ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಮೈತ್ರಿ ಸರ್ಕಾರ ಉರುಳಿಸಿ ಅಲ್ಪಮತದ ಸರ್ಕಾರ ರಚಿಸಿದ ಬಿಜೆಪಿ ನಂತರ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ಭದ್ರಪಡಿಸಿಕೊಂಡಿತು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಯ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಸಿಗದೇ ಇರುವುದು. ಇದರಿಂದಾಗಿ ಅಧಿಕಾರಕ್ಕೇರಬೇಕಾದರೆ ಆರಪೇಷನ್ ಕಮಲ ನಡೆಸಬೇಕಾಯಿತು. ಇದರಿಂದ ಪಕ್ಷಕ್ಕೂ ಕೆಟ್ಟ ಹೆಸರು ಬರುವಂತಾಯಿತು. ಆದರೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಎದುರಾಗಬಾರದು ಎಂಬ ಕಾರಣಕ್ಕೆ 2023ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಬಲವರ್ದನೆ ಮಾಡುವ ಕೆಲಸಕ್ಕೆ ಕೈಹಾಕಿದೆ.
ಅದಕ್ಕಾಗಿ ಪಕ್ಷ ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ಬೆಂಗಳೂರು ಹೊರತಾದ ಹಳೇ ಮೈಸೂರು ಭಾಗವನ್ನು ಮೊಟ್ಟ ಮೊದಲಿಗೆ ಆಯ್ಕೆ ಮಾಡಿಕೊಂಡಿದೆ. ಇದುವರೆಗೂ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಖಾತೆ ತೆರೆಯುವ ಮೂಲಕ ಈ ಕಾರ್ಯವನ್ನು ಚುರುಕುಗೊಳಿಸಿದೆ.
ಹಳೇ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಒಕ್ಕಲಿಗ ಸಮುದಾಯ ಹೆಚ್ಚು ಪ್ರಾಬಲ್ಯ ಹೊಂದಿದೆ. ಈ ಸಮುದಾಯದ ನಾಯಕರು, ಕಾರ್ಯಕರ್ತರ ಬೆಂಬಲವಿಲ್ಲದೆ ಪಕ್ಷ ಸಂಘಟಿಸುವುದು ಕಷ್ಟ ಎಂಬುದು ಈಗಾಗಲೇ ಸಾಬೀತಾಗಿದೆ. ಈ ಕಾರಣದಿಂದಲೇ ಕರಾವಳಿ ಕರ್ನಾಟಕ, ಮಲೆನಾಡು, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಂಡರೂ ಬೆಂಗಳೂರು ಹೊರತುಪಡಿಸಿ ಹಳೇ ಮೈಸೂರು ಭಾಗದ ಹಾಸನ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಳವೂರಲು ಸಾಧ್ಯವಾಗಿರಲಿಲ್ಲ.
ಇದನ್ನು ಮನಗಂಡೇ 2017ರಲ್ಲಿ ಮಾಜಿ ಮುಖ್ಯಂತ್ರಿ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ತಳ ಊರುವ ಪ್ರಯತ್ನ ಮಾಡಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಇದು ಹೆಚ್ಚು ಪ್ರಯೋಜನಕ್ಕೆ ಬರಲಿಲ್ಲವಾದರೂ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನ ಗೆದ್ದುಕೊಂಡಿತ್ತು. ಮೈಸೂರಿನಲ್ಲಿ ಸ್ವಲ್ಪ ಚೇತರಿಸಿಕೊಳ್ಳಲು ಸಹಾಯ ಮಾಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಂತ್ರಗಾರಿಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರಕ್ಕೇರಲು ಒಂಬತ್ತು ಸ್ಥಾನಗಳ ಕೊರತೆ ಉಂಟಾಗಿತ್ತು. ಇದಕ್ಕೆ ಕಾರಣ ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷದ ಹೀನಾಯ ಪ್ರದರ್ಶನವೇ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಬಿಜೆಪಿ ಆಪರೇಷನ್ ಕಮಲದ ಮೂಲಕ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಒಕ್ಕಲಿಗ ಸಮುದಾಯದ ಶಾಸಕರನ್ನು ಸೆಳೆದುಕೊಂಡು ಮೈತ್ರಿ ಸರ್ಕಾರ ಉರುಳುವಂತೆ ಮಾಡಿತು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ, ಹೊಸಕೋಟೆಯಲ್ಲಿ ಆಪರೇಷನ್ ಕಮಲದ ಮೂಲಕ ಬಲಾಢ್ಯ ಅಭ್ಯರ್ಥಿಯನ್ನು ಸೆಳೆದುಕೊಂಡರೂ ಒಕ್ಕಲಿಗರಲ್ಲದ ಕಾರಣ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಮೂರು ಜಿಲ್ಲೆಗಳಲ್ಲಿ ಶಕ್ತಿ ಪಡೆದು ಅಕ್ಕಪಕ್ಕದ ಜಿಲ್ಲೆಗಳಿಗೂ ವಿಸ್ತರಿಸಿಕೊಳ್ಳುವ ತಂತ್ರ
ಈ ಫಲಿತಾಂಶದಿಂದ ಪಾಠ ಕಲಿತ ಬಿಜೆಪಿ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಗೆಲ್ಲಬೇಕಾದರೆ ಒಕ್ಕಲಿಗ ಸಮುದಾಯದ ಮುಖಂಡರು ಬೇಕು ಎಂಬುದನ್ನು ಅರಿತುಕೊಂಡಿದೆ. ಇದೇ ಅಸ್ತ್ರವನ್ನು ಬಳಸಿಕೊಂಡು 2023ರ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿದೆ. ಒಕ್ಕಲಿಗರ ಪ್ರಾಭಲ್ಯವಿರುವ ಹಾಸನ ಜಿಲ್ಲೆಯಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಹಾಸನ ನಗರ ಕ್ಷೇತ್ರದಿಂದ ಪ್ರೀತಂ ಗೌಡ ಅವರನ್ನು ಗೆಲ್ಲಿಸಿಕೊಂಡಿದ್ದ ಬಿಜೆಪಿ, ಉಪ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಿಂದ ನಾರಾಯಣ ಗೌಡ ಮತ್ತು ಚಿಕ್ಕಬಳ್ಳಾಪುರದಿಂದ ಡಾ.ಕೆ.ಸುಧಾಕರ್ ಅವರನ್ನು ಗೆಲ್ಲಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಶಾಸಕರನ್ನೇ ಬಳಸಿಕೊಂಡು ಆ ಜಿಲ್ಲೆಗಳಲ್ಲಿ ಪಕ್ಷ ಸಂಘಟಿಸುವ ಕೆಲಸಕ್ಕೆ ಚಾಲನೆ ನೀಡಲಿದೆ.
ಈ ಪೈಕಿ ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭವಾಗಿದೆ. ಜೆಡಿಎಸ್ ನ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಮತ್ತು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಯೋಜನೆ ರೂಪಿಸಿ ಅವರನ್ನು ಮಾತನಾಡಿಸಿದ್ದೂ ಆಗಿದೆ. ಬಹುತೇಕ ಅವರು ಕೂಡ ಬಿಜೆಪಿ ಸೇರಲು ಒಪ್ಪಿಕೊಂಡಿದ್ದಾರೆ. ಆದರೆ, ಈಗಲೇ ಕರೆಸಿಕೊಂಡರೆ ಮತ್ತೆ ಆಪರೇಷನ್ ಕಮಲದ ಆರೋಪದಿಂದ ಒಕ್ಕಲಿಗ ಸಮುದಾಯ ತಿರುಗಿಬೀಳಬಹುದು ಎಂಬ ಕಾರಣಕ್ಕೆ ಸದ್ಯಕ್ಕೆ ಅವರ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಅನುಕೂಲಗಳನ್ನು ಸರ್ಕಾರದಿಂದ ಒದಗಿಸಿ ಮುಂದಿನ ವಿಧಾನಸಬೆ ಚುನಾವಣೆ ವೇಳೆ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುವ ಬಗ್ಗೆ ಯೋಚಿಸಲಾಗಿದೆ.
ಇನ್ನು ಹಾಸನ ಜಿಲ್ಲೆಯಲ್ಲಿ ಪ್ರೀತಂ ಗೌಡ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಾ.ಸುಧಾಕರ್ ಅವರ ಮೂಲಕ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಸದ್ಯದಲ್ಲೇ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ನ ಜಿ.ಟಿ.ದೇವೇಗೌಡ ಅವರನ್ನು ಸೇರಿಸಿಕೊಂಡು ಪಕ್ಷದ ನೆಲೆಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಕಾರ್ಯತಂತ್ರ ಸಿದ್ಧವಾಗಿದೆ. ಈ ಮಧ್ಯೆ ತುಮಕೂರಿನಲ್ಲಿ ಪಕ್ಷ ಸ್ವಲ್ಪ ಮಟ್ಟಿನ ಶಕ್ತಿ ಹೊಂದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಆಗುತ್ತಿಲ್ಲ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕೆಲಸ ಆರಂಭಿಸಿದ್ದಾರೆ. ಆದರೆ, ಆ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಡಿ.ಕೆ.ಶಿವಕುಮಾರ್, ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ ಇರುವುದು ಯೋಗೇಶ್ವರ್ ಅವರಿಗೆ ಸ್ವಲ್ಪ ಹಿನ್ನಡೆ ಉಂಟುಮಾಡಿದೆ. ಕೋಲಾರದಲ್ಲೂ ಗಟ್ಟಿಯಾಗಿ ನಿಲ್ಲುವ ಒಕ್ಕಲಿಗ ನಾಯಕರು ಸಿಗುತ್ತಿಲ್ಲ.
ಹೀಗಿದ್ದರೂ ಬೆಂಗಳೂರಿನಲ್ಲಿ ಪಕ್ಷದ ನೆಲೆ ಮತ್ತಷ್ಟು ಗಟ್ಟಿಯಾಗಿದೆ. ಇದರ ಜತೆಗೆ ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಕ್ಷ ಗಟ್ಟಿಯಾದರೆ ಅಕ್ಕಪಕ್ಕದ ಜಿಲ್ಲೆಗಳಿಗೂ ಅದನ್ನು ವಿಸ್ತರಿಸಿಕೊಳ್ಳುವುದು ಕಷ್ಟವಾಗಲಾರದು. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಬಿಜೆಪಿ ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಗಳನ್ನು 2023ರ ವಿಧಾನಸಭೆ ಚುನಾವಣೆ ವೇಳೆ ಪಕ್ಷ ಬಲವರ್ದನೆ ಮಾಡಲು ಆಯ್ಕೆ ಮಾಡಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಸ್ಥಳೀಯ ಒಕ್ಕಲಿಗ ಮುಖಂಡರಿಗೇಕೆ ಬಿಜೆಪಿ ಮಣೆ ಹಾಕುತ್ತಿದೆ?
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಬಲ್ಯ ಹೊದಲು ಕಾರಣ ಒಕ್ಕಲಿಗ ಸಮುದಾಯದ ನಾಯಕರಾದ ಎಸ್.ಎಂ.ಕೃಷ್ಣ ಮತ್ತು ಎಚ್.ಡಿ.ದೇವೇಗೌಡರು. ಎಸ್.ಎಂ.ಕೃಷ್ಣ ಅವರ ಪ್ರಭಾವ ಆ ಭಾಗದಲ್ಲಿ ಕಡಿಮೆಯಾಗಿದ್ದರಿಂದ ಇತ್ತೀಚೆಗೆ ಜೆಡಿಎಸ್ ಹೆಚ್ಚು ಶಕ್ತಿಯುತವಾಗಿ ಬೆಳೆಯುವಂತಾಯಿತು. ಇದೀಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ತಲೆ ಎತ್ತಲಾರಂಭಿಸಿದೆ. ಆದರೆ, ಬಿಜೆಪಿಯಲ್ಲಿ ಅಂತಹ ಯಾವ ನಾಯಕರೂ ಬೆಳೆಯಲಿಲ್ಲ. ಇದರಿಂದ ಪಕ್ಷವೂ ಮೇಲೇರಲಿಲ್ಲ. ಬಿಜೆಪಿಯಲ್ಲಿ ಆರ್.ಅಶೋಕ್ ಅವರಂಥ ಹಿರಿಯ ನಾಯಕರಿದ್ದರೂ ಕೇವಲ ಬೆಂಗಳೂರಿಗಷ್ಟೇ ಸೀಮಿತವಾದರು. ಇದೀಗ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಒಕ್ಕಲಿಗರ ನಾಯಕ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆಯಾದರೂ ಅದು ಕೂಡ ಅಷ್ಟೊಂದು ಪ್ರಭಾವ ಬೀರುತ್ತಿಲ್ಲ. ಹೀಗಾಗಿ ಸ್ಥಳೀಯ ಮಟ್ಟದಲ್ಲೇ ಒಕ್ಕಲಿಗ ಮುಖಂಡರನ್ನು ಆಯ್ಕೆ ಮಾಡಿಕೊಂಡು ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.