ಮೀನುಗಾರಿಕೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ಕಡಲು ಸೇರುತ್ತಿದೆ ಎಂಬುದು ಗೊತ್ತಿದೆ ಆದರೆ ಇದರ ಪ್ರಮಾಣ ಇಷ್ಟಿದೆ ಎಂಬುದು ಗೊತ್ತಿಲ್ಲ..! ಕೇಂದ್ರ ಸರ್ಕಾರದ ಪ್ಲಾಸ್ಟಿಕ್ ನೀತಿ ನಿಯಮಗಳು ತುಸು ಕಠಿಣವಾಗಿಯೇ ಇವೆ. ಆದರೆ ಅವೆಲ್ಲಾ ನಗರದಲ್ಲಿ ಮಾತ್ರ ಹೇರಿಕೆಯಾಗುತ್ತಿವೆ. ನಮ್ಮ ಸುತ್ತಲಿನ ಪರಿಸರ ಇಂತಹದೇ ಕಾರಣದಿಂದ ಹಾಳಾಗುತ್ತಿದೆ ಎಂಬುದು ನಮಗೆ ಗೊತ್ತಿರುತ್ತೆ ಆದರೆ ಬಾಯಿಬಿಡುವುದಿಲ್ಲ. ಅಂತಹದ್ದೇ ಒಂದು ವರದಿ ಮೀನುಗಾರರಿಂದ ಕಡಲು ಮಾಲೀನ್ಯದ ಮೇಲೆ ಬೆಳಕು ಚೆಲ್ಲಿದೆ.
ಕರ್ನಾಟಕವೂ ಸಹ ಕಡಲ ತೀರವನ್ನ ಹಂಚಿಕೊಂಡಿದ್ದು ಸಾಕಷ್ಟು ಮೀನುಗಾರರು ಜೀವನ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರ ಸಾಕಷ್ಟು ಅನುಕೂಲವನ್ನೂ ಮಾಡಿಕೊಟ್ಟಿದೆ, ಆ ನಾಡಿನಿಂದಲೇ ಬಂದ ಕೋಟಾ ಶ್ರೀನಿವಾಸ ಪೂಜಾರಿಯವರು ಮೀನುಗಾರರ ಜೀವನಮಟ್ಟ ಸುಧಾರಿಸಲು ಪ್ರಯತ್ನ ಪಡುತ್ತಿದ್ದಾರೆ. ಬಜೆಟ್‌ನಲ್ಲೂ ಕೂಡ ಮಹಿಳೆಯರಿಗೆ ಟೂವ್ಹೀಲರ್ ಸೌಲಭ್ಯ ನೀಡುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ. ಆದರೆ ಕಡಲು ಪರಿಸರ ದಿನೇ ದಿನೇ ಹಾಳಾಗುತ್ತಿರುವ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ, ಪರಿಸರ ಸ್ನೇಹಿ ಮೀನುಗಾರಿಕೆ ಬಗ್ಗೆ ಯೋಚಿಸಿದ್ದೇ ಇಲ್ಲ..!
ಮಂಗಳೂರು ಕಡಲಿಗೆ ಮೀನುಗಾರಿಕೆಯಿಂದ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಪ್ರವಾಸಿಗರ ಬಿಸಾಡುವ ಬಾಟೆಲ್‌ಗಿಂತ ಅಧಿಕವಾಗಿದೆ. ರಾಜ್ಯ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ ಕೂಡ ಇದನ್ನ ಒಪ್ಪಿಕೊಳ್ಳುತ್ತಾರೆ, ಡೀಪ್ ಸೀ ಬೋಟ್‌ನಲ್ಲಿ ಪ್ಲಾಸ್ಟಿಕ್ ಬಲೆಯನ್ನ ಉಪಯೋಗಿಸಿ ಮೀನುಗಾರಿಕೆ ಮಾಡುವಾಗ ಕಲ್ಲು ಬಂಡೆಗಳ ಮಧ್ಯೆ ಇರುವ ಮರಿ ಮೀನುಗಳಿಗೆ ಬಲೆ ಬೀಸುತ್ತಾರೆ. ಆಗ ಕನಿಷ್ಟ 100 ಕೆಜಿಯಷ್ಟು ಬಲೆ ಕಲ್ಲಿಗೆ ಸಿಕ್ಕಿ ನಾಶವಾಗುತ್ತೆ, ಒಟ್ಟು ರಾಜ್ಯದ ಐದು ಸಾವಿರ ಅಧಿಕೃತ ಬೋಟ್‌ಗಳಲ್ಲಿ ಒಮ್ಮೆ ಹೀಗಾದಾಗ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ಬಲೆಗಳ ಪ್ರಮಾಣ ಐದು ಲಕ್ಷ ಕೆಜಿಯಷ್ಟಾಯಿತು!
