ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ದೇಶದಲ್ಲಿ ಮೊದಲ ಪ್ರಕರಣ ವರದಿಯಾಗಿ ಬರೋಬ್ಬರಿ ಎರಡು ತಿಂಗಳು ತುಂಬುತ್ತಿದೆ. ಈ ನಡುವೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ತಲುಪಿದ್ದರೆ, ಮೃತರ ಸಂಖ್ಯೆ 20ಕ್ಕು ಹೆಚ್ಚಾಗಿದೆ.
ಈ ನಡುವೆ ಸೋಂಕು ಮೂರನೇ ಹಂತಕ್ಕೆ ತಲುಪಿದ್ದು, ಸಮುದಾಯದ ಮಟ್ಟದಲ್ಲಿ ಪಸರಿಸುತ್ತಿದೆ. ಈ ಹಂತದಲ್ಲಿ ಸೂಕ್ತ ತಪಾಸಣೆಯ ಮೂಲಕ ಸೋಂಕಿತರನ್ನು ಗುರುತಿಸುವುದು, ಪ್ರತ್ಯೇಕಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಚಿಕಿತ್ಸೆ ನೀಡುವುದು ವ್ಯಾಪಕ ಪ್ರಮಾಣದಲ್ಲಿ ಆಗಬೇಕಿದೆ. ಇಲ್ಲವಾದಲ್ಲಿ ಭಾರತ ಜಗತ್ತಿನ ಕರೋನಾ ಮಾರಣಹೋಮದ ಸುನಾಮಿಗೆ ತತ್ತರಿಸಿಹೋಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ಜಾಗತಿಕ ವೈದ್ಯಕೀಯ ಸಂಸ್ಥೆಗಳು ಮತ್ತು ಹಿರಿಯ ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇಂತಹ ಹೊತ್ತಲ್ಲಿ ನಿಜಕ್ಕೂ ಮಾಧ್ಯಮಗಳು ಮಾಡಬೇಕಾದದ್ದು; ಲಾಕ್ ಡೌನ್ ಹೊರತಾಗಿಯೂ ರಸ್ತೆಗಿಳಿಯುತ್ತಿರುವ ಜನರಿಗೆ ಅಪಾಯದ ಬಗ್ಗೆ ಜಾಗೃತಿ ಮೂಡಿಸುವುದು, ಲಾಕ್ ಡೌನ್ ನಡುವೆ ಮನೆಮಠ ಇಲ್ಲದೆ, ಬೀದಿ ಪಾಲಾಗಿರುವ ನತದೃಷ್ಟರು, ಬದುಕು ಕಳೆದುಕೊಂಡು ಹಳ್ಳಿಗಳ ದಾರಿ ಹಿಡಿದಿರುವ ಕಾರ್ಮಿಕರ ಸಂಕಷ್ಟಗಳನ್ನು ಆಡಳಿತ ವ್ಯವಸ್ಥೆ ಗಮನಕ್ಕೆ ತರುವುದು, ಸೋಂಕು ಮತ್ತು ಅದರ ತೀವ್ರತೆಯ ಬಗ್ಗೆ ಜನವರಿಗೆ ವೈಜ್ಞಾನಿಕವಾದ ಮತ್ತು ಸ್ಪಷ್ಟವಾದ ಮಾಹಿತಿ ನೀಡುವುದು, ಸರ್ಕಾರ ಸೋಂಕು ನಿಯಂತ್ರಣ ಮತ್ತು ರೋಗದ ಚಿಕಿತ್ಸೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ ಜನರಲ್ಲಿ ವಿಶ್ವಾಸ ಹುಟ್ಟಿಸುವುದು,.. ಮುಂತಾದ ಹಲವು ಬಗೆಯಲ್ಲಿ ಮಹಾಮಾರಿಯ ವಿರುದ್ಧದ ದೇಶದ ಹೋರಾಟದಲ್ಲಿ ಮಾಹಿತಿ ಮತ್ತು ವಾಸ್ತವಾಂಶಗಳನ್ನು ನೀಡುವುದು ನೈಜ ಮಾಧ್ಯಮಗಳ ಹೊಣೆ.
