ಕಾಂಗ್ರೆಸ್ ನ ಬ್ಯಾಲೆಟ್ ಬಾಣ ಬಿಜೆಪಿ ನಾಗಾಲೋಟಕ್ಕೆ ತಡೆಯೊಡ್ಡುವುದೇ?

ಛತ್ತೀಸಗಡ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ದಶಕಗಳ ಹಿಂದೆ ಜಾರಿಯಲ್ಲಿದ್ದ ಬ್ಯಾಲೆಟ್ ಪತ್ರ‌ ಬಳಕೆ ವಿಧಾನಕ್ಕೆ ಹಿಂದಿರುಗುವ ಮೂಲಕ ಬಿಜೆಪಿ ವಿರುದ್ಧದ ಹೋರಾಟಕ್ಕೆ‌ ಕಾಂಗ್ರೆಸ್ ಅಧಿಕೃತ ಚಾಲನೆ ನೀಡಿದೆ. ಛತ್ತೀಸಗಡದ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿರುವ ಭೂಪೇಶ್ ಬಗೇಲ ಅವರು ಸಾಂವಿಧಾನಿಕ ಚೌಕಟ್ಟಿನಲ್ಲಿ ಬ್ಯಾಲೆಟ್ ಬಳಕೆಗೆ ಸಾಂವಿಧಾನಿಕ ಪ್ರಕ್ರಿಯೆ ಆರಂಭಿಸಿದ್ದು, ಕಮಲ ಪಾಳೆಯದ ವಿರುದ್ಧ ಬಹಿರಂಗ ಕಾಳಗಕ್ಕೆ ಅಖಾಡ ಸಿದ್ಧಗೊಳಿಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥ ಮಹತ್ವದ ಬೆಳವಣಿಗೆಯೊಂದು‌ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಯಾಲೆಟ್ ಬಳಕೆಯನ್ನು ದೇಶಾದ್ಯಂತ ಮರಳಿ ಜಾರಿಗೆ ತರಬೇಕು ಎಂಬ ಆಗ್ರಹವನ್ನು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಪ್ರಬಲವಾಗಿ ಮಂಡಿಸುವುದು ಸ್ಪಷ್ಟವಾಗಿದೆ. ಆದರೆ, ಜನಾಭಿಪ್ರಾಯ ರೂಪಿಸುವಲ್ಲಿ ವಿರೋಧ ಪಕ್ಷಗಳು ಎಷ್ಟರಮಟ್ಟಿಗೆ ಯಶಸ್ವಿಯಾಗಲಿವೆ ಎಂಬುದು ಕುತೂಹಲ ಮೂಡಿಸಿದೆ.

ಜಗತ್ತಿನ ಬಹುತೇಕ ಮುಂದುವರಿದ ರಾಷ್ಟ್ರಗಳು ಇವಿಎಂ‌ ಬದಲಿಗೆ ಬ್ಯಾಲೆಟ್ ಮೂಲಕವೇ ಮತದಾನ ನಡೆಸುತ್ತಿವೆ. ಅದೇ ರೀತಿ ಇವಿಎಂ ಬಳಕೆಯು ವ್ಯವಸ್ಥೆಯಲ್ಲಿ‌ ತಂದಿರುವ ಸುಧಾರಣೆಯನ್ನು ಅಷ್ಟು ಸುಲಭಕ್ಕೆ ತಳ್ಳಿಹಾಕಲಾಗದು. ಈ ಸತ್ಯಗಳ ನಡುವೆಯೂ ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಸಾಕಷ್ಟು ಅನುಮಾನಗಳಿವೆ. ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾದ ಇವಿಎಂ ಅನ್ನು ಹ್ಯಾಕ್ ಮಾಡಲು ಸಾಧ್ಯವಿದೆ ಎಂದು ಆಡಳಿತದಲ್ಲಿರುವ ಬಿಜೆಪಿ ಹಿಂದೆ‌ ಆರೋಪಿಸಿತ್ತು. ಈಗ ನಿರಂತರ ಸೋಲುಗಳಿಂದ ಹೈರಾಣವಾಗಿರುವ ವಿರೋಧ ಪಕ್ಷಗಳು ಮಾನವ ನಿರ್ಮಿತ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿದೆ ಎಂದು ಪ್ರಬಲವಾಗಿ ವಾದಿಸುತ್ತಿದ್ದು, ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಬಂದಿರುವುದು ಅವುಗಳ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

