ಚೀನಾ ದೇಶವನ್ನು ತಲ್ಲಣಗೊಳಿಸಿದ ಕೋವಿಡ್-19 ಕರೋನಾ ವೈರಸ್ ಇದೀಗ ವಿಶ್ವದ ಬಹುತೇಕ ದೇಶಗಳಿಗೆ ಹರಡಿದೆ. ಇರಾನ್, ಇಟಲಿ, ಸ್ಪೇನ್, ಫ್ರಾನ್ಸ್, ದಕ್ಷಿಣ ಕೊರಿಯ, ಅಮೆರಿಕಾ, ಜರ್ಮನಿ ಮುಂತಾದ ದೇಶಗಳಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ದೇಶದಲ್ಲಿ ಕರೋನಾ ವೈರಸ್ ಹರಡುವಿಕೆ ಎರಡನೇ ಹಂತದಲ್ಲಿ ಇದೆ. ಮೊದಲ ಪ್ರಕರಣ ಜನವರಿ 30ರಂದು ಪತ್ತೆ ಆಗಿದ್ದರೂ ಕಳೆದ ಎರಡು ವಾರಗಳಲ್ಲಿ ಕರೋನಾ ವೈರಸ್ ಗಂಭೀರ ಸ್ವರೂಪ ಪಡೆಯುತ್ತಿದೆ. ಮೊದಲ ಮೂರು ಪ್ರಕರಣಗಳು ಕೇರಳದಲ್ಲಿ ಕಾಣಿಸಿಕೊಂಡಿದ್ದು, ಮೂರು ಮಂದಿ ಕೂಡಾ ಚೀನಾ ದೇಶದಿಂದ ಬಂದವರು. ಮಾರ್ಚ್ ತಿಂಗಳ 4ನೇ ತಾರೀಕಿನಿಂದ ಕರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿತು. ಮೊದಲ ಹಂತದಲ್ಲಿ ಮೂರಿದ್ದ ಪ್ರಕರಣಗಳು ಎರಡನೇ ಹಂತದಲ್ಲಿ 32ಕ್ಕೆ (ಮಾ.4) ಏರಿಕೆ ಆಗುತ್ತದೆ. ಅನಂತರ 65 ಆಗಿ ಒಂದು ವಾರದೊಳಗೆ 167 ಕ್ಕೆ ಏರಿಕೆ ಆಗಿದೆ. ಇನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ನಾಲ್ವರು ಇದುವರೆಗೆ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಚೀನಾ ದೇಶದ ವೂಹಾನ್ ಪ್ರಾಂತ್ಯ ವೈರಸ್ ದಾಂಧಲೆಯ ಅನಂತರ ನಿಧಾನವಾಗಿ ಮತ್ತೆ ಸಹಜ ಸ್ಥಿತಿಗೆ ಹಿಂತಿರುಗುತ್ತಿದೆ. ಆದರೆ, ಐರೋಪ್ಯ ರಾಷ್ಟ್ರಗಳು ಅದರಲ್ಲೂ ಸಾಕಷ್ಟು ವೈದ್ಯಕೀಯ ಸೌಲಭ್ಯ ಇರುವ ಜರ್ಮನಿ, ಇಟಲಿಯಂತಹ ದೇಶಗಳು ಒಂದು ಯಕಶ್ಚಿತ್ ವೈರಸ್ ಎದುರಿಸಲು ಹೆಣಗಾಡುತ್ತಿದೆ. ಇರಾನ್ ಸೇರಿದಂತೆ ಬಹುತೇಕ ಐರೋಪ್ಯ ರಾಷ್ಟ್ರಗಳಲ್ಲಿ ನಮ್ಮ ದೇಶದಲ್ಲಿ ಇದುವರೆಗೆ ಆಗಿರುವಂತೆಯೇ ನಿಧಾನವಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಆಗಿವೆ. ನಾಲ್ಕು ಮತ್ತು ಐದನೇ ವಾರಗಳಲ್ಲಿ ಈ ಏರಿಕೆ ವಿಪರೀತವಾಗಿ ಹೆಚ್ಚಳ ಆಗಿರುವುದು ಅಂಕಿ ಅಂಶಗಳಿಂದ ಕಂಡುಬರುತ್ತಿದೆ.
