ಇಡೀ ದೇಶ ಕರೋನಾ ಎಂಬ ಪೆಂಡಂಭೂತದಿಂದಾಗಿ ನಲುಗಿ ಹೋಗಿದೆ. ಕೇಂದ್ರದ ಆರೋಗ್ಯ ಸಚಿವಾಲಯವೇ ನೀಡುವ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಂದು ದಿನಕ್ಕೆ ಸರಾಸರಿಯಾಗಿ 9,000 ಜನ ಕರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 2.5 ಲಕ್ಷವನ್ನು ಧಾಟಿದೆ.
ಕರೋನಾ ಸಮಸ್ಯೆ ಒಂದೆಡೆಯಾದರೆ ಪಶ್ಚಿಮ ಬಂಗಾಳ ರಾಜ್ಯವನ್ನೇ ನಡುಗಿಸಿದ್ದ ಆಂಫಾನ್ ಚಂಡಮಾರುತದ ಭೀತಿಯಿಂದ ಅಲ್ಲಿನ ಜನ ಇನ್ನೂ ಹೊರಬಂದಿಲ್ಲ. ಈ ಚಂಡಮಾರುತದಿಂದ ಸಹಸ್ರಾರು ಜನ ಮನೆಮಠ ಆಸ್ತಿ-ಪಾಸ್ತಿ ಕಳೆದುಕೊಂಡುಯ ಬೀದಿಗೆ ಬಿದ್ದಿದ್ದಾರೆ. ಪರಿಹಾರ ಕಾರ್ಯಾಚರಣೆ ಇನ್ನೂ ಮುಗಿಯದ ಕಾರಣ ಇಡೀ ಸರ್ಕಾರೀ ವ್ಯವಸ್ಥೆ ಆ ಕೆಲಸದಲ್ಲಿ ಬ್ಯುಸಿಯಾಗಿದೆ. ಈವರೆಗೆ ಆಗಿರುವ ಒಟ್ಟಾರೆ ನಷ್ಟ ಎಷ್ಟು ಎಂಬುದನ್ನು ಲೆಕ್ಕ ಹಾಕಲು ಸಹ ಸಾಧ್ಯವಾಗುತ್ತಿಲ್ಲ.
ಆದರೆ, ದುರಾದೃಷ್ಟವಶಾತ್ ಪಶ್ಚಿಮ ಬಂಗಾಳಕ್ಕೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಧೈರ್ಯ ತುಂಬಬೇಕಾದ ಕೇಂದ್ರ ಸರ್ಕಾರ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ದಗೊಳ್ಳುತ್ತಿದೆ. ಪರಿಹಾರ ಕಾರ್ಯಕ್ಕೆ-ಜನರ ಕಂಬನಿ ಒರೆಸಿ ಸಹಾಯ ಹಸ್ತ ನೀಡುವ ಕೆಲಸಕ್ಕೆ ಒಲ್ಲೆ ಎನ್ನುವ ಕೇಂದ್ರ ಸರ್ಕಾರ ಕರೋನಾ ಕಾರಣಕ್ಕೆ ಆನ್‌ಲೈನ್ ಚುನಾವಣಾ ಪ್ರಚಾರ ಆರಂಭಿಸಿದ್ದು, ನಾಳೆ ನಡೆಯಲಿರುವ ಆನ್‌ಲೈನ್ ಚುನಾವಣಾ ಪ್ರಚಾರದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರಂತೆ. ಅಲ್ಲದೆ, ಕಳೆದ 9 ವರ್ಷದ ಮಮತಾ ಬ್ಯಾನರ್ಜಿ ಆಡಳಿತದ 9 ವೈಫಲ್ಯಗಳನ್ನು ಜನರ ಮುಂದೆ ಇಡಲಿದ್ದಾರಂತೆ.
ಇದು ರಾಜಕಾರಣ ಮಾಡುವ ಸಮಯವೇ?:
ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುವ ಗುರಿ ಇಟ್ಟಿರುವ ಬಿಜೆಪಿ ಆ ನಿಟ್ಟಿನಲ್ಲಿ ವೇದಿಕೆ ಸಜ್ಜುಗೊಳಿಸುತ್ತಿದೆ. ನಾಳೆ, ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಂಗಾಳ ಜನರನ್ನುದ್ದೇಶಿಸಿ ಆನ್ಲೈನ್ ನಲ್ಲೇ ಭಾಷಣ ಮಾಡಲಿದ್ದಾರೆ.
