ಕರೋನಾ ನಿಯಂತ್ರಣಕ್ಕೆ ಸಿಗದೆ ಉಗಿಬಂಡಿಯಂತೆ ವಿಶ್ವಾದ್ಯಂತ ಸಂಚರಿಸುತ್ತಿದೆ. ಬರೋಬ್ಬರಿ 25 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದಾರೆ. 1 ಲಕ್ಷದ 70 ಸಾವಿರ ಜನರು ಕರೋನಾ ವೈರಸ್ ಎಂಬ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿ ಮುನ್ನಡೆದಿದ್ದು, ಸಾವಿನ ಸಂಖ್ಯೆ 650 ರ ಆಸುಪಾಸಿನಲ್ಲಿದೆ. ಅದೇ ರೀತಿ ನಮ್ಮ ಕರ್ನಾಟಕದಲ್ಲೂ ಕರೋನಾ ಸೋಂಕು ಉಲ್ಬಣವಾಗುತ್ತಿದ್ದು, ಲಾಕ್‌ಡೌನ್ ನಡುವೆಯೂ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಅಲ್ಲಲ್ಲಿ ಕರೋನಾ ವಾರಿಯರ್ಸ್ ವಿರುದ್ಧ ಹಲ್ಲೆ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ.
ಕರೋನಾ ಸೋಂಕನ್ನು ಕಡಿಮೆ ಮಾಡಲು ಇರುವ ಏಕೈಕ ಮಾರ್ಗ ಮನೆಯಲ್ಲೇ ಇರುವುದು. ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕರೋನಾ ಸೋಂಕು ಕಡಿಮೆಯಾಗಲಿದೆ. ಆದರೆ ಸಮಾಜದಲ್ಲಿ ಎಲ್ಲರೂ ಮನೆಯಲ್ಲೇ ಇದ್ದರೆ ಕರೋನಾ ವಿರುದ್ಧ ಹೋರಾಟ ನಡೆಸುವುದಾದರೂ ಹೇಗೆ? ಅದೇ ಕಾರಣಕ್ಕಾಗಿ ಸರ್ಕಾರ ಕೆಲವೊಂದಿಷ್ಟು ಜನರನ್ನು ಕರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ್ದಾರೆ. ಅದರಲ್ಲಿ ಪೊಲೀಸರು, ಆಶಾ ಕಾರ್ಯಕರ್ತೆಯರು, ಬಿಬಿಎಂಪಿ ಸಿಬ್ಬಂದಿ, ಹೋಂ ಗಾರ್ಡ್ಸ್ ಕೂಡ ಸೇರಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಜನ ಜಾಗೃತಿ ಅಥವಾ ಹೋಂ ಕ್ವಾರಂಟೈನ್ ಮಾಡಲು ಹೋದ ಆಶಾ ಕಾರ್ಯಕರ್ತೆಯರು, ಪೊಲೀಸರ ಮೇಲೆ ಹಲ್ಲೆಯಾಗಿರುವ ಘಟನೆಗಳು ನಡೆದಿವೆ. ಅದರಲ್ಲಿ ಪ್ರಮುಖ ಪ್ರಕರಣಗಳು ಎಂದರೆ ಬೆಂಗಳೂರಿನ ಸರಾಯಿ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆ ಮೇಲಿನ ಹಲ್ಲೆ ಹಾಗೂ ಪಾದರಾಯನಪುರದಲ್ಲಿ ಪೊಲೀಸರು, ಆಶಾ ಕಾರ್ಯಕರ್ತೆಯರು, ಬಿಬಿಎಂಪಿ ಸಿಬ್ಬಂದಿ ಮೇಲೆ ನಡೆದ ದಾಳಿ. ಅತ್ತ ಚಿಕ್ಕಮಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲೂ ಕರೋನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದಿವೆ. ಈ ರೀತಿಯ ದಾಳಿಗಳನ್ನು ತಡೆಯಲು ರಾಜ್ಯ ಸರ್ಕಾರ ಕಾನೂನು ಅಸ್ತ್ರಜಾರಿಗೆ ಮಾಡಿದೆ.

