ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರ ಕರಾಳ ದಿನಗಳು ಇನ್ನೂ ಕೊನೆಗೊಂಡಿಲ್ಲ. ಈಗ ಶ್ರೀನಗರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಅಲಿ ಮೊಹಮ್ಮದ್ ಸಾಗರ್ ಅವರಿಗೆ Public Safety Act (PSA) ಅಡಿಯಲ್ಲಿ ಬಂಧನದಲ್ಲಿಡಲು ನೀಡಿರುವ ಕಾರಣ ಚರ್ಚೆಗೆ ಗ್ರಾಸವಾಗಿದೆ. ಕಳೆದ ಆರು ತಿಂಗಳಿನಿಂದ ಬಂಧನದಲ್ಲಿದ್ದ ಮೊಹಮ್ಮದ್ ಸಾಗರ್ ಅವರ ಬಂಧನದ ಅವಧಿ ಫೆಬ್ರವರಿ 6ರಂದು ಮುಕ್ತಾಯಗೊಂಡಿದ್ದು. ಇದರ ಬೆನ್ನಲ್ಲೇ, ಮತ್ತೆ ಅವರನ್ನು ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
PSA ಅಡಿಯಲ್ಲಿ ಅವರ ಬಂಧನಕ್ಕೆ ನೀಡಿರುವ ಕಾರಣವೇನೆಂದರೆ, ಕಾಶ್ಮೀರ ಪ್ರತ್ಯೇಕತಾವಾದಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರು, ಮೊಹಮ್ಮದ್ ಸಾಗರ್ ಅವರ ಮಾತಿಗೆ ಬೆಲೆಕೊಟ್ಟು ಬಹು ಸಂಖ್ಯೆಯಲ್ಲಿ ಕಾಶ್ಮಿರೀ ಮತದಾರರ ಮತ ಚಲಾಯಿಸಿದ್ದರು. ಜನರನ್ನು ಮನವೊಲಿಸುವ ಸಾಮರ್ಥ್ಯ ಹೊಂದಿರುವ ಕಾರಣಕ್ಕೆ ಅವರನ್ನು ಮತ್ತೆ ಬಂಧನದಲ್ಲಿಡಲು ಸೂಚಿಸಲಾಗಿದೆ.
“ಪ್ರತ್ಯೇಕತಾವಾದಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರೂ, ನೀವು ಜನರ ಮನವೊಲಿಸಿ ಜನರನ್ನು ತಮ್ಮ ಮನೆಯಿಂದ ಹೊರ ಬಂದು ಮತ ಚಲಾಯಿಸುವಂತೆ ಮಾಡಿದ್ದು, ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ,” ಎಂದು ಅವರ ಬಂಧನ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಏಳು ಪುಟಗಳ ಕಡತದಲ್ಲಿ “ನೀವು ಶ್ರಿನಗರದ ಜನಪ್ರಿಯ ರಾಜಕೀಯ ವ್ಯಕ್ತಿ. ಶ್ರೀನಗರ ಪಟ್ಟನದ ಖಾನ್ಯಾರ್ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಬಹಳಷ್ಟಿದೆ. ನಿಮ್ಮ ಮಾತಿಗೆ ಅಲ್ಲಿನ ಜನತೆ ತಲೆಬಾಗುತ್ತಾರೆ,” ಎಂದು ಹೇಳಲಾಗಿದೆ.
