ರಾಜ್ಯದಲ್ಲಿ ಮೂಲ ಕಾಂಗ್ರೆಸ್ ಮತ್ತು ವಲಸೆ ಕಾಂಗ್ರೆಸ್ ಬಣಗಳ ಒಳಜಗಳ ತಾರಕಕ್ಕೇರುತ್ತಿದೆ. ಕಳೆದ ಒಂದು ದಶಕದಿಂದ ಸಿದ್ದರಾಮಯ್ಯ ನೇತೃತ್ವದ ವಲಸೆ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಲು ಧೈರ್ಯ ತೋರದ ಮೂಲ ಕಾಂಗ್ರೆಸ್ಸಿಗರೆಲ್ಲಾ ಈಗ ಒಬ್ಬೊಬ್ಬರಾಗಿ ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಒಂದಿಬ್ಬರು ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರೊಂದಿಗಿದ್ದಾರೆ ಎಂಬುದನ್ನು ಹೊರತುಪಡಿಸಿ ಉಳಿದವರೆಲ್ಲರೂ ತಿರುಗಿ ಬಿದ್ದಿದ್ದಾರೆ. ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುವ ಮೂಲಕ ಹೈಕಮಾಂಡ್ ನಾಯಕರವರೆಗೂ ಸಿದ್ದರಾಮಯ್ಯ ವಿರುದ್ಧದ ತಮ್ಮ ಆಕ್ರೋಶವನ್ನು ಕೊಂಡೊಯ್ದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ನೇಮಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ವಿಚಾರದಲ್ಲಿ ಕಳೆದೊಂದು ವಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ವಿರೋಧಿ ಗುಂಪು ರಾಜ್ಯ ಕಾಂಗ್ರೆಸ್ ನಲ್ಲಿ ಮೇಲುಗೈ ಸಾಧಿಸಿದಂತೆ ಕಂಡುಬರುತ್ತಿದೆ. ವಿಪರ್ಯಾಸ ಎಂದರೆ, ಈ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಂತು ಬಲ ತುಂಬಬೇಕಾಗಿದ್ದ ಅವರ ಬೆಂಬಲಿಗ ಮುಖಂಡರು ಇನ್ನೂ ಮೌನ ಮುರಿಯುತ್ತಿಲ್ಲ. ಎಲ್ಲಾದರೂ ಮೂಲ ಕಾಂಗ್ರೆಸ್ಸಿಗರ ಕೈ ಮೇಲಾಗಿ ಸಿದ್ದರಾಮಯ್ಯ ಹಿನ್ನಡೆ ಅನುಭವಿಸಿದರೆ ಅವರೊಂದಿಗೆ ಗುರುತಿಸಿಕೊಂಡ ಕಾರಣಕ್ಕೆ ತಮಗೇನಾದರೂ ತೊಂದರೆಯಾಗಬಹುದೋ ಎಂಬ ಆತಂಕ ಸಿದ್ದರಾಮಯ್ಯ ಬೆಂಬಲಿಗರು ತುಟಿ ಬಿಚ್ಚದಂತೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ರಾಜಕಾರಣವೆಂದರೆ ಸ್ವಾರ್ಥ, ಅಧಿಕಾರದ ದಾಹದ ಒಂದು ಸರಕು ಎನ್ನುವಂತೆ ಮಾರ್ಪಟ್ಟಿದೆ ಎಂಬುದಕ್ಕೆ ಈ ಘಟನಾವಳಿಗಳು ಸೂಕ್ತ ನಿದರ್ಶನ. ಇಲ್ಲದೇ ಇದ್ದರೆ ಕಳೆದ ಒಂದು ದಶಕದಿಂದ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರದ್ದೇ ಸಾಮ್ರಾಜ್ಯ ಎನ್ನುವಂತಾಗಿದ್ದರೂ ಕನಿಷ್ಠ ಪ್ರತಿರೋಧವನ್ನೂ ತೋರದ ಮೂಲ ಕಾಂಗ್ರೆಸ್ಸಿಗರು ಈಗ ಒಬ್ಬರ ನಂತತ ಒಬ್ಬರು ಸಿದ್ದರಾಮಯ್ಯ ಅವರ ಹೇಳಿಕೆ, ತಂತ್ರಗಾರಿಕೆಗಳಿಗೆ ವಿರುದ್ಧವಾದ ಹೇಳಿಕೆ, ತಂತ್ರಗಾರಿಕೆಗಳ ಮೊರೆ ಹೋಗಿದ್ದಾರೆ ಎಂದರೆ ಅದರ ಹಿಂದಿರುವ ಉದ್ದೇಶ ಪಕ್ಷದಲ್ಲಿ ಅಧಿಕಾರ ಹೊಂದುವುದಷ್ಟೇ ಆಗಿದೆ. ಈ ಕಾರಣದಿಂದಾಗಿಯೇ ಇವರಾರೂ ಒಗ್ಗಟ್ಟಿನ ಮಂತ್ರದ ಮೂಲಕ ಪಕ್ಷ ಸಂಘಟನೆಯ ಬಗ್ಗೆ ಯೋಚಿಸದೆ ತಮ್ಮ ಮೂಗಿನ ನೇರಕ್ಕೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ವಿರುದ್ಧದ ಅಸಮಾಧಾನ ದಶಕದ ಹಿಂದಿನಿಂದಲೂ ಇದೆ