ಈ ರಾಷ್ಟ್ರಗಳಲ್ಲಿ ಕರೋನಾ ಸಾಂಕ್ರಮಿಕ ರೋಗವಾಗಿ ಹರಿದಾಡತೊಡಗಿದಾಗ ಅಲ್ಲಿನ ಸರಕಾರಗಳಿಗೆ ವೈದ್ಯಕೀಯ ನಿರ್ವಹಣೆ ಅಸಾಧ್ಯದ ಕೆಲಸವಾಯ್ತು. ಮೊದಲ ಹಂತದಲ್ಲಿ ವಿದೇಶದಿಂದ ಬಂದ ಪ್ರವಾಸಿ ಹಾಗೂ ವಿದೇಶಕ್ಕೆ ಹೋಗಿ ಬಂದವರಲ್ಲಿ ಸೋಂಕು ತಗುಲಿದ್ದರೆ, ಅವರಲ್ಲಷ್ಟೇ ಇರುತ್ತದೆ. ಅನಂತರ ನಿಧಾನವಾಗಿ ಅವರ ಕುಟುಂಬ, ಅವರ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗಲುತ್ತದೆ. ಹೆಚ್ಚೆಂದರೆ, ವಿಮಾನದ ಸಿಬ್ಬಂದಿ, ಹೊಟೇಲ್ ಸಿಬ್ಬಂದಿ, ಟ್ಯಾಕ್ಸಿ ಇತ್ಯಾದಿ ಸಂಪರ್ಕಕ್ಕೆ ಬಂದಿರುವ ಮಂದಿಗೆ ಎರಡನೇ ಹಂತದ ಸೋಂಕು ವರ್ಗಾವಣೆ ಆಗುತ್ತಿರುತ್ತದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಭಾರತದ ಎಲ್ಲೆಡೆ ಕರೋನಾ ವೈರಸ್ ಇದೇ ಹಂತದಲ್ಲಿದೆ. ಅಂದ್ರೆ ಎರಡನೇ ಹಂತದಲ್ಲಿದೆ. ಎರಡನೇ ಹಂತದಿಂದ ಮೂರನೇ ಹಂತಕ್ಕೆ ಅಂದರೆ ಸಾಂಕ್ರಮಿಕ ರೋಗವಾಗಿ ಹರಡದಂತೆ ತಡೆಯಲು ಸಾಧ್ಯವಾದರೆ ಕೋವಿದ್-19 ವಿರುದ್ಧ ಮೊದಲ ಹಂತದ ಯುದ್ಧ ಗೆದ್ದಂತೆ.

ಭಾರತ, ಪಾಕಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವದಲ್ಲೇ ಹೆಚ್ಚಿನ ಕೊರೊನ ಸಮಸ್ಯೆ ಎದುರಿಸುತ್ತಿರುವ ಚೀನಾ ಮತ್ತು ಇರಾನ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನದಲ್ಲಿ ವೈರಸ್ ಸಮಸ್ಯೆ ಗಂಭೀರವಾಗಿದೆ. ಭಾರತದಲ್ಲಿ ಇದುವರೆಗೆ ಕಡಿಮೆ ಪ್ರಕರಣಗಳು ಪತ್ತೆಯಾಗಲು ಕಡಿಮೆ ಪ್ರಮಾಣದಲ್ಲಿ ಜನರ ತಪಾಸಣೆ ಮಾಡಿರುವುದು ಒಂದು ಕಾರಣ ಆಗಿರಬಹುದು ಎನ್ನಲಾಗುತ್ತಿದೆ. ಎಡಪಂಥೀಯ ಸರಕಾರ ಇರುವ ಕೇರಳದಲ್ಲಿ ಮಾರ್ಚ್ 17ರ ತನಕ 2467 ಮಂದಿಯನ್ನು ತಪಾಸಣೆ ಮಾಡಲಾಗಿದ್ದರೆ, ಕರ್ನಾಟಕದಲ್ಲಿ ಇದೇ ದಿನಾಂಕ ತನಕ ಕೇವಲ 943 ಮಂದಿಯಿಂದ ಮಾತ್ರ ಸ್ಯಾಂಪಲ್ ಸಂಗ್ರಹಿಸಲಾಗಿದೆ. ದೇಶದಲ್ಲಿ ಆರಂಭದ ದಿನಗಳಲ್ಲಿ ಕೇವಲ 52 ಪರೀಕ್ಷಾ ಕೇಂದ್ರಗಳಿದ್ದು, ಅವುಗಳನ್ನು ನೂರಕ್ಕಿಂತ ಹೆಚ್ಚು ಮಾಡಲಾಗುತ್ತಿದೆ. ಹೆಚ್ಚು ಪರೀಕ್ಷಾ ಕೇಂದ್ರಗಳಿದಿದ್ದರೆ ಹೆಚ್ಚು ಸೋಂಕು ಪ್ರಕರಣಗಳು ಪತ್ತೆ ಆಗುತ್ತಿತ್ತು ಎನ್ನಲಾಗಿದೆ.
