ಕರೋನಾ ವೈರಸ್ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಕೇವಲ ಹತ್ತು ದಿನಗಳಲ್ಲಿ ಚೀನಾ ಒಂದು ಸಾವಿರ ಬೆಡ್‌ಗಳನ್ನು ಹೊಂದಿರುವ ಆಸ್ಪತ್ರೆಯನ್ನೇ ನಿರ್ಮಿಸಿದೆ. ಈ ಎಲ್ಲಾ ಪ್ರಯತ್ನಗಳ ನಡುವೆ ಭಾರತದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಕುರಿತು ಮಾಧ್ಯಮಗಳು ಹಲವು ವರದಿಗಳನ್ನು ನೀಡಿವೆ. ಆದರೆ, ಭಾರತದಲ್ಲಿ ನಿಜವಾಗಿಯೂ ಕರೋನಾವನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆಯೇ? ವಿದೇಶದಲ್ಲಿ ಕೆಲಸ ಮಾಡುವವರು ವಾಪಾಸ್ಸು ತಾಯ್ನಾಡಿಗೆ ಮರಳುವಾಗ ಅವರನ್ನು ಯಾವ ರೀತಿ ಪರೀಕ್ಷೆಗೆ ಒಳಪಡಿಸುತ್ತಾರೆ? ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಸಂಘರ್ಷ್ ನಾವಡ ದೆಹಲಿಯ ʼಕ್ವಾರೆಂಟೈನ್ ಸೆಂಟರ್ʼ (Quarantine Centre) ನ ಅಸಲಿಯತ್ತು ಬಿಚ್ಚಿಟ್ಟಿದ್ದಾರೆ.
ಮಾರ್ಚ್ 16ರಂದು ಜರ್ಮನಿಯಿಂದ ಭಾರತಕ್ಕೆ ವಾಪಾಸ್ಸಾಗಿರುವ ಸಂಘರ್ಷ್ ಅವರು ದೆಹಲಿಯ ಇಂದಿರಾ ಗಾಂಧೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣಲ್ಲಿ ವಿದೇಶದಿಂದ ವಾಪಾಸ್ಸಾಗುವ ಭಾರತೀಯರನ್ನು ಯಾವ ರೀತಿ ತಪಾಸಣೆಗೆ ಒಳಪಡಿಸುತ್ತಾ ಇದ್ದಾರೆ ಎಂಬುದನ್ನು ಕೂಲಂಕುಷವಾಗಿ ವಿವರಿಸಿದ್ದಾರೆ. ಮಾರ್ಚ್ 16ರಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿ ದೆಹಲಿಯ ಏರ್‌ಪೋರ್ಟ್ ತಲುಪಿದ ಸಂಘರ್ಷ್ ಮತ್ತು ಇತರ ಸಹ ಪ್ರಯಾಣಿಕರನ್ನು ಪರೀಕ್ಷಿಸಲು ಬೇಕಾದ ಉಪಕರಣಗಳು ಅಲ್ಲಿನ ಸಿಬ್ಬಂದಿಗಳ ಬಳಿಯಿರಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ, ಸುಮಾರು 600 ಜನ ಪ್ರಯಾಣಿಕರನ್ನು ಒಂದೆಡೆ ಕೂಡಿ ಹಾಕಿ ಅವರ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದಿದ್ದರು ಏರ್‌ಪೋರ್ಟ್ ಸಿಬ್ಬಂದಿಗಳು.
ಮೊದಲಿಗೆ ಅಲ್ಲಿರುವ ಎಲ್ಲಾ ಪ್ರಯಾಣಿಕರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ ಬಳಿಕ, ಏರ್‌ಪೋರ್ಟ್ ಸಿಬ್ಬಂದಿಗಳು ಹಾಗೂ ಪೊಲೀಸರ ತಂಡವೊಂದು ಶಾಕಿಂಗ್ ಸುದ್ದಿಯನ್ನು ಪ್ರಯಾಣಿಕರಿಗೆ ನೀಡಿತ್ತು. ಅದೇನೆಂದರೆ, ಜರ್ಮನಿ ಮತ್ತು ಫ್ರಾನ್ಸ್‌ನಿಂದ ಬಂದಿರುವ ಎಲ್ಲಾ ಪ್ರಯಾಣಿಕರನ್ನು 14 ದಿನಗಳ ಕಾಲ ದಿಗ್ಬಂಧನದಲ್ಲಿ ಇಡುವಂತೆ ಸರ್ಕಾರ ಆದೇಶಿಸಿದೆ ಎಂದು ಸಿಬ್ಬಂದಿಗಳು ಹೇಳಿದಾಗ, ಅಲ್ಲಿದ್ದ 600 ಜನ ಪ್ರಯಾಣಿಕರೂ ಕಂಗಾಲಾದರು. ಒಂದು ವೇಳೆ, ಎಲ್ಲರನ್ನೂ ದಿಗ್ಬಂಧನದಲ್ಲಿ ಇರಿಸುವ ಆದೇಶವಿದ್ದಿದ್ದಲ್ಲಿ, ಪ್ರಾಥಮಿಕ ತನಿಖೆಗೆ ಒಳಪಡಿಸುವ ಅಗತ್ಯತೆ ಏನಿತ್ತು? ಅಷ್ಟು ಹೊತ್ತು ಸಮಯ ಹಾಳು ಮಾಡಿ ವೃದ್ದರಿಗೆ ಹಾಗೂ ಮಕ್ಕಳಿಗೆ ತೊಂದರೆ ನೀಡುವ ಅಗತ್ಯವಾದರೂ ಏನಿತ್ತು? ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ ಸಂಧರ್ಭದಲ್ಲಿ ಪೊಲೀಸ್ ಅಧಿಕಾರಿಗಳ ದರ್ಪದ ಉತ್ತರ ಕೇಳಿ ಬಂದಿತ್ತು. ಅತಿಯಾಗಿ ಮಾತನಾಡಿದರೆ ಅಥವಾ ಅತಿಯಾಗಿ ಪ್ರಶ್ನೆಗಳನ್ನು ಕೇಳಿದರೆ ಐಪಿಸಿಯ ಸೆಕ್ಷನ್ 270ರ ಅಡಿಯಲ್ಲಿ ಬಂಧಿಸಲಾಗುವುದು ಎಂಬ ಬೆದರಿಕೆಯ ಮಾತುಗಳು ಕೂಡಾ ಅಧಿಕಾರಿಗಳ ಬಾಯಿಂದ ಬಂದಿತ್ತು.
IPCಯ ಸೆಕ್ಷನ್ 270 ಏನು ಹೇಳುತ್ತದೆಂದರೆ, ಜೀವಕ್ಕೆ ಅಪಾಯಕಾರಿಯಾದ ಯಾವುದೇ ಕಾಯಿಲೆಯ ಸೋಂಕನ್ನು ಹರಡುವ ಸಾಧ್ಯತೆ ಇರುವ ಅಥವಾ ಸಾಧ್ಯತೆ ಇದೆಯೆಂದು ನಂಬಲಾಗಿರುವ ಯಾವುದೇ ಕೃತ್ಯವನ್ನು ಎಸಗಿದಲ್ಲಿ, ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಅಥವಾ ಈ ಎರಡನ್ನೂ ವಿಧಿಸಬಹುದಾಗಿದೆ.
600 ಜನ ಪ್ರಯಾಣಿಕರನ್ನು ʼಕ್ವಾರೆಂಟೈನ್ ಸೆಂಟರ್ʼನಲ್ಲಿ ಇಡುವಂತಹ ವ್ಯವಸ್ಥೆಯಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರೆ, ಅದೂ ಇಲ್ಲ. ವಶಕ್ಕೆ ಪಡೆದ ಪಾಸ್‌ಪೋರ್ಟ್‌ಗಳನ್ನು ಮರಳಿಸಲೂ ಅಧಿಕಾರಿಗಳು ಒಲ್ಲೆ ಎಂದರು. ಪ್ರಯಾಣಿಕರು ಅಲ್ಲೇ ಪ್ರತಿಭಟನೆಗೆ ಮುಂದಾದಾಗ ಲಾಟರಿ ಎತ್ತುವ ಮಾದರಿಯಲ್ಲಿ ಬಾಕ್ಸ್‌ನಲ್ಲಿ ತುಂಬಿದ ಪಾಸ್‌ಪೋರ್ಟ್‌ಗಳನ್ನು ವಿತರಿಸಿದರು ಅಧಿಕಾರಿಗಳು. ಈ ಸಮಯದಲ್ಲಿ ಒರ್ವ ಪ್ರಯಾಣಿಕನ ಪಾಸ್‌ಪೋರ್ಟ್ ಕಾಣೆಯಾಗಿ ಹೋಯಿತು ಎನ್ನುತ್ತಾರೆ, ಸಂಘರ್ಷ್.
ಹಸಿವಿನಿಂದ ನರಳಾಡಿದ ವೃದ್ದರು, ಮಕ್ಕಳು:
ಬೆಳಗ್ಗೆ 9.30ಕ್ಕೆ ದೆಹಲಿಗೆ ಬಂದಿಳಿದ ಪ್ರಯಾಣಿಕರಿಗೆ ಕನಿಷ್ಟ ನೀರಿನ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಅದೆಷ್ಟೋ ಮಕ್ಕಳು ಮತ್ತು ವೃದ್ದರು ನೀರಿಲ್ಲದೇ ಒದ್ದಾಡುವ ಸಂಧರ್ಭದಲ್ಲಿ ಅಧೀಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಇತರ ಸಹ ಪ್ರಯಾಣಿಕರು ಅಲ್ಲಿನ ಅವ್ಯವಸ್ಥೆಯ ವಿರುದ್ದ ರೊಚ್ಚಿಗೆದ್ದಿದ್ದರು. ಅಧಿಕಾರಿಗಳು ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗವೂ ಒದಗಿ ಬಂತು. ಸತತ ಪ್ರತಿಭಟನೆಯ ನಂತರ 300 ಮಿಲಿ ಲೀಟರ್‌ನ ನೀರಿನ ಬಾಟಲಿಯನ್ನು ಪ್ರಯಾಣಿಕರಿಗೆ ನೀಡಲಾಯಿತು. ಆದರೆ, ಸಮಯ ಮಧ್ಯಾಹ್ನ 2 ದಾಟಿದರೂ, ಊಟದ ವ್ಯವಸ್ಥೆಯನ್ನು ಮಾಡಿರಲಿಲ್ಲ.
