ಕರೋನಾ ವೈರಸ್ ಗೆ ಯಾವುದೇ ಮದ್ದು ಇನ್ನೂ ಕೂಡ ಯಾವುದೇ ದೇಶ ಪತ್ತೆ ಮಾಡಿಲ್ಲ. ಇದು ಜಗತ್ತಿಗೆ ಗೊತ್ತಿರುವ ವಿಚಾರ. ಕರೋನಾ ವೈರಸ್ ನಿರ್ನಾಮ ಮಾಡುವ ಶಕ್ತಿ ಯಾವುದು ಎಂದು ವಿಜ್ಞಾನ ಲೋಕವೇ ತಲೆ ಕಡಿಸಿಕೊಂಡು ಹುಡುಕುತ್ತಿದೆ. ಒಂದೆರಡು ದೇಶಗಳಲ್ಲಿ ಸೋಂಕು ನಿವಾರಕ ಔಷಧಿ ಪತ್ತೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದರೂ ಇನ್ನೂ ಕೂಡ ಪ್ರಯೋಗದ ಹಂತದಲ್ಲಿದೆ. ಆದರೆ ನಮ್ಮ ಭಾರತದಲ್ಲಿ ಹೆಮ್ಮಾರಿ ಕರೋನಾ ಗೆ ಮದ್ದು ಸಿಕ್ಕಿದೆ ಎನ್ನುವುದು ಭಾರೀ ಪ್ರಚಾರ ಪಡೆದುಕೊಂಡಿತ್ತು. ಕರೋನಾ ಆರಂಭದಲ್ಲಿ ಹಸುವಿನ ಗಂಜಲ ಹಾಗೂ ಸಗಣಿಯಿಂದ ಕರೋನಾ ನಿವಾರಣೆ ಮಾಡಬಹುದು ಎನ್ನುವ ವರದಿಗಳು ಬಂದಿದ್ದವು. ಆ ಬಳಿಕ ಆಯುಷ್ ಚಿಕಿತ್ಸಾ ಪದ್ಧತಿಯಿಂ ಕರೋನಾ ಸಂಪೂರ್ಣ ಗುಣಮುಖವಾಗಿದೆ ಎನ್ನುವ ವರದಿಗಳು ಬಂದಿದ್ದವು. ಆಯುಷ್ ಚಿಕಿತ್ಸಾ ಕ್ರಮದಿಂದ ಪ್ರಿನ್ಸ್ ಚಾರ್ಲ್ಸ್ ಗುಣಮುಖ ಆಗಿದ್ದಾರೆ ಎನ್ನುವ ವರದಿಗಳು ಬಂದಿದ್ದವು. ಈ ಸುದ್ದಿಯನ್ನು ನಂಬುವಂತೆ ಮಾಡಿದ್ದು, ನಮ್ಮ ಕೇಂದ್ರ ಸರ್ಕಾರದ ಓರ್ವ ಮಂತ್ರಿ.
ಆಯುಷ್ ವೈದ್ಯಕೀಯ ಪದ್ದತಿಯಿಂದ ಕರೋನಾ ವೈರಸ್ ಸೋಂಕು vಆಸಿಯಾಗಿದೆ. ಅದೂ ಕೂಡ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಸೌಖ್ಯಾ ರೀಟ್ರೀಟ್
ಮುಖ್ಯಸ್ಥ ಡಾ. ಐಸಾಕ್ ಮಥಾಯ್ ಬ್ರಿಟನ್ ರಾಜಕುಮಾರನಿಗೆ ಚಿಕಿತ್ಸೆ ನೀಡಿದ್ದಾರೆ. ಕರೋನಾ ಸೋಂಕಿನಿಂದ ಬಳಲುತ್ತಿದ್ದ ಬ್ರಿಟನ್ ರಾಜಕೂಮಾರ ಇದೀಗ ಸಂಪೂರ್ಣ ಗುಣಮುಖ ಆಗಿದ್ದಾರೆ. ಈ ಬಗ್ಗೆ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆ ನೀಡುವ ಸೌಖ್ಯಾ ರೀಟ್ರೀಟ್ ನಿಂದ ನನಗೆ ಮಾಹಿತಿ ಬಂದಿದೆ ಎಂದು ಕೇಂದ್ರ ಆಯುಷ್
ಸಚಿವ ಶ್ರೀಪಾದ್ ನಾಯಕ್ ಗೋವಾದಲ್ಲಿ ಹೇಳಿದ್ದರು. ಕೇಂದ್ರ ಸಚಿವರೇ ಈ ಬಗ್ಗೆ ಹೇಳಿದ ಮೇಲೆ ಅಧಿಕೃತ ಎಂದು ತಿಳಿದ ಮಾಧ್ಯಮಗಳು ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ ಎಂದು ವರದಿ ಮಾಡಿದ್ದವು. ಆದರೆ ಕೆಲವೇ ಹೊತ್ತಿನಲ್ಲಿ ಸಚಿವ ಮಾಹಿತಿ ಉಲ್ಟಾ ಹೊಡೆದಿತ್ತು. ಜವಾಬ್ದಾರಿ ಸ್ಥಾನದಲ್ಲಿರುವ ಕೇಂದ್ರ ಸಚಿವರು ಒಬ್ಬರು ಕೊಟ್ಟ ಮಾಹಿತಿ ಸಂಪೂರ್ಣ ಶುದ್ಧ ಸುಳ್ಳು ಎನ್ನುವುದು ಬಹಿರಂಗ ಆಗಿತ್ತು. ಭಾರತ ಸುಳ್ಳು ಹೇಳುತ್ತಿದೆ ಎನ್ನುವುದನ್ನು ಪ್ರಪಂಚದ ಎದುರು ಸಾರಿದ್ದು ಅದೇ ಬ್ರಿಟನ್ ಸರ್ಕಾರ.
