ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್ ಸಂಕಷ್ಟದಲ್ಲಿ ಸಿಲುಕಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಯೆಸ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ರದ್ದು ಮಾಡಿದೆ. ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ಪಡೆಯುವ ನಗದಿನ ಮೇಲೆ ಮಿತಿ ಹೇರಿದೆ. ಗ್ರಾಹಕರು ಬ್ಯಾಂಕ್ ನಲ್ಲಿ ಇಟ್ಟಿರುವ ಠೇವಣಿಗಳು ಸುರಕ್ಷಿತವಾಗಿವೆ ಎಂದು ಖುದ್ಧು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಸ್ತುತ ಈಗ ಇರುವ ಸ್ವರೂಪದಲ್ಲಿ ಬ್ಯಾಂಕ್ ವಹಿವಾಟು ನಡೆಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಆರ್ಬಿಐ ಯೆಸ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ಪುರನರಚಿಸಲು ಮುಂದಾಗಿದೆ. ಪುನಾರಚಿತ ಯೆಸ್ ಬ್ಯಾಂಕಿನಲ್ಲಿ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್ಬಿಐ) ಶೇ.49ರಷ್ಟು ಪಾಲು ಹೊಂದಲಿದೆ. ಪುನಾರಚಿತವಾಗುವ ಆಡಳಿತ ಮಂಡಳಿಯಲ್ಲಿ ಎಸ್ಬಿಐನ ಪ್ರತಿನಿಧಿಗಳೂ ಇರುತ್ತಾರೆ. ಅಂದರೆ, ಬ್ಯಾಂಕ್ ಸ್ವತಂತ್ರ ಆಡಳಿತ ಮಂಡಳಿಯಡಿ ತನ್ನ ವಹಿವಾಟು ನಡೆಸಿದರೂ ಒಟ್ಟಾರೆ ಆಡಳಿತ ಚುಕ್ಕಾಣಿಯು ಎಸ್ಬಿಐ ಮೇಲ್ವಿಚಾರಣೆಯಲ್ಲಿರುತ್ತದೆ. ಅಷ್ಟರ ಮಟ್ಟಿಗೆ ಸದ್ಯಕ್ಕೆ ಯೆಸ್ ಬ್ಯಾಂಕಿನ ಗ್ರಾಹಕರಿಗೆ ತಕ್ಷಣಕ್ಕೆ ಅನನುಕೂಲವಾದರೂ ಅವರ ಠೇವಣಿಗಳು ಮತ್ತಿತರ ವಹಿವಾಟುಗಳಿಗೆ ತೊಂದರೆ ಆಗುವುದಿಲ್ಲ. ಆದರೆ, ಯೆಸ್ ಬ್ಯಾಂಕಿನ ಷೇರುಗಳ ಮೇಲೆ ಹೂಡಿಕೆ ಮಾಡಿದವರು ಅನುಭವಿಸಿರುವ ನಷ್ಟವನ್ನು ಯಾರೂ ತುಂಬಿಕೊಡುವುದಿಲ್ಲ.
ಒಂದು ಕಾಲದಲ್ಲಿ ಹೂಡಿಕೆದಾರರ ‘ಡಾರ್ಲಿಂಗ್’ ಎನಿಸಿದ್ದ ಯೆಸ್ ಬ್ಯಾಂಕ್ ಕುಸಿದಿದ್ದಾದರೂ ಹೇಗೆ? ಯೆಸ್ ಬ್ಯಾಂಕ್ ಹೂಡಿಕೆದಾರರ ಡಾರ್ಲಿಂಗ್ ಆಗಿದ್ದೇ ಒಂದು ಮಿಸ್ಟರಿ. 2004ರಲ್ಲಿ ಪ್ರಾರಂಭವಾದ ಯೆಸ್ ಬ್ಯಾಂಕ್ ನ ಪ್ರವರ್ತಕ ರಾಣಾಕಪೂರ್. ಅವರು ತನ್ನ ಸಂಬಂಧಿ ಅಶೋಕ್ ಕಪೂರ ಜತೆಗೆ ಸೇರಿ ಈ ಬ್ಯಾಂಕನ್ನು ಪ್ರಾರಂಭಿಸಿದ್ದರು. 2005ರಲ್ಲಿ ಐಪಿಒ ಮೂಲಕ 300 ಕೋಟಿ ಸಂಗ್ರಹಿಸಿದ್ದರು. ಹೈಟೆಕ್ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದ್ದ ಯೆಸ್ ಬ್ಯಾಂಕ್ ಕಾರ್ಪೊರೆಟ್ ವಲಯಕ್ಕೆ ದೊಡ್ಡ ಪ್ರಮಾಣದಲ್ಲಿ ಸಾಲ ನೀಡುತ್ತಿತ್ತು. ಹೀಗಾಗಿ ಆರಂಭದಲ್ಲಿ ಕಾರ್ಪೊರೆಟ್ ಬ್ಯಾಂಕ್ ಆಗಿತ್ತು. ನಂತರ ತನ್ನ ವಹಿವಾಟನ್ನು ರಿಟೇಲ್ ವಲಯಕ್ಕೂ ವಿಸ್ತರಿಸಿತು. ವಿವಿಧ ಕಂಪನಿಗಳ, ಸರ್ಕಾರದ ಇಲಾಖೆಗಳ ಮುಖ್ಯಸ್ಥರನ್ನು ಪುಸಲಾಯಿಸಿ ತಮ್ಮ ಬ್ಯಾಂಕಿನಲ್ಲೇ ಸ್ಯಾಲರಿ ಅಕೌಂಟ್ ತೆರೆಯುವಂತೆ ಮಾಡುತ್ತಿತ್ತು. ಅದಕ್ಕಾಗಿ ಮುಖ್ಯಸ್ಥರಿಗೆ ಉಡುಗೊರೆಗಳನ್ನು ಕೊಡುತ್ತಿತ್ತು. ಹೀಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು ಬಂದ ಯೆಸ್ ಬ್ಯಾಂಕ್ ಎಚ್ಎನ್ಐ (ಹೈ ನೆಟ್ವರ್ಥ್ ಇಂಡಿವಿಷುಯಲ್) ಗಳನ್ನು ಅಂದರೆ ಶ್ರೀಮಂತರನ್ನು ತನ್ನ ಗ್ರಾಹಕರನ್ನಾಗಿ ಮಾಡಿಕೊಂಡು ಅವರ ವಹಿವಾಟಿಗೆ ನೆರವಾಗುತ್ತಾ ಬಂತು. ಈ ನಡುವೆಯೇ ಪ್ರವರ್ತಕ ರಾಣಾ ಕಪೂರ್ ಕಂಪನಿಯಲ್ಲಿದ್ದ ತಮ್ಮ ಪಾಲನ್ನು ನಿಧಾನವಾಗಿ ಮಾರುತ್ತಾ ಬಂದರು.
ಪ್ರತಿ ತ್ರೈಮಾಸಿಕದಲ್ಲಿ ಉತ್ತಮ ಲಾಭವನ್ನು ಘೋಷಿಸುತ್ತಾ ಬಂದ ಯೆಸ್ ಬ್ಯಾಂಕ್ ಹೂಡಿಕೆದಾರರ ಡಾರ್ಲಿಂಗ್ ಎನಿಸಿಬಿಟ್ಟಿತು. ಹೀಗಾಗಿ ದೇಶದ ಪ್ರಮುಖ ಮ್ಯೂಚುವಲ್ ಫಂಡ್ ಗಳು, ದೇಶೀಯ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಯೆಸ್ ಬ್ಯಾಂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರು. 2004ರಲ್ಲಿ 5 ರುಪಾಯಿ ಇದ್ದ ಷೇರು 2018ರಲ್ಲಿ ಜೀವಮಾನದ ಗರಿಷ್ಠ ಮಟ್ಟವಾದ 400 ರುಪಾಯಿಗಳನ್ನು ದಾಟಿತ್ತು.
