ಉಪಚುನಾವಣೆಗೇ ತಡೆಯಾಜ್ಞೆ ನೀಡಿತು ಅನರ್ಹತೆಯ ಜಟಿಲತೆ

ಶಾಸಕರ ಅನರ್ಹತೆ ಪ್ರಕರಣ ಇದೀಗ ವಿಧಾನಸಭೆ ಉಪ ಚುನಾವಣೆಯನ್ನೇ ಮುಂದೂಡಿದೆ. ಅನರ್ಹತೆ ಕುರಿತಂತೆ ಇತರೆ ಪ್ರಕರಣಗಳಿಗೂ ಈ ಪ್ರಕರಣಕ್ಕೂ ಸಾಕಷ್ಟು ಭಿನ್ನತೆ ಇರುವುದರಿಂದ ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ಹೇಳಿರುವ ನ್ಯಾ. ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಅಕ್ಟೋಬರ್ 21ಕ್ಕೆ ನಿಗದಿಯಾಗಿದ್ದ ಉಪ ಚುನಾವಣೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ಅಲ್ಲಿಗೆ ಉಪ ಚುನಾವಣೆ ವಿಚಾರದಲ್ಲಿ ಅನರ್ಹ ಶಾಸಕರು ಮಾತ್ರವಲ್ಲ, ಆಡಳಿತಾರೂಢ ಬಿಜೆಪಿ ಕೂಡ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಈ ಪ್ರಕರಣದಲ್ಲಿ ನ್ಯಾಯಾಂಗ ಕೂಡ ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದೆ. ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದ ಸಂವಿಧಾನದ 10ನೇ ಷಡ್ಯೂಲ್ ಮತ್ತು ಸ್ಪೀಕರ್ ಅವರ ಪರಮಾಧಿಕಾರದ ವಿಚಾರದಲ್ಲಿ ನೀಡಿದ ತೀರ್ಪು ಮುಂದೆ ಸ್ಪೀಕರ್ ಹುದ್ದೆ ಮತ್ತು ಸಂವಿಧಾನಕ್ಕೆ ಅಪಚಾರವಾಗುವಂತಾಗಬಾರದು. ಹೇಗೂ ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶವಿದೆ. ಅಂದರೆ, ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಿದರೆ ಸಾಕು. ಹೀಗಾಗಿ ಚುನಾವಣೆಗೆ ತಡೆಯಾಜ್ಞೆ ನೀಡಿದರೆ ಸಮಸ್ಯೆ ಏನೂ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಚುನಾವಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ.

ಈ ಪ್ರಕರಣದಲ್ಲಿ ಕೇವಲ ಶಾಸಕರ ಅನರ್ಹತೆ ವಿಚಾರ ಮಾತ್ರವಾಗಿದ್ದರೆ ತ್ರಿಸದಸ್ಯ ಪೀಠ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುತ್ತಿತ್ತು. ಸಾಂವಿಧಾನಿಕ ಪೀಠದ ಮುಂದೆ ಈಗಾಗಲೇ ಎರಡು ಅರ್ಜಿಗಳಿವೆ. ಅವುಗಳ ಜತೆ ಈ ಅರ್ಜಿಯನ್ನೂ ಇತ್ಯರ್ಥಗೊಳಿಸಬಹುದಿತ್ತು. ಆದರೆ, ಇಲ್ಲಿ 17 ಶಾಸಕರ ಅನರ್ಹತೆಗಿಂತ ಶಾಸಕರ ರಾಜಿನಾಮೆ ಮತ್ತು ಇಂತಿಷ್ಟು ಅವಧಿಗೆ (15ನೇ ವಿಧಾನಸಭೆ ಅವಧಿಗೆ ) ಅನರ್ಹತೆ ಮಾಡಿರುವ ಸ್ಪೀಕರ್ ಆದೇಶ ಕಾನೂನಾತ್ಮಕವಾಗಿ ಹೆಚ್ಚು ಜಟಿಲವಾಗಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಕೋರ್