ಕರ್ನಾಟಕ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಕಣದಲ್ಲಿ ಪ್ರಬಲ ಸ್ಪರ್ಧಿಗಳಾಗಿರುವ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಗೆ ಬಂಡಾಯ, ಭಿನ್ನಮತದ ಕಾಟ ಜೋರಾಗಿದೆ. ಎರಡೂ ಪಕ್ಷಗಳಿಗೆ ಮುಂದೈತೆ ಮಾರಿಹಬ್ಬ ಎನ್ನುವಂತಿದ್ದರೆ, ಗೆಲ್ಲುವುದಕ್ಕಿಂತ ಸೋಲಿಸುವುದೇ ಮುಖ್ಯ ಎಂದು ಜೆಡಿಎಸ್ ಕಣದಲ್ಲಿ ಕಾರ್ಯನಿರತವಾಗಿದೆ.
ಬಂಡಾಯ ಶಮನ ಮಾಡಲು ಇನ್ನೂ ಎರಡು ದಿನ ಕಾಲಾವಕಾಶವಿದೆ. ನ. 21 ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು, ಅಷ್ಟರೊಳಗೆ ಬಂಡಾಯ ಅಭ್ಯರ್ಥಿಗಳ ಮನವೊಲಿಸಬೇಕಾಗಿದೆ. ಆದರೆ, ಪ್ರಸ್ತುತ ಪರಿಸ್ಥಿತಿ ನೋಡಿದರೆ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಅದರಲ್ಲೂ ಬಿಜೆಪಿಯಲ್ಲಿ ಬಂಡಾಯದ ಪರಿಸ್ಥಿತಿ ಆತಂಕಕಾರಿಯಾಗಿದೆ. ಹೊಸಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ. ಬಚ್ಚೇಗೌಡರ ವಿರುದ್ಧ ಕ್ರಮಕ್ಕೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಲಾಗಿದೆ. ಗೋಕಾಕ್ ನಲ್ಲಿ ಅಶೋಕ್ ಪೂಜಾರಿ ಈಗಾಗಲೇ ಜೆಡಿಎಸ್ ಸೇರಿ ಆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಕಾಗವಾಡದಲ್ಲಿ ಮಾಜಿ ಶಾಸಕ ಭರಮಗೌಡ (ರಾಜು) ಕಾಗೆ ಅವರು ಕಾಂಗ್ರೆಸ್ ಸೇರಿ ಆ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ.
ರಾಜ್ಯದ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರ, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು, ಶಿವಾಜಿನಗರ, ರಾಣೆಬೆನ್ನೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಅಸಮಾಧಾನ, ಭಿನ್ನಮತದ ಪೆಟ್ಟಿಗೆ ಸಿಲುಕಿ ಬಿಜೆಪಿ ಒದ್ದಾಡುತ್ತಿದೆ. ಅಥಣಿ, ಕಾಗವಾಡ, ಹಿರೇಕೆರೂರು, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ, ಶಿವಾಜಿನಗರ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಿನ್ನಮತೀಯರು ಕಾಟ ಕೊಡುವುದು ಖಚಿತ ಎನ್ನುವಂತಾಗಿದೆ. ಎರಡೂ ಪಕ್ಷಗಳಲ್ಲಿರುವ ಭಿನ್ನಮತದ ಲಾಭ ಪಡೆಯುವ ಕೆಲಸಕ್ಕೆ ಜೆಡಿಎಸ್ ಕೈಹಾಕಿದ್ದು, ಇದರಿಂದ ಲಾಭ ಎಷ್ಟಾಗುತ್ತದೆ ಎಂಬುದಕ್ಕಿಂತ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸುವಲ್ಲಿ ಎಷ್ಟು ಯಶಸ್ಸು ಗಳಿಸುತ್ತೇವೆ ಎಂಬ ಯೋಚನೆಯಲ್ಲಿ ಆ ಪಕ್ಷದ ನಾಯಕರಿದ್ದಾರೆ.
ಇಲ್ಲಿ ಬಿಜೆಪಿಗೆ ಪರಿಸ್ಥಿತಿ ಎಷ್ಟು ಕಠಿಣವಾಗಿದೆಯೋ ಅಷ್ಟೇ ಕಠಿಣ ಪರಿಸ್ಥಿತಿ ಕಾಂಗ್ರೆಸ್ಸಲ್ಲೂ ಇದೆ. ಕಾರ್ಯಕರ್ತರ ಪಕ್ಷವಾಗಿರುವ ಬಿಜೆಪಿಗೆ ಸ್ಥಳೀಯ ಮಟ್ಟದಲ್ಲಿ ಮುಖಂಡರು, ಕಾರ್ಯಕರ್ತರು ತಿರುಗಿ ಬಿದ್ದಿದ್ದರೆ, ನಾಯಕರು, ಮುಖಂಡರ ಆಧಾರದ ಮೇಲೆ ಮುಂದುವರಿಯುತ್ತಿರುವ ಕಾಂಗ್ರೆಸ್ಸಿನಲ್ಲಿ ನಾಯಕರ ಅಂತಃಕಲಹ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಬಿಜೆಪಿಗೆ ಸಂಬಂಧಿಸಿದಂತೆ ಬಂಡಾಯ, ಪಕ್ಷಾಂತರ ಹೊರತುಪಡಿಸಿ ಬಿಜೆಪಿಯಲ್ಲೇ ಒಳಪೆಟ್ಟಿನ ಭೀತಿ ಇದೆ. ಅಥಣಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಿರೇಕೆರೂರಿನಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ್, ರಾಣೆಬನ್ನೂರಿನಲ್ಲಿ ಡಾ.ಬಸವರಾಜ ಕೇಲಗಾರ, ಶಿವರಾಜ್ ಸಜ್ಜನ್, ವಿಜಯನಗರದಲ್ಲಿ ಕವಿರಾಜ್ ಅವರು ಅಧಿಕೃತ ಅಭ್ಯರ್ಥಿಗಳಿಗೆ ಬೆದರಿಕೆಯಾಗಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲೂ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಗೊಂದಲಗಳಿವೆ. ಇದಕ್ಕಿಂತ ಹೆಚ್ಚು ಆತಂಕ ಉಂಟಾಗಿರುವುದು ನಾಯಕರ ನಡುವಿನ ಭಿನ್ನಮತ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈ ಮೇಲಾಗಿದ್ದರಿಂದ ಪಕ್ಷದ ಹಿರಿಯ ನಾಯಕರು ಮುನಿಸಿಕೊಂಡಿದ್ದಾರೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಹಿರಿಯ ನಾಯಕರು ಬಹುತೇಕ ದೂರವಿರುವುದೇ ಇದಕ್ಕೆ ಉದಾಹರಣೆ.
ರಾಜಧಾನಿಯಲ್ಲಿ ಕಾಂಗ್ರೆಸ್ಸ್ ಸಮಸ್ಯೆಯಿಂದ ಬಿಜೆಪಿ ನಿರಾಳ
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ನಗರದ ನಾಲ್ಕು ಕ್ಷೇತ್ರಗಳ ಪೈಕಿ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪುರಗಳಲ್ಲಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನವಿದ್ದರೆ, ಯಶವಂತಪುರದಲ್ಲಿ ಸೂಕ್ತ ಅಭ್ಯರ್ಥಿ ಕೊರತೆ ಕಾಣಿಸಿಕೊಂಡಿದೆ. ರಾಜ್ ಕುಮಾರ್ ಅವರ ಹೆಸರನ್ನು ಪಕ್ಷ ಅಂತಿಮಗೊಳಿಸಿದ್ದರೂ ಅಂತಿಮ ಕ್ಷಣದಲ್ಲಿ ಅವರು ಹಿಂದೆ ಸರಿದಿದ್ದರಿಂದ ಟಿಕೆಟ್ ಪಿ.ನಾಗರಾಜ್ ಪಾಲಾಗಿದೆ. ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿದ್ದು ಹಿರಿಯ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ಆದರೆ, ಬಿಜೆಪಿ ಪರಿಸ್ಥಿತಿ ಹಾಗಿಲ್ಲ. ಕೆ.ಆರ್.ಪುರ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಬಿಎಂಟಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದರಿಂದ ಸಮಾಧಾನಗೊಂಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲೂ ಆರ್.ಹರೀಶ್ ಸುಮ್ಮನಾಗಿದ್ದಾರೆ. ಶಿವಾಜಿನಗರದಲ್ಲಿ ಅನರ್ಹ ಶಾಸಕ ರೋಷನ್ ಬೇಗ್ ಬೆಂಬಲ ಸೂಚಿಸಿದ್ದು ಪಕ್ಷಕ್ಕೆ ಲಾಭ. ಯಶವಂತಪುರದಲ್ಲಿ ಆಕಾಂಕ್ಷಿ ಜಗ್ಗೇಶ್ ಕೂಡ ನಾಯಕರ ಮನವಿಗೆ ಮಣಿದಿದ್ದಾರೆ. ಹೀಗಾಗಿ ಬಿಜೆಪಿ ಕೊಂಚ ನಿರಾಳವಾಗಿದೆ.