ಆದರೆ, ಕನ್ನಡದ ಮಾಧ್ಯಮಗಳು(ಟಿವಿ ಮತ್ತು ಮುದ್ರಣ) ಬಹುತೇಕ ಕಳೆದ ಒಂದು ವಾರದಿಂದ ಪ್ರದರ್ಶಿಸುತ್ತಿರುವ ವರಸೆ ನೋಡಿದರೆ, ಪತ್ರಿಕೋದ್ಯಮದ ವೃತ್ತಿಪರತೆ ಎಷ್ಟರಮಟ್ಟಿಗೆ ಹೀನಾಯ ಮಟ್ಟ ತಲುಪಿದೆ ಎಂದು ಆತಂಕವಾಗದೇ ಇರದು.
ಅದು ಕರೋನಾ ಸೋಂಕು ವಿಷಯದಲ್ಲಿ ಅದರ ಕುರಿತ ವೈಜ್ಞಾನಿಕ ಮಾಹಿತಿ, ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ, ಗ್ರಾಮ ಪಂಚಾಯ್ತಿ ಮಟ್ಟದಿಂದ ಕೇಂದ್ರ ಸರ್ಕಾರದವರೆಗೆ ಸರ್ಕಾರಗಳು ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ಸೋಂಕು ತಡೆ ಮತ್ತು ರೋಗದ ಚಿಕಿತ್ಸೆಗಾಗಿ ಮಾಡಿಕೊಳ್ಳಬೇಕಾದ ತಯಾರಿಗಳು, ಜಾಗತಿಕ ಮಟ್ಟದಲ್ಲಿ ನಮಗಿಂತ ಹೆಚ್ಚು ವೈದ್ಯಕೀಯ ಸೌಲಭ್ಯ ಇರುವ, ಹೆಚ್ಚು ಶುಚಿತ್ವ ಮತ್ತು ಕಡಿಮೆ ಜನಸಾಂಧ್ರತೆಯ ದೇಶಗಳಲ್ಲಿ ಕೂಡ ಅಗಾಧ ಸಂಖ್ಯೆಯ ಸಾವು- ನೋವುಗಳಿಗೆ ಕಾರಣವಾಗಿರುವ ಮಾರಕ ರೋಗ ನಮ್ಮ ವ್ಯವಸ್ಥೆಗೆ ಎಷ್ಟು ದೊಡ್ಡ ಸವಾಲು? ಈ ಸವಾಲು ಎದುರಿಸುವ ನಿಟ್ಟಿನಲ್ಲಿ ದೇಶ- ವಿದೇಶದ ಪರಿಣತರು, ಸಂಶೋಧಕರು, ಸಂಘ-ಸಂಸ್ಥೆಗಳ ಕಿವಿಮಾತೇನು? ಎಂಬ ಬಗ್ಗೆ ಅತಿ ಹೆಚ್ಚು ಹೊಣೆಗಾರಿಕೆಯಿಂದ ಮಾಧ್ಯಮಗಳು ಕೆಲಸ ಮಾಡಬೇಕಾಗಿತ್ತು.
ಆದರೆ, ವಾಸ್ತವವಾಗಿ ನಮ್ಮ ಮಾಧ್ಯಮಗಳು ಮಾಡಿದ್ದೇನು?