ಕರೋನಾ ಭೀತಿ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಭಾಷಣಕ್ಕೆ ಅವಕಾಶ ಇಲ್ಲ. ಹೀಗಾಗಿ ಬಿಜೆಪಿ ಆಂಫಾನ್ ಚಂಡಮಾರುತ ತನ್ನ ಓಟ ನಿಲ್ಲಿಸಿದ ಕೇವಲ ಒಂದು ವಾರಕ್ಕೆ ಆನ್‌ಲೈನ್ ಮೂಲಕ ಜನರನ್ನು ತಲುಪಲು ಮುಂದಾಗಿದೆ. ಮಾರ್ಚ್.01ರ ನಂತರ ಮತ್ತೆ ಬಿಜೆಪಿ ಪಕ್ಷದ ಫೈರ್ ಬ್ರ್ಯಾಂಡ್ ಭಾಷಣಕಾರ ಅಮಿತ್ ಶಾ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಭಾಷಣದಲ್ಲಿ ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರದ 9 ವೈಫಲ್ಯಗಳನ್ನ ಬಿಜೆಪಿ ಪಟ್ಟಿ ಮಾಡಿದೆ. ಈ ವೈಫಲ್ಯಗಳನ್ನಿಟ್ಟುಕೊಂಡು 9 ಅಂಶದ ಕಾರ್ಯತಂತ್ರವನ್ನು ರೂಪಿಸಿದೆಯಂತೆ. ಹೀಗಾಗಿ ನಾಳೆಯ ಭಾಷಣದಲ್ಲಿ ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ಸರ್ಕಾರದ ವೈಫಲ್ಯಗಳತ್ತ ಹೆಚ್ಚು ಗಮನ ಹರಿಸಿ ಹರಿಹಾಯುವ ನಿರೀಕ್ಷೆ ಇದೆ.
ಅಮಿತ್ ಶಾ ಭಾಷಣವನ್ನು ಜನರಿಗೆ ತಲುಪಿಸುವ ಸಲುವಾಗಿ ಬೂತ್ ಮಟ್ಟದಲ್ಲಿ ಇದಕ್ಕೆಂದೆ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ. ಬಂಗಾಳದಲ್ಲಿರುವ 88 ಸಾವಿರ ಬೂತ್ ಗಳ ಪೈಕಿ ಲೈವ್ ಸ್ಟ್ರೀಮಿಂಗ್ ಸಾಧ್ಯವಾಗಿರುವ 65 ಸಾವಿರ ಬೂತ್ ಗಳನ್ನ ಗುರುತಿಸಲಾಗಿದೆ. ಆ ಬೂತ್ ಗಳಲ್ಲಿ ಒಂದು ಫೋನ್ ನಿಂದ ಕನಿಷ್ಠ 10 ಮಂದಿಯನ್ನಾದರೂ ಲೈವ್ ಸ್ಟ್ರೀಮಿಂಗ್ ವೀಕ್ಷಣೆಗೆ ಕನೆಕ್ಟ್ ಮಾಡಲು ನಿರ್ಧರಿಸಲಾಗಿದೆ. ಈ ರೀತಿಯಾಗಿ ಹೆಚ್ಚೆಚ್ಚು ಜನರು ಅಮಿತ್ ಶಾ ಭಾಷಣವನ್ನು ಮೊಬೈಲ್ ನಲ್ಲಿ ನೇರ ವೀಕ್ಷಣೆ ಮಾಡಲು ಅನುವಾಗುವಂತೆ ಪಕ್ಷ ಕ್ರಮ ಕೈಗೊಳ್ಳುತ್ತಿದೆ. ಬಿಜೆಪಿಯ ಬಂಗಾಳ ಘಟಕದ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಅವರು ನಾಳೆಯ ಅಮಿತ್ ಶಾ ಭಾಷಣವನ್ನು ಕನಿಷ್ಟ 1 ಕೋಟಿ ಜನ ವೀಕ್ಷಿಸುವ ನಿರೀಕ್ಷೆ ಎಂದು ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪಾಲಿಗೆ ಪಶ್ಚಿಮ ಬಂಗಾಳ ಏಕೆ ಇಷ್ಟು ಮುಖ್ಯ?
