ಇದೊಂದು ಇಡೀ ನಾಗರಿಕರ ಸಮಾಜವೇ ತಲೆ ತಗ್ಗಿಸುವಂತಹ ವಿಚಾರ. 2017 ರಲ್ಲಿ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿ ಅದೇ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾಳೆ.
ತನಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವ ಮೊದಲೇ ದುರಂತ ಅಂತ್ಯ ಕಂಡಿದ್ದಾಳೆ ಈ ನತದೃಷ್ಟ ಯುವತಿ.
ಉತ್ತರ ಪ್ರದೇಶದ ಉನ್ನಾವೋದ ಈ ಯುವತಿಯ ಮೇಲೆ 2017 ರಲ್ಲಿ ದುಷ್ಕರ್ಮಿಗಳ ಗುಂಪು ಅತ್ಯಾಚಾರ ಮಾಡಿತ್ತು. ಈ ಪ್ರಕರಣದಿಂದ ನಲುಗಿಹೋಗಿದ್ದ ಯುವತಿ ನ್ಯಾಯಕ್ಕಾಗಿ ಪೊಲೀಸರು ಮತ್ತು ನ್ಯಾಯಾಲಯದ ಮೊರೆ ಹೋಗಿದ್ದಳು.
ಈಕೆಯ ಮೊರೆ ಕೇಳಿದ್ದ ನ್ಯಾಯಾಲಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ತ್ವರಿತವಾಗಿ ತನಿಖೆಯನ್ನು ಪೂರ್ಣಗೊಳಿಸುವಂತೆ ಆದೇಶ ನೀಡಿತ್ತು. ಅದರನ್ವಯ ಸಿಬಿಐ ಪೊಲೀಸರು ಇಬ್ಬರು ಕಾಮುಕರನ್ನು ಬಂಧಿಸಿ ಜೈಲಿಗೂ ಕಳಿಸಿದ್ದರು. ಆದರೆ, ದುಷ್ಕರ್ಮಿಗಳು ಜಾಮೀನಿನ ಮೇಲೆ ಹೊರಬಂದು ಮತ್ತೊಮ್ಮೆ ಅಟ್ಟಹಾಸ ಮೆರೆದು ಆ ಯುವತಿಯನ್ನೇ ಬಲಿ ತೆಗೆದುಕೊಂಡಿದ್ದಾರೆ.
ಗುರುವಾರ ಯುವತಿ ರಾಯ್ ಬರೇಲಿ ಕೋರ್ಟಿನಲ್ಲಿ ವಿಚಾರಣೆ ಇದ್ದ ಕಾರಣದಿಂದ ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ರೈಲು ನಿಲ್ದಾಣಕ್ಕೆ ಹೋಗುವ ವೇಳೆ ಕಾಮುಕರಿಬ್ಬರು ಮತ್ತು ಅವರ ಮೂವರು ಸಂಗಡಿಗರು ತೀವ್ರತೆರನಾದ ಹಲ್ಲೆ ನಡೆಸಿದ್ದಾರೆ. ಆಕೆಯ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾರೆ. ಅಷ್ಟೂ ಸಾಲದೆಂಬಂತೆ ಹೀಗೆ ಬಿಟ್ಟರೆ ಆಕೆ ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದೆನಿಸಿದ ದುಷ್ಕರ್ಮಿಗಳು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪೈಶಾಚಿಕ ಕೃತ್ಯ ಎಸಗಿದ್ದರು.
ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಯುವತಿ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಓಡಿ ಹೋಗಿದ್ದಾಳೆ. ಆದರೂ ಆಕೆಯನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಹಲ್ಲೆಯನ್ನು ಮುಂದುವರಿಸಿದ್ದರು. ಹೀಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಯುವತಿಯ ದೇಹದ ಶೇ.90 ಕ್ಕೂ ಹೆಚ್ಚು ಸುಟ್ಟು ಕರಕಲಾಗಿತ್ತು.
ಆಕೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಮಾರು 40 ಗಂಟೆಗಳ ಕಾಲ ಸಾವು ನೋವಿನ ಮಧ್ಯೆ ಹೋರಾಟ ನಡೆಸಿದ ಯುವತಿ ಶುಕ್ರವಾರ ತಡರಾತ್ರಿ ಕೊನೆಉಸಿರೆಳೆದಿದ್ದಾಳೆ.
