ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಲು ಇದು ಗಾಂಧೀಜಿಯವರ ಕಾಲವಲ್ಲ. ಏಟಿಗೆ ಪ್ರತಿ ಏಟು ಕೊಡುವ ಕಾಲ. ಇದನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಅಕ್ಷರಶಃ ಪಾಲಿಸಲು ನಿರ್ಧರಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದೊಳಗೆ ತಮ್ಮನ್ನು ಬದಿಗೆ ಸರಿಸುವ ಪ್ರಯತ್ನಗಳಿಗೆ ತಕ್ಕ ಪ್ರತ್ಯುತ್ತರ ಹೆಣೆಯಲು ಮುಂದಾಗಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿ ಘಟಕ ಮುಂದಿನ ದಿನಗಳಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದರೆ ಮುಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಎಲ್ಲಾ ಚಟುವಟಿಕೆಗಳ ಸೂತ್ರದಾರರಿಗೆ ಕಳುಹಿಸಿಕೊಟ್ಟಿದ್ದಾರೆ.
ಯಡಿಯೂರಪ್ಪ ಅವರು ಈ ಬಾರಿ ಮುಖ್ಯಮಂತ್ರಿಯಾದಾಗಲೇ ಅವರು ಒಂದು ಗುರಿ ಹಾಕಿಕೊಂಡಿದ್ದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂತ ಹಲವು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದವು. ಇದರಿಂದಾಗಿಯೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಲ್ಲದೆ ಪಕ್ಷ ಬಿಟ್ಟು ಹೋಗಿದ್ದರು. ಮತ್ತೆ ಬಿಜೆಪಿ ಸೇರಿದ ಅವರು ಮುಖ್ಯಮಂತ್ರಿಯಾಗಿ ಹಿಂದೆ ಬಂದ ಕೆಟ್ಟ ಅಭಿಪ್ರಾಯವನ್ನು ಹೋಗಲಾಡಿಸಿ ತಮ್ಮ ಬಗ್ಗೆ ಮತ್ತು ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತಾಗಬೇಕು ಎಂದು ಬಯಸಿದ್ದರು. ಅದರಂತೆ ಆಡಳಿತವನ್ನೂ ಆರಂಭಿಸಿದ್ದರು.
ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ. ಎಲ್. ಸಂತೋಷ್ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಕುಳ್ಳಿರಿಸಿ ಯಡಿಯೂರಪ್ಪ ವಿರುದ್ಧ ಪಕ್ಷದೊಳಗೆ ಹುನ್ನಾರ ನಡೆಸಿ ಅವರನ್ನು ಬದಿಗೆ ಸರಿಸುವ ಕೆಲಸ ಆರಂಭಿಸಿದರೋ ಮತ್ತೆ ಯಡಿಯೂರಪ್ಪ ಕೆರಳಿ ನಿಂತಿದ್ದಾರೆ.
ತಮ್ಮ ವಿರುದ್ಧ ಪಕ್ಷದೊಳಗೆ ಕಾಲು ಕೆರೆದು ನಿಂತಿದ್ದ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಬೆಂಗಳೂರು ಮೇಯರ್ ಆಯ್ಕೆ ವಿಚಾರದಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಕೊಳ್ಳದಿರುವುದು ಯಡಿಯೂರಪ್ಪ ಅವರಿಗೆ ಕೋಪ ತರಿಸಿತ್ತು. ಅಷ್ಟರಲ್ಲಿ ನಳಿನ್ ಕುಮಾರ್ ಕಟೀಲ್ ಖುದ್ದಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಆಗಿದ್ದೇನೋ ನಡೆದು ಹೋಯಿತು. ಮುಂದೆ ಸಮನ್ವಯತೆಯಿಂದ ಹೋಗೋಣ ಎಂದು ಹೇಳಿ ಸಮಾಧಾನಪಡಿಸಿದ್ದರು. ಆದರೆ, ಯಾವಾಗ ಬಿಜೆಪಿ ಕಚೇರಿಯಲ್ಲಿ ತಾವು ರಾಜ್ಯಾಧ್ಯಕ್ಷರಾಗಿದ್ದಾಗ ನೇಮಕ ಮಾಡಿದ ಸಿಬ್ಬಂದಿಯನ್ನು ಏಕಾಏಕಿ ಮನೆಗೆ ಕಳುಹಿಸಿದರೋ ಯಡಿಯೂರಪ್ಪ ಅವರ ಸಿಟ್ಟು ನೆತ್ತಿಗೇರಿದೆ.
ಇಲ್ಲಿ ನಳಿನ್ ಕುಮಾರ್ ಕಟೀಲ್ ನಿರ್ಧಾರ ತೆಗೆದುಕೊಳ್ಳುತ್ತಾರಾದರೂ ಅದರ ಹಿಂದೆ ಸಂತೋಷ್ ಅವರ ಕೈವಾಡ ಇದ್ದೇ ಇದೆ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತು. ಆರ್. ಎಸ್. ಎಸ್. ಕಡೆಯಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಂದಿರುವ ಸಂತೋಷ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಅವರಿಗೆ ಆತ್ಮೀಯರಾಗಿರುವುದರಿಂದ ಹೈಕಮಾಂಡ್ ಮಟ್ಟದಲ್ಲಿ ಅವರ ಮಾತೇ ನಡೆಯುತ್ತದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡು ತಮ್ಮ ಅಧಿಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.
ಶಾಸಕರನ್ನು ತಮ್ಮ ಜತೆ ಹಿಡಿದಿಟ್ಟುಕೊಳ್ಳುವ ಪ್ರಯತ್ನಕ್ಕೆ ಚಾಲನೆ
ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ನಡೆದು ಅದರಲ್ಲಿ ಏಳಕ್ಕಿಂತ ಹೆಚ್ಚು ಸ್ಥಾನಗಳು ಬಂದರೆ ಬಿಜೆಪಿ ಸರ್ಕಾರ ಭದ್ರವಾಗುತ್ತದೆ. ಆದರೆ, ತಮ್ಮ ವಿರುದ್ಧ ನಡೆಯುತ್ತಿರುವ ಹುನ್ನಾರಗಳು ಹೆಚ್ಚಾಗಿ ಅದಕ್ಕೆ ಶಾಸಕರ ಸಾಥ್ ಸಿಕ್ಕಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ತಮ್ಮ ಜಾಗದಲ್ಲಿ ಇನ್ನೊಬ್ಬರನ್ನು ಕೂರಿಸಲು ಕೂಡ ಬಿ. ಎಲ್. ಸಂತೋಷ್ ಬಣ ಹಿಂಜರಿಯುವುದಿಲ್ಲ ಎಂಬ ಆತಂಕ ಯಡಿಯೂರಪ್ಪ ಅವರನ್ನು ಕಾಡಲಾರಂಭಿಸಿದೆ. ಈ ಕಾರಣಕ್ಕಾಗಿಯೇ ಶಾಸಕರನ್ನು ತಮ್ಮ ಪರವಾಗಿ ಸಂಘಟಿಸುವ ಕಾರ್ಯದಲ್ಲಿ ಯಡಿಯೂರಪ್ಪ ತೊಡಗಿದ್ದಾರೆ.
ಪ್ರಸ್ತುತ ಬಿಜೆಪಿಯಲ್ಲಿ ಯಡಿಯೂರಪ್ಪ ಸೇರಿದಂತೆ 105 ಶಾಸಕರು ಇದ್ದಾರೆ. ಈ ಪೈಕಿ 60-70 ಶಾಸಕರನ್ನು ತಮ್ಮೊಂದಿಗೆ ಹಿಡಿದಿಟ್ಟುಕೊಂಡರೆ ಆಗ ಅಧಿಕಾರದಿಂದ ಕೆಳಗಿಳಿಸಲು ತಮ್ಮ ವಿರುದ್ಧ ಏನೇ ಷಡ್ಯಂತ್ರಗಳನ್ನು ನಡೆಸಿದರೂ ಪ್ರಯೋಜನವಾಗುವುದಿಲ್ಲ. ತಮ್ಮನ್ನು ಇಳಿಸಿದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಸಂತೋಷ್ ಮತ್ತು ಅವರ ಬಣದ ಮಾತು ನಡೆದರೆ ರಾಜ್ಯದಲ್ಲಿ ಸರ್ಕಾರದ ವಿಚಾರ ಬಂದಾಗ ನನ್ನ ಮಾತೇ ಅಂತಿಮವಾಗಬೇಕು. ಹಾಗೆ ಆಗಬೇಕಾದರೆ ಹೆಚ್ಚಿನ ಶಾಸಕರು ತಮ್ಮೊಂದಿಗೆ ಇರಬೇಕು ಎಂಬುದು ಯಡಿಯೂರಪ್ಪ ಅವರ ಯೋಚನೆ.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕ ಉಮೇಶ್ ಕತ್ತಿ ಅವರನ್ನು ಮಂಗಳವಾರ ಬೆಳಗಾವಿಯಲ್ಲಿ ಭೇಟಿ ಮಾಡಿ ಯಡಿಯೂರಪ್ಪ ಅವರು ಚರ್ಚಿಸಿದ್ದು, ಡಿಸೆಂಬರ್ ತಿಂಗಳಲ್ಲಿ ಉಮೇಶ್ ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದು ಘೋಷಿಸಿದ್ದು ಇದೇ ಪ್ರಯತ್ನದ ಒಂದು ಭಾಗ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮುಂದೆ ರಮೇಶ್ ಜಾರಕಿಹೊಳಿ ಬಂದರೆ ಅವರಿಗೂ ಸೂಕ್ತ ಸ್ಥಾನಮಾನ ಕಲ್ಪಿಸಲಾಗುತ್ತದೆ. ಅಲ್ಲಿಗೆ ಬೆಳಗಾವಿ ಜಿಲ್ಲೆಯ ಬಹುತೇಕ ಶಾಸಕರು ಯಡಿಯೂರಪ್ಪ ಅವರೊಂದಿಗೆ ನಿಲ್ಲುತ್ತಾರೆ.
