ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿದಾಯದ ಭಾಷಣ ಮಾಡಿದ ಕಮಲನಾಥ್, ಜನತೆ ತನಗೆ ಐದು ವರ್ಷ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಬಿಜೆಪಿ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ರೂಪಿಸಿತು. ಬಿಜೆಪಿಯ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಕುತಂತ್ರಕ್ಕೆ ನಮ್ಮ 22 ಶಾಸಕರು ಕೂಡ ಬಲಿಯಾದರು. ಬಿಜೆಪಿಯು ಮಧ್ಯಪ್ರದೇಶವನ್ನು ‘ಮಾಫಿಯಾ ರಾಜ್’ ಮಾಡಿತ್ತು. ನಾನು ಮಾಫಿಯಾ ಮುಕ್ತ, ಭಯ ಮುಕ್ತ ರಾಜ್ಯ ಮಾಡಲು ಹೊರಟಿದ್ದೆ, ಆದರೆ ಬಿಜೆಪಿ ನಿರಂತರವಾಗಿ ಕಿರುಕುಳ ನೀಡಿ ತನ್ನ ಸರ್ಕಾರವನ್ನೇ ಆಹುತಿ ತೆಗೆದುಕೊಂಡಿತು ಎಂಬ ಅಸಹಾಯಕತೆಯನ್ನು ಹೊರಹಾಕಿ ರಾಜೀನಾಮೆ ನೀಡಲು ರಾಜಭವನದೆಡೆಗೆ ತೆರಳಿದರು.
ವಾಸ್ತವವಾಗಿ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಇಂದು ಕಮಲನಾಥ್ ವಿಶ್ವಾಸಮತಯಾಚನೆ ಮಾಡಬೇಕಿತ್ತು. ಇದೇ ಹಿನ್ನೆಲೆಯಲ್ಲಿ ಇವತ್ತು ಅವರು ತಮ್ಮ ಮನೆಯಲ್ಲಿ ಶಾಸಕರ ಸಭೆ ಕರೆದಿದ್ದರು. ಆ ಸಭೆಗೆ ಬೆಂಗಳೂರಿನ ರೆಸಾರ್ಟಿನಲ್ಲಿದ್ದ 22 ಶಾಸಕರು ಇರಲಿ, ಭೂಪಾಲ್ ನಲ್ಲೇ ಇದ್ದ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಭಾಗವಹಿಸಿರಲಿಲ್ಲ. ಆ ಪೈಕಿ ಕೆ.ಪಿ. ಸಿಂಗ್ ಎಂಬ ಶಾಸಕ ಬಹಿರಂಗವಾಗಿ ತಾನು ಬಹುಮತ ಸಾಬೀತು ಪಡಿಸುವ ವೇಳೆ ಸರ್ಕಾರದ ವಿರುದ್ಧ ಮತ ಹಾಕುವುದಾಗಿ ಹೇಳಿದರು. ಇದಲ್ಲದೆ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್‌ಪಿ ಮತ್ತು ಎಸ್‌ಪಿ ಶಾಸಕರು ಕೂಡ ಬಿಜೆಪಿಯತ್ತ ಒಲವು ತೋರಿದರು. ಈ ಬೆಳವಣಿಗೆಯಿಂದ ತಮ್ಮ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಕಮಲನಾಥ್ ಅವರಿಗೆ ಖಚಿತವಾಗಿತ್ತು. ಆದುದರಿಂದ ಅವರು ವಿಶ್ವಾಸಮತಯಾಚನೆಗೂ ಮುನ್ನವೇ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು.
ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾದ 22 ಕಾಂಗ್ರೆಸ್ ಶಾಸಕರು ಈ ಮೊದಲೇ ರಾಜೀನಾಮೆ ನೀಡಿದ್ದರು. ಈ ಪೈಕಿ 6 ಮಂದಿಯ ರಾಜೀನಾಮೆಗಳು ಮಾತ್ರ ಅಂಗೀಕಾರವಾಗಿದ್ದವು. ಇಂದು ಮಧ್ಯಪ್ರದೇಶದ ಸ್ಪೀಕರ್ ಪ್ರಜಾಪತಿ ಉಳಿದ 16 ಮಂದಿಯ ರಾಜೀನಾಮೆಯನ್ನೂ ಅಂಗೀಕರಿಸಿದರು. ಇದರಿಂದಾಗಿ ಸದನದ ಸಂಖ್ಯಾಬಲ 206ಕ್ಕೆ ಇಳಿದು ಕಾಂಗ್ರೆಸ್ ಬಲ 92ಕ್ಕೆ ಕುಸಿದಿತ್ತು. ಇನ್ನೊಂದೆಡೆ ಬಿಜೆಪಿಯು 107 ಸದಸ್ಯರ ಬಲದೊಂದಿಗೆ ಸರಳ ಬಹುಮತ ಹೊಂದಿದೆ.

ಕಮಲನಾಥ್ ಸರ್ಕಾರ ರಚಿಸಿದ ಮೊದಲ ದಿನದಿಂದಲೂ ಅವರ ವಿರುದ್ಧ ಕೆಲ ಶಾಸಕರ ಅಸಮಾಧಾನ ಇದ್ದೇ ಇತ್ತು. ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದ ಬಿಜೆಪಿ, ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷದ ಒಳಗೆ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗೆ ಹೊರಗಿನಿಂದ ಗೊಬ್ಬರ ನೀರೆರೆಯುತ್ತಿತ್ತು. ಇದು ಹರಳುಗಟ್ಟಲು 15 ತಿಂಗಳು ಬೇಕಾಯಿತು.
2018ರ ಡಿಸೆಂಬರ್ 11 ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಎಸ್ ಪಿ, ಬಿಎಸ್ ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆರಿಸಿದ್ದು 73 ವರ್ಷದ ಅನುಭವಿ ಮತ್ತು ಸಂಪತ್ಭರಿತ ವ್ಯಕ್ತಿ ಕಮಲನಾಥ್ ಅವರನ್ನು. ಮುಂದೆ ಬಂದೊದಗಬಹುದಾದ ರಾಜಕೀಯ ಸಂದಿಗ್ಧ ಸ್ಥಿತಿಗಳೆಲ್ಲವನ್ನೂ ಕಮಲನಾಥ್ ನಿಭಾಯಿಸುತ್ತಾರೆ ಎಂಬ ಅಚಲವಾದ ವಿಶ್ವಾಸವಿತ್ತು ಹೈಕಮಾಂಡಿಗೆ. ಆದರೆ ಕಡೆಗೂ ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಿಶ್ವಾಸವನ್ನು ಗೆಲ್ಲಲು ಕಮಲನಾಥ್ ಯಶಸ್ಸು ಸಾಧಿಸಲೇ ಇಲ್ಲ.

ಮುಂದೆ ರಾಜಸ್ಥಾನ?
ರಾಜಸ್ಥಾನದ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿನ ಕಾಂಗ್ರೆಸ್ ಸರ್ಕಾರಕ್ಕಿರುವುದು ಸರಳ ಬಹುಮತವಷ್ಟೇ. ಜೊತೆಗೆ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಬಂಡಾಯವೂ ಇದೆ. ಈ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಲೇ ಇದೆ. ಈಗ ಮಧ್ಯಪ್ರದೇಶದಲ್ಲಿ ಸರ್ಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಸ್ಫೂರ್ತಿ ಪಾತಳದತ್ತ ಮುಖಮಾಡಿದೆ. ಕರ್ನಾಟಕದ ಬಳಿಕ ಮಧ್ಯಪ್ರದೇಶದಲ್ಲಿ ಕಮಲ ಅರಳಿಸಿದ ಬಿಜೆಪಿಯ ಉತ್ಸಾಹ ಮುಗಿಲ್ಮುಖವಾಗಿದೆ. ಇಷ್ಟರ ನಡುವೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೆಡವಿದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜಸ್ಥಾನದ ಮಹತ್ವಾಕಾಂಕ್ಷಿ ಸಚಿನ್ ಪೈಲೆಟ್ ಒಳ್ಳೆಯ ಸ್ನೇಹಿತರು ಎಂಬುದು ಗಮನಿಸಬೇಕಾದ ಸಂಗತಿ.