ಪ್ರಯಾಣಿಕರಲ್ಲಿ ಹಲವು ಜನರಿಗೆ ಡಯಾಬಿಟಿಸ್ ಹಾಗೂ ರಕ್ತದೊತ್ತಡದ ಸಮಸ್ಯೆಯಿತ್ತು. ಸರಿಯಾದ ಸಮಯದಲ್ಲಿ ಊಟ ಸಿಕ್ಕಿಲ್ಲವಾದಲ್ಲಿ ಅವರು ಇನ್ನಷ್ಟು ಸಮಸ್ಯೆಗೆ ಸಿಲುಕುವ ಸಾಧ್ಯತೆಗಳಿದ್ದವು. ಈ ಸಂದರ್ಭದಲ್ಲಿ ಪೊಲೀಸರ ಬಳಿ ಹೋದರೆ ಕೇಸು ದಾಖಲಿಸುವ ಬೆದರಿಕೆ ಮತ್ತು ಏರ್‌ಪೋರ್ಟ್ ಅಧಿಕಾರಿಗಳ ಬಳಿ ಹೋದರೆ ಅಸಹಾಯಕತೆ ಮಾತ್ರ ಲಭಿಸಿದ ಉತ್ತರ. ಒಂದು ಹೊತ್ತಿನ ಊಟವಿಲ್ಲದಿದ್ದರೆ ಏನಾಗುತ್ತದೆ ಎಂಬ ಉಢಾಫೆ ಅಲ್ಲಿನವರಲ್ಲಿ ಕಂಡು ಬಂದದ್ದು ಸುಳ್ಳಲ್ಲ. ಆದರೆ, ಪ್ರಯಾಣಿಕರ ಮಧ್ಯೆ ಇದ್ದಂತಹ ವೃದ್ದರು ಹಾಗೂ ಮಕ್ಕಳ ಪರಿಸ್ಥಿತಿಯೇನು? ಡಯಾಬಿಟಿಸ್, ಬ್ಲಡ್ ಪ್ರೆಷರ್‌ನಿಂದ ಬಳಲುತ್ತಿರುವ ರೋಗಿಗಳ ಪರಿಸ್ಥಿತಿಯೇನು? ಎಂಬುದರ ಕಿಂಚಿತ್ ಪರಿವೆಯೂ ಅಧಿಕಾರಿಗಳಿಗಿರಲಿಲ್ಲ. ಕೊನೆಗೂ ಸಂಘರ್ಷ್ ಮತ್ತು ಅವರ ಜತೆಗಿದ್ದ ಸಹ ಪ್ರಯಾಣಿಕರಿಗೆ ಊಟ ದೊರೆತಿದ್ದು ರಾತ್ರಿ 10 ಗಂಟೆಗೆ.
ಭಾರತದಲ್ಲಿ ವೈರಸ್‌ನ ಉಗಮ ಸ್ಥಾನ ದ್ವಾರಕ ದಿಗ್ಬಂಧನ ಕೇಂದ್ರ:
ಏರ್‌ಪೋರ್ಟ್‌ನಿಂದ ಬಸ್‌ನಲ್ಲಿ ʼಕ್ವಾರೆಂಟೈನ್ ಸೆಂಟರ್ʼಗಳಿಗೆ ಎಲ್ಲಾ ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಅಲ್ಲಿನ ಪರಿಸ್ಥಿತಿ ನೋಡಿದರೆ ಅದು ದೇವರಿಗೇ ಪ್ರೀತಿ. ಅಲ್ಲಿನ ಸ್ಥಿತಿಗತಿಗಳನ್ನು ನೋಡಿದರೆ, ಭಾರತದಲ್ಲಿ ಕರೋನಾ ವೈರಸ್ ಹರಡಲು ದ್ವಾರಕ ದಿಗ್ಬಂಧನ ಕೇಂದ್ರವೇ ಸಾಕು ಎಂದು ಹೇಳುತ್ತಾರೆ ಸಂಘರ್ಷ್. ಸ್ವಚ್ಚತೆ ಎಂಬ ಪದದ ಅರ್ಥವೇ ಗೊತ್ತಿಲ್ಲದಂತಿತ್ತು ಆ ಕೇಂದ್ರ. ಎಲ್ಲೆಂದರಲ್ಲಿ ಬಿದ್ದ ಕಸ, ಕೊಳಕು ಶೌಚಾಲಯಗಳು, ಸುತ್ತಲಿರುವ ದುರ್ನಾತದಿಂದ ಹೈರಾಣಾಗಿ ಹೋಗಿದ್ದರು ಪ್ರಯಾಣಿಕರು. ಅಲ್ಲಿನ ವೈದ್ಯರ ಪರಿಸ್ಥಿತಿ ನೋಡಿ ಅಯ್ಯೋ ಅನ್ನಿಸುತ್ತೆ. ಅವರ ಬಳಿ ಯಾವುದೇ ಮೆಡಿಕಲ್ ಕಿಟ್ ಇರಲಿಲ್ಲ. ಆದರೂ, ಬಂದಿರುವ ರೋಗಿಗಳನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿದ್ದರು.