ಇನ್ನು ಜುಲೈನಲ್ಲಿ ಮೊಹಮ್ಮದ್ ಸಾಗರ್ ಅವರ ನಿವಾಸದಲ್ಲಿ ನಡೆದ ಸಭೆಯನ್ನು ಕೂಡಾ ಉಲ್ಲೇಖಿಸಿರುವ ಆದೇಶವು, ಅಂದಿನ ಸಭೆಯಲ್ಲಿ ಒಂದು ವೇಳೆ 370ನೇ ವಿಧಿ ರದ್ದಾದಲ್ಲಿ, ಒಟ್ಟಾಗಿ ಸರ್ಕಾರದ ನಿರ್ಣಯನ್ನು ವಿರೋಧಿಸುವ ನಿರ್ಧಾರವನ್ನು ತಾಳಲಾಗಿತ್ತು, ಎಂದು ಹೇಳಿದೆ. ಇನ್ನು 370ನೇ ವಿಧಿ ರದ್ದಾದಲ್ಲಿ ಬಹು ಸಂಖ್ಯೆಯಲ್ಲಿ ಇದರ ವಿರುದ್ದ ಪ್ರತಿಭಟನೆಯನ್ನು ನಡೆಸುವಂತೆ ಖಾನ್ಯಾರ್ ಪ್ರದೇಶದ ಯುವಕರಿಗೆ ಸಂದೇಶ ನೀಡಿದ್ಧೀರಿ. ನೀವು ಈ ವಿಷಯದ ಕುರಿತಾಗಿ ಹಲವು ಪ್ರತಿಭಟನೆಗಳನ್ನು ಹಮ್ಮಿಕೊಂಡು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತಂದಿದ್ದೀರಿ, ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ವಿವಾದಾತ್ಮಕ Public Safety Act ಅಡಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಬಂಧನದಲ್ಲಿರಿಸಲಾಗಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬ ಮಫ್ತಿ ಕೂಡ ಕಳೆದ ಆರು ತಿಂಗಳಿನಿಂದ ಬಂಧನಕ್ಕೊಳಗಾಗಿದ್ದಾರೆ.
ಇನ್ನು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಬೇಕೆಂದು ಅವರ ಸಹೋದರಿ ಸಾರಾ ಅಬ್ದುಲ್ಲಾ ಪೈಲಟ್ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜಕೀಯ ನಾಯಕರ ಬಂಧನದ ಕುರಿತು ರಾಷ್ಟ್ರಾಧ್ಯಂತ ಭಾರೀ ಚರ್ಚೆಗಳು ನಡೆದು, ವಿಪಕ್ಷಗಳು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದರೂ ಯಾರಿಗೂ ಬಿಡುಗಡೆಯ ಭಾಗ್ಯ ಒದಗಿ ಬಂದಿರಲಿಲ್ಲ.
ಈಗ ಓಮರ್ ಅಬ್ದಲ್ಲಾ ಅವರನ್ನು ಬಿಡುಗಡೆಗೊಳಿಸಬೇಕೆಂದು ಸುಪ್ರಿಂ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ (Habeas Corpus) ಅರ್ಜಿಯನ್ನು ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಕಳೆದ ಆರು ತಿಂಗಳಿನಿಂದ ಬಂಧನದಲ್ಲಿರುವ ಅಬ್ದುಲ್ಲಾ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಕೋರಿಕೊಳ್ಳಲಾಗಿದೆ. ಮುಂದುವರಿದು, ಕೇಂದ್ರವು ಇತ್ತೀಚಿಗೆ ಬಿಡುಗಡೆ ಮಾಡಿದ ಬಂಧನದ ಆದೇಶವನ್ನು ರದ್ದುಗೊಳಿಸುವಂತೆಯೂ ಸಾರಾ ಅವರು ಸುಪ್ರಿಂ ಕೋರ್ಟ್ ಬಳಿ ಕೇಳಿಕೊಂಡಿದ್ದಾರೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಶೀಘ್ರವಾಗಿ ಈ ಅರ್ಜಿಯನ್ನು ಇತ್ಯರ್ಥಗೊಳಿಸಬೇಕೆಂದು ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇನ್ನು ಈ ಕುರಿತಾಗಿ ಕಳೆದ ವಾರವಷ್ಟೇ ಸವಿಸ್ತಾರವಾದ ಲೇಖನವನ್ನು ಪ್ರಕಟಿಸಿದ್ದ ಪ್ರತಿಧ್ವನಿ, ಬಿಜೆಪಿಯೊಂದಿಗೆ ಕೈ ಜೋಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದ ಮೆಹಬೂಬ ಮಫ್ತಿ ಹಾಗೂ ಇತರ ನಾಯಕರಿಗೆ PSA ಎಂಬ ಕರಾಳ ಕಾನೂನಿನಿಂದ ಬಿಡುಗಡೆ ಯಾವಾಗ ಎಂದು ಪ್ರಶ್ನಿಸಿತ್ತು