ಬಿಜೆಪಿ ಒಂದು ರಾಷ್ಟ್ರೀಯ ರಾಜಕೀಯ ಪಕ್ಷದಂತೆ ಕೆಲಸ ಮಾಡಿದ್ದಕ್ಕಿಂತ ಕಾರ್ಪೊರೇಟ್ ಶೈಲಿಯಲ್ಲಿ ಕೆಲಸ ಮಾಡಿದ್ದೆ ಹೆಚ್ಚು. ದಶಕಗಳ ಹಿಂದೆ ಬೆರಳೆಣಿಕೆಯಲ್ಲಿದ್ದ ಬಿಜೆಪಿ ಪಕ್ಷದ ಶಾಸಕ-ಸಂಸದರ ಸಂಖ್ಯೆ ಇಂದು ಊಹೆಗೂ ನಿಲುಕದ ಮಟ್ಟಿಗೆ ಬೆಳೆಯಲು ಕಾರಣ ಈ ಕಾರ್ಪೊರೇಟ್ ಮಾದರಿಯ ಕಾರ್ಯ ಚಟುವಟಿಕೆ ಮತ್ತು ಬಲವಾದ ಐಟಿ ಸೆಲ್ ಎಂಬುದಲ್ಲಿ ಎರಡು ಮಾತಿಲ್ಲ.
2014ರಲ್ಲಿ ರಾಷ್ಟ್ರ ಮಟ್ಟದ ನಾಯಕರಾಗಿ ನರೇಂದ್ರ ಮೋದಿ ಗುರುತಿಸಿಕೊಂಡ ನಂತರ ಬಿಜೆಪಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಲವು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ. ಆದರೆ, ಕಮ್ಯುನಿಸ್ಟ್ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಜನರೂ ಸಹ ಬಿಜೆಪಿಯನ್ನು ನಂಬುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಕೇರಳ.
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ಭಾಗದ ಅನೇಕ ರಾಜ್ಯಗಳಲ್ಲಿ ಬಿಜೆಪಿಗೆ ಗಟ್ಟಿನೆಲೆ ಇಲ್ಲ. ಒಂದು ಹಂತದಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಪರೋಕ್ಷವಾಗಿ ಆಡಳಿತ ನಡೆಸುತ್ತಿದೆ. ಇನ್ನೂ ಮತ್ತೊಂದು ಸಣ್ಣ ಕಮ್ಯೂನಿಸ್ಟ್ ರಾಜ್ಯವಾದ ತ್ರಿಪುರದಲ್ಲಿ ಬಹುಮತ ಸರ್ಕಾರ ರಚಿಸಿದ್ದ ಬಿಜೆಪಿ ಮರುದಿನವೇ ಲೆನಿನ್ ವಿಗ್ರಹವನ್ನು ಒಡೆದುಹಾಕುವ ಮೂಲಕ ರಾಷ್ಟ್ರಮಟ್ಟದಲ್ಲಿ ಅರಾಜಕತೆ ಸೃಷ್ಟಿಸಿದ್ದನ್ನು ಭಾಗಶಃ ಭಾರತೀಯರು ಮರೆಯಲು ಸಾಧ್ಯವಿಲ್ಲ.
ಇನ್ನೂ ಬಿಜೆಪಿ ಎದುರು ಇರುವ ಏಕೈಕ ಸವಾಲು ಕೇರಳ ಮತ್ತು ಪಶ್ಚಿಮ ಬಂಗಾಳ ಮಾತ್ರ. ಕೇರಳದಲ್ಲಿ ಏನೇ ಮಾಡಿದರು ಬಿಜೆಪಿ ನೆಲೆಯೂರಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಬಿಜೆಪಿಗೆ ಸ್ಪಷ್ಟವಾಗಿದೆ. ಅಯ್ಯಪ್ಪನನ್ನು ಮುಂದಿಟ್ಟು ರಾದ್ಧಾಂತ ಮಾಡಿದರೂ ಇದು ಬಿಜೆಪಿಗೆ ಹೆಚ್ಚು ಲಾಭವಾಗಲಿಲ್ಲ. ಆದರೆ, ಪಶ್ಚಿಮ ಬಂಗಾಳ ಹಾಗಲ್ಲ. ಒಂದು ಕಾಲದಲ್ಲಿ ಕಮ್ಯುನಿಸ್ಟ್ ಸಿದ್ದಾಂತ ಮೇಳೈಸಿದ ಬಂಗಾಳ ಇಂದು ಮೆಲ್ಲನೆ ಬಲಪಂಥದ ಕಡೆಗೆ ವಾಲುತ್ತಿದೆ. ಇದನ್ನು ಮತ್ತಷ್ಟು ವಾಲಿಸಲೆಂದೇ ಬಿಜೆಪಿ ಕೊರೋನಾ-ಆಂಫಾನ್ ಏನೇ ಬಂದರೂ ತಲೆ ಕೆಡಿಸಿಕೊಳ್ಳದೆ ತನ್ನ ಗುರಿಯನ್ನು ಅರಸಿ ಓಡುತ್ತಿದೆ.
ಬಿಜೆಪಿಗೆ ಬಲವಾದ ಲೋಕಸಭೆ ಫಲಿತಾಂಶ:
ಪಶ್ಚಿಮ ಬಂಗಾಳವನ್ನು ತಕ್ಕ ಮಟ್ಟಿಗೆ ಮಮತಾ ಬ್ಯಾನರ್ಜಿ ನಿಸ್ಸಂಶಯವಾಗಿ ದೊಡ್ಡ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಜ್ಯೋತಿ ಬಸು ರಂತಹ ಕಮ್ಯೂನಿಸ್ಟ್ ನಾಯಕರನ್ನೇ ಮೂಲೆ ಗುಂಪು ಮಾಡಿದ್ದ ಅವರು ತೃಣಮೂಲ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ 9 ವರ್ಷದಿಂದ ಬಂಗಾಳದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅಲ್ಲದೆ, ಸ್ಥಳೀಯವಾಗಿ ʼಜನರ ನಾಯಕಿʼ ಎಂದೇ ಅವರು ಹೆಸರುವಾಸಿ.
ಆದರೆ, ಕಳೆದ ಮೂರು-ನಾಲ್ಕು ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿಯನ್ನು Overtake ಮಾಡುವಂತಹ ನಾಯಕ ಬಂಗಾಳದಲ್ಲಿ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ, ಕಳೆದ ಲೋಕಸಭಾ ಚುಣಾವಣೆಯಿಂದ ಬಂಗಾಳದ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಹೊಡೆಯುತ್ತಿವೆ. ಬಂಗಾಳದಲ್ಲಿ ಸಾಕಷ್ಟು ಸಂಖ್ಯೆಯ ಕಾರ್ಯಕರ್ತರನ್ನೂ ಹೊಂದಿರದ ಬಿಜೆಪಿ ಏಕಾಏಕಿ 2 ರಿಂದ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಬಂಗಾಳದಲ್ಲಿ ಬಿಜೆಪಿ 18 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಸಣ್ಣ ಮಾತೇನಲ್ಲ. ಹೀಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆ ಕಮ್ಯುನಿಸ್ಟರಿಗಿಂತ ಬಿಜೆಪಿಯೇ ಕಠಿಣ ಎದುರಾಳಿ ಎಂದರೂ ತಪ್ಪಾಗಲಾರದು.
ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಬಂಗಾಳದಲ್ಲಿ ಮತ್ತಷ್ಟು ಕ್ರಿಯಾಶೀಲವಾಗಿದೆ. ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿದೆ. ಇದರ ಹಿಂದೆ ಅಮಿತ್ ಶಾ ಶ್ರಮವೂ ಅಪಾರ ಎನ್ನಲಡ್ಡಿಯಿಲ್ಲ. ಪರಿಣಾಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಕನಸು ಕಾಣುತ್ತಿದೆ. ಇದೇ ಕಾರಣಕ್ಕೆ ಬಂಗಾಳದಲ್ಲಿ ಬಿಜೆಪಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಜಕೀಯ ಸಮಾವೇಶಗಳನ್ನು ನಡೆಸುತ್ತಲೇ ಬಂದಿದೆ.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಒಂದು ರಾಜ್ಯದಲ್ಲಿ ಅಧಿಕಾರಕ್ಕೆ ಆಸೆಪಡುವುದು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ತಪ್ಪಲ್ಲ. ಆದರೆ, ಕರೋನಾ, ಅಂಫಾನ್ ಚಂಡಮಾರುತದ ಸಂದರ್ಭದಲ್ಲಿ, ಸಾಮಾನ್ಯ ಜನ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಇಂತಹ ಸಮಯದಲ್ಲಿ ರಾಜಕೀಯ ಬೇಕಿತ್ತಾ? ಬದುಕೇ ಪ್ರಶ್ನೆಯಾಗಿರುವ ಸಂದರ್ಭದಲ್ಲಿ ಈ ಅಧಿಕಾರದ ಹಪಾಹಪಿ ಸರಿಯೇ? ಎಂಬುದಷ್ಟೇ ಪ್ರಶ್ನೆ.