ಶುಕ್ರವಾರ ಯೆಸ್ ಬ್ಯಾಂಕ್ ತನ್ನ ಕಪ್ಪುವಹಿವಾಟಿನ ಒಂದು ಸುತ್ತನ್ನು ಪೂರ್ಣಗೊಳಿಸಿತು. ಅಂದರೆ ಶುಕ್ರವಾರದ ವಹಿವಾಟಿನಲ್ಲಿ ಯೆಸ್ ಬ್ಯಾಂಕ್ ಷೇರು ಶೇ.85ರಷ್ಟು ಕುಸಿದು ಕನಿಷ್ಠಮಟ್ಟ 5.55 ರುಪಾಯಿಗೆ ಇಳಿದಿತ್ತು. ಎಸ್ಬಿಐ ನೇತೃತ್ವದಲ್ಲಿ ಬ್ಯಾಂಕಿನ ಪುನಶ್ಚೇತನಗೊಳಿಸುವ ಸುದ್ದಿ ಪ್ರಸಾರವಾದ ನಂತರ ಷೇರಿನ ಬೆಲೆ ಕೊಂಚ ಚೇತರಿಸಿಕೊಂಡಿತು.
2017ರವರೆಗೂ ಯೆಸ್ ಬ್ಯಾಂಕ್ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಯೆಸ್ ಬ್ಯಾಂಕ್ ತನ್ನ ಒತ್ತಡದ ಸಾಲಗಳು ಮತ್ತು ನಿಷ್ಕ್ರಿಯ ಸಾಲಗಳನ್ನು ಮುಚ್ಚಿಡುತ್ತಿರುವ ಮತ್ತು ವಾಸ್ತವಿಕ ಲಾಭವನ್ನು ತಿರುಚುತ್ತಿರುವ ಬಗ್ಗೆ ಅನುಮಾನಗಳು ಬಂದವು. ಇದರ ಗಂಭೀರತೆ ಗೊತ್ತಾದ ನಂತರ ಆರ್ಬಿಐ ಆಂತರಿಕ ಶೋಧ ನಡೆಸಿತು. ಆಗಲೂ ಹೆಚ್ಚಿನ ಸತ್ಯಾಂಶಗಳು ಹೊರಬರಲಿಲ್ಲ. ರಾಣಾ ಕಪೂರ್ ಸಿಇಒ ಆಗಿ ಮುಂದುವರೆಯದಂತೆ ಆರ್ಬಿಐ ನಿರ್ಬಂಧ ಹೇರಿತು. 2018ರ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಅವಧಿ ವಿಸ್ತರಿಸುವಂತೆ ರಾಣಾ ಕಪೂರ್ ಸಲ್ಲಿಸಿದ್ದ ಮನವಿಯನ್ನು ಆರ್ಬಿಐ ತಿರಸ್ಕರಿಸಿತ್ತು. ಆಗಲೇ ಯೆಸ್ ಬ್ಯಾಂಕ್ ಷೇರು ಒಂದೇ ದಿನದಲ್ಲಿ ಶೇ.30ರಷ್ಟು ಕುಸಿದಿತ್ತು. ಜನವರಿ 2019ರಲ್ಲಿ ರಾಣಾಕಪೂರ್ ಸಿಇಒ ಹುದ್ದೆಯಿಂದ ಕೆಳಕ್ಕಿಳಿದರು. ರೇಟಿಂಗ್ ಏಜೆನ್ಸಿ ಮೂಡಿ ನವೆಂಬರ್ ತಿಂಗಳಲ್ಲಿ ಯೆಸ್ ಬ್ಯಾಂಕಿನ ವಿದೇಶಿ ಕರೆನ್ಸಿ ವಹಿವಾಟಿನ ಗುಣಮಟ್ಟದ ರೇಟಿಂಗ್ ತಗ್ಗಿಸಿತು.
ಜನವರಿ 24, 2019 ರಲ್ಲಿ ಹೊಸ ಸಿಇಒ ಆಗಿ ಡಾಯ್ಚ ಬ್ಯಾಂಕ್ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾವ್ನೀತ್ ಗಿಲ್ ಅವರನ್ನು ಸಿಇಒ ಆಗಿ ನೇಮಕ ಮಾಡಲಾಯಿತು. ಆಗಾಗಲೇ ಬ್ಯಾಂಕಿನ ಷೇರುಬೆಲೆ ಸೇ.50ರಷ್ಟು ಕುಸಿದಿತ್ತು. ರಾವ್ನೀತ್ ಗಿಲ್ ನೇತೃತ್ವದಲ್ಲಿ ಯೆಸ್ ಬ್ಯಾಂಕ್ ಮತ್ತೆ ಸದೃಢಗೊಳ್ಳುತ್ತದೆ ಎಂಬ ನಂಬಿಕೆಯಿಂದಾಗಿ ಯೆಸ್ ಬ್ಯಾಂಕಿನಲ್ಲಿ ರಿಟೇಲ್ (ಸಣ್ಣ ಹೂಡಿಕೆದಾರರು) ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರು. ಜೂನ್ 2019ರಲ್ಲಿ ಪ್ರವರ್ತಕರ ಪಾಲು ಶೇ.20ರಷ್ಟು ಇದ್ದದ್ದು ಡಿಸೆಂಬರ್ 2019ರ ವೇಳೆ ಶೇ.8.64ಕ್ಕೆ ಕುಸಿಯಿತು. ಇದೇ ಅವಧಿಯಲ್ಲಿ ಸಣ್ಣ ಹೂಡಿಕೆದಾರರು ಮತ್ತು ಇತರರ ಹೂಡಿಕೆಯು ಶೇ.20ರಿಂದ ಶೇ.47.96ಕ್ಕೆ ಜಿಗಿಯಿತು.
ನೂತನ ಸಿಇಒ ರಾವ್ನೀತ್ ಗಿಲ್ ಬ್ಯಾಂಕಿನ ಲೆಕ್ಕಪತ್ರಗಳನ್ನು ಶುದ್ಧೀಕರಿಸಲು ಮುಂದಾದರು. ಅದುವರೆಗೆ ಘೋಷಣೆಯಾಗದ ಒತ್ತಡದ ಸಾಲಗಳು ಮತ್ತು ನಿಷ್ಕ್ರಿಯ ಸಾಲಗಳನ್ನು ಬಹಿರಂಗ ಪಡಿಸಿದರು. ಅಲ್ಲದೇ ಅಲ್ಲಿಯವರೆಗೂ ಲಾಭ ಘೋಷಣೆ ಮಾಡುತ್ತಿದ್ದ ಯೆಸ್ ಬ್ಯಾಂಕ್ ನಿಷ್ಕ್ರಿಯ ಸಾಲಗಳಿಗಾಗಿ ನಿಧಿ ಮೀಸಲು ಇಡಲು ನಷ್ಟವನ್ನು ಘೋಷಿಸಿತು. ಈ ನಡುವೆ ರಾವ್ನೀತ್ ಗಿಲ್ ಅವರು ಬಂಡವಾಳ ಮರುಪೂರಣ ಮಾಡುವ ಸಲುವಾಗಿ ಸುಮಾರು ಎರಡು ಬಿಲಿಯನ್ ಡಾಲರ್ ಸಂಗ್ರಹಿಸುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಸಾಂಸ್ಥಿಕ ಹೂಡಿಕೆದಾರರಾರೂ ಮುಂದೆ ಬರಲಿಲ್ಲ. ಹೂಡಿಕೆ ಮಾಡಲಿಚ್ಚಿಸಿದ್ದ ಸಿಂಗಪೂರ ಮೂಲದ ಹೂಡಿಕೆದಾರರ ಬಗ್ಗೆ ಆಡಳಿತಾತ್ಮಕ ತಗಾದೆ ಇತ್ತು. ಹೀಗಾಗಿ ಬಂಡವಾಳ ಮರುಪೂರಣ ಸಾಧ್ಯವಾಗಲಿಲ್ಲ. ಈ ನಡುವೆ ವಿವಿಧ ರೇಟಿಂಗ್ ಏಜೆನ್ಸಿಗಳು ಯೆಸ್ ಬ್ಯಾಂಕ್ ಪಡೆದ ಸಾಲಗಳು ಮತ್ತು ಪಾವತಿಗಳ ರೇಟಿಂಗ್ ಮಟ್ಟವನ್ನು ತಗ್ಗಿಸಿದ್ದವು. ಇದರಿಂದಾಗಿ ಯೆಸ್ ಬ್ಯಾಂಕ್ ಹೊಸದಾಗಿ ಸಾಲ ಪಡೆಯುವ ಮಾರ್ಗಗಳು ಬಂದ್ ಆಗಿದ್ದವು.