ಲಾಕ್ ಡೌನ್ ನಡುವೆ ಬೀದಿಗಿಳಿದ ಜನಸಾಮಾನ್ಯರ ಮೇಲೆ ಪೊಲೀಸರು ಲಾಠಿ ಬೀಸಿದ್ದನ್ನೇ ದಿನವಿಡೀ ವಿಚಿತ್ರ ಆಂಗಲ್ಲುಗಳಲ್ಲಿ, ಥರಹೇವಾರಿ ಕಾಮಿಡಿ ಹೇಳಿಕೆ- ಅಡಿಬರಹಗಳ ಜೊತೆಗೆ ತೋರಿಸಲಾಯಿತು. ಲಾಕ್ ಡೌನ್ ಜಾರಿಗೆ ಬಂದು ಬರೋಬ್ಬರಿ ಐದು ದಿನಗಳೇ ಕಳೆದರೂ ಕನ್ನಡದ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಒಂದೋ ಪೊಲೀಸರ ಲಾಠಿ ಕಾರ್ಯಾಚರಣೆಯೇ ಬಿತ್ತರವಾಯಿತು, ಇಲ್ಲವೇ ಕರೋನಾ ಕುರಿತ ಧರ್ಮಸ್ಥಳದ ದೀಪ ಆರಿದಂತಹ ಮೂರನೇ ದರ್ಜೆ ಜೋಕುಗಳನ್ನೇ ಮಹಾನ್ ಕಾಲಜ್ಞಾನಿಗಳಂತೆ ಬಣ್ಣಿಸಲಾಯಿತು. ಹೆಚ್ಚೆಂದರೆ ಕರೋನಾದ ಕುರಿತ ದೇಶ-ವಿದೇಶಗಳ ಅತಿರಂಜಿತ, ಅಮಾನುಷ ವದಂತಿಗಳನ್ನೇ ಸುದ್ದಿ ಪ್ಯಾಕೇಜ್ ಮಾಡಿ ಜನರಲ್ಲಿ ಭಯ ಹುಟ್ಟಿಸಲಾಯಿತು. ಕರೋನಾದಂತಹ ಭೀಕರ ಕಾಯಿಲೆ ಕೂಡ ಕೊನೆಗೂ ಟಿವಿ ಮಾಧ್ಯಮಗಳ ಪಾಲಿಗೆ ರಂಜನೆ ಅಥವಾ ಭೀತಿ ಹುಟ್ಟಿಸುವ ಮೂಲಕ ಟಿಆರ್ ಪಿ ಏರಿಸಿಕೊಳ್ಳುವ ಅವಕಾಶವಾಯಿತು.
ಈ ವಿಕೃತಿ ಎಷ್ಟರಮಟ್ಟಿಗೆ ಇತ್ತು ಎಂದರೆ; ಕೆಲವು ಕಡೆ ಟಿವಿ ಕ್ಯಾಮರಾಮನ್ ಮತ್ತು ವರದಿಗಾರರು, ತಮ್ಮ ಬೆಂಗಳೂರು ಆಫೀಸಿನ ಸೂಚನೆಯಂತೆ, ಪೊಲೀಸರಿಗೆ ಮೊದಲೇ ಹೇಳಿ, ದಾರಿಹೋಕರ ಮೇಲೆ ಲಾಠಿ ಬೀಸುವಂತೆ ಕುಮ್ಮಕ್ಕು ಕೊಟ್ಟು ಆ ದೃಶ್ಯಗಳನ್ನು ಮಸಾಲೆ ಹೇಳಿಕೆಗಳೊಂದಿಗೆ ರೆಕಾರ್ಡ್ ಮಾಡಿಕೊಂಡರು. ನಾಗರಿಕರ ಮೇಲೆ ಪೊಲೀಸರ ಲಾಠಿ ಪ್ರಹಾರ ಅತಿಯಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗುತ್ತಿದ್ದಂತೆ ಸ್ವತಃ ಪೊಲೀಸ್ ಸಿಬ್ಬಂದಿಯೇ ಈ ಕುಚೇಷ್ಟೆ ಪತ್ರಿಕೋದ್ಯಮದ ಬಗ್ಗೆ ಬಾಯಿಬಿಟ್ಟರು!
“ಟಿವಿಯವರ ಬೈಟ್ ಕೋರಿಕೆಗಾಗಿ ನಾವು ಲಾಠಿ ಬೀಸಿದೆವು. ಅದು ಹೊರತುಪಡಿಸಿ, ಕ್ಯಾಮರಾ ಇಲ್ಲದ ಕಡೆ ಜನರ ಮೇಲೆ ಹಾಗೆ ಲಾಠಿ ಬೀಸಲಿಲ್ಲ” ಎಂದೂ ಕೆಲವು ಪೊಲೀಸ್ ಅಧಿಕಾರಿಗಳು ಅನಧಿಕೃತವಾಗಿ ತಮ್ಮ ಸಂದಿಗ್ಧತೆ ತೋಡಿಕೊಂಡರು! ಅಷ್ಟರಮಟ್ಟಿಗೆ ಟಿವಿ ಮಾಧ್ಯಮಗಳ ಟಿಆರ್ ಪಿ ಹಪಾಹಪಿ ಕರೋನಾ ಕಾಲದಲ್ಲೂ ವಿಜೃಂಭಿಸಿತು.