ಬ್ರಿಟನ್ ರಾಜಕುಮಾರ ಚಾರ್ಲ್ಸ್ ಅವರು ಆಯುರ್ವೇದ ಔಷಧಿಯಿಂದ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬುದನ್ನು ಬ್ರಿಟನ್ ಸರ್ಕಾರ ಅಲ್ಲಗಳೆದಿದೆ. ಪ್ರಿನ್ಸ್ ಚಾರ್ಲ್ಸ್ ಕರೋನಾ ವೈರಸ್ ಸೋಂಕಿಗೆ ಬೆಂಗಳೂರಿನ ಆಯುರ್ವೇದ ಚಿಕಿತ್ಸೆ ಪಡೆದಿಲ್ಲ. ಬ್ರಿಟನ್ ಸರ್ಕಾರದ ರಾಷ್ಟ್ರೀಯ ಆರೋಗ್ಯ ಸೇವೆಯ ವೈದ್ಯಕೀಯ ಸಲಹೆ ರೀತಿಯಲ್ಲಿ ಔಷಧಿ ಪಡೆದಿದ್ದಾರೆ ಎಂದು ಲಂಡನ್ನ ಪ್ರಿನ್ಸ್ ಆಫ್ ವೇಲ್ಸ್ ನ ಮಾಧ್ಯಮ ವಕ್ತಾರರು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ ಸಚಿವರಾದ ಶ್ರೀಪಾದ್ ನಾಯಕ್ ಅವರು ನೀಡಿರುವ ಹೇಳಿಕೆಯಲ್ಲಿ ಉರುಳಿಲ್ಲ ಎಂದು ರಾಜಮನೆತನ ನಿರಾಕರಿಸಿದ್ದಾರೆ. ಆದರೆ ಆಯುರ್ವೇದ ರೆಸಾರ್ಟ್ನ ಡಾ. ಐಸಾಕ್ ಮಥಾಯ್ ಮಾತ್ರ. ಬ್ರಿಟನ್ ರಾಜ ಮತ್ತು ಆತನ ಪತ್ನಿ ನನ್ನ ರೋಗಿಗಳು. ಅವರಿಗೆ ಬಂದಿದ್ದ ರೋಗ ಯಾವುದು..? ಅದಕ್ಕೆ ನೀಡಿದ ಔಷಧಿ ಯಾವುದು ಎಂದು ನಾನು ಮಾಹಿತಿ ಕೊಟ್ಟರೆ ತಪ್ಪಾಗುತ್ತದೆ. ಹಾಗಾಗಿ ನಾನು ಏನನ್ನೂ ಹೇಳುವುದಿಲ್ಲ ಎಂದು ಅಡಕತ್ತರಿಯ ಉತ್ತರ ಕೊಟ್ಟು ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ.