ಈ ಉನ್ನಾವೋ ಪ್ರಕರಣದ ಹಿಂದೆ ದೆಹಲಿಯ ನಿರ್ಭಯಾ ಪ್ರಕರಣಕ್ಕಿಂತಲೂ ಘನಘೋರ ಪೈಶಾಚಿಕ ಕೃತ್ಯಗಳು ನಡೆದಿವೆ. ನಿರ್ಭಯಾ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರೆ, ಈ ಪ್ರಕರಣ ಹಲವು ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಈ ಯುವತಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳ ಕೈವಾಡವಿತ್ತು. ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗಾರ್ ಈ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ. ಈತನ ಎಡೆಮುರಿ ಕಟ್ಟಿದ್ದ ಜೈಲಿಗೆ ಅಟ್ಟಿದ್ದರು. ಆದರೆ ಆತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
ಇಷ್ಟು ಸಾಲದೆಂಬಂತೆ ತನ್ನ ಮಗಳ ಮೇಲೆ ಅತ್ಯಾಚಾರ ಆಗಿದ್ದ ಹಿನ್ನೆಲೆಯಲ್ಲಿ ಆಕೆಯ ತಂದೆ ದೂರು ನೀಡಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಆಕೆಯ ತಂದೆಯನ್ನೇ ಕೊಲೆಗೆ ಯತ್ನಿಸಿದ್ದರು. ಅತ್ಯಾಚಾರ ಮತ್ತು ಸಂತ್ರಸ್ತೆಯ ಕೊಲೆಗೆ ಸಂಬಂಧಿಸಿದಂತೆ ಕುಲದೀಪ್ ಸಿಂಗಾರ್ ವಿರುದ್ಧ ದೂರು ದಾಖಲಾಗಿದ್ದವು.
ಇದಾದ ಕೆಲವು ದಿನಗಳ ನಂತರ ಸಂತ್ರಸ್ತೆ ತನ್ನ ಚಿಕ್ಕಮ್ಮ ಮತ್ತು ವಕೀಲರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ನಿಗೂಢವಾಗಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದ ಹಿಂದೆಯೂ ದುಷ್ಕರ್ಮಿಗಳ ಕೈವಾಡ ಇದೆ ಎಂಬ ಗುಮಾನಿಗಳು ದಟ್ಟವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ಈ ಅಪಘಾತದಿಂದ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಆಕೆಯ ಚಿಕ್ಕಮ್ಮ ಅಸುನೀಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಅದೃಷ್ಠವಶಾತ್ ಸಾವಿನಿಂದ ಪಾರಾಗಿದ್ದಳು.
ಈ ಎಲ್ಲಾ ಘಟನಾವಳಿಗಳು ನಡುವೆಯೇ ಕೇಸನ್ನು ವಾಪಸ್ ಪಡೆಯುವಂತೆ ನಾನಾ ವಿಧದಲ್ಲಿ ಬೆದರಿಕೆಗಳು, ಒತ್ತಡಗಳು ಬಂದಾಗ್ಯೂ ಗಟ್ಟಿಗಿತ್ತಿ ಈ ಯುವತಿ ಸುತಾರಾಂ ಬಗ್ಗಿರಲಿಲ್ಲ. ಇದರ ಪರಿಣಾಮ ದುಷ್ಕರ್ಮಿಗಳು ಹಲವು ಬಾರಿ ಆಕೆಯನ್ನು ಹತ್ಯೆ ಮಾಡಲು ಯತ್ನಿಸಿ ವಿಫಲರಾಗಿದ್ದರು. ಕಡೆಗೆ ಗುರುವಾರ ದುಷ್ಕರ್ಮಿಗಳು ಆಕೆ ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿದ್ದಾರೆ.
ತನ್ನ ದೇಹ ಧಗಧಗ ಉರಿಯುತ್ತಿದ್ದರೂ ಪ್ರಾಣ ರಕ್ಷಣೆಗಾಗಿ ಓಡಿ ಹೋಗುತ್ತಲೇ ಕೂಗಿಕೊಂಡಿದ್ದಾಳೆ. ಆದರೆ, ಆಕೆಯ ನೆರವಿಗೆ ನಾಗರಿಕ ಸಮಾಜದ ಯಾವ ವ್ಯಕ್ತಿಯೂ ನೆರವಿಗೆ ಬಾರದೇ ಮೂಕಪ್ರೇಕ್ಷಕರಂತೆ ನಿಂತಿದ್ದರು. ಆದರೆ, ಜೀವ ಉಳಿಸಿಕೊಳ್ಳಬೇಕು ಮತ್ತು ತನಗೆ ಅನ್ಯಾಯ ಮಾಡಿದವರಿಗೆ ಶಿಕ್ಷೆ ಕೊಡಿಸದೇ ವಿರಮಿಸಬಾರದು ಎಂದು ಛಲ ತೊಟ್ಟಿದ್ದ ಯುವತಿ 100 ಗೆ ಕರೆ ಮಾಡಿ ಆ್ಯಂಬ್ಯುಲೆನ್ಸ್ ಗೆ ಮನವಿ ಮಾಡಿ ಕುಸಿದು ಬಿದ್ದಿದ್ದಳು. ಅಷ್ಟರ ವೇಳೆಗೆ ದೇಹದ ಶೇ.90 ರಷ್ಟು ಭಾಗ ಸುಟ್ಟು ಹೋಗಿತ್ತು.
ಕೂಡಲೇ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಶುಕ್ರವಾರ ಮಧ್ಯಾಹ್ನದ ನಂತರ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟು ಬದುಕುಳಿಯುವುದು ಕಷ್ಟವಾಗಿತ್ತು. ತಡರಾತ್ರಿ ಆಕೆ ಕೊನೆ ಉಸಿರೆಳೆದಳು.
ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆಕೆ ನೀಡಿದ ಹೇಳಿಕೆ ದುಷ್ಕರ್ಮಿಗಳ ಪೈಶಾಚಿಕ ಕೃತ್ಯವನ್ನು ಎಳೆಎಳೆಯಾಗಿ ಬಿಡಿಸಿಡುತ್ತದೆ ಮತ್ತು ಮನ ಕಲಕುವಂತಿದೆ. ಆಕೆ ಪೊಲೀಸರಿಗೆ ನೀಡಿದ್ದ ಹೇಳಿಕೆ:- ಗುರುವಾರ ರಾಯ್ ಬರೇಲಿ ಕೋರ್ಟಿನಲ್ಲಿ ವಿಚಾರಣೆ ಇದ್ದುದರಿಂದ ನಾನು ಅಲ್ಲಿಗೆ ತೆರಳಲು ರೈಲಿಗೆ ಹೋಗಲೆಂದು ಬೆಳಗಿನ ಜಾವ 4 ಗಂಟೆ ವೇಳೆಗೆ ಮನೆಯಿಂದ ಹೊರಟಿದ್ದೆ. ಆದರೆ, ರಸ್ತೆ ಮಧ್ಯದಲ್ಲಿ ನನಗಾಗಿಯೇ ಕಾದು ನಿಂತಿದ್ದ ಐದು ಜನರು ನನ್ನನ್ನು ಅಡ್ಡಗಟ್ಟಿ ಬೈಯ್ಯಲಾರಂಭಿಸಿದರು. ನನ್ನ ಕಾಲಿಗೆ ಬಡಿಗೆಯಿದ ಬಲವಾಗಿ ಹೊಡೆದರೆ, ಮತ್ತೊಬ್ಬ ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದ. ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆನಾದರೂ ಅಷ್ಟರ ವೇಳೆಗೆ ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಬೆಂಕಿ ಉರಿ ತಾಳಲಾಗದೇ ನಾನು ಆ ಸ್ಥಳದಿಂದ ಚೀರಾಡುತ್ತಾ ಸುಮಾರು ದೂರ ಓಡಿದೆ.
ಈ ಘನಘೋರ ಕೃತ್ಯ ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಸಂತ್ರಸ್ತೆ ಇಹಲೋಕ ತ್ಯಜಿಸಿದ್ದಾಳೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳಾಗಿದ್ದ ಆಕೆಯ ತಂದೆ, ಚಿಕ್ಕಮ್ಮ ಸಾವನ್ನಪ್ಪಿದ್ದಾರೆ. ಈಗ ಆಕೆಯೂ ದುರ್ಮರಣ ಹೊಂದಿದ್ದಾಳೆ. ಹೀಗೆ ಸಾಕ್ಷಿಗಳಾದವರು ಒಬ್ಬೊಬ್ಬರಾಗಿ ಸಾವನ್ನಪ್ಪಿದ್ದಾರೆ. ಇನ್ನು ನ್ಯಾಯಾಲಯ ಈ ಪೈಶಾಚಿಕ ಕೃತ್ಯದ ಹಿಂದಿರುವ ದುಷ್ಕರ್ಮಿಗಳಿಗೆ ಯಾವ ರೀತಿ ಶಿಕ್ಷೆಯನ್ನು ವಿಧಿಸುತ್ತದೆ ಎಂಬುದನ್ನು ಸಮಾಜ ಎದುರು ನೋಡುತ್ತಿದೆ ಮತ್ತು ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂಬುದನ್ನು ಬಯಸುತ್ತಿದೆ.