ಸೆಪ್ಟೆಂಬರ್ 2017 ರಲ್ಲಿ, ಅಂದಿನ ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಅವರು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಪತ್ರ ಬರೆದಿದ್ದು, ಚುನಾವಣಾ ಬಾಂಡ್‌ಗಳಂತಹ ಯೋಜನೆಗೆ ಅವಕಾಶ ನೀಡುವುದರಿಂದ ಸಾಕಷ್ಟು ಅಪಾಯವಿದೆ, ಇದು ಕೇಂದ್ರೀಯ ಬ್ಯಾಂಕಿನ (ಆರ್ ಬಿ ಐ) ವರ್ಚಸ್ಸಿಗೆ ಸರಿಪಡಿಸಲಾಗದಷ್ಟು ಹಾನಿಯನ್ನುಂಟುಮಾಡುತ್ತದೆ. ಮತ್ತು ಅಪನಗದೀಕರಣದಿಂದ ಬಂದ ಲಾಭಾನುಕೂಲವನ್ನು ರದ್ದು ಮಾಡುತ್ತದೆ ಎಂದು ಎಚ್ಚರಿಸಿದ್ದರು.
ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಪತ್ರಗಳ ಮಾಹಿತಿ ಪ್ರಕಾರ, ನಿಗದಿತ ಬ್ಯಾಂಕಿಗೆ ಕರೆನ್ಸಿಯಂತಹ ಉಪಕರಣಗಳನ್ನು ನೀಡಲು ಅನುಮತಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಪಟೇಲ್ ಹಲವಾರು ಆತಂಕಗಳನ್ನು ವ್ಯಕ್ತಪಡಿಸಿದ್ದರು, ಸರ್ಕಾರದ ನಿರ್ಧಾರದಿಂದಾಗಿ ಬಾಂಡ್ ವಿತರಿಸುವ ಹಕ್ಕು ಹೊಂದಿರುವ ಮತ್ತು ಅದನ್ನು ನಿರ್ವಹಿಸಲು ಇರುವ ಆರ್‌ಬಿಐನ ವಿಶೇಷ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
“ಕೇಂದ್ರೀಯ ಬ್ಯಾಂಕನ್ನು ಹೊರತುಪಡಿಸಿ ಬೇರೆ ಯಾವುದೇ ಘಟಕವು ಧಾರಕಗಳಂತಹ ಕರೆನ್ಸಿಯಾಗಿರುವ ಬೇರರ್ ಬಾಂಡ್‌ಗಳನ್ನು ವಿತರಿಸಲು ಅವಕಾಶ ನೀಡುವುದು ಸಾಕಷ್ಟು ಅಪಾಯದಿಂದ ಕೂಡಿದೆ ಮತ್ತು ಚುನಾವಣಾ ಬಾಂಡ್‌ಗಳಿಗೆ ಅನ್ವಯವಾಗುವ ಷರತ್ತುಗಳೊಂದಿಗೆ ಹಿಂದೆಂದೂ ಕಂಡುಕೇಳರಿಯದಂತಹವು ಎಂದು ನೀವು ದಯೆಯಿಂದ ಒಪ್ಪುತ್ತೀರಿ” ಎಂದು ಊರ್ಜಿತ್ ಪಟೇಲ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರದಲ್ಲಿ ಪ್ರಶ್ನಿಸಿದ್ದರು.
“ಇಂತಹ ವಿನಾಯಿತಿ ಯೋಜನೆಯ ಬಗ್ಗೆ ಸಾರ್ವಜನಿಕರ ಗ್ರಹಿಕೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಹಾಗೆಯೇ ಸಾಮಾನ್ಯವಾಗಿ ಭಾರತದ ಹಣಕಾಸು ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ವಿಶೇಷವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಶೆಲ್ ಕಂಪನಿಗಳ ಮೂಲಕ ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಬಹುದು, ಇದು ಹಣ ವರ್ಗಾವಣೆ ವಹಿವಾಟನ್ನು ಸುಗಮಗೊಳಿಸುವ ಆರ್‌ಬಿಐನ ವರ್ಚಸ್ಸಿಗೆ ಗಂಭೀರ ಅಪಾಯವನ್ನು ತಂದೊಡ್ಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.