ಓರ್ವ ಕೇಂದ್ರ ಸಚಿವರು ಹೇಳಿದ್ದಾರೆ ಎಂದ ಮೇಲೆ ಸತ್ಯವಾಗಿರುತ್ತದೆ ಎನ್ನುವ ನಂಬಿಕೆ ಎಲ್ಲರದ್ದು. ಆದರೆ ಸಚಿವರೊಬ್ಬರು ಬೇಜವಾಬ್ದಾರಿ ತನದಿಂದ ಸುಳ್ಳು ಹೇಳುತ್ತಾರೆ ಎಂದರೆ ನಂಬುದಕ್ಕೆ ಅಸಾಧ್ಯ. ಆದರೆ ಸಚಿವರೇನೋ ಸುಳ್ಳು ಹೇಳಿದರು ಎಂದಿಟ್ಟುಕೊಳ್ಳೋಣ. ಆದರೆ ಸಚಿವರ ಮಾತಿಗೆ ಇಂಬು ಕೊಡುವಂತೆ ಕರ್ನಾಟಕದ ಆಯುಷ್ ಇಲಾಖೆ ಆಯುಕ್ತೆ ಡಾ. ಮೀನಾಕ್ಷಿ ನೇಗಿ ಮಾತನಾಡಿದ್ದು, ಕರೋನಾ ವಿರುದ್ಧದ ಯುದ್ಧಕ್ಕೆ ಆಯುಷ್ ಇಲಾಖೆ ಸಜ್ಜಾಗಿದೆ. ಆಯುಷ್ ವೈದ್ಯರನ್ನು ಕೊರೊನಾ ಚಿಕಿತ್ಸೆಗೆ ಸರ್ಕಾರ ಬಳಸಿಕೊಳ್ಳಬಹುದು. ರಾಜ್ಯದಲ್ಲಿ ಸುಮಾರು 800 ಆಯುಷ್ ವೈದ್ಯರಿದ್ದಾರೆ. ಎಲ್ಲರಿಗೂ ಕರೋನಾ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಗಿದೆ. ಈಗಾಗಲೇ 200 ಮಂದಿ ಆಯುಷ್ ವೈದ್ಯರು ಆರೋಗ್ಯ ಇಲಾಖೆ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಆದರೆ ಕೇಂದ್ರ ಸಚಿವರು ಹೇಳಿದ್ದು ಸತ್ಯ ಎಂದಿರಲಿಲ್ಲ. ಆದರೆ ಆಯುಷ್ ಇಲಾಖೆಯಲ್ಲಿ ಕರೋನಾ ಗೆ ಚಿಕಿತ್ಸೆ ಎನ್ನುವಂತೆ ಮಾತನಾಡಿದ್ದರು. ಬ್ರಿಟನ್ ಸರ್ಕಾರ ತಿರುಗೇಟು ಕೊಟ್ಟ ಬಳಿಕ ಆಯುಷ್ ಇಲಾಖೆ, ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪತ್ರಿಕಾ ಮಾಧ್ಯಮಗಳು ಆಯುಷ್ ಇಲಾಖೆಯಲ್ಲಿ ಕೋವಿಡ್ – 19ಗೆ ಚಿಕಿತ್ಸೆ ಇದೆ ಎನ್ನುವ ಬಗ್ಗೆ ಯಾವುದೇ ಜಾಹೀರಾತು ಪ್ರಸಾರ ಮಾಡಬಾರದು ಎಂದು ತಿಳಿಸಿದೆ.
ಸಾಂಕ್ರಾಮಿಕ ರೋಗ ಕರೋನಾ ಬಗ್ಗೆ ಹೇಗೆಂದರೆ ಹಾಗೆ ವರದಿ ಪ್ರಕಟಿಸುವ ಹಾಗಿಲ್ಲ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಾಧ್ಯಮಗಳು ಸಾರ್ವಜನಿಕರಿಗೆ ಕರೋನಾ ಬಗ್ಗೆ ಮಾಹಿತಿ ನೀಡುವ ಮುನ್ನ ಸಂಬಂಧಿಸಿದ ಅಧಿಕೃತ ಸರ್ಕಾರಿ ಇಲಾಖೆ ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳುವುದು ಕಡ್ಡಾಯ ಎಂದಿದೆ. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಿಗೂ ಆ ಆದೇಶ ಅನ್ವಯ ಎಂದಿದೆ. ಸಾಂಕ್ರಾಮಿಕ ರೋಗ ಕೋವಿಡ್ -19 ವ್ಯಾಪಕವಾಗಿ ಹರಡುತ್ತಿದ್ದಷ್ಟೇ ವ್ಯಾಪಕವಾಗಿ ಸುಳ್ಳು ಸುದ್ದಿಗಳೂ ಹರಡುತ್ತಿವೆ. ಇದರಿಂದ ದೇಶದ ಜನರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮಾರ್ಚ್ 31 ರಂದೇ ಈ ಅದೇಶ ನೀಡಿದೆ. ಕರೋನಾ ಸುದ್ದಿ, ಸಾವು – ನೋವಿನ ಅಂಕಿ ಅಂಶಗಳ ವಿಚಾರದಲ್ಲೂ ಇದೇ ಆದೇಶ ಪಾಲಿಸಬೇಕು ಎಂದು ಸೂಚಿಸಿತ್ತು. ಆದರೆ ಮಾಧ್ಯಮಗಳಿಗೆ ಸರ್ಕಾರಿ ಸಂಸ್ಥೆಗಳು, ಜವಾಬ್ದಾರಿಯುತ ಅಧಿಕಾರಿ ವರ್ಗದವರು ಕಾಲಕಾಲಕ್ಕೆ ಸುದ್ದಿ ಕೊಡಬೇಕು ಎಂದೂ ಸೂಚಿಸಿತ್ತು. ಆದರೆ ಕೇಂದ್ರ ಸಚಿವರೊಬ್ಬರು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಭಾರತ ಜಾಗತಿಕಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ.