ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನ ಕಲಂ 370 ಅನ್ನು ರದ್ದುಗೊಳಿಸಿ 7 ತಿಂಗಳೇ ಕಳೆದಿದೆ. ಕಳೆದ ಆಗಸ್ಟ್ 5-6 ರಂದು ಸಂಸತ್‌ನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಂ 370 ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿ ಅಂಗೀಕಾರಪಡೆದಿದ್ದರು. ಆನಂತರ ರಾಷ್ಟ್ರಪತಿಗಳ ಸಹಿಯೊಂದಿಗೆ ಇದು ಕಾನೂನಾಗಿ ಬದಲಾದದ್ದು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಮೈಲುಗಲ್ಲಿನ ನಿರ್ಣಯವಾದದ್ದು ಇಂದು ಇತಿಹಾಸ.
ಕೇಂದ್ರ ಸರ್ಕಾರ ಹೀಗೊಂದು ನಿರ್ಣಯಕ್ಕೆ ಮುಂದಾದಾಗ ಇಡೀ ಕಣಿವೆ ರಾಜ್ಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಹಿಂಸಾಚಾರ ತಾಂಡವವಾಡಿತ್ತು. ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಕರ್ಫ್ಯೂ ವಿಧಿಸಿತ್ತು. ಮೊಬೈಲ್ ಅಂತಾರ್ಜಾಲ ವ್ಯವಸ್ಥೆಯನ್ನು ನಿರ್ಬಂಧಿಸಿತ್ತು. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ ಸೇರಿದಂತೆ ಎಲ್ಲಾ ರಾಜಕೀಯ ನೇತಾರರನ್ನು ‘ಭದ್ರತಾ ಕಾಯ್ದೆಯ’ ಅನ್ವಯ ಬಂಧಿಸಿಡಲಾಗಿತ್ತು.
ಆದರೆ, ಸತತ 7 ತಿಂಗಳಿನಿಂದ ಗೃಹ ಬಂಧನದಲ್ಲಿಟ್ಟಿರುವ ಈ ಕಾಶ್ಮೀರದ ನಾಯಕರಿಗೆ ಕೇಂದ್ರ ಸರ್ಕಾರ ಈವರೆಗೆ ಬಿಡುಗಡೆ ಭಾಗ್ಯ ನೀಡಿಲ್ಲ. ಕಳೆದ ವಾರ ಮತ್ತೆ ಇವರ ಬಂಧನದ ಅವಧಿಯನ್ನು ಮುಂದುವರೆಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಇದೀಗ ಕಣಿವೆ ರಾಜ್ಯದ ನಾಯಕರು ಮತ್ತೆ ಕಿಡಿಕಾರಿದ್ದಾರೆ.
ಈ ಹಿನ್ನೆಲೆಯಲ್ಲಿ ಏನಿದು ಕಲಂ 370? ಇದರಿಂದ ಕಣಿವೆ ರಾಜ್ಯಕ್ಕೆ ಸಿಗುತ್ತಿರುವ ಅನುಕೂಲಗಳೇನು? ಹಾಗೂ ಭಾರತದಲ್ಲಿ ಯಾವೆಲ್ಲಾ ರಾಜ್ಯಗಳಿಗೆ ಈ ಸವಲತ್ತು ಲಭ್ಯವಾಗುತ್ತಿದೆ? ಕಣಿವೆ ರಾಜ್ಯದ ಈ ಸವಲತ್ತು ಈ ಪ್ರಮಾಣದ ವಿರೋಧವನ್ನು ಎದುರಿಸಲು ಕಾಣವೇನು? ಇದನ್ನು ರದ್ದುಗೊಳಿಸಿದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ಕಲಂ 370?:
ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಬಯಕೆಯನ್ನು ಹೊಂದಿದ್ದರು.
ಆದರೆ, ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.
1. ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.
2. ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.
3. ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು
4. ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು.
5. ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು.
6. ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ.
ಹೀಗೆ ಕಲಂ 370 ರ ಅಡಿಯಲ್ಲಿ ಆರು ಪ್ರಮುಖ ಸವಲತ್ತುಗಳನ್ನು ಸಂವಿಧಾನದ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ.
1. ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.
2. ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು.
3. ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ.
4. ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ.
5. ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.
6. ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ.
7. ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ.
ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ.
ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ.
ಆದರೆ, ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಜನಸಾಮಾನ್ಯರು ಹಾಗೂ ಗಡಿ ಭದ್ರತಾ ಪಡೆಗಳ ನಡುವಿನ ನಿರಂತರ ಚಕಮಕಿಯ ಕಾರಣದಿಂದಾಗಿಯೇ ಕಲಂ 370 ಹಾಗೂ 35(ಎ) ತಿದ್ದುಪಡಿ ತರಬೇಕು ಎಂಬ ಕೂಗು ಬಲವಾಗಿಯೇ ಕೇಳಿಬರುತ್ತಿತ್ತು. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ, ಆದರೆ, ಇದೀಗ ಈ ಕೂಗಿಗೆ ರಾಜಕೀಯ ಬಣ್ಣವೂ ಪ್ರಾಪ್ತಿಯಾಗಿದ್ದು, ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕಾರ್ಯರೂಪಕ್ಕೂ ತಂದಿದೆ.
ಆದರೆ, ಇದನ್ನು ದಕ್ಕಿಸಿಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಂದ್ರ ಕಣಿವೆ ರಾಜ್ಯವನ್ನು ಗುರಿಯಾಗಿಟ್ಟುಕೊಂಡು ಎಂತಹ ಕಾನೂನು ರೂಪಿಸಲಿದೆ? ಶಿಕ್ಷಣ, ವೈದ್ಯಕೀಯ, ರಸ್ತೆ ಸಾರಿಗೆ ಸೇರಿದಂತೆ ಮೂಲಭೂತ ಸೌಲಭ್ಯದ ಕ್ಷೇತ್ರದಲ್ಲಿ ಎಂತಹ ಅಭಿವೃದ್ಧಿಯನ್ನು ಸಾಧಿಸಲಿದೆ? ಎಂಬುದರ ಮೇಲೆ ಎಲ್ಲವೂ ನಿರ್ಣಯವಾಗಲಿದೆ.