ತಾತ್ವಿಕವಾಗಿ, ರಾಜಕೀಯ ಧನಸಹಾಯ ವ್ಯವಸ್ಥೆಯನ್ನು ಶುದ್ಧೀಕರಿಸುವ ಕಲ್ಪನೆಯು ಸ್ವಾಗತಾರ್ಹ ಮತ್ತು ಚುನಾವಣಾ ಬಾಂಡ್‌ಗಳ (ಇಬಿ) ಕಲ್ಪನೆಯು ವಿಶಿಷ್ಟವಾಗಿದ್ದರೂ, ಆರ್‌ಬಿಐ “ಡಿಜಿಟಲ್ ರೂಪದಲ್ಲಿ ಎಲೆಕ್ಟೊರಲ್ ಬಾಂಡ್ ಗಳನ್ನು ನೀಡುವುದು ಒಂದು ಉತ್ತಮ ವಿಧಾನವಾಗಿದೆ, ಹಣ ವರ್ಗಾವಣೆಗೆ ಎಲೆಕ್ಟೊರಲ್ ಬಾಂಡ್ ಗಳ ಬಳಕೆಯನ್ನು ತಪ್ಪಿಸುವುದರ ಹೊರತಾಗಿ, ಈ ವ್ಯವಸ್ಥೆಯು ಹೆಚ್ಚು ಸುರಕ್ಷಿತವಾಗಿರುತ್ತದೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಮುದ್ರಿಸುವ ಅಗತ್ಯವನ್ನು ತಪ್ಪಿಸುವುದರಿಂದ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ” ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದರು.
“ಡಿಮ್ಯಾಟ್ ರೂಪದಲ್ಲಿ ನೀಡಲಾದ ಎಲೆಕ್ಟೊರಲ್ ಬಾಂಡ್ ಗಳು ಕೇಂದ್ರೀಯ ಬ್ಯಾಂಕ್- ಪ್ರಾರಂಭಿಸಿರುವ ‘ ಡಿಜಿಟಲ್ ಕರೆನ್ಸಿ’ಯನ್ನು ಹೋಲುತ್ತವೆ ಎಲೆಕ್ಟೊರಲ್ ಬಾಂಡ್ ಗಳನ್ನು ನೀಡುವ ವಿಶೇಷ ಅಧಿಕೃತ ಅಧಿಕಾರ ಕೇಂದ್ರೀಯಬ್ಯಾಂಕಿಗೆ ಸೇರಬೇಕು” ಎಂಬ ಅಗತ್ಯವನ್ನು ಪತ್ರದಲ್ಲಿ ಒತ್ತಿಹೇಳಿದ್ದರು.
“ಎಲೆಕ್ಟೊರಲ್ ಬಾಂಡ್ ಗಳ ಡಿಜಿಟಲ್ ರೂಪವು ಅಪಾಯಗಳನ್ನು ತಗ್ಗಿಸುತ್ತದೆ ಮತ್ತು ಸರ್ಕಾರದ ಸುಧಾರಣಾ ಕಾರ್ಯಸೂಚಿಯನ್ನು ದೃಢವಾದ ಹೆಜ್ಜೆಯಲ್ಲಿ ಇರಿಸಲು ಸಹಾಯ ಮಾಡುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ.” ಎಂದು ಊರ್ಜಿತ್ ಪಟೇಲ್ ಪತ್ರದಲ್ಲಿ ತಿಳಿಸಿದ್ದರು.
Also Read: ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಪತ್ರಕ್ಕೆ ತಾವಾಗಿಯೇ ಸ್ಪಂದಿಸದಿದೇ ಇದ್ದರೂ, ಆಗ ಹಣಕಾಸು ಕಾರ್ಯದರ್ಶಿಯಾಗಿದ್ದ, ಮತ್ತು ಈಗ ತಮ್ಮನ್ನು ಹಣಕಾಸು ಕಾರ್ಯದರ್ಶಿ ಹುದ್ದೆಯಿಂದ ಇಂಧನಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಿದ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆದಿರುವ ಸುಭಾಷ್ ಚಂದ್ರ ಗರ್ಗ್ ಅವರು 2017 ಸೆಪ್ಟೆಂಬರ್ 21 ರ ಪತ್ರದಲ್ಲಿ ಡಿಜಿಟಲ್ ಚುನಾವಣಾ ಬಾಂಡ್‌ಗಳ ಪ್ರಸ್ತಾಪವನ್ನು ತಿರಸ್ಕರಿಸಿದರು. ಹಾಗೆ ಮಾಡುವುದರಿಂದ, “ರಾಜಕೀಯ ಪಕ್ಷಗಳಿಂದ ದಾನಿಗಳ ಗುರುತನ್ನು ರಕ್ಷಿಸುವ ಯೋಜನೆಯ ಪ್ರಮುಖ ಉದ್ದೇಶವನ್ನೇ ತೆಗೆದುಹಾಕಿದಂತಾಗುತ್ತದೆ” ಎಂದು ಗಾರ್ಗ್ ಹೇಳಿದ್ದರು.
