ಸಾಮಾನ್ಯವಾಗಿ ಹಗಲು ಹೊತ್ತು ಸಮುದ್ರದ ನೀರು ನೀಲಿ ಬಣ್ಣದಿಂದ ಕಂಗೊಳಿಸುವುದನ್ನ ನಾವು ಕಂಡಿದ್ದೇವೆ. ಸೂರ್ಯನ ಬೆಳಕು ಸಮುದ್ರಕ್ಕೆ ಅಪ್ಪಳಿಸಿದಾಗ ಸಮುದ್ರದ ನೀರಿನ ಅಣುಗಳಿಂದ ಬೆಳಕು ಪ್ರತಿಫಲನಗೊಳ್ಳುತ್ತದೆ. ಸಮುದ್ರದ ನೀರಿನ ಅಣುಗಳು ತುಂಬಾ ಚಿಕ್ಕದಾಗಿರುವ ಕಾರಣ, ಬೆಳಕಿನ ನೀಲಿ ಬಣ್ಣವು ಪ್ರತಿಫಲನಗೊಳ್ಳುತ್ತವೆ ಅನ್ನೋದು ಸಮುದ್ರ ನೀಲಿ ಬಣ್ಣದಿಂದ ಕಂಗೊಳಿಸುವುದಕ್ಕೆ ಇರುವ ವೈಜ್ಞಾನಿಕ ಕಾರಣ. ಆದರೆ ಇತ್ತೀಚಿನ ಮೂರು ನಾಲ್ಕು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಮುದ್ರದಲ್ಲಿ ವಿಚಿತ್ರ ಬದಲಾವಣೆಯನ್ನು ಜನ ಗಮನಿಸಿದ್ದಾರೆ. ಹಗಲು ಮಾತ್ರವಲ್ಲ ರಾತ್ರಿ ಹೊತ್ತು ಸಮುದ್ರದ ಒಂದು ಭಾಗದಲ್ಲಿ ನೀರು ನೀಲಿ ಬಣ್ಣದಿಂದ ಪಳಪಳನೆನೆ ಹೊಳೆಯಲು ಆರಂಭಿಸಿದೆ.
ಸ್ಥಳೀಯರಂತೂ ಇದರಿಂದ ಆತಂಕಕ್ಕೊಳಗಾಗಿದ್ದಾರೆ. ಸಮುದ್ರದಲ್ಲಾದ ಏಕಾಏಕಿ ಬದಲಾವಣೆ ಮೀನುಗಾರರಲ್ಲಿ ಕೊಂಚ ಆತಂಕ ಮೂಡಿಸಿದೆ. ಕೇವಲ ರಾತ್ರಿ ಹೊತ್ತು ಮಾತ್ರ ಕಾಣಿಸಿಕೊಳ್ಳುವ ಈ ನೀಲು ಬಣ್ಣದ ವಿಸ್ಮಯ ಆತಂಕದ ಜೊತೆಗೆ ಕುತೂಹಲಕ್ಕೂ ಕಾರಣವಾಗಿದೆ. ಹಾಗಂತ ಈ ವಿಸ್ಮಯ ಕೇವಲ 10 ರಿಂದ 15 ದಿನಗಳಷ್ಟೇ ಸಮುದ್ರದಲ್ಲಿ ಕಾಣಬಹುದೇ ಹೊರತು ಆ ಬಳಿಕ ಅಂತಹ ಅಚ್ಚರಿಯಾಗಲೀ, ವಿಸ್ಮಯವಾಗಲೀ ಕಾಣಸಿಗೋದು ಅನುಮಾನ. ಕಾರಣ, ಈ ರೀತಿಯಾಗಿ ರಾತ್ರಿ ಪಳಪಳನೆ ನೀಲಿ ಬಣ್ಣದಿಂದ ಹೊಳೆಯುವುದ ಹಿಂದೆ ಪಾಚಿ ಪ್ರಭೇದಕ್ಕೆ ಸೇರಿದ ಏಕಕೋಶ ಜೀವಿಗಳಿವೆ. ಈ ಏಕಕೋಶಜೀವಿಗಳು ಸೂಕ್ಷ್ಮಾಣು ಜೀವಿಗಳಾಗಿದ್ದು ಕೆಲವೇ ದಿನಗಳಲ್ಲಿ ತನ್ನ ಹೊಳಪು ಕಳೆದುಕೊಳ್ಳಲಿದೆ. ಅಲ್ಲದೇ ಇಂತಹ ಏಕಕೋಶ ಸೂಕ್ಮಾಣು ಜೀವಿಗಳ ಆಯಸ್ಸೂ ಬಹಳ ಕಡಿಮೆ. ಹಾಗಾಗಿ, ಸಮುದ್ರದಲ್ಲಿ ಕಾಣಸಿಗೋ ಈ ಅಪರೂಪದ ವಿಸ್ಮಯವನ್ನು ಹೆಚ್ಚು ದಿನ ಕಣ್ತುಂಬಿಕೊಳ್ಳೋದಕ್ಕೆ ಸಾಧ್ಯವಾಗದು.
ಹಾಗಂತ ಸಮುದ್ರ ನೀಲಿ ಬಣ್ಣದ ಹೊರತು ಬೇರೆ ಬೇರೆ ಬಣ್ಣಕ್ಕೆ ತಿರುಗುವ ಪ್ರಸಂಗಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಕಪ್ಪು, ಹಸಿರು, ತಿಳಿಗೆಂಪು ಬಣ್ಣಕ್ಕೆ ಸಮುದ್ರದ ನೀರು ಬದಲಾಗಿದ್ದೂ ಇದೆ. ಜೋರಾಗಿ ಮಳೆ ಬಂದಾಗ ಕಡಲಿನ ಅಬ್ಬರರ ಏರಳಿತದಿಂದಾಗಿ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ರೆ, ಇನ್ನು ಹಲವೆಡೆ ಕರಾವಳಿ ತೀರದಲ್ಲಿರುವ ಕಾರ್ಖಾನೆ, ಕೈಗಾರಿಕೆಗಳು ಸಮುದ್ರಕ್ಕೆ ಹರಿಯಬಿಡುವ ಕಲುಷಿತ ನೀರಿನಿಂದಾಗಿಯೂ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗುವುದು ಸಹಜ. ಇದು ಮಾತ್ರವಲ್ಲದೇ ಹಸಿರು, ತಿಳಿಗೆಂಪು ಬಣ್ಣಕ್ಕೆ ತಿರುಗುವುದರ ಹಿಂದೆಯೂ ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪ ಗೋಚರಿಸುತ್ತದೆ.
ಸಮುದ್ರಕ್ಕೆ ಅತಿಯಾಗಿ ಹೊರಬಿಡುವ ಕಲುಷಿತ ನೀರು, ರಾಸಾಯನಿಕಗಳಿಂದಾಗಿ ಸಮುದ್ರದಲ್ಲಿ ಹಸಿರು, ತಿಳಿಗೆಂಪು ಬಣ್ಣದ ಪಾಚಿಗಳು ತಲೆದೂರುತ್ತವೆ. ಇಂತಹ ಸನ್ನಿವೇಶ ಸೃಷ್ಟಿಯಾದಾಗ ಮೀನುಗಾರರು ಮೀನುಗಾರಿಕೆಗೆ ಇಳಿಯಲು ಹಿಂದೆ ಮುಂದೆ ನೋಡುತ್ತಾರೆ. ಕಾರಣ ಕಡಲಿನ ನೀರು ತುಂಬಾ ಮಲಿನಗೊಂಡಿರುತ್ತದೆ. ಅಲ್ಲದೇ ತಿಳಿಗೆಂಪು ಮಿಶ್ರಿತ ನೀರು ಕುಡಿಯುವ ಮೀನುಗಳಿಗೂ ಹಾಗೂ ಅದನ್ನ ತಿನ್ನುವ ಮನುಷ್ಯರಿಗೂ ಅಷ್ಟೇ ಅಪಾಯಕಾರಿಯಾಗಿರುತ್ತದೆ. ಆದರೆ ರಾತ್ರಿ ಹೊತ್ತು ಹೊಳೆಯುವ ಈ ಪಾಚಿ ಪ್ರಭೇದದ ಜೀವಿಗಳ ನೀಲಿ ಬಣ್ಣ ಅಷ್ಟೇನು ಅಪಾಯಕಾರಿಯಲ್ಲವಾಗಿದ್ದು ಒಂದು ರೀತಿಯ ಅಚ್ಚರಿ ಹಾಗೂ ಕೌತುಕಕ್ಕೆ ಕಾರಣವಾಗಿರುತ್ತದೆ.
ಹಾಗಂತ ಈ ರೀತಿಯ ವಿಸ್ಮಯ ಈ ಹಿಂದೆಯೂ ಉಡುಪಿಯ ಹಲವೆಡೆ ಹಾಗೂ ಕಾರವಾರ ತಾಲೂಕಿನ ಕಡಲತಡಿಯಲ್ಲಿ, ಚೆನ್ನೈ ಹಾಗೂ ಮಹಾರಾಷ್ಟ್ರದಲ್ಲೂ ಕಾಣಿಸಿಕೊಂಡಿತ್ತು. ಹಾಗಂತ ಈ ರೀತಿಯಾಗಿ ಸಮುದ್ರದ ನೀರು ರಾತ್ರಿ ಹೊತ್ತು ಪಳಪಳನೆ ನೀಲಿ ಬಣ್ಣದಿಂದ ಹೊಳೆಯೋದಕ್ಕೆ ಕಾರಣವೇ ಡೈನೋಫ್ಲೆಗೆಲೆಟ್ ಅನ್ನೋ ಪಾಚಿ ಜೀವಿ. ಈ ಸೂಕ್ಷ್ಮಾಣು ಜೀವಿ ಬರಿಗಣ್ಣಿಗೆ ಕಾಣಿಸದು. ಮಾತ್ರವಲ್ಲದೇ ಇವುಗಳು ನೀರಿನಲ್ಲಿ ತನ್ನಿಷ್ಟದ ದಿಕ್ಕಿಗೆ ಚಲಿಸುವ ಸಾಮರ್ಥ್ಯ ಹೊಂದಿರಲಾರವು. ಹಾಗಾಗಿ ಅಲೆಗಳ ಹೊಡೆತಕ್ಕೆ ಸಿಕ್ಕಿ ಈ ಡೈನೋಫ್ಲೆಗೆಲೆಟ್ ಅನ್ನೋ ಏಕಕೋಶಜೀವಿಯು ಸಮುದ್ರದ ದಡಕ್ಕೆ ಬರುತ್ತವೆ. ಈ ರೀತಿ ಬರಬೇಕಾದರೆ ಅವುಗಳು ಹೊರಸೂಸುವ ರಾಸಾಯನಿಕದಿಂದಾಗಿ ಮಿಂಚುಹುಳದಂತೆ ಅವುಗಳು ಬೆಳಕು ಚೆಲ್ಲುತ್ತವೆ. ಈ ಹೊರಸೂಸುವ ರಾಸಾಯನಿಯಕವೇ ನೀಲಿ ಬಣ್ಣದಿಂದ ಪಳಪಳನೆ ಅಂತಾ ಹೊಳೆಯಲು ಶುರುವಾಗುತ್ತವೆ. ಸಾಮಾನ್ಯವಾಗಿ ಇಂತಹ ಜೀವಿಗಳು ಕೂಡಾ ಪ್ರಕೃತಿಯಿಂದ ಸಮುದ್ರ ಸೇರುವ ಕೆಲವೊಂದು ಪದಾರ್ಥಗಳನ್ನ ಸೇವಿಸುವ ಪರಿಣಾಮ ಇಂತಹ ರಾಸಾಯನಿಕ ಹೊರಸೂಸುತ್ತದೆ ಅನ್ನೋದು ತಜ್ಞರ ಅಭಿಪ್ರಾಯ.
ಆದರೆ ಈ ರೀತಿ ನೀರಿನ ವರ್ತನೆಯಿಂದ ಜನ ಒಂದೊಮ್ಮೆ ಭಯಭೀತರಾಗುವ ಪ್ರಸಂಗಗಳೂ ನಡೆಯುತ್ತವೆ. ಇದು ಅದ್ಯಾವುದೋ ದೈವ-ದೇವರು ನೀಡಿದ ಶಾಪವೋ ಅನ್ನೋ ಭಯಕ್ಕೂ ಒಳಗಾಗುತ್ತಾರೆ. ಆದರೆ ಮನುಷ್ಯ ಪ್ರಕೃತಿ ಮೇಲೆ ನಡೆಸುವ ಹಸ್ತಕ್ಷೇಪವನ್ನು ಮರೆಮಾಚುತ್ತಾರೆ. ಆದರೆ ಅನಗತ್ಯ ಪ್ರಕೃತಿ ಮೇಲೆ ನಡೆಸುವ ದೌರ್ಜನ್ಯವೇ ಇಂದು ತಿರುಗಿ ಮನುಷ್ಯನಿಗೆ ಈ ರೀತಿಯಾಗಿ ಉತ್ತರ ನೀಡುತ್ತಿರುತ್ತವೆ. ಆದರೆ ಸದ್ಯ ಕಾರವಾರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾತ್ರಿ ಹೊತ್ತಿನ ಕಡಲ ಕೌತುಕ ಅಷ್ಟೇನೂ ಅಪಾಯಕಾರಿಯಲ್ಲವಾಗಿದ್ದು, ಡೈನೋಫ್ಲೆಗೆಲೆಟ್ ಎಂಬ ಪಾಚಿ ವರ್ಗಕ್ಕೆ ಸೇರಿದ ಸೂಕ್ಷ್ಮಾಣು ಜೀವಿಗಳು ಗುಂಪಲ್ಲಿ ಇದ್ದಾಗ ಮಾತ್ರ ಇಂತಹ ವಿಸ್ಮಯ ಮೂಡೋದಕ್ಕಷ್ಟೇ ಸಾಧ್ಯ.