ಹೀಗೆ ಕುಚೇಷ್ಟೆಗೆ ತೋರಿದ ಆಸಕ್ತಿಯ ಒಂದು ಭಾಗವನ್ನಾದರೂ, ಈ ಮಾಧ್ಯಮಗಳು ಲಾಕ್ ಡೌನ್ ನಿಂದಾಗಿ ಬಡವರು, ಕೂಲಿಕಾರ್ಮಿಕರು, ಗ್ರಾಮೀಣ ವಲಸಿಗರ ಬದುಕು ಏನಾಗುತ್ತಿದೆ. ಯಾಕೆ ಅವರುಗಳು ದಿಢೀರನೇ ಬರಿಗಾಲಿನಲ್ಲಿ ನಡೆದು ನೂರಾರು ಕಿ.ಮೀ ದೂರದ ಹಳ್ಳಿಗಳಿಗೆ ಹೊರಟಿದ್ದಾರೆ ಎಂಬ ಬಗ್ಗೆ ತೋರಿದ್ದರೆ; ಕಟ್ಟಕಡೆಯ ಜನರ ಸಂಕಷ್ಟವನ್ನು ಆಳುವ ಮಂದಿಯ ಮುಖಕ್ಕೆ ಹಿಡಿಯುವ ಅವಕಾಶವಿತ್ತು. ಆದರೆ, ಅಂತಹ ಯಾವ ಪ್ರಯತ್ನಗಳೂ ಕಾಣಲೇ ಇಲ್ಲ
ಇನ್ನು ಮುದ್ರಣ ಮಾಧ್ಯಮಗಳ ಸ್ಥಿತಿ ಕೂಡ ಇದಕ್ಕಿಂತ ತೀರಾ ಭಿನ್ನವಾಗೇನೂ ಇರಲಿಲ್ಲ. ಕೆಲವು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸುದ್ದಿಗಳನ್ನು(ಏಜೆನ್ಸಿ ಕಾಪಿಗಳ ಅನುವಾದ) ಹೊರತುಪಡಿಸಿ, ಉಳಿದಂತೆ ಸ್ಥಳೀಯವಾಗಿ ರಾಜ್ಯ ಮಟ್ಟದ ಸುದ್ದಿಗಳಲ್ಲಿ ಕೂಡ ಲಾಕ್ ಡೌನ್, ಪೊಲೀಸರ ಕಾರ್ಯಾಚರಣೆ, ನಗರ ಮತ್ತು ಪಟ್ಟಣ ಪಂಚಾಯ್ತಿಗಳ ಮಟ್ಟದ ಕರೋನಾ ಲಾಕ್ ಡೌನ್ ನಿರ್ವಹಣೆಯಂತಹ ವಿಷಯಗಳೇ ಪುಟ ತುಂಬಿದ್ದವು ವಿನಃ ಕರೋನಾದ ನೈಜ ಸವಾಲುಗಳ ಬಗ್ಗೆ ಮಾಹಿತಿ- ವಿಶ್ಲೇಷಣೆಗಳು ಕಂಡದ್ದು ವಿರಳ. ಇನ್ನು ಇಡೀ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಈ ಮಹಾಮಾರಿಯ ಬಗ್ಗೆ ಜನರ ಅರಿವು ಏನಿದೆ? ಸ್ಥಳೀಯ ಆಡಳಿತಗಳು ಹೇಗೆ ತಯಾರಿ ಮಾಡಿಕೊಂಡಿವೆ? ಲಾಕ್ ಡೌನ್ ಬಳಿಕ ಅಲ್ಲಿನ ಬದುಕು ಹೇಗಿದೆ ಎಂಬ ಬಗ್ಗೆ ಯಾವುದೇ ಪತ್ರಿಕೆಯಲ್ಲೂ ಬೆಳಕು ಚೆಲ್ಲುವ ವರದಿಗಳು ಬಂದದ್ದು ಕಾಣಲಿಲ್ಲ.
