ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದ್ದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ಪುತ್ರ ಹಗರಣ ಆರೋಪ, ಕೋವಿಡ್ ಹಗರಣಗಳು ಮುಳುವಾಗಲಿದೆಯೇ ಎಂಬ ಆತಂಕ ಶುರುವಾಗಿದೆ. ಪಕ್ಷ ಆಡಳಿತದಲ್ಲಿದ್ದರೂ ಬಿಜೆಪಿಗೆ ಕ್ಷೇತ್ರ ಗೆಲ್ಲಲು ಸಾಕಷ್ಟು ಅಡೆತಡೆಗಳಿವೆ. ಪಕ್ಷದೊಳಗೆ ಸ್ಪಷ್ಟವಾಗಿ ಎರಡು ಬಣಗಳಾಗಿದ್ದು ಅಭ್ಯರ್ಥಿ ಹೆಸರು ಅಂತಿಮಗೊಳಿಸಲೇ ಸಾಕಷ್ಟು ಸವಾಲು ಎದುರಾಗಿವೆ.
ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಪಕ್ಷದ ಕೋರ್ ಕಮಿಟಿ ಸಭೆ ನಡೆದಿದ್ದು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವಲ್ಲಿ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೂ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೂ ಒಮ್ಮತದ ನಿರ್ಧಾರ ಬರಲು ಸಾಧ್ಯವಾಗಿಲ್ಲ. ಆರ್ ಆರ್ ನಗರಕ್ಕೆ ಸಂಬಂಧಿಸಿದಂತೆ ನಳಿನ್ ಕುಮಾರ್ ಪಕ್ಷದ ಮೂಲ ಕಾರ್ಯಕರ್ತ ತುಳಸಿ ಮುನಿರಾಜು ಅವರನ್ನು ಶಿಫಾರಸ್ಸು ಮಾಡಿದರೆ, ಯಡಿಯೂರಪ್ಪ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ನೀಡಲು ಉತ್ಸುಕರಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ಕಾಂಗ್ರೆಸ್ ಶಾಸಕ ಮುನಿರತ್ನ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪಾತ್ರ ವಹಿಸಿದವರು, ಆ ಮೂಲಕ ಬಿಜೆಪಿ ಸರ್ಕಾರ ನೆಲೆಕಂಡುಕೊಳ್ಳಲು ಕಾರಣಕರ್ತರಲ್ಲೊಬ್ಬರು. ಹಾಗಾಗಿ ಯಡಿಯೂರಪ್ಪ ಮುನಿರತ್ನ ಕಡೆಗೆ ವಾಲಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ವಿರುದ್ಧ ಸೋಲುಂಡಿದ್ದ ತುಳಸಿ ಮುನಿರಾಜು ತನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹಳೆಯ ಕಾರ್ಯಕರ್ತ ಎಂಬ ನೆಲೆಯಲ್ಲಿ ಸಂಘಪರಿವಾರಕ್ಕೆ ನಿಷ್ಟರಾಗಿರುವ ನಾಯಕರು ತುಳಸಿ ಮುನಿರಾಜು ಅವರಿಗೆ ಆದ್ಯತೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿಯೇ ಸಭೆಯಲ್ಲಿ ನಳಿನ್ ಹಾಗೂ ಬಿಎಸ್‌ವೈಗೆ ಒಮ್ಮತದ ನಿರ್ಧಾರ ಬರಲು ಸಾಧ್ಯವಾಗದಿರುವುದು. ಇದೀಗ ಇಬ್ಬರ ಹೆಸರನ್ನು ಆಯ್ಕೆ ಮಾಡಿ ಪಕ್ಷದ ಹೈಕಮಾಂಡಿಗೆ ಕಳಿಸಲಾಗಿದೆ. ಮುನಿರತ್ನ ಅವರೇ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
Also Read: ವ್ಯಕ್ತಿಗಳ ಪಾಲಿಗಲ್ಲದಿದ್ದರೂ ಈ ಉಪಚುನಾವಣೆ ಪಕ್ಷಗಳ ಪಾಲಿಗೆ ಪ್ರತಿಷ್ಠೆಯೇ!
ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಸಾಕಷ್ಟಿದೆ, ಅಲ್ಲದೆ ಮೃತಪಟ್ಟ ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ್ ಅವರ ಕುಟುಂಬಸ್ಥರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿಸಲು ಹೊರಟಿದ್ದು ಅನುಕಂಪದ ಮತವನ್ನು ಗಿಟ್ಟಿಸುವ ಹಣಾಹಣಿಯಲ್ಲಿದೆ. ಅದಾಗ್ಯೂ ಈ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿ ಪಾಳಯದಲ್ಲಿ ತೀವ್ರ ಪೈಪೋಟಿಯಿದ್ದು ಕೋರ್ ಕಮಿಟಿ ಸಭೆಯಲ್ಲಿ ಮೂವರ ಹೆಸರನ್ನು ಆಯ್ಕೆಗೊಳಿಸಿ ಹೈಕಮಾಂಡಿಗೆ ರವಾನಿಸಲಾಗಿದೆ.

ಆರ್ ಆರ್ ನಗರದಲ್ಲಿ ಬಿಜೆಪಿ ಸಾಕಷ್ಟು ಪ್ರಭಾವಿಯಾಗಿದೆ ಅಲ್ಲದೆ ಮುನಿರತ್ನ ಅವರೂ ಸಾಕಷ್ಟು ಪ್ರಭಾವಿ ಈ ಕ್ಷೇತ್ರದಲ್ಲಿ. ಹಾಗಾಗಿಯೇ ಕೈ ನಾಯಕರು ಮುನಿರತ್ನ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್‌ಗೆ ಕರೋನಾ ಹಗರಣ ಹಾಗೂ ಸಿಎಂ ಪುತ್ರನ ಮೇಲಿರುವ ಹಗರಣಗಳ ಆರೋಪದ ಹೊರತು ಈ ಚುನಾವಣೆಗಳಲ್ಲಿ ಹೂಡಲು ಬಲವಾದ ಅಸ್ತ್ರಗಳು ಯಾವುದೂ ಇಲ್ಲ.
ಈ ನಡುವೆ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿಯವರ ಪತ್ನಿ ಕುಸುಮಾ ಅವರು ಆರ್ ಆರ್ ನಗರದಿಂದ ಚುನಾವಣೆಗೆ ನಿಲ್ಲಲು ಉತ್ಸುಕರಾಗಿದ್ದಾರೆ. ಅವರ ತಂದೆ ಹನುಮಂತರಾಯಪ್ಪ ಈ ಕುರಿತು ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮಗಳಿಗೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಜೊತೆಗೆ ಈ ವಿಷಯದ ಬಗ್ಗೆ ಹನುಮಂತರಾಯಪ್ಪ ಚರ್ಚೆ ಮಾಡಿದ್ದರೂ ಡಿಕೆ ಸಹೋದರರಿಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ.
ಈ ಮಧ್ಯೆ, ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿದ ಕುಸುಮಾ ಅವರು, ನಿರ್ಮಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆದಿದ್ದಾರೆ.
Also Read: ಶಿರಾ: ಉಪಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ ಒಳಗೆ ಭಿನ್ನಮತದ ಹೊಗೆ..!
ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ತಯಾರಿ ಕುರಿತಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಶುಕ್ರವಾರ ಸಭೆ ನಡೆದ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ಕೊಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಆರ್.ಆರ್.ನಗರ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಜ್ಞಾನಭಾರತಿ ಕೃಷ್ಣಮೂರ್ತಿ ಹೆಸರು ಅಂತಿಮವಾಗಿದೆ. ಈ ಮೂವರ ಹೆಸರಲ್ಲಿ ಒಬ್ಬರನ್ನು ವರಿಷ್ಠರು ಆಯ್ಕೆಗೊಳಿಸಲಿದ್ದಾರೆ ಎಂದಿದ್ದಾರೆ.
ಇನ್ನು ಶಿರಾ ಕಾಂಗ್ರೆಸ್ಸಿನಿಂದ ಟಿಕೇಟ್ ನಿರೀಕ್ಷೆಯಲ್ಲಿದ್ದ ಕೆ ಎನ್ ರಾಜಣ್ಣಾ ಬಂಡಾಯ ಸೂಚನೆ ನೀಡಿದ್ದರು, ಬಳಿಕ ಪಕ್ಷದ ವರಿಷ್ಟರೊಂದಿಗೆ ನಡೆದ ಸಂಧಾನದ ಫಲವಾಗಿ ಟಿ.ಬಿ ಜಯಚಂದ್ರ ಅವರನ್ನು ಕಣಕ್ಕಿಳಿಸಲು ತಮ್ಮ ಒಪ್ಪಿಗೆ ನೀಡಿದ್ದಾರೆ. ಕುತೂಹಲಕಾರಿಯಾಗಿ, ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕೆ ಎನ್ ರಾಜಣ್ಣಾ ಜಿ ಪರಮೇಶ್ವರ್ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಆ ಮೂಲಕ ಸುದ್ದಿಗೋಷ್ಟಿ ನಡೆಸಿ ಒಗ್ಗಟ್ಟು ಪ್ರದರ್ಶನ ನಡೆಸಿದ್ದಾರೆ.
ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕಾಂಗ್ರೆಸ್ ನ ಈ ಎರಡೂ ನಾಯಕರು ಒಂದೇ ವೇದಿಕೆ ಹಂಚಿಕೊಂಡಿರುವುದು ಶಿರಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.