ಈಗಾಗಲೇ, ಭಾರತ ಮತ್ತು ಸಾರ್ಕ್ ರಾಷ್ಟ್ರಗಳು ಕೋವಿದ್ -19 ನಿಭಾಯಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿವೆ. ಇದಕ್ಕೆ ಹಲವು ಪೊಳ್ಳು ಕಾರಣಗಳನ್ನು ನೀಡಲಾಗುತ್ತಿದೆ. ಭಾರತ ಸೇರಿದಂತೆ ಈ ರಾಷ್ಟ್ರಗಳ ಅಸಲಿ ಬಣ್ಣ ಬಯಲಾಗುವುದೇ ಮೂರನೇ ಹಂತದಲ್ಲಿ ವೈರಸ್ ಸಾಂಕ್ರಾಮಿಕ ರೋಗದಂತೆ ಸಮುದಾಯದ ನಡುವೆ ಹರಡಿದಾಗ. ಜರ್ಮನಿ ಮತ್ತು ಇಟಲಿ ದೇಶಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳ ಹೊರತಾಗಿಯೂ ಮೂರನೇ ಹಂತದಲ್ಲಿ ಸಮೂಹವಾಗಿ ಹರಿದು ಬಂದ ರೋಗಿಗಳಿಗೆ ಕೃತಕ ಉಸಿರಾಟವನ್ನು ಒದಗಿಸಲು ಸಾಧ್ಯವಾಗಲಿಲ್ಲ. ಕೊನೆಗೆ, ಆಸ್ಪತ್ರೆಯಲ್ಲಿ ಜಾಗವು ಇರಲಿಲ್ಲ. ಇಂತಹ ಹಂತಕ್ಕೆ ಬಂದಾಗ ಭಾರತದ ಪರಿಸ್ಥಿತಿ ಏನಾಗಬಹುದು ಎಂಬುದು ಆತಂಕಕಾರಿಯಾಗಿದೆ.