ಹೆಚ್ಚು ಇಕ್ಕಟ್ಟಿಗೆ ಸಿಲುಕಿದ್ದು ಡಿಸಿಎಂ ಲಕ್ಷ್ಮಣ ಸವದಿ
15 ಕ್ಷೇತ್ರಗಳಿಗೆ ನಡೆಯಲಿರುವ ಈ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಇಕ್ಕಟ್ಟಿಗೆ ಸಿಲುಕಿರುವುದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ. ಅಥಣಿ ಕ್ಷೇತ್ರದಲ್ಲಿ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ ಅವರಿಗೆ ಟಿಕೆಟ್ ನೀಡಿದ್ದರಿಂದ ಲಕ್ಷ್ಮಣ ಸವದಿ ಅವರ ಪರಿಸ್ಥಿತಿ ಅತಂತ್ರವಾಗಿದೆ. 2018ರಲ್ಲಿ ಲಕ್ಷ್ಮಣ ಸವದಿ ಅವರು ಮಹೇಶ್ ಕುಮುಟಳ್ಳಿ ವಿರುದ್ಧ ಸೋತಿದ್ದರು. ಆದರೂ ಬಿಜೆಪಿ ವರಿಷ್ಠರ ಸೂಚನೆ ಮೇಲೆ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ಇದೀಗ ಕ್ಷೇತ್ರ ಅವರ ಕೈತಪ್ಪಿರುವುದರಿಂದ ಮುಂದೆ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಿದರೆ ಮಾತ್ರ ಹುದ್ದೆಯಲ್ಲಿ ಮುಂದುವರಿಯಬಹುದು. ಅದಕ್ಕೆ ಅವಕಾಶ ಆಗದೇ ಇದ್ದರೆ ಅದೃಷ್ಟದಿಂದ ದೊರೆತ ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.
ಕೆ.ಆರ್.ಪೇಟೆಯಲ್ಲಿ ಅಪಾಯಕಾರಿ ಬೆಳವಣಿಗೆ
ಈ ಮಧ್ಯೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ರಾಜಕೀಯ ಅಪಾಯಕಾರಿ ಬೆಳವಣಿಗೆಗೆ ನಾಂದಿ ಹಾಡಿದೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ವೇಳೆ ಘರ್ಷಣೆ, ಜಗಳ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅನರ್ಹ ಶಾಸಕ ನಾರಾಯಣಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ತಿರುಗಿ ಬಿದ್ದಿದ್ದು, ನಾಮಪತ್ರ ಸಲ್ಲಿಕೆ ವೇಳೆಯೇ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ನಾರಾಯಣಸ್ವಾಮಿ ಅವರು ಬಿಜೆಪಿಯಿಂದ ನಾಮಪತ್ರ ಸಲ್ಲಿಸಲು ಬಂದ ವೇಳೆ ಅವರ ಕಾರಿನ ಮೇಲೆ ಚಪ್ಪಲಿ ಮತ್ತು ಜೆಡಿಎಸ್ ಧ್ವಜವನ್ನು ಕಾರ್ಯಕರ್ತರು ತೂರಿದ್ದಾರೆ. ಅಷ್ಟೇ ಅಲ್ಲ, ಸಚಿವ ಮಾಧುಸ್ವಾಮಿ ಜತೆಗೂ ಅನುಚಿತವಾಗಿ ನಡೆದುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ಆ ಪಕ್ಷದ ಧ್ವಜವನ್ನು ಕಿತ್ತುಕೊಂಡು ನೆಲಕ್ಕೆ ಹಾಕಿ ಹೊಸಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಂಘರ್ಷ ತೀವ್ರಗೊಳ್ಳುವ ಮುನ್ಸೂಚನೆ ನೀಡಿದ್ದು, ಶಾಂತಿಯುತ ಚುನಾವಣೆಗೆ ಅಡ್ಡಿ ಉಂಟುಮಾಡುವ ಆತಂಕ ಕಾಣಿಸಿಕೊಂಡಿದೆ.