2019 ಮೇ ತಿಂಗಳಲ್ಲಿ ಆರ್‌ಬಿಐ ಮಾಜಿ ಉಪ ಗವರ್ನರ್ ಆರ್. ಗಾಂಧಿಯನ್ನು ಯೆಸ್ ಬ್ಯಾಂಕ್ ಮಂಡಳಿಗೆ ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಲಾಯಿತು. ಇದು ಆರ್ಬಿಐನ ಅಪರೂಪದ ಕ್ರಮವಾಗಿತ್ತು. ಬ್ಯಾಂಕಿನ ಮೇಲೆ ಹೆಚ್ಚಿನ ನಿಗಾ ಇಡುವುದು ಈ ನೇಕಮದ ಉದ್ದೇಶವಾಗಿತ್ತು. ಜುಲೈ 17ರಂದು ಯೆಸ್ ಬ್ಯಾಂಕ್ ತನ್ನ ಮೊದಲ ತ್ರೈಮಾಸಿಕದಲ್ಲಿ ಶೇ.91ರಷ್ಟು ಲಾಭಾಂಶ ಕುಸಿತವಾಗಿದೆ ಎಂದು ಪ್ರಕಟಿಸಿತು. ಮತ್ತು ನಿಷ್ಕ್ರಿಯ ಸಾಲದ ಅನುಪಾತವು ಶೇ.5.01ರಷ್ಟಾಗಿದೆ ಎಂದು ಘೋಷಿಸಿತು. ನವೆಂಬರ್ 1ರಂದು ಯೆಸ್ ಬ್ಯಾಂಕ್ ತನ್ನ ದ್ವಿತೀಯ ತ್ರೈಮಾಸಿಕದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ಘೋಷಿಸಿತಲ್ಲದೇ ನಿಷ್ಕ್ರಿಯ ಸಾಲಗಳ ಪ್ರಮಾಣವು ಶೇ.7.39ಕ್ಕೆ ಏರಿದ್ದಾಗಿ ಪ್ರಕಟಿಸಿತು.