ಭಾರತದಲ್ಲಿ ಪ್ರತಿ ಎರಡು ಸಾವಿರ ಜನ ಸಂಖ್ಯೆಗೆ ಸರಾಸರಿ ಒಂದು ಹಾಸಿಗೆ ಮಾತ್ರ ಆಸ್ಪತ್ರೆಯಲ್ಲಿ ಲಭ್ಯವಿದೆ. ಎರಡು ಸಾವಿರ ಮಂದಿಯಲ್ಲಿ ತಲಾ ಇಬ್ಬರಿಗೆ ಸೋಂಕು ತಗಲಿದರು ಪರಿಸ್ಥಿತಿ ಗಂಭೀರವಾಗಲಿದೆ. ಇಂಗ್ಲೆಂಡ್ ದೇಶದಲ್ಲಿ ಭಾರತಕ್ಕಿಂತ ಐದು ಪಟ್ಟು ಹೆಚ್ಚು ಆಸ್ಪತ್ರೆ ಬೆಡ್ ಸೌಲಭ್ಯವಿದೆ. ಅದೇ ರೀತಿ ರೀತಿ ಇಟಲಿಯಲ್ಲಿ ಭಾರತಕ್ಕಿಂತ ಆರು ಪಟ್ಟು ಹೆಚ್ಚು ಹಾಸಿಗೆ ಸೌಲಭ್ಯ ಇದ್ದರೂ ಪರಿಸ್ಥಿತಿ ನಿರ್ವಹಿಸಲು ಸಾಧ್ಯವಾಗದೆ, ಹೆಚ್ಚು ವಯೋವೃದ್ಧರಿಗೆ ವೈದ್ಯಕೀಯ ಸೌಲಭ್ಯ ನಿರಾಕರಿಸಲಾಗುತ್ತಿದೆ. ಅದೇ ರೀತಿ ಭಾರತದಲ್ಲಿ ತಲಾ ಒಂದು ಸಾವಿರ ಮಂದಿಗೆ ಒಬ್ಬ ವೈದ್ಯನ ಸೇವೆಯೂ ದೊರೆಯುವುದಿಲ್ಲ. ಇಂಗ್ಲೆಂಡ್, ಇಟಲಿ, ದಕ್ಷಿಣ ಕೊರಿಯ ದೇಶಗಳಲ್ಲಿ ತಲಾ ಒಂದು ಸಾವಿರ ಮಂದಿಗೆ 2 ರಿಂದ 4 ಮಂದಿ ವೈದ್ಯರ ಲಭ್ಯತೆ ಇದೆ.

ಆದರೆ, ಎರಡು ವರ್ಷಗಳ ಹಿಂದೆ ನಿಫಾ ಬಂದಾಗ ಅದನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ಆದ್ದರಿಂದ, ಸೂಕ್ತ ಕ್ರಮಗಳನ್ನು ಈಗಲೇ ಕೈಗೊಂಡರೆ ಕರೋನಾ ವೈರಸ್ ಮೂರನೇ ಹಂತದಲ್ಲಿ ವಿಷಮ ಪರಿಸ್ಥಿತಿಗೆ ತಲುಪುವುದನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯ ಆಗಬಹುದು.
ಮುಂದಿನ ಎರಡು ವಾರಗಳಲ್ಲಿ ಸೋಂಕು ಎರಡನೇ ಹಂತದಿಂದ ಮೂರನೇ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನು ಸಂಪೂರ್ಣ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ ICMR ಹೇಳಿದೆ. ಈಗಾಗಲೇ ICMR ನಡಸಿರುವ ಅಧ್ಯಯನ ಪ್ರಕಾರ ಭಾರತದಲ್ಲಿ ಕರೋನಾ ಮೂರನೇ ಹಂತಕ್ಕೆ ತಲುಪಿಲ್ಲ.
ಕೊರೊನ ಸೋಂಕಿನ ಬಹುದೊಡ್ಡ ಆರೋಗ್ಯ ಸಮಸ್ಯೆ ಉಸಿರಾಟದ ತೊಂದರೆ. ಈಗಾಗಲೇ ಆಸ್ಪತ್ರೆಗಳಲ್ಲಿ ಈ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುವವರ ತಪಾಸಣೆ ಮಾಡಲಾಗಿದ್ದು, ಅವರಲ್ಲಿ ಯಾರಲ್ಲೂ ಕೂಡ ಕರೋನಾ ಸೋಂಕು ಕಂಡುಬಂದಿಲ್ಲ.
ಮೂರನೇ ಹಂತಕ್ಕೆ ಹೋಗುವ ಮುನ್ನ ಸರಕಾರ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವ ಮತ್ತು ಕೃತಕ ಉಸಿರಾಟ ವ್ಯವಸ್ಥೆಯ ಸೌಲಭ್ಯವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದೆ ಎನ್ನುತ್ತಾರೆ ತಜ್ಞ ವೈದ್ಯರು. ಅದರೊಂದಿಗೆ ಜನಜಾಗೃತಿ ಕೂಡ ಅಗತ್ಯವಾಗಿದೆ. ಸೋಂಕು ಹರಡುವ ಸರಪಳಿಯನ್ನು ತುಂಡರಿಸಬೇಕಾಗಿದೆ.