ಇನ್ನು ಪಂಚಾಯ್ತಿ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರಾಜಧಾನಿ ಮಟ್ಟದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ವರೆಗೆ ಸರ್ಕಾರ ಕರೋನಾ ಸೋಂಕು ಪತ್ತೆ, ಪ್ರತ್ಯೇಕಿಸುವಿಕೆ ಮತ್ತು ಚಿಕಿತ್ಸೆಗಾಗಿ ಏನೆಲ್ಲಾ ತಯಾರಿ ಮಾಡಿಕೊಂಡಿದೆ. ರೋಗ ಮೂರನೇ ಹಂತಕ್ಕೆ ತಲುಪುವ ಹೊತ್ತಿಗೆ ತಯಾರಿಮಾಡಿಕೊಳ್ಳಲೇಬೇಕಿದ್ದ ಪ್ರತ್ಯೇಕ ವಾರ್ಡುಗಳು, ವೆಂಟಿಲೇಟರುಗಳು, ವೈದ್ಯಕೀಯ ಸಿಬ್ಬಂದಿಯ ಅಗತ್ಯ ಸುರಕ್ಷಾ ಸಾಧನಗಳು(ಪಿಪಿಇ), ಪ್ರಯೋಗಾಲಯಗಳಿಗೆ ಅಗತ್ಯ ಪ್ರಮಾಣದ ಟೆಸ್ಟಿಂಗ್ ಕಿಟ್, ಆಂಬುಲೆನ್ಸ್ ವ್ಯವಸ್ಥೆ, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಲಭ್ಯತೆ, ಹೆಚ್ಚುವರಿ ಅಗತ್ಯ ಬಿದ್ದಲ್ಲಿ ಅದಕ್ಕಾಗಿ ಯಾವ ತಯಾರಿ ನಡೆದಿದೆ? ಎಂಬ ಪ್ರಾಥಮಿಕ ಮಾಹಿತಿಗಳನ್ನು ಕೂಡ ಈವರೆಗೆ ಯಾವುದೇ ಮಾಧ್ಯಮ ಸಮಗ್ರವಾಗಿ ವಿವರ ವರದಿ ನೀಡಿದ ಉದಾಹರಣೆಗಳು ವಿರಳ.
ಇದೀಗ ಈ ಎಲ್ಲಾ ವೃತ್ತಿಪರತೆಯನ್ನು ಮೀರಿಸುವಂತಹ ವರದಿ ರಾಜ್ಯದಲ್ಲಿ ಮೂರನೇ ಕರೋನಾ ಸಾವು ಸಂಭವಿಸಿದ ಬಳಿಕ ಅನಾವರಣಗೊಳ್ಳುತ್ತಿದೆ. ಮೊದಲನೆಯದಾಗಿ ಕರೋನಾ ಸೋಂಕಿತ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂಬ ನಿಯಮಗಳಿಗೆ ವಿರುದ್ಧವಾಗಿ ಶಿರಾ ಮೂಲದ ವ್ಯಕ್ತಿಯ ಪತ್ನಿಯರು, ಮಕ್ಕಳು, ಅವರ ಧರ್ಮ- ಜಾತಿಗಳನ್ನು ಎಳೆದುತಂದು ವರದಿಯನ್ನು ರಂಜನೀಯ ಪ್ಯಾಕೇಜ್ ಮಾಡಲಾಯಿತು. ಟಿವಿ ವಾಹಿನಿಗಳಂತೂ ಮತ್ತಷ್ಟು ರೋಚಕಗೊಳಿಸಿ ಕರೋನಾ ಸೋಂಕು ತಗುಲಿದ್ದು ಆ ವ್ಯಕ್ತಿಯ ಧರ್ಮದ ಕಾರಣಕ್ಕೇ ಎಂಬಂತೆ ಬಿಂಬಿಸಿದವು.
