ಬಿಹಾರದ ಜಗದಾನಂದ ಸಿಂಗ್ ರಾಷ್ಟ್ರೀಯ ಜನತಾದಳದ ಹಿರಿಯ ತಲೆಯಾಳು. ಕಳೆದ ವಾರ ಅವರು ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ‘ಆಯ್ಕೆ’ಯಾದರು. ಅವರು ಪಕ್ಷದ ಆಯ್ಕೆ ಅಲ್ಲ, ಲಾಲೂ ಕುಟುಂಬದ ಆಯ್ಕೆ. ದೇಶದ ಬಹುತೇಕ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಪಕ್ಷವೆಂದರೆ ಕುಟುಂಬ, ಕುಟುಂಬವೆಂದರೆ ಪಕ್ಷ. ಹೀಗಾಗಿ ಕುಟುಂಬದ ಆಯ್ಕೆಯೇ ಪಕ್ಷದ ಆಯ್ಕೆ.
ಜಗದಾನಂದ ಸಿಂಗ್ ಲಾಲೂ ಕುಟುಂಬದ ಎಲ್ಲರಿಗೂ ಒಪ್ಪಿಗೆಯಾದವರು. ಪಕ್ಷದಲ್ಲೂ ಅವರ ಕುರಿತು ಒಡಕು ಮಾತುಗಳಿರಲಿಲ್ಲ. ಹತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ರಾಮಚಂದ್ರ ಪುರ್ವೆ ಲಾಲೂ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರನ್ನು ನಿರ್ಲಕ್ಷಿಸಿದ್ದರಂತೆ. ಹಾಗೆಂದು ತೇಜ್ ಪ್ರತಾಪ್ ಕಳೆದ ವರ್ಷ ಬಹಿರಂಗವಾಗಿ ಆಪಾದಿಸಿದ್ದರು. ಜೈಲು ಪಾಲಾಗಿರುವ ಲಾಲೂಪ್ರಸಾದ್ ಯಾದವ್ ಅವರೇ ಸಿಂಗ್ ಅವರ ಹೆಸರನ್ನು ಸೂಚಿಸಿದ್ದರೆನ್ನಲಾಗಿದೆ.
ಜಗದಾನಂದ ಸಿಂಗ್ ಮಧ್ಯಬಿಹಾರದ ಜನಜನಿತ ರಜಪೂತ ತಲೆಯಾಳು. ಆ ಸೀಮೆಯ ಮೇಲ್ಜಾತಿಯ ಮತದಾರರ ಮೇಲೆ ಅವರ ದಟ್ಟ ಪ್ರಭಾವ ಉಂಟು. ಆರ್.ಜೆ.ಡಿ. ಅಧಿಕಾರದಲ್ಲಿದ್ದಾಗ ನೀರಾವರಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದರೆಂಬ ಹೆಸರು ಈಗಲೂ ಅವರಿಗಿದೆ. ರಾಜ್ಯದಲ್ಲಿ ರಜಪೂತ ಮತದಾರರ ಪ್ರಮಾಣ ಶೇ.ನಾಲ್ಕರಿಂದ ಐದರಷ್ಟು. ನಿತೀಶ್ ಕುಮಾರ್ ಕುರಿತು ಭ್ರಮನಿರಸನಗೊಂಡಿದ್ದಾರೆ. ಈ ಸಮುದಾಯ ಪಕ್ಷ ನಿಷ್ಠೆಯನ್ನು ಸಾಮಾನ್ಯವಾಗಿ ನಂಬುವುದಿಲ್ಲ. ಬಲಿಷ್ಠ ರಜಪೂತ ಹುರಿಯಾಳುಗಳು ಯಾವ ಪಕ್ಷದಲ್ಲಿದ್ದರೂ ಅವರನ್ನು ಗೆಲ್ಲಿಸಿಕೊಂಡು ಬಂದಿದೆ.
ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಬಲಿಷ್ಠ ಜಾತಿಯ ನಾಯಕನೊಬ್ಬನ ಈ ಆಯ್ಕೆಯು ರಾಷ್ಟ್ರೀಯ ಜನತಾದಳ ಎದುರಿಸುತ್ತಿರುವ ಹಾಲಿ ರಾಜಕೀಯ ಅನಿವಾರ್ಯವನ್ನೂ ಪ್ರತಿಫಲಿಸಿದೆ. ಬಿಹಾರ ರಾಜಕಾರಣದಲ್ಲಿ ಪಳಗಿದ ಹಳೆಯ ವರಸೆಗಾರ ಸಿಂಗ್ ಅವರಿಗೆ ಈಗ 74 ವರ್ಷ ವಯಸ್ಸು. 60ರ ದಶಕಗಳಿಂದಲೂ ಸಮಾಜವಾದಿ ಆಂದೋಳನದ ಜೊತೆ ಸಂಬಂಧ ಇರಿಸಿಕೊಂಡು ಬಂದವರು.
ರಾಷ್ಟ್ರೀಯ ಜನತಾದಳ ರಚನೆಯಾದದ್ದು 1997ರಲ್ಲಿ. ಅಂದಿನಿಂದ ಇಂದಿನ ತನಕ ಈ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಪ್ರಬಲ ಜಾತಿಯವರಿಗೆ ದೊರೆತಿರಲಿಲ್ಲ. ಈವರೆಗೆ ತಾನು ವಿರೋಧಿಸಿಕೊಂಡು ಬಂದಿದ್ದ ಪ್ರಬಲ ಜಾತಿಗಳನ್ನು ಒಲಿಸಿಕೊಳ್ಳಲು ಲಾಲೂ ಪಕ್ಷ ಇಟ್ಟಿರುವ ಮೊದಲ ಹೆಜ್ಜೆಯಿದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.
ಯಾದವರು ಮುಂಚೂಣಿಯಲ್ಲಿದ್ದ ಹಿಂದುಳಿದವರು- ಮುಸಲ್ಮಾನರು- ದಲಿತರನ್ನು ರಮಿಸುವ ರಾಜಕಾರಣವನ್ನು ಲಾಲೂ ಮಾಡಿಕೊಂಡು ಬಂದಿದ್ದರು. ಯಾದವ-ಮುಸ್ಲಿಂ-ದಲಿತ ರಾಜಕಾರಣ ಅವರನ್ನು ಬಿಹಾರದ ಅಧಿಕಾರದ ಗದ್ದುಗೆಯಲ್ಲಿ ಬಹುಕಾಲ ಕೂರಿಸಿತು. ಕಮಂಡಲ ರಾಜಕಾರಣವನ್ನು ಯಶಸ್ವಿಯಾಗಿ ದೂರ ಇರಿಸಿದ್ದರು. ಆದರೆ ಈ ಅಸ್ಮಿತೆಯ ರಾಜಕಾರಣ ಕೇವಲ ಯಾದವರ ಪ್ರಾಬಲ್ಯ ಕಾಪಾಡಿ ಅವರ ಅಸ್ಮಿತೆಯನ್ನು ಮಾತ್ರವೇ ಎತ್ತಿ ಹಿಡಿಯಿತೆಂಬ ಆಪಾದನೆಯನ್ನು ಅವರು ಎದುರಿಸಿದರು. ಈ ಆಪಾದನೆ ಸಂಪೂರ್ಣ ನಿರಾಧಾರ ಅಲ್ಲ. ಮುಸಲ್ಮಾನರು- ಯಾದವೇತರ ಹಿಂದುಳಿದವರು ಹಾಗೂ ದಲಿತರ ಬೆಂಬಲ ನೆಲೆ ಕಾಲಕ್ರಮೇಣ ಶಿಥಿಲಗೊಂಡಿತು. ಪ್ರಬಲ ಜಾತಿಗಳು ನಿತೀಶ್ ನೇತೃತ್ವದ ಸಂಯುಕ್ತ ಜನತಾದಳದತ್ತ ಸರಿದಿದ್ದವು. ಜಾತ್ಯತೀತ ಜನತಾದಳ ಮತ್ತು ಕಮಂಡಲ ರಾಜಕಾರಣದ ನೆರವಿನಿಂದ ಬಿಜೆಪಿಯೂ ಬಿಹಾರದಲ್ಲಿ ಹೆಜ್ಜೆ ಊರಿತು. ನರೇಂದ್ರಮ ೋದಿ ಮತ್ತು ಅಮಿತ್ ಶಾ ಅವರ ಆಕ್ರಮಣಕಾರಿ ರಾಷ್ಟ್ರವಾದ ಬೆರೆತ ಹಿಂದುತ್ವವು ಜಾತಿ ಆಧಾರಿತ ರಾಜಕಾರಣದ ಸೊಂಟ ಮುರಿದಿದೆ. ಲಾಲೂ ನೆಲೆ ಹರಿದು ಹಂಚಿ ಹೋಯಿತು. ಮೂಲಧಾರ ಆಗಿದ್ದ ಯಾದವ ನೆಲೆಯೂ ಬಿಜೆಪಿಯತ್ತ ಸರಿದಿದೆ. ಈ ಹೊಸ ಬೆಳವಣಿಗೆಗಳು ಲಾಲೂ ಅವರ ಅಸ್ಮಿತೆಯ ರಾಜಕಾರಣದ ಆಯಸ್ಸು ತೀರಿದ್ದನ್ನು ಸಾರಿವೆ. ಕಳೆದ ಲೋಕಸಭಾ ಚುನಾವಣೆಗಳಲ್ಲಿ ಎಲ್ಲ ಜಾತಿಗಳ ಬಡವರಿಗೆ ಶೇ.10ರ ಮೀಸಲಾತಿ ಘೋಷಿಸಿದ ಮೋದಿ ಸರ್ಕಾರದ ಕ್ರಮವನ್ನು ಆರ್.ಜೆ.ಡಿ. ವಿರೋಧಿಸಿತ್ತು. ಈ ನಡೆ ಹೊಡೆತ ಕೊಟ್ಟಿತೆಂದು ಈ ಪಕ್ಷದ ಅನಿಸಿಕೆ.
ಲಾಲೂ ಜೈಲುಪಾಲಾಗಿದ್ದಾರೆ. ಅವರ ವರ್ಚಸ್ಸು, ಚಾತುರ್ಯ, ಯುಕ್ತಿಗಳಿಂದ ಆರ್.ಜೆ.ಡಿ. ವಂಚಿತವಾಗಿದೆ. ಕುಟುಂಬದ ಬಳಿ ಹೊಸ ಆಲೋಚನೆಗಳಿಲ್ಲ. ಹೊಸ ದಾರಿ ತುಳಿಯುವ ರಾಜಕೀಯ ಪ್ರತಿಭೆಯನ್ನು ಅವರ ಕಿರಿಯ ಮಗ ತೇಜಸ್ವಿ ಯಾದವ್ ಈವರೆಗೆ ತೋರಿಸಿಲ್ಲ. ಉತ್ತರಪ್ರದೇಶದಲ್ಲಿ ಮಾಯಾವತಿ ಅವರು ರಾಜಕೀಯವಾಗಿ ಪ್ರಸ್ತುತವಾಗಿ ಉಳಿಯಲು ದಲಿತ ನೆಲೆಯನ್ನು ಪ್ರಬಲ ಜಾತಿಗಳ ತನಕ ವಿಸ್ತರಿಸಿಕೊಂಡಿದ್ದಾರೆ. ಉತ್ತರ ಭಾರತದ ಮತ್ತೊಂದು ಯಾದವ ನೆಲೆಯ ಪಕ್ಷವಾದ ಸಮಾಜವಾದಿ ಪಾರ್ಟಿ ಕೂಡ ಇದೇ ದಾರಿಯನ್ನು ತುಳಿದಿದೆ.
ಏರುದಾರಿಯ ಈ ಹೊಸ ಸನ್ನಿವೇಶದಲ್ಲಿ ಆರ್.ಜೆ.ಡಿ. ಹೊಸ ಹುಟ್ಟು ಕಂಡುಕೊಳ್ಳಬೇಕಿದೆ. ಈ ಪ್ರಯತ್ನದ ಭಾಗವಾಗಿಯೇ ಸಿಂಗ್ ನೇಮಕವನ್ನು ನೋಡಬಹುದಾಗಿದೆ.