ಸೆಪ್ಟೆಂಬರ್ 2019ರಂದು ಇಸ್ರೇಲ್  ನ ಜೆರುಸಲೆಮ್  ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಚಿತ್ರ

ಇವಿಎಂ ಜಾರಿಯಾದಾಗ ಅದರಲ್ಲೂ 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತೀಯ ಒಕ್ಕೂಟ (ಯುಪಿಎ) ಮರಳಿ ಅಧಿಕಾರಕ್ಕೆ ಬಂದಾಗ ಇದೇ ಇವಿಎಂ ವಿರುದ್ಧ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿಯ ದಿವಂಗತ ಸುಷ್ಮಾ ಸ್ವರಾಜ್ ಸಂಶಯ ವ್ಯಕ್ತಪಡಿಸಿದ್ದರಲ್ಲದೇ ಬ್ಯಾಲೆಟ್ ಪತ್ರದ ಮೂಲಕ ಚುನಾವಣೆ ನಡೆಸುವುದು ಸೂಕ್ತ ಎಂದು ಪ್ರತಿಪಾದಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಆಡಳಿತ ಪಕ್ಷಗಳು ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗಕ್ಕೆ ತಮ್ಮ‌ ಇಷ್ಟದ ಅಧಿಕಾರಿಗಳನ್ನು ನೇಮಿಸಿ ಗೊಳ್ಳುತ್ತಿರುವುದು ಲಗಾಯ್ತಿನಿಂದಲೂ ನಡೆದು ಬಂದಿದೆ. ಈ ಅಧಿಕಾರಿಗಳ ಸ್ವಾಮಿ ನಿಷ್ಠೆಯೂ ಇವಿಎಂ ತಿರುಚುವ ಸಾಧ್ಯತೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಹ್ಯಾಕರ್ ಗಳು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಜಗತ್ತಿನಾದ್ಯಂತ ಸೃಷ್ಟಿಸುತ್ತಿರುವ ಅಲ್ಲೋಲ ಕಲ್ಲೋಲವೂ ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.
2014ರ ಲೋಕಸಭಾ ಚುನಾವಣೆಯ ನಂತರ ನಡೆದ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ಭರ್ಜರಿ ಬಹುಮತ ಪಡೆದು‌ ಸರ್ಕಾರ ರಚಿಸಿದೆ. ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳಲ್ಲಿನ ತಾಂತ್ರಿಕ ದೋಷ‌‌‌ ಹಾಗೂ ದೇಶದ ವಿವಿಧೆಡೆ‌ ಹಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಇವಿಎಂ ಪತ್ತೆಯಾಗಿದ್ದವು. ಅಲ್ಲದೇ, ಬಿಜೆಪಿ ಅಸ್ತಿತ್ವ ಹೊಂದಿಲ್ಲದ ಕಡೆಗಳಲ್ಲೂ ಇತರೆ ಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಮತ ಪಡೆದಿದ್ದರ ಬಗ್ಗೆ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಅನುಮಾನ ಹಾಗೂ ಆತಂಕ ವ್ಯಕ್ತಪಡಿಸಿದ್ದವು. ಮತ ಯಂತ್ರ ತಿರುಚಿ ಬಿಜೆಪಿ ಬಹುಮತ ಪಡೆದಿದೆ ಎಂಬುದು ವಿರೋಧ ಪಕ್ಷಗಳ ಪ್ರಬಲ ಅನುಮಾನ. ಆದರೆ, ಅದನ್ನು ಸಾಬೀತುಪಡಿಸಲು ದಾಖಲೆ ಒದಗಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಟಿಎಂಸಿ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ ಪಕ್ಷಗಳಿವೆ. ಬ್ಯಾಲೆಟ್ ಪತ್ರದ ಮೂಲಕ ಚುನಾವಣೆ ನಡೆಸಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಲೇ ಬಂದಿವೆ. ಆದರೆ, ಇದನ್ನು ನಿರಾಕರಿಸುತ್ತಲೇ‌ ಬಂದಿರುವ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳನ್ನು‌ ಲೇವಡಿ ಮಾಡುತ್ತಲೇ ಬಂದಿದೆ. ಚುನಾವಣಾ ಆಯೋಗವು ವಿರೋಧ ಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು ಕಡಿಮೆ.

ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್  ಬಗೇಲ

ಕೆಲವು ವರ್ಷಗಳ ಹಿಂದೆ ದೆಹಲಿ ವಿಧಾನಸಭೆಯಲ್ಲಿ ಇವಿಎಂ ಹ್ಯಾಕ್ ಮಾಡುವ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. ಇವಿಎಂ ಹ್ಯಾಕ್ ಅಸಾಧ್ಯ ಎಂದಿದ್ದ ಆಯೋಗವು ವಿರೋಧಿಗಳಿಗೆ ಇವಿಎಂ ಹ್ಯಾಕ್ ಮಾಡುವಂತೆ ಸವಾಲು ಎಸೆದಿತ್ತು. ಆದರೆ, ಇದನ್ನು ಸಾಬೀತುಪಡಿಸುವ ಸಂಬಂಧ ವಿರೋಧ ಪಕ್ಷಗಳು ಗಂಭೀರ ಯತ್ನ ನಡೆಸಿಲ್ಲ ಎಂಬುದು ವಾಸ್ತವ. ಹಾಗೆಂದು, ವಿರೋಧ ಪಕ್ಷಗಳ ಸಂಶಯವನ್ನು ಸುಲಭಕ್ಕೆ ತಳ್ಳಿಹಾಕಲಾಗದು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ನಡೆದುಕೊಂಡಿರುವ ರೀತಿ, ತೆಗೆದುಕೊಂಡಿರುವ ನೀತಿ-ನಿರ್ಧಾರಗಳು, ಆಡಳಿತ ಪಕ್ಷದ ಬಗ್ಗೆ ಹೊಂದಿರುವ ಮೃದು ಧೋರಣೆ, ವಿರೋಧ ದಾಖಲಿಸಿದ್ದ ಚುನಾವಣಾ ಆಯುಕ್ತ ಅಶೋಕ್ ಲವಾಸ ಹಾಗೂ ಕುಟುಂಬ ಸದಸ್ಯರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಿಟ್ಟಿರುವ ಕೇಂದ್ರ ಸರ್ಕಾರದ ನಡೆಯ ಬಗ್ಗೆ ಸಹಜವಾಗಿ ಅನುಮಾನಗಳು ಸೃಷ್ಟಿಯಾಗಿವೆ.

ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಆಯೋಗ ಈ ಬಗ್ಗೆ ತಲೆಕಡೆಸಿಕೊಳ್ಳುತ್ತಿಲ್ಲ. ಬಹುತೇಕ ಮಾಧ್ಯಮಗಳು ಆಡಳಿತ ಪಕ್ಷದ ಭಟ್ಟಂಗಿಗಳಂತೆ ವರ್ತಿಸುತ್ತಿವೆ. ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ಸಂದೇಶವನ್ನು ದಾಟಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ದುರ್ಬಲವಾದಂತೆ ಕಂಡರೂ ಬ್ಯಾಲೆಟ್ ಮೂಲಕ ಆಡಳಿತ ಪಕ್ಷದ ವಿರುದ್ಧ ಸಾರಿರುವ ಸಮರವನ್ನು ಹೇಗೆ ಗೆಲ್ಲಲಿವೆ ಎಂಬುದು ಕುತೂಹಲಕಾರಿಯಾಗಿದೆ. ಮತ್ತೊಂದೆಡೆ, ದೇಶಾದ್ಯಂತ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಅಪಾಯಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಐಡಿಯಾವನ್ನು ಬಿಜೆಪಿ ಮುಖ್ಯವಾಹಿನಿಯ ಚರ್ಚೆಯ ವಿಷಯವನ್ನಾಗಿಸಿದೆ. ಈಗ ಕಾಂಗ್ರೆಸ್ ನ ಬ್ಯಾಲೆಟ್ ದಾಳಕ್ಕೆ ಬಿಜೆಪಿಯ ಪ್ರತಿಕ್ರಿಯೆ ಕುತೂಹಲ ಸೃಷ್ಟಿಸಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...