ಇದೇ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋದ ‘ವಿಜಯಕರ್ನಾಟಕ’ ದಿನಪತ್ರಿಕೆ, ರಾಜ್ಯದ ಈವರೆಗಿನ ಮೂರು ಕರೋನಾ ಸಾವು ಪ್ರಕರಣಗಳಲ್ಲಿ ಸಾವಿಗೀಡಾದವರ ಧರ್ಮವನ್ನೇ ಗುರಿಯಾಗಿಟ್ಟುಕೊಂಡು ‘ಕೊರೊನಾದಿಂದ ಸತ್ತವರೆಲ್ಲ ಒಂದೇ ಸಮುದಾಯದವರು, ಈಗಲೂ ಪ್ರಾರ್ಥನೆ ಹೆಸರಲ್ಲಿ ಗುಂಪು ಸೇರೋದೇಕೆ?’ ಎಂಬ ಶೀರ್ಷಿಕೆಯಲ್ಲಿ(28.03.2020) ವಿಶೇಷ ವರದಿಯನ್ನೇ ಪ್ರಕಟಿಸಿದೆ. ಮುಖ್ಯವಾಗಿ ಮೂರೂ ಸಾವುಗಳು ಒಂದೇ ಸಮುದಾಯದವರದ್ದು, ಆ ಮೂರು ಮಂದಿಯ ಪೈಕಿ ಇಬ್ಬರಿಗೆ ಮೆಕ್ಕಾ ಯಾತ್ರೆ ವೇಳೆ ಸೋಂಕು ತಗಲಿದ್ದರೆ, ಮತ್ತೊಬ್ಬರಿಗೆ ದೆಹಲಿ ಜಾಮಿಯಾ ಮಸೀದಿ ಭೇಟಿಯಿಂದ ಸೋಂಕಿತರಾಗಿದ್ದರು ಎಂದು ವರದಿ ಹೇಳಿದೆ. ಜೊತೆಗೆ, ಈಗಲೂ ಆ ಸಮುದಾಯದವರು ಲಾಕ್ ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆಗೆ ಮಸೀದಿಗೆ ಹೋಗುತ್ತಾರೆ. ಅವರಿಂದಾಗಿಯೇ ಕರೋನಾ ಹರಡುತ್ತಿದೆ ಎಂಬ ಭೀತಿ ಜನರಲ್ಲಿದೆ ಎಂದೂ ಹೇಳಲಾಗಿದೆ!

“ಸರಕಾರದ ಕರೆಗೆ ಓಗೊಟ್ಟ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಮಂದಿರ, ಚರ್ಚ್‌ಗೆ ಹೋಗುವುದನ್ನು ಹತ್ತು ದಿನಗಳ ಹಿಂದೆಯೇ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ ನಿರ್ದಿಷ್ಟ ಸಮುದಾಯದ ಸಮೂಹ ಮಾತ್ರ ಈಗಲೂ ಪ್ರಾರ್ಥನೆಯ ನೆಪದಲ್ಲಿ ಗುಂಪು ಸೇರುತ್ತಿರುವುದು, ಕಫ್ರ್ಯೂ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಓಡಾಡುತ್ತಿರುವುದು ನಾಗರಿಕ ಸಮಾಜದ ಆತಂಕಕ್ಕೆ ಕಾರಣವಾಗಿದೆ” ಎಂದು ವರದಿ ನೇರವಾಗಿ ಒಂದು ಸಮುದಾಯದ ವಿರುದ್ಧ ಕೆಂಡಕಾರಿದೆ. ಜೊತೆಗೆ ಸದ್ಯ ರಾಜ್ಯದಲ್ಲಿ ಸೋಂಕಿತರ ಪೈಕಿ ಅತಿಹೆಚ್ಚು ಜನ ಅದೇ ಸಮುದಾಯದವರು ಎಂದಿರುವ ವರದಿ, ಮತ್ತೊಂದು ಕಡೆ ಕರೋನಾ ವೈರಾಣು ಹರಡಿ ಎಂದು ಫೇಸ್ ಬುಕ್ ನಲ್ಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತ ವ್ಯಕ್ತಿಯ ಪ್ರಕರಣವನ್ನೂ ಉಲ್ಲೇಖಿಸಿದೆ. ಹಾಗೆ ನೋಡಿದರೆ; ಬಂಧಿತ ವ್ಯಕ್ತಿಯ ವಿಕೃತಿಗೂ, ಈ ಪತ್ರಿಕೆಯ ವರದಿಗೂ ಅಂತಹ ವ್ಯತ್ಯಾಸವೇನೂ ಇಲ್ಲ!