ಕೆನಡಾದ ಹೂಡಿಕೆದಾರ ಎರ್ವಿನ್ ಸಿಂಗ್ ಬ್ರೈಚ್ ಮತ್ತು ಹಾಂಗ್ ಕಾಂಗ್ ಮೂಲದ ಎಸ್‌ಪಿಜಿಪಿ ಹೋಲ್ಡಿಂಗ್ಸ್ ಗೆ ಸುಮಾರು 10,000 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡುವ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಆಡಳಿತಾತ್ಮಕ ಕಾರಣಗಳಿಗಾಗಿ ಅದನ್ನು ತಿರಸ್ಕರಿಸಲಾಗಿತ್ತು. ನಂತರ ಯೆಸ್ ಬ್ಯಾಂಕ್ ತನ್ನ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸದಿರುವ ಬಗ್ಗೆ ತೀವ್ರ ಮಾರುಕಟ್ಟೆಯಲ್ಲಿ ಆತಂಕ ಕವಿದಿತ್ತು. ಷೇರುದರ ಸತತ ಕುಸಿಯುತ್ತಿತ್ತು. ಈ ನಡುವೆ ಆರ್ಬಿಐ ಬ್ಯಾಂಕಿನ ನಿತ್ಯದ ವಹಿವಾಟುಗಳನ್ನು ಹೊರಗಿನಿಂದ ಗಮನಿಸುತ್ತಿತ್ತು. ಎಲ್ಲವೂ ಸರಿಯಿಲ್ಲ ಎನಿಸಿದಾಗ ಬ್ಯಾಂಕಿನ ಗ್ರಾಹಕರ ಹಿತಾಸಕ್ತಿ ಮತ್ತು ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಜರಿಗಿರುವ ವಿಶ್ವಾಸಾರ್ಹತೆ ಕಾಪಾಡಲು ಮಾರ್ಚ್ 5ರಂದು ಆರ್ಬಿಐ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ರದ್ದು ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿತು.
ಮುಂದೇನು?
ಯೆಸ್ ಬ್ಯಾಂಕ್ ಪತನಕ್ಕೆ ಮುಖ್ಯ ಕಾರಣ- ಐಎಲ್ಅಂಡ್ ಫ್ಎಸ್, ಅನಿಲ್ ಅಂಬಾನಿ ಸಮೂಹ, ಸಿಜಿ ಪವರ್, ಕಾಕ್ಸ್ ಅಂಡ್ ಕಿಂಗ್, ಆಲ್ಟಿಕೊ, ಕೆಫೆ ಕಾಫಿ ಡೇ, ಎಸ್ಸೆಲ್ ಗ್ರೂಪ್, ಎಸ್ಸೆಲ್ ಪವರ್, ಮಂತ್ರಿ ಗ್ರೂಪ್ಸ್, ರೆಡಿಯಲ್ ಡೆವಲಪರ್ಸ್ ವರದರಾಜ್ ಸಿಮೆಂಟ್- ಹೀಗೆ ನಷ್ಟದಲ್ಲಿರುವ ಕಂಪನಿಗಳಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡಿರುವುದು. ಈ ಕಂಪನಿಗಳು ಬಹುತೇಕ ಭಾರಿ ನಷ್ಟದಲ್ಲಿವೆ ಇಲ್ಲವೇ ದಿವಾಳಿಯಾಗಿವೆ ಮತ್ತು ದಿವಾಳಿಯಾಗುವ ಅಂಚಿನಲ್ಲಿವೆ. ಈ ಕಂಪನಿಗಳಿಗೆ ನೀಡಿರುವ ಸಾಲಗಳು ವಾಪಾಸು ಬರುವ ಸಾಧ್ಯತೆ ತೀರಾ ಕಡಮೆ. ಸಾಮಾನ್ಯವಾಗಿ ಇಂತಹ ಕಂಪನಿಗಳಿಗೆ ನೀಡಿದ ಸಾಲವನ್ನು ಪ್ರತಿ ತ್ರೈಮಾಸಿಕದಲ್ಲಿ ಅದನ್ನು ನಿಷ್ಕ್ರಿಯ ಸಾಲವೆಂದು ಘೋಷಣೆ ಮಾಡಿ, ಆಗುವ ನಷ್ಟವನ್ನು ಸರಿದೂಗಿಸಲು ಲಾಭಾಂಶದಲ್ಲಿ ಕೆಲಭಾಗವನ್ನು ಮೀಸಲಿಡಲಾಗುತ್ತದೆ. ಆದರೆ, ರಾಣಾ ಕಪೂರ್ ತನ್ನ ಬ್ಯಾಂಕಿನ ಷೇರು ದರ ಏರಿಕೆಯನ್ನು ಕಾಯ್ದುಕೊಳ್ಳಲು ಈ ಕಂಪನಿಗಳಿಗೆ ನೀಡಿದ ಸಾಲದ ಮೊತ್ತವನ್ನು ಘೋಷಿಸಿಲ್ಲ. ಅಷ್ಟಕ್ಕೂ ಈ ಕಂಪನಿಗಳಿಗೆ ನೀಡಿರುವ ಸಾಲವನ್ನು ಯೆಸ್ ಬ್ಯಾಂಕ್ ಬೇರೆ ಮೂಲದಿಂದ ಸಾಲ ಪಡೆದಿರುತ್ತದೆ. ಆ ಸಾಲವನ್ನು ಮರುಪಾವತಿ ಮಾಡಬೇಕಿರುತ್ತದೆ. ಇಂತಹ ಒತ್ತಡ ಪರಿಸ್ಥಿತಿ ನಿಭಾಯಿಸಲೆಂದೇ ಆರ್ಬಿಐ ನಿಷ್ಕ್ರಿಯ ಸಾಲಗಳ ಘೋಷಣೆ ಮತ್ತು ನಿರ್ವಹಣೆಯನ್ನು ಕಡ್ಡಾಯ ಮಾಡಿದೆ.
ಈಗ ಸದ್ಯಕ್ಕೆ ಬ್ಯಾಂಕಿನಲ್ಲಿ ಇಟ್ಟಿರುವ ಠೇವಣಿಗಳಿಗೆ ತೊಂದರೆ ಇಲ್ಲ. ಆದರೆ, ಯೆಸ್ ಬ್ಯಾಂಕಿನ ಷೇರುಗಳನ್ನು ಖರೀದಿಸಿದ ಸಣ್ಣ ಹೂಡಿಕೆದಾರರು, ಮ್ಯೂಚುವಲ್ ಫಂಡ್ ಗಳು, ಸಾಂಸ್ಥಿಕ ಹೂಡಿಕೆದಾರರು ನಷ್ಟಕ್ಕೀಡಾಗುತ್ತಾರೆ. ಅದು ಸಹಜವಾಗಿಯೇ ಹಣಕಾಸು ವಲಯದಲ್ಲಿ ಒಂದು ಹಂತದವರೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿರುವ ಗ್ರಾಹಕರಿಗೂ ಅಲ್ಪ ಪ್ರಮಾಣದ ನಷ್ಟವಾಗುತ್ತದೆ.
ಐಎಲ್ಅಂಡ್ಎಫ್ಎಸ್ ಹಗರಣದಂತೆ ಭಾರಿ ಪ್ರಮಾಣದ ಪರಿಣಾಮವೇನೂ ಬ್ಯಾಂಕಿಂಗ್ ವಲಯದಲ್ಲಾಗುವುದಿಲ್ಲ. ಉಳಿದಂತೆ ಯೆಸ್ ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಆದರೆ, ಆಡಳಿತ ಮಂಡಳಿ ಬೇರೆಯೇ ಇರುತ್ತದೆ. ಮುಂಬರುವ ದಿನಗಳಲ್ಲಿ ಯೆಸ್ ಬ್ಯಾಂಕು ಲಾಭ ಘೋಷಣೆ ಮಾಡಲು ಸಾಧ್ಯವಾಗದೇ ಇರಬಹುದು. ಆದರೆ, ತನ್ನ ನಿಷ್ಕ್ರಿಯ ಸಾಲಗಳನ್ನು ತಗ್ಗಿಸಿಕೊಳ್ಳಲು ಸಾಧ್ಯವಿದೆ. ಹಲವು ತ್ರೈಮಾಸಿಕಗಳ ನಂತರ ಮತ್ತೆ ಲಾಭದತ್ತ ದಾಪುಗಾಲು ಹಾಕಬಹುದು.