ಆ ಕೇಂದ್ರದಲ್ಲಿ ಎಲ್ಲರ ದೇಹದ ತಾಪಮಾನ ಪರೀಕ್ಷೆ ಮಾಡಲು ಇದ್ದಿದ್ದು ಒಂದೇ ಥರ್ಮೋಮೀಟರ್! ಒಂದು ವೇಳೆ ಯಾರಾದರೂ ಒಬ್ಬ ಪ್ರಯಾಣಿಕನಿಗೆ ಕರೋನಾ ವೈರಸ್ ತಗುಲಿದ್ದರೂ, ಅದು ಎಲ್ಲ 600 ಜನರಿಗೆ ಹರಡುವ ಸಾಧ್ಯತೆಗಳಿತ್ತು. ಶುಚಿತ್ವವನ್ನು ಕಾಪಾಡಿಕೊಳ್ಳಿ ಎಂದು ಎಲ್ಲಾ ಕಡೆ ಹೇಳುತ್ತಾ ಬಂದಿರುವ ದೆಹಲಿಯ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಲ್ಲಿದ್ದ ಪ್ರಯಾಣಿಕರಿಗಾಗಿ ಕನಿಷ್ಟ ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ಕೂಡಾ ಒದಗಿಸಿರಲಿಲ್ಲ. ಕೈಯನ್ನು ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಸ್ವಚ್ಚಗೊಳಿಸಿ ಎಂದು ಜಾಹಿರಾತು ನೀಡುವ ಸರ್ಕಾರದಿಂದ ಒಂದು ಬಾಟಲ್ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗಲಿಲ್ಲ. ಎಲ್ಲಾ ಪ್ರಯಾಣಿಕರನ್ನು ದನದ ದೊಡ್ಡಿಯಲ್ಲಿ ಕೂಡಿ ಹಾಕಿದಂತೆ ಇಡಲಾಯಿತು. ಇದು ಭಾರತದ ʼಕ್ವಾರೆಂಟೈನ್ ಸೆಂಟರ್ʼಗಳ ದುರವಸ್ಥೆ, ಎನ್ನುತ್ತಾರೆ ಸಂಘರ್ಷ್ ನಾವಡ.
ದುಬಾರಿ ವಸತಿ ವ್ಯವಸ್ಥೆ:
ಯಾರಿಗೆಲ್ಲಾ ದ್ವಾರಕಾ ಕೇಂದ್ರದಲ್ಲಿ ಇರಲು ಇಷ್ಟವಿಲ್ಲವೋ, ಅವರು ದುಬಾರಿ ಹೊಟೇಲ್‌ಗಳಾದ ಲೆಮನ್ ಟ್ರೀ, ಐಬಿಸ್‌ನಲ್ಲಿ ವಸತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಆ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಪ್ರತಿ ದಿನಕ್ಕೆ ತಗಲುವ ಖರ್ಚು ಬರೋಬ್ಬರಿ 4000 ರೂ. ವಿದೇಶದಲ್ಲಿ ಕೆಲಸವಿರುವ ಭಾರತೀಯರೇನೋ ಈ ಸೌಲಭ್ಯವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದು ಆದರೆ, ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆಂದು ಹೋದವರ ಪರಿಸ್ಥಿತಿಯೇನು? ಅಲ್ಲಿ ಕೆಎಫ್‌ಸಿ, ಡಾಮಿನೋಸ್‌ನಂತಹ ರೆಸ್ಟಾರೆಂಟ್‌ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಜತೆಗೆ ಓದಿಕೊಂಡು ಇರುವಂತಹ ವಿದ್ಯಾರ್ಥಿಗಳು 14 ದಿನದ ವಸತಿಗಾಗಿ ಸುಮಾರು 60,000 ರೂ. ಖರ್ಚು ಮಾಡಬಲ್ಲರೇ?
