನಿಯರಲ್ಲಿ ಐವರು ಆಗಸ್ಟ್ ತಿಂಗಳಲ್ಲಿಯೇ ಬಂದು ಹೋಗಿರುವುದು ವಿಶೇಷ.
ಮಲೇಷ್ಯಾದ ನಂತರ ಹೆಚ್ಚು ಪ್ರವಾಸಿಗರನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿರುವ ದೇಶವೆಂದರೆ ಥೈಲ್ಯಾಂಡ್. ಇಲ್ಲಿಂದ 2019 ರಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರವಾಸಿಗರು 4,572 ಮಂದಿ. ಏಪ್ರಿಲ್ ನಲ್ಲಿ ಅಧಿಕ ಅಂದರೆ, 2228 ಮಂದಿ ಥೈಲ್ಯಾಂಡ್ ಪ್ರವಾಸಿಗರು ಬಂದಿದ್ದರೆ, ಆಗಸ್ಟ್ ನಲ್ಲಿ ಕೇವಲ 65 ಮಂದಿ ಬಂದಿದ್ದರು. ಇನ್ನು ಇಂಡೋನೇಷ್ಯಾದಿಂದ 2918 ಮತ್ತು ಬಾಂಗ್ಲಾದೇಶದಿಂದ 2446 ಮಂದಿ ಪ್ರವಾಸಿಗರು ಕಾಶ್ಮೀರಕ್ಕೆ ಬಂದು ಹೋಗಿದ್ದಾರೆ.
ಇದಲ್ಲದೇ, 2019 ರಲ್ಲಿ ಕಾಶ್ಮೀರಕ್ಕೆ 731 ಮಂದಿ ಅಮೇರಿಕನ್ನರು, 706 ಮಂದಿ ಸಿಂಗಾಪೂರ ನಾಗರಿಕರು ಮತ್ತು ಯುಕೆಯಿಂದ 575 ಮಂದಿ ಪ್ರವಾಸಿಗರು ಬಂದು ಹೋಗಿದ್ದಾರೆ.
ಕೃಪೆ: ದಿ ವೈರ್