ಕರೋನಾ ವಿರುದ್ಧ ತಮ್ಮ ಪ್ರಾಣ ಒತ್ತೆಯಿಟ್ಟು ಜನರ ಜೀವನ ಉಳಿಸಲು ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಎರಡು ದಿನಗಳ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ ಕರೆ ಕೊಟ್ಟಿತ್ತು. ಬೆಂಗಳೂರಿನ ಪಾದರಾಯನಪುರದಲ್ಲಿ ಪುಂಡರ ಅಟ್ಟಹಾಸ ಸೇರಿದಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮೇಲೆ ಹಲ್ಲೆಗಳು ನಡೆಯುತ್ತಲೆ ಇವೆ. ದೇಶಾದ್ಯಂತ ಇಂತಹ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಈ ನಡುವೆ ಕರ್ನಾಟಕ ಸ್ಟೇಟ್ ಎಪಿಡೆಮಿಕ್ ಕಾಯ್ದೆ ಜಾರಿ ಮಾಡಿದ್ದು, ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ ಕಾನೂನು ಕ್ರಮ ಖಂಡಿತ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸ್ಟೇಟ್ ಎಪಿಡೆಮಿಕ್ ಪ್ರಸ್ತಾವನೆಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ಕರ್ನಾಟಕ ರಾಜ್ಯ ಎಪಿಡೆಮಿಕ್ ಕಾಯಿದೆ ಪ್ರಕಾರ ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ ಕನಿಷ್ಠ 2 ವರ್ಷ ಗರಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿದ್ರೆ ಆಸ್ತಿ ಮಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ಹೋಮ್ ಗಾರ್ಡ್ಸ್ ಸೇರಿದಂತೆ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವಂತಿಲ್ಲ. ಕೇರಳ ಮಾದರಿಯಲ್ಲಿ ಕಠಿಣ ಕಾನೂನು ಜಾರಿ ಮಾಡಿದ್ದು, ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದರೆ ಅನುಸರಿಸುವ ಕ್ರಮವೇ ಸುಗ್ರೀವಾಜ್ಞೆಯಲ್ಲೂ ಬಂದಿದೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದ್ರೆ, ನಷ್ಟದ ಮೂರು ಪಟ್ಟು ದಂಡ ವಿಧಿಸಲು ಈ ಕಾನೂನಲ್ಲಿ ಅವಕಾಶವಿದೆ. ನಷ್ಟಕ್ಕೆ ಕಾರಣವಾಗುವ ವ್ಯಕ್ತಿ ಮತ್ತು ಸಂಘಟನೆ ಮೇಲೂ ಕಠಿಣ ಕ್ರಮ ಜರುಗಿಸಬಹುದು. ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ಪ್ರಕ್ರಿಯೆಯಲ್ಲೂ ಕಠಿಣ ಕ್ರಮ ಅನುಸರಿಸಲಾಗುವಂತೆ. ಹಲ್ಲೆ ಮತ್ತು ಹಲ್ಲೆ ಯತ್ನದ ಪ್ರಕರಣದಲ್ಲಿ ವಿಶೇಷ ತನಿಖಾಧಿಕಾರಿಗಳ ನೇಮಕ ಮಾಡಿ ವಿಚಾರಣೆಯ ಹಂತದಲ್ಲಿ ಮುಕ್ತ ಸ್ವಾತಂತ್ರ್ಯ ನೀಡಲು ಅವಕಾಶವಿದೆ. ಒಂದು ವೇಳೆ ಇನ್ಮುಂದೆ ಯಾರಾದರೂ ಹಲ್ಲೆ ಮಾಡಿದ್ರೆ ಕಠಿಣ ಕಾನೂನು ಅಸ್ತ್ರ ಬಳಕೆ ಖಂಡಿತ.