ಕೇಂದ್ರೀಯ ಬ್ಯಾಂಕ್ ಹೊರತುಪಡಿಸಿದಂತೆ ಎಲೆಕ್ಟೊರಲ್ ಬಾಂಡ್ ಗಳನ್ನು ವಿತರಿಸಲು ನಿಗದಿತ ಬ್ಯಾಂಕ್‌ಗೆ ಅವಕಾಶ ನೀಡುವುದರ ಕುರಿತಾದ ಊರ್ಜಿತ್ ಪಟೇಲ್ ಅವರ ಆತಂಕಕ್ಕೆ ಉತ್ತರ ನೀಡಿದ್ದ ಸುಭಾಷ್ ಚಂದ್ರ ಗರ್ಗ್, ಇದು ಕೇವಲ “ಶಕ್ತಗೊಳಿಸುವ ನಿಬಂಧನೆ” ಮತ್ತು “ಯೋಜನೆಯ ಪ್ರಾರಂಭದ ನಂತರ ಬಾಂಡ್‌ಗಳನ್ನು ನೀಡುವುದು ಕೇವಲ ಆರ್‌ಬಿಐ ಮಾತ್ರ” ಎಂದು ತಿಳಿಸಿದ್ದರು.
ನಂತರ ಸೆಪ್ಟೆಂಬರ್ 27, 2017 ರಂದು ವಿತ್ತಸಚಿವ ಅರುಣ್ ಜೇಟ್ಲಿ ಅವರನ್ನು ಉದ್ದೇಶಿಸಿ ಮತ್ತೊಂದು ಪತ್ರದೊಂದಿಗೆ ಗಾರ್ಗ್ ಅವರ ಪತ್ರಕ್ಕೆ ಪಟೇಲ್ ಪ್ರತಿಕ್ರಿಯಿಸಿದರು. ಎಲೆಕ್ಟೊರಲ್ ಬಾಂಡ್ ಗಳ ಕುರಿತು ಚರ್ಚಿಸಲು ಕೇಂದ್ರ ಮಂಡಳಿಯ ಆರ್‌ಬಿಐ ಸಮಿತಿಯು ಸೆಪ್ಟೆಂಬರ್ 27 ರಂದು ಸಭೆ ಸೇರಿತು ಮತ್ತು ನಂತರ ಸಭೆಯಲ್ಲಿ ಪ್ರಸ್ತಾಪ ಮಾಡಲಾದ ವಿವಿಧ ಆತಂಕಗಳನ್ನು ಪಟ್ಟಿಮಾಡಿದೆ ಎಂದು ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಮಾಹಿತಿ ನೀಡಿದರು.
ಮೊದಲನೆಯದಾಗಿ, ಕರೆನ್ಸಿ ನೀಡುವುದು ಕೇಂದ್ರೀಯ ಬ್ಯಾಂಕ್ ನ ಏಕಸ್ವಾಮ್ಯ ಪರಮಾಧಿಕಾರ ಎಂದು ಊರ್ಜಿತ್ ಪಟೇಲ್ ಪುನಃ ಒತ್ತಿ ಹೇಳಿದರು. “ಇದಕ್ಕೆ ವಿರುದ್ಧವಾಗಿ ಕೇಂದ್ರೀಯ ಬ್ಯಾಂಕ್ ಸೂಚಿಸಿದ ಹೊರತಾಗಿಯೂ ಕೇಂದ್ರ ಸರ್ಕಾರವು ಆರ್ ಬಿ ಐ ಕಾಯ್ದೆಯ ಸೆಕ್ಷನ್ 31 ಅನ್ನು ತಿದ್ದುಪಡಿ ಮಾಡಿತು ಮತ್ತು ಆ ಮೂಲಕ ಕೇಂದ್ರ ಬ್ಯಾಂಕಿನ ಏಕಸ್ವಾಮ್ಯವನ್ನು ದುರ್ಬಲಗೊಳಿಸುತ್ತಿರುವುದು ಆಂತಕಕಾರಿಯಾದ ಸಂಗತಿಯಾಗಿದೆ. ಚುನಾವಣಾ ಬಾಂಡ್‌ಗಳು, ಅವುಗಳಿಗೆ ಲಗತ್ತಿಸಲಾದ ಯಾವುದೇ ನಿಬಂಧನೆ ಲೆಕ್ಕಿಸದೆ, ಕರೆನ್ಸಿ ನೋಟ್‌ನಂತೆ ಇರುತ್ತದೆ. ” ಎಂದು ಆಕ್ಷೇಪಿಸಿದ್ದರು.
ಡಿಜಿಟಲ್ ರೂಪಕ್ಕೆ ವಿರುದ್ಧವಾಗಿ ಚುನಾವಣಾ ಬಾಂಡ್‌ಗಳನ್ನು ಲಿಖಿತ ರೂಪದಲ್ಲಿ ನೀಡುವುದರಿಂದ ಯಾವುದೇ ವಹಿವಾಟಿನ ಹಾದಿ ಪತ್ತೆ ಹಚ್ಚಲುಸಾಧ್ಯವಾಗದು , ಮತ್ತು “ ಈಯೋಜನೆಯನ್ನು ದುಷ್ಟಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಹುದು” ಎಂದು ಅವರು ಹೇಳಿದ್ದರು.
“ಆರ್ ಬಿ ಐ ಲಿಖಿತ ರೂಪದಲ್ಲಿ ಎಲೆಕ್ಟೊರಲ್ ಬಾಂಡ್ ಗಳನ್ನು ನೀಡಲು ಒಪ್ಪಿದರೆ, ಅದು ಅನಿವಾರ್ಯವಾಗಿ ಹಣ ವರ್ಗಾವಣೆಗೆ ಕಾರಣವಾಗಬಹುದು ಎಂಬ ಅಪಾಯದ ನಡುವೆಯೂ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಲಾಗುತ್ತದೆ. ಇದು ಆರ್‌ಬಿಐನ ವರ್ಚಸ್ಸು ಮತ್ತು ಖ್ಯಾತಿಯನ್ನು ಗಂಭೀರವಾಗಿ ಕುಗ್ಗಿಸುತ್ತದೆ,”ಎಂದು ಅವರು ಮತ್ತೆ ಎಚ್ಚರಿಸಿದರು. ಲಿಖಿತ ರೂಪದಲ್ಲಿ ಎಲೆಕ್ಟೊರಲ್ ಬಾಂಡ್ ಗಳನ್ನು ನೀಡುವುದರಿಂದ ಖೋಟಾ ಮತ್ತು ಗಡಿಯಾಚೆಗಿನ ನಕಲಿಮಾಡುವ ಆಪಾಯ ಸಿಕ್ಕಿಕೊಳ್ಳುತ್ತವೆ ಎಂದು ಅವರು ಎಚ್ಚರಿಸಿದ್ದರು.
ಅಪನಗದೀಕರಣದಿಂದ ಉಂಟಾಗುವ ಪ್ರಮುಖ ಸಕಾರಾತ್ಮಕ ಅಂಶವೆಂದರೆ ಔಪಚಾರಿಕ ಆರ್ಥಿಕತೆಯ ಹೊರಗೆ ಇರುವ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರಲಾಗಿದೆ. ಆರ್‌ಬಿಐ ಕೂಡ ಆರಂಭದಲ್ಲಿ ತನ್ನ ಪ್ರತಿಷ್ಠೆಗೆ ಸ್ವಲ್ಪ ಹಾನಿಯನ್ನುಂಟುಮಾಡಿತು, ಆದರೆ ಕೊನೆಯಲ್ಲಿ ಇದು ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಸಹಕರಿಸುವ ಕ್ರಮವಾಗಿ ಕಂಡುಬಂದಿದೆ”ಎಂದು ಅವರು ಹೇಳಿದರು.
ಎಲೆಕ್ಟೊರಲ್ ಬಾಂಡ್ ಯೋಜನೆಯ ಕಾರ್ಯಾಚರಣೆಯು “ಸರ್ಕಾರ ಮತ್ತು ಆರ್‌ಬಿಐ ಅನ್ನು ಸಾರ್ವಜನಿಕರಿಂದ ವ್ಯಾಪಕ ಟೀಕೆಗಳಿಗೆ ಒಡ್ಡುತ್ತದೆ ಮತ್ತು ಇದರ ಪರಿಣಾಮವಾಗಿ ಸರ್ಕಾರ ಮತ್ತು ಆರ್ ಬಿ ಐ ತಮ್ಮ ಇದುವರೆಗೆ ಜನರಿಂದ ಪಡೆದಿರುವ ಉತ್ತಮ ಅಭಿಪ್ರಾಯವನ್ನು ಕಳೆದುಕೊಳ್ಳುತ್ತದೆ. ಈ ಒಂದು ನಡೆಯಿಂದ ಅಪನಗದೀಕರಣದ ವೇಳೆ ಸಾರ್ವಜನಿಕರು ಅನುಭವಿಸಿದ ನೋವುಗಳು ವ್ಯರ್ಥವಾಗಿದೆಯೆಂದೇ ತಿಳಿಯಬಹುದು” ಎಂದು ಪಟೇಲ್ ವಿವರಿಸಿದ್ದರು.
ಆರ್ ಬಿ ಐ ಕೇಂದ್ರ ಮಂಡಳಿಯ ಸಮಿತಿಯು ತನ್ನ ವಿಶ್ವಾಸಾರ್ಹ ಸಾಮರ್ಥ್ಯದಲ್ಲಿ ಯೋಜನೆಯನ್ನು ತನ್ನ ಉದ್ದೇಶಿತ ರೂಪದಲ್ಲಿ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತದೆ ಎಂದೂ ಸ್ಪಷ್ಟವಾಗಿ ತಿಳಿಸಿದ್ದರು.
ಆದಾಗ್ಯೂ, ಪಟೇಲ್ ಅವರ ವಿವರವಾದ ಪತ್ರಕ್ಕೆ ವಿತ್ತ ಸಚಿವ ಜೇಟ್ಲಿ ಮತ್ತೆ ಪ್ರತಿಕ್ರಿಯಿಸಲಿಲ್ಲ. ಅವರ ಪರವಾಗಿ ಪ್ರತಿಕ್ರಿಯಿಸಿದ ಗಾರ್ಗ್, ಆರ್‌ಬಿಐ ಎತ್ತಿದ ಆತಂಕಗಳನ್ನು ಮತ್ತೊಮ್ಮೆ ತಳ್ಳಿಹಾಕಿದರು ಮತ್ತು ಸರ್ಕಾರವು ಆರ್‌ಬಿಐನ ಒಳಹರಿವುಗಳನ್ನು ಸರಿಯಾಗಿ ಪರಿಗಣಿಸಿದ್ದರೂ, ಭೌತಿಕ ರೂಪದಲ್ಲಿ ಎಲೆಕ್ಟೊರಲ್ ಬಾಂಡ್ ಗಳೊಂದಿಗೆ ಮುಂದುವರಿಯುವುದು ಸರ್ಕಾರದ “ಅಂತಿಮ ನಿರ್ಧಾರ” ಎಂದು ಹೇಳಿದ್ದರು.
ಅಂದರೆ, ಕೇಂದ್ರ ಸರ್ಕಾರವು ಬಾಂಡ್ ವಿತರಿಸುವ ಪರಮಾಧಿಕಾರ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ನ ಸ್ವಾಯತ್ತತೆಗೆ ಧಕ್ಕೆ ತಂದು ತನಗೆ ಅನುಕೂಲವಾಗುವ ರೀತಿಯಲ್ಲಿ ಎಲೆಕ್ಟೊರಲ್ ಬಾಂಡ್ ಯೋಜನೆಯನ್ನು ಜಾರಿ ಮಾಡಿತು ಮತ್ತು ಸಾವಿರಾರು ಕೋಟಿ ರುಪಾಯಿಗಳನ್ನು ತನ್ನ ಪಕ್ಷದ ಖಜಾನೆಗೆ ತುಂಬಿಸಿಕೊಂಡಿತು. ಅಷ್ಟೇ ಅಲ್ಲ ಇತರ ಪಕ್ಷಗಳಿಗೆ ದೇಣಿಗೆ ಹರಿಯುವುದನ್ನು ವ್ಯವಸ್ಥಿತವಾಗಿ ತಪ್ಪಿಸಿತು.