ಅಂದರೆ; ಒಂದು ಜಾಗತಿಕ ಭೀಕರ ಮಹಾಮಾರಿಯನ್ನು ಕೂಡ ಒಂದು ಕೋಮಿಗೆ ತಳಕುಹಾಕಿ ವರದಿ ಮಾಡುವ ಮಟ್ಟಿಗೆ ಕನ್ನಡ ಪತ್ರಿಕೋದ್ಯಮದ ಬಂದು ತಲುಪಿದೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ರೋಗ ಹರಡಲು ಆ ಸಮುದಾಯವೇ ಕಾರಣ ಎನ್ನುವ ವಾದ ಮಂಡಿಸುವ ವರದಿಯಲ್ಲಿ ಅಪ್ಪಿತಪ್ಪಿಯೂ ಆ ಕುರಿತ ಅಧಿಕಾರಿಗಳು, ತಜ್ಞರು, ಸಮುದಾಯದವರ ಹೇಳಿಕೆಯಾಗಲೀ, ಅಭಿಪ್ರಾಯವಾಗಲೀ ಉಲ್ಲೇಖವಾಗುವುದಿಲ್ಲ! ಅಷ್ಟರಮಟ್ಟಿಗೆ ವರದಿಗಾರನೊಬ್ಬ ಕಾರಿಕೊಂಡಿರುವ ಒಂದು ಸಮುದಾಯದ ವಿರುದ್ಧದ ದ್ವೇಷವನ್ನೇ ವಿಶೇಷ ವರದಿ ಎಂದು ಆ ಪತ್ರಿಕೆ ತನ್ನ ಓದುಗರಿಗೆ ಉಣಬಡಿಸಿದೆ.
ಆ ಹಿನ್ನೆಲೆಯಲ್ಲಿ ಆ ವರದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಪತ್ರಿಕೋದ್ಯಮದ ಘನತೆ, ಕನಿಷ್ಠ ನೈತಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಯುವ ಹೊಣೆಗಾರಿಕೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೆಲವು ತಿಂಗಳ ಹಿಂದೆ ಕಲಬುರಗಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಆ ಪತ್ರಿಕೆಯ ಸಂಪಾದಕರು, ಮಾಧ್ಯಮ ಇಂದು ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಉಳಿದಿಲ್ಲ, ಬದಲಾಗಿ ಅಧಿಕಾಸ್ಥರ ಸಾಕು ನಾಯಿಯಾಗಿದೆ ಎಂದು ಹೇಳಿದ್ದರು. ಇದೀಗ ಈ ವರದಿ ಅವರ ಆ ಮಾತು ಮಾಧ್ಯಮದ ಅನಿವಾರ್ಯತೆ ಕುರಿತ ಅಸಹಾಯಕತೆಯಲ್ಲ; ಬದಲಾಗಿ ಸಮಾಜವನ್ನು ಕೋಮು ಮತ್ತು ಧರ್ಮದ ಮೇಲೆ ಒಡೆದು ಮತ ಬೇಟೆಯಾಡುವ ಅಧಿಕಾರಸ್ಥರಿಗೆ ತಮ್ಮ ನಿಷ್ಠೆ ಎಷ್ಟಿದೆ ಎಂಬುದನ್ನು ತೋರ್ಪಡಿಸುವ ಹೆಮ್ಮೆಯ; ಆತ್ಮಪ್ರಸಂಶೆಯ ಹೇಳಿಕೆ ಎಂಬುದನ್ನು ಖಚಿತಪಡಿಸಿದೆ. ಪತ್ರಿಕೋದ್ಯಮ ನಿಜಕ್ಕೂ ಈಗ ಬೆತ್ತಲಾಗಿದೆ. ಮುಖವಾಡ ಕಳಚಿ ಇನ್ನಷ್ಟು ಸ್ಪಷ್ಟವಾಗತೊಡಗಿದೆ.