ನಾವು ವೈರಸ್‌ಗಳಲ್ಲ, ಮನುಷ್ಯರು:
ವಿದೇಶದಿಂದ ಬರುವವರನ್ನು ವೈರಸ್‌ಗಳಂತೆ ನೋಡುತ್ತಿದ್ದರೆ. ನಾವು ವೈರಸ್‌ಗಳಲ್ಲ ಭಾರತೀಯರು. ಅದರಲ್ಲೂ ಪ್ರಜ್ಞಾವಂತ ಭಾರತೀಯರು. ಈಗಲೂ ನಮ್ಮ ಕುಟುಂಬಸ್ಥರು ಇದೇ ದೇಶಕ್ಕೆ ತೆರಿಗೆ ಕಟ್ಟುತ್ತಾ ಬಂದಿದ್ದಾರೆ. ಆದರೂ ನಾವು ಭಾರತಕ್ಕೆ ಬಂದಾಗ ವೈರಸ್‌ಗಳಂತೆ ನೋಡಿಕೊಂಡರು. ಅವರ ಎಲ್ಲಾ ಮಾತುಗಳನ್ನು ನಾವು ಕೇಳಿದ್ದೇವೆ ಅದರಂತೆಯೇ ನಡೆದುಕೊಂಡಿದ್ದೇವೆ ಕೂಡಾ. ಆದರೆ, ಅವರೇ ನಮಗೆ ಸಹಕರಿಸಲಿಲ್ಲ. ಯಾವುದೇ ವ್ಯವಸ್ಥೆಗಳನ್ನು ಮಾಡಲಿಲ್ಲ. ಮಾದ್ಯಮಗಳಲ್ಲಿ ಏನೇನೋ ಮಾಹಿತಿ ನೀಡಲಾಗುತ್ತಿದೆ. ಆದರೆ, ಇಲ್ಲಿನ ಸತ್ಯ ಬೇರೆಯೇ ಇದೆ, ಎಂದು ಹೇಳುತ್ತಾರೆ ಸಂಘರ್ಷ್.
ಒಟ್ಟಿನಲ್ಲಿ, ಭಾರತದಲ್ಲಿ ಕರೋನಾ ತಡೆಯುವ ಪ್ರಯತ್ನ ಕೇವಲ ಕಾಲರ್ ಟ್ಯೂನ್‌ಗಷ್ಟೇ ಸೀಮಿತವಾಯಿತೇ ಎಂಬ ಪ್ರಶ್ನೆ ಸಂಘರ್ಷ್ ಅವರ ಮಾತುಗಳನ್ನು ಕೇಳಿದ ನಂತರ ಎದ್ದಿದೆ. ಅನಿವಾಸಿ ಭಾರತೀಯರು ತಮ್ಮ ತಾಯ್ನೆಲಕ್ಕೆ ವಾಪಾಸ್ಸಾಗುವಾಗ ಅವರನ್ನು ವೈರಸ್‌ಗಳಂತೆ ನೋಡಿ ವಾಸಿಸಲು ಯೋಗ್ಯವಿಲ್ಲದ ಕ್ವಾರೆಂಟೈನ್ ಸೆಂಟರ್‌ಗಳಲ್ಲಿ ಕೂಡಿ ಹಾಕಿ ಯಾವ ರೀತಿ ಕರೋನಾ ವಿರುದ್ದ ಸರ್ಕಾರ ಹೋರಾಡುತ್ತದೆ? ನಿಜಕ್ಕೂ ಸರ್ಕಾರ ಹೇಳುವುದೊಂದು ಮಾಡುವುದೊಂದೇ? ಎಂಬ ಆತಂಕ ಎದುರಾಗುತ್ತಿದೆ.