ಹೀಗೆಲ್ಲಾ ಹೇಳಿ ಮೀನುಗಾರಿಕೆಯ ಮೇಲೆ ಬೊಟ್ಟು ಮಾಡುತ್ತಿಲ್ಲ. ಆದರೆ ಪರಿಸರವನ್ನ ಹಾಗೆಯೇ ಕಡಲನ್ನ ಬಳಸಿ ಬಿಸಾಡುವ ಛಾತಿ ಎಲ್ಲರಲ್ಲೂ ಇದೆ. ಕಳೆದ ವಾರ ಪಾಂಡಿಚೆರಿಯಲ್ಲಿ ಈ ಬಿಸಾಡಿದ ಬಲೆಯನ್ನ ಸುತ್ತಿಕೊಂಡು ವೇಲ್ ಶಾರ್ಕ್ ಪ್ರಾಣಬಿಟ್ಟಿತ್ತು. ಕೇರಳ ಹಾಗೂ ತಮಿಳುನಾಡಿನಲ್ಲಿ ಉದ್ಯಮವಾಗಿ ಬೆಳೆದಿರುವ ಆಳ ಸಮುದ್ರದ ಮೀನುಗಾರಿಕೆ ಜಲಚರಗಳನ್ನ ಅನಾಯಾಸವಾಗಿ ಕೊಲ್ಲುತ್ತಿವೆ ಎಂದು ಕೊಚ್ಚಿಯ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ ವರದಿ ನೀಡಿದೆ. ಕೇರಳದಲ್ಲಿ ಸುಮಾರು 222 ಕಡಲು ಮೀನುಗಾರಿಕೆ ವಸಾಹತುಗಳಿವೆ, 113 ಒಳನಾಡು ಮೀನುಗಾರಿಕೆ ಹಳ್ಳಿಗಳಿವೆ..! ಕೇರಳವೊಂದರಿಂದಲೇ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ಪ್ರಮಾಣ ಎಷ್ಟು ಎಂಬುದನ್ನ ಊಹಿಸಿದರೆ ಆತಂಕವಾಗುತ್ತೆ. ಇವೆಲ್ಲಾ ಸೂಕ್ಷ್ಮ ಹಾಗೂ ಗಹನವಾದ ಸಮಸ್ಯೆಗಳು, ಕೇವಲ ಮೀನುಗಾರರನ್ನ ಹೊಣೆಯಾಗಿಸಿಬಿಡುವ ಬದಲು ಸರ್ಕಾರಗಳೂ ಜಾಗೃತಗೊಳ್ಳಬೇಕಿತ್ತು.
ದೇಶದ ಒಟ್ಟು ಕಡಲಿನ ಕಿನಾರೆಯಲ್ಲಿ ಸಂಗ್ರಹಿಸಿದ ತ್ಯಾಜ್ಯಗಳಲ್ಲಿ 15,360 ವಿವಿಧ ಬಗೆಯ ವಸ್ತುಗಳನ್ನ ವರ್ಗೀಕರಣ ಮಾಡಲಾಗಿದೆ, ಇದರಲ್ಲಿ ಪ್ಲಾಸ್ಟಿಕ್ ಪ್ರಮಾಣವೇ ಹೆಚ್ಚಿದೆ. ಈ ಗಾತ್ರದಲ್ಲಿ ಮೀನುಗಾರರಿಂದ ಕಡಲಿಗೆ ಸೇರಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ಶೇ.೩೬ರಷ್ಟು ಹಾಗೂ ತೂಕದ ಲೆಕ್ಕಾಚಾರದಲ್ಲಿ ಈ ಪ್ರಮಾಣ ಶೇ.39ರಷ್ಟು ಇದೆ. ಇದರಲ್ಲಿ ಬಲೆ ಹಾಗೂ ಹಗ್ಗಗಳೇ ತುಂಬಿಕೊಂಡಿರುತ್ತವೆ. ತಿಂಗಳಲ್ಲಿ ಇಪ್ಪತ್ತು ದಿನ ಮೀನುಗಾರರು ಕಡಲಲ್ಲಿರುತ್ತಾರೆ. ಕೊಚ್ಚಿ ಮರೈನ್ ಫಿಶರೀಸ್ ಸಂಶೋಧನಾ ಸಂಸ್ಥೆಯ ಡೇನಿಯಲ್ ಹೇಳುವಂತೆ ಮಳೆಗಾಲದಲ್ಲಿ ಅಲೆಗಳ ಎತ್ತರ ಹೆಚ್ಚಿರುತ್ತೆ, ಕಡಲಿನ ಎಲ್ಲಾ ಅವಶೇಷಗಳು ಅಂಚಿಗೆ ಬರುತ್ತವೆ, ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಭಗ್ನಾವಶೇಷದ ಸಾಲುಗಳನ್ನ ನಾವು ಕಾಣಬಹುದು. ಹೀಗೆ ನಾವು ನಮ್ಮ ಮೀನುಗಾರರ ಸಂಕಷ್ಟ ಅಂತ ಪರಿಹಾರ ಮಾಡಲು ನಿಲ್ಲುತ್ತೇವೆ, ಆದರೆ ಅವರಿಗೆ ಆಸರೆಯಾಗಿರುವ ಕಡಲು ಪರಿಸರ ಹಾಳಾಗುತ್ತಿರುವ ಬಗ್ಗೆ ಮೌನ ವಹಿಸುತ್ತಿದ್ದೇವೆ.