ಇನ್ನು ಸಚಿವ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯ ಮತ್ತೆ ಮುನ್ನಲೆಗೆ ಬರುವುದರ ಹಿಂದೆಯೂ ಯಡಿಯೂರಪ್ಪ ಅವರ ತಂತ್ರಗಾರಿಕೆ ಇದೆ. ಪರಿಶಿಷ್ಟ ಸಮುದಾಯದ ನಾಯಕರಾಗಿರುವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಆ ಸಮುದಾಯದ ಶಾಸಕರು ತಮ್ಮೊಂದಿಗೆ ಇರುತ್ತಾರೆ. ಇದರ ಜತೆಗೆ ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ ಆಗ ಸಮುದಾಯ ಮತ್ತು ಸಮುದಾಯದ ಶಾಸಕರು ಕೂಡ ತಮ್ಮೊಂದಿಗಿರುತ್ತಾರೆ. ಉಳಿದಂತೆ ಲಿಂಗಾಯತ ಸಮುದಾಯದ ಶಾಸಕರು ತಮ್ಮಿಂದ ದೂರವಾಗುವುದಿಲ್ಲ. ಅಲ್ಲದೆ, ಇತರೆ ಸಮುದಾಯದ ಕೆಲವು ಶಾಸಕರೂ ತಮ್ಮ ಜತೆ ಇರುತ್ತಾರೆ. ಇವರೆಲ್ಲರನ್ನು ಲೆಕ್ಕ ಹಾಕಿದರೆ ತಮ್ಮಿಂದ ಯಾವುದೇ ಕಾರಣಕ್ಕೂ ದೂರವಾಗದ ಶಾಸಕರ ಸಂಖ್ಯೆ 60 ದಾಟುತ್ತದೆ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ.
ಇತರೆ ಪಕ್ಷದ ಶಾಸಕರಿಗೂ ಗಾಳ
ಅಗತ್ಯ ಬಿದ್ದರೆ ಇತರೆ ಪಕ್ಷದ ಶಾಸಕರಿಗೂ, ಅದರಲ್ಲೂ ಮುಖ್ಯವಾಗಿ ಜೆಡಿಎಸ್ ಶಾಸಕರಿಗೆ ಗಾಳ ಹಾಕಲು ಯಡಿಯೂರಪ್ಪ ಯೋಚಿಸುತ್ತಿದ್ದಾರೆ. ಪ್ರಸ್ತುತ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು ತಮಗೆ ಆಪ್ತರಾಗಿದ್ದಾರೆ. ಅದೇ ರೀತಿ ಸುಮಾರು 8-10 ಶಾಸಕರು ಹತ್ತಿರವಾದರೆ ಸಾಕು ಎಂಬ ನಿರೀಕ್ಷೆಯಲ್ಲಿರುವ ಯಡಿಯೂರಪ್ಪ, ಅವರ ಕ್ಷೇತ್ರಗಳಿಗೆ ಕೇಳಿದಷ್ಟು ಅನುದಾನ ನೀಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಮೂರ್ನಾಲ್ಕು ಶಾಸಕರೊಂದಿಗೂ ಯಡಿಯೂರಪ್ಪ ಅವರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯಲ್ಲಿ ತಮ್ಮನ್ನು ಇಳಿಸುವ ಪ್ರಯತ್ನ ನಡೆದರೆ ಈ ಶಾಸಕರ ನೆರವು ಪಡೆಯುವ ಯೋಚನೆ ಅವರದ್ದು.
ಈ ಕಾರಣಗಳಿಂದಾಗಿಯೇ ಯಡಿಯೂರಪ್ಪ ಅವರು ಪಕ್ಷದೊಳಗೆ ತಮ್ಮ ವಿರುದ್ಧ ಷಡ್ಯಂತ್ರಗಳು ನಡೆಯುತ್ತಿದ್ದರೂ, ತಮ್ಮವರನ್ನು ಪಕ್ಷದ ಕಚೇರಿಯಿಂದ ಹೊರಹಾಕಿದ ಬಗ್ಗೆ ದೂರುಗಳು ಬಂದರೂ ಯಡಿಯೂರಪ್ಪ ಅವರು ಮೌನವಾಗಿಯೇ ತಾವೇನು ಎಂಬ ಶಕ್ತಿ ಪ್ರದರ್ಶನದ ಮೂಲಕ ಪಕ್ಷದೊಳಗೆ ತಮ್ಮನ್ನು ವಿರೋಧಿಸುತ್ತಿರುವವರಿಗೆ ತೋರಿಸಿಕೊಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಯಡಿಯೂರಪ್ಪ ಅವರು ಆಕ್ರೋಶ ಸ್ಫೋಟಗೊಳ್ಳಲೂ ಬಹುದು. ಅದಕ್ಕೆ ಪಕ್ಷದ ವರಿಷ್ಠರು ಮತ್ತು ರಾಜ್ಯ ನಾಯಕತ್ವ ಅವಕಾಶ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.