ರಾಜ್ಯದಲ್ಲಿ ಕರ್ನಾಟಕ ರಾಜ್ಯ ಲಾಟರಿ ಅಸ್ತಿತ್ವದಲ್ಲಿತ್ತು. ಕೆಲವು ಜೂಜು ಪ್ರಿಯರು ಲಾಟರಿ ಕೊಂಡುಕೊಂಡು ಡ್ರಾ ಮಾಡುವ ದಿನ ಪೇಪರ್‌ಗಳಲ್ಲಿ ನಂಬರ್ ಹಿಡಿದು ಹುಡುಕುತ್ತಿದ್ದರು. ಒಂದು ವೇಳೆ ನಂಬರ್ ಬದಲಾಗಿದ್ದರೆ, ಅಯ್ಯೋ ಜಸ್ಟ್ ಮಿಸ್ ಆಯ್ತು. ಇಲ್ಲದಿದ್ರೆ ಒಂದು ಕೋಟಿ ನನ್ನದಾಗುತ್ತಿತ್ತು ಎಂದು ಮರುಗುತ್ತಿದ್ದರು. ಮುಂದಿನ ವಾರದ ಲಾಟಿರಿ ಟಿಕೆಟ್ ಕೊಂಡುಕೊಂಡು ಮತ್ತೆ ಪೇಪರ್‌ಗಾಗಿ ಕಾದು ಕುಳಿತುಕೊಳ್ಳುವುದೇ ಕಾಯಕವಾಗಿತ್ತು. ಆದ್ರೆ 2000ರಲ್ಲಿ ಅಸ್ತಿತ್ವಕ್ಕೆ ಬಂದ ಎಸ್.ಎಂ ಕೃಷ್ಣ ಸರ್ಕಾರ, ಕರ್ನಾಟಕ ರಾಜ್ಯ ಲಾಟರಿಯನ್ನು ರದ್ದು ಮಾಡಿತ್ತು. ಅದರ ಬದಲಿಗೆ ಒಂದಂಕಿ ಲಾಟರಿ ಪ್ಲೇವಿನ್ ಆರಂಭ ಮಾಡಿತ್ತು. ಆದರೆ ಇದರಲ್ಲಿ ವಾರಗಟ್ಟಲೆ ಕಾಯುವಂತಿಲ್ಲ, ಗಂಟೆಗೊಮ್ಮೆ ಬಹುಮಾನ ವಿಜೇತರನ್ನು ಘೋಷಣೆ ಮಾಡಲಾಗ್ತಿತ್ತು. ಇದರಲ್ಲಿ ಯಾರಿಗೆ ಬಂತು, ಯಾರಿಗೆ ಹೋಯ್ತು ಎನ್ನುವ ಯಾವುದೇ ನಿಖರ ಮಾಹಿತಿ ಇರಲಿಲ್ಲ. ಅದರ ಜೊತೆಗೆ ಜೂಜುಕೋರರು ಕೆಲಸ ಬಿಟ್ಟು ಜೂಜಾಡಲು ನಿಲ್ಲುವಂತೆ ಮಾಡಿತ್ತು. ಈಗ, ಮತ್ತೆ ನಮ್ಮ ರಾಜ್ಯಕ್ಕೆ ಜೂಜು ಕಾಲಿಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗ್ತಿದೆ.
ಸಮಾಜದ ಸ್ವಾಸ್ತ್ಯ ಹಾಳುಮಾಡುತ್ತಿದ್ದ ಪ್ಲೇವಿನ್ ಲಾಟರಿಯನ್ನು, 2004ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ನಿಷೇಧ ಮಾಡಿತ್ತು. ಮೈತ್ರಿಕೂಟದ ಮುಖ್ಯಮಂತ್ರಿ ಆಗಿದ್ದ ದಿವಂಗತ ಎನ್ ಧರಂಸಿಂಗ್ ಅವರು ಕಠಿಣ ನಿರ್ಧಾರ ಕೈಗೊಳ್ಳುವ ಮೂಲಕ ರಾಜ್ಯದಿಂದ ಒಂದಂಕಿ ಲಾಟರಿಗೆ ಗೇಟ್‌ಪಾಸ್ ಕೊಟ್ಟಿದ್ದರು. ರಾಜ್ಯ ಸರ್ಕಾರಕ್ಕೆ ಒಂದಂಕಿ ಲಾಟರಿಯಿಂದ 300 ಕೋಟಿ ಆದಾಯ ಬರುತ್ತಿತ್ತು, ಆದರೂ ಮೈತ್ರಿ ಸರ್ಕಾರದ ಸಾಮಾನ್ಯ ಕಾರ್ಯಕ್ರಮ ಪಟ್ಟಿಯಂತೆ ಲಾಟರಿ ನಿಷೇಧ ಮಾಡಿ ಆದೇಶ ಮಾಡಿದ್ದೇವೆ ಎಂದಿದ್ದರು. ಅಂದಿನಿಂದ ಇಂದಿನ ತನಕ ಲಾಟರಿ ಹುಚ್ಚಿನಿಂದ ಕರ್ನಾಟಕದ ಜನ ದೂರವಿದ್ದರು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ ಮುರಿದು ಬಿದ್ದ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿ ಕುಮಾರಸ್ವಾಮಿ ಕಳಪೆ ಮದ್ಯ (ಸಾರಾಯಿ) ನಿಷೇಧ ಮಾಡಿ ಆದೇಶ ಮಾಡಿದ್ದರು. ಈ ನಿರ್ಧಾರ ಮತ್ತಷ್ಟು ನೆಮ್ಮದಿಯನ್ನು ತಂದು ಕೊಟ್ಟಿತ್ತು.
ಆದರೆ ಇದೀಗ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಜನರನ್ನು ಜೂಜಾಟಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿದೆ. ಪ್ರವಾಸಿಗರನ್ನು ಸೆಳೆಯುವ ಹೆಸರಿನಲ್ಲಿ ಕ್ಯಾಸಿನೋ ಆರಂಭಿಸಲು ಚಿಂತನೆ ನಡೆದಿದೆ ಎನ್ನುವ ಅಭಿಪ್ರಾಯವನ್ನು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹಂಚಿಕೊಂಡಿದ್ದಾರೆ. ಇದೀಗ ರಾಜ್ಯ ಪ್ರವಾಸ ಕೈಗೊಳ್ಳುವ ದೇಶಿಯ ಹಾಗು ವಿದೇಶಿಯ ಪ್ರವಾಸಿಗರು ಜೂಜಾಟ ಆಡುವುದಕ್ಕೆ ಗೋವಾ ಅಥವಾ ಶ್ರೀಲಂಕಾ ಕಡೆಗೆ ಮುಖ ಮಾಡುತ್ತಿದ್ದಾರೆ. ಹಾಗಾಗಿ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ರಾಜ್ಯದ ಕೆಲವೊಂದು ಭಾಗಗಲ್ಲಿ ಕ್ಯಾಸಿನೋ ಆರಂಭ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಮಂತ್ರಿ ಸಿ.ಟಿ ರವಿ ತಿಳಿಸಿದ್ದಾರೆ. ಆದರೆ ಸರ್ಕಾರ ಕ್ಯಾಸಿನೋ ಆರಂಭಕ್ಕೆ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಕೇವಲ ನೀತಿ ನಿಯಮಗಳನ್ನು ಮಾಡುತ್ತದೆ. ಖಾಸಗಿಯವರಿಗೆ ಅನುಮತಿ ಕೊಟ್ಟು ಕ್ಯಾಸಿನೋ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.
ಕರ್ನಾಟಕ ಸರ್ಕಾರ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಲಾಟರಿಯಲ್ಲಿ ಸರ್ಕಾರಕ್ಕೆ ಆದಾಯ ಕಡಿಮೆ. ಆದರೆ ಪ್ರತಿವಾರ ಒಂದಿಷ್ಟು ಮಂದಿ ಲಾಟರಿಯಿಂದ ಹಣ ಗಳಿಸುತ್ತಿದ್ದರು. ಅದು ಪಾರದರ್ಶಕ ವ್ಯವಹಾರವಾಗಿತ್ತು. ಆದರೆ ಅದನ್ನು ರದ್ದು ಮಾಡಿ ಎಸ್.ಎಂ ಕೃಷ್ಣ ಸರ್ಕಾರ ಪ್ಲೇವಿನ್ ಆರಂಭಿಸಿತ್ತು. ಇದರಿಂದ ಅದೆಷ್ಟು ಮಂದಿ ಕೋಟ್ಯಾಧಿಶರಾದರು ಎನ್ನುವುದು ರಾಜಕಾರಣಿಗಳೇ ಬಲ್ಲರು. ಇದೀಗ ಬಿಜೆಪಿ ಸರ್ಕಾರದಲ್ಲಿ ಕ್ಯಾಸಿನೋ ಆರಂಭದ ಪ್ರಸ್ತಾವನೆ ಮುನ್ನಲೆಗೆ ಬಂದಿದೆ. ವಿಚಿತ್ರ ಎಂದರೆ ಅದೇ ಎಸ್.ಎಂ ಕೃಷ್ಣ ಇದೀಗ ಬಿಜೆಪಿಯಲ್ಲೇ ಇದ್ದಾರೆ. ಭಾರತೀಯ ಸಂಸ್ಕೃತಿ, ಸಂಪ್ರದಾಯ ಎನ್ನುವ ಬಿಜೆಪಿ ಸರ್ಕಾರದಲ್ಲಿ ಮತ್ತೆ ಜೂಜು ಆಟಕ್ಕೆ ಪ್ರೇರೇಪಿಸುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ. ಈಗಾಗಲೇ ಕಾಂಗ್ರೆಸ್‌ನ ಹಿರಿಯ ನಾಯಕ ಹೆಚ್. ಪಾಟೀಲ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.
ಒಂದು ವೇಳೆ ಕ್ಯಾಸಿನೋ ಸ್ಥಾಪಿಸಲೇ ಬೇಕು, ವಿದೇಶಿ ಪ್ರವಾಸಿಗರನ್ನು ಸೆಳೆಯಲೇ ಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದ್ದರೆ ಸ್ವಾಗತಾರ್ಹ. ಆದರೆ ಕ್ಯಾಸಿನೋ ಕೇಂದ್ರಗಳನ್ನು ಸರ್ಕಾರವೇ ತೆರೆಯಲಿ, ಸರ್ಕಾರವೇ ಸಿಬ್ಬಂದಿಗಳನ್ನು ನೇಮಿಸಿಕೊಂಡು ನಡೆಸಲಿ. ಅದನ್ನು ಬಿಟ್ಟು ಕ್ಯಾಸಿನೋ ಹೆಸರಲ್ಲಿ ಅಕ್ರಮ ಚಟುವಟಿಕೆಗಳ ಅಡ್ಡೆ ಮಾಡುವುದು ಎಷ್ಟು ಸರಿ. ಬಂಡವಾಳ ಹೂಡಿಕೆ ಮಾಡುವುದಿಲ್ಲ, ಕ್ಯಾಸಿನೋ ಆರಂಭ ಮಾಡಲು ಅನುಮತಿ ಕೊಡ್ತೇವೆ ಎನ್ನುವ ನಿರ್ಧಾರದಲ್ಲಿ ತೆರಿಗೆ ಸಂಗ್ರಹದ ವಾಸನೆ ಬರುತ್ತಿದೆ. ಸರಿದಾರಿಯಲ್ಲಿ ಸಾಗುತ್ತಿರುವ ಜನರನ್ನು ಅಡ್ಡದಾರಿಗೆ ಎಳೆದು ನೆಮ್ಮದಿ ಹಾಳು ಮಾಡುವ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎನ್ನುವುದು ಸಚಿವ ಸಿ.ಟಿ ರವಿ ಹಾಗು ಸಿಎಂ ಯಡಿಯೂರಪ್ಪ ಮನಸ್ಸಿನಲ್ಲಿದರೆ ಒಳ್ಳೆಯದು.