ಜೆಡಿಎಸ್ ತೊರೆದು ಸುಮ್ಮನೆ ಕುಳಿತಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು ಅವರಿಗೆ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಧಾನಸಭೆ ಪ್ರತಿಪಕ್ಷ ಸ್ಥಾನ ನೀಡಿದಾಗಲೇ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಕಾಣಿಸಿಕೊಂಡಿತ್ತು. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆಂಬಲಕ್ಕಿದ್ದುದರಿಂದ ಅದನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದರ ಲಾಭವನ್ನು ಸಂಪೂರ್ಣ ಪಡೆದುಕೊಂಡ ಸಿದ್ದರಾಮಯ್ಯ ಅವರು ತಮ್ಮ ನೇತೃತ್ವದಲ್ಲಿ 2013ರ ಚುನಾವಣೆಯನ್ನು ಕಾಂಗ್ರೆಸ್ ಎದುರಿಸುವಂತೆ ನೋಡಿಕೊಂಡರು. ಪಕ್ಷ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯೂ ಆದರು. ಆಗ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ ಸ್ವಲ್ಪ ಹೆಚ್ಚಾಯಿತು.
ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರು ಯಾವಾಗ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ನೀಡದೆ ನಿರ್ಲಕ್ಷ್ಯ ಮಾಡಿದರೋ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಯಿತು. ಪಟ್ಟು ಬಿಡದ ಶಿವಕುಮಾರ್ ಮತ್ತು ಪರಮೇಶ್ವರ್ ಅವರು ಹೈಕಮಾಂಡ್ ನಾಯಕರ ಮುಂದೆ ಹೋಗಿ ಲಾಬಿ ಮಾಡಿ ಸಚಿವರಾದರು. ಆದರೂ ಮೂಲ ಕಾಂಗ್ರೆಸ್ಸಿಗರಿಗೆ ನ್ಯಾಯ ಸಿಗಲಿಲ್ಲ. ನಂತರ 2018ರ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾದಾಗ ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಗಬಾರದು ಎಂಬ ಏಕೈಕ ಕಾರಣಕ್ಕೆ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಸರ್ಕಾರ ರಚಿಸುವಂತೆ ನೋಡಿಕೊಂಡರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಪಕ್ಕಕ್ಕಿಟ್ಟು ಜೆಡಿಎಸ್ ಜತೆ ಡೀಲ್ ಕುದುರಿಸಿದ್ದು ಇದೇ ಶಿವಕುಮಾರ್ ಮತ್ತು ಪರಮೇಶ್ವರ್. ದೇಶದಲ್ಲಿ ಅಧಿಕಾರ ಕಳೆದುಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡ ಕಾಂಗ್ರೆಸ್ ಹೈಕಮಾಂಡ್ ಒಂದು ರಾಜ್ಯದಲ್ಲಿ ಅಧಿಕಾರ ಸಿಗುತ್ತದೆ ಎಂಬ ಕಾರಣಕ್ಕೆ ತಕ್ಷಣವೇ ಇದಕ್ಕೆ ಒಪ್ಪಿಕೊಂಡಿತ್ತು. ಹೀಗಾಗಿ ಸಿದ್ದರಾಮಯ್ಯ ಕೂಡ ಅನಿವಾರ್ಯವಾಗಿ ಇದಕ್ಕೆ ಒಪ್ಪಿಕೊಳ್ಳಬೇಕಾಯಿತು.
ಆರಂಭದಿಂದಲೇ ಗೊಂದಲದೊಂದಿಗೆ ಸಾಗಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದಾಗ ಇದಕ್ಕೆ ಕಾರಣ ಸಿದ್ದರಾಮಯ್ಯ ಅವರೇ ಎಂಬುದನ್ನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಲು ಮೂಲ ಕಾಂಗ್ರೆಸ್ಸಿಗರು ಸಾಕಷ್ಟು ಪ್ರಯತ್ನಿಸಿದ್ದರು. ಅದಕ್ಕೆ ಪೂರಕವಾಗಿ ಸರ್ಕಾರ ಉರುಳಲು ಕಾರಣರಾದ ಶಾಸಕರಲ್ಲಿ ಬಹುತೇಕರು ಸಿದ್ದರಾಮಯ್ಯ ಅವರ ಬೆಂಬಲಿಗರು ಎಂಬ ಅಂಶವೂ ಅವರಿಗೆ ಅಸ್ತ್ರವಾಗಿ ಸಿಕ್ಕಿತ್ತು. ಆದರೆ, ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಜತೆ ನೇರವಾಗಿ ಮಾತನಾಡಿ ಮನವರಿಕೆ ಮಾಡಿಕೊಡಲು ಸಾಧ್ಯವಾಗಿರಲಿಲ್ಲ. ನಂತರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಾಗಲೂ ಅದಕ್ಕೆ ಸಿದ್ದರಾಮಯ್ಯ ಅವರನ್ನೇ ಹೊಣೆಗಾರರನ್ನಾಗಿ ಮಾಡುವ ಪ್ರಯತ್ನ ನಡೆಯಿತಾದರೂ ಹೈಕಮಾಂಡ್ ನಾಯಕರೊಂದಿಗೆ ಮಾತನಾಡುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ.
ಮೂಲ ಕಾಂಗ್ರೆಸ್ಸಿಗರಿಗೆ ಧೈರ್ಯ ತುಂಬಿದ್ದು ಶಿವಕುಮಾರ್
ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ ಶಾಸಕಾಂಗ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದಾಗ ಮೂಲ ಕಾಂಗ್ರೆಸ್ಸಿಗರಿಗೆ ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಸ್ವಲ್ಪ ಧೈರ್ಯ ಬಂದಿತ್ತು. ಸಿದ್ದರಾಮಯ್ಯ ನೀಡಿದ ರಾಜೀನಾಮೆಯನ್ನು ಸ್ವೀಕರಿಸಲು ವರಿಷ್ಠರು ಹಿಂದೇಟು ಹಾಕಿದಾಗ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ವಿಭಜಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ, ಬಹಿರಂಗವಾಗಿ ಇದನ್ನು ಯಾರೂ ಹೇಳಿರಲಿಲ್ಲ. ಆದರೆ, ಯಾವಾಗ ದಿನೇಶ್ ಗುಂಡಾರಾವ್ ಅವರ ರಾಜೀನಾಮೆಯಿಂದ ತೆರವಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಆಯ್ಕೆಯಾಗುವುದು ಅಂತಿಮವಾಯಿತೋ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡಿದ್ದ ಮೂಲ ಕಾಂಗ್ರೆಸ್ಸಿಗರ ಧೈರ್ಯದ ಕಟ್ಟೆಯೊಡೆಯಿತು. ಒಬ್ಬೊಬ್ಬರಾಗಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲಾರಂಭಿಸಿದರು.
ಅತ್ತ ತಮ್ಮ ಆಕ್ಷೇಪದ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತಿದ್ದಂತೆ ಸಿದ್ದರಾಮಯ್ಯ ಬೇರೆ ದಾಳಗಳನ್ನು ಉರುಳಿಸಲಾರಂಭಿಸಿದರು. ಕಾರ್ಯಾಧ್ಯಕ್ಷ ಸ್ಥಾನವನ್ನು 2ರಿಂದ ನಾಲ್ಕಕ್ಕೆ ಹೆಚ್ಚಿಸಬೇಕು. ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ತಮ್ಮನ್ನೇ ಮುಂದುವರಿಸಬೇಕು ಎಂದು ಒತ್ತಡ ಹೇರಲಾರಂಭಿಸಿದರು. ಇದಕ್ಕೆ ತಿರುಗೇಟು ನೀಡುತ್ತಿರುವ ಮೂಲ ಕಾಂಗ್ರೆಸ್ಸಿಗರು, ಎರಡೇ ಕಾರ್ಯಾಧ್ಯಕ್ಷ ಸ್ಥಾನ ಸಾಕು, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾವನ್ನು ವಿಭಜಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮೂಲ ಕಾಂಗ್ರೆಸ್ ನಾಯಕರ ಬೆಂಬಲಿಗರು ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವಷ್ಟರ ಮಟ್ಟಿಗೆ ಮೂಲ ಕಾಂಗ್ರೆಸ್ಸಿಗರಲ್ಲಿ ಸಿದ್ದರಾಮಯ್ಯ ವಿರುದ್ಧ ತಿರುಗಿ ಬೀಳುವ ಧೈರ್ಯ ಬಂದಿದೆ.
ಸಿದ್ದರಾಮಯ್ಯ ಅವರ ಹೇಳಿಕೆ, ನಡವಳಿಕೆಗಳ ವಿರುದ್ಧ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯದ ಚಾಟಿ ಬೀಸುತ್ತಿದ್ದಾರೆ. ಇದರಿಂದ ಮೂಲ ಕಾಂಗ್ರೆಸ್ಸಿಗರಲ್ಲಿ ಒಗ್ಗಟ್ಟು ಗಟ್ಟಿಯಾಗುತ್ತಿರುವುದು ಕಂಡು ಬಂದಿದೆ. ಈ ಒಗ್ಗಟ್ಟು ಸಿದ್ದರಾಮಯ್ಯ ವಿರುದ್ಧ ಮಾತ್ರ ಸೀಮಿತವಾಗದೆ ಪಕ್ಷ ಸಂಘಟಿಸುವ ವಿಚಾರದಲ್ಲೂ ಮುಂದುವರಿದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಮೇಲೆದ್ದು ಅಧಿಕಾರ ಹಿಡಿಯಬಹುದು. ಕೇವಲ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾತ್ರ ಒಗ್ಗಟ್ಟು ಸೀಮಿತವಾದರೆ ಅತ್ತ ಸಿದ್ದರಾಮಯ್ಯ ಅವರೂ ಇಲ್ಲದೆ, ಇತ್ತ ಸಂಘಟನೆಯ ಕೆಲಸ ಮಾಡುವ ಉತ್ಸಾಹಿ ಗುಂಪೂ ಸಿಗದೆ ಪಕ್ಷ ತೊಂದರೆಗೆ ಒಳಗಾಗಬಹುದು. ಹೀಗಾಗಿ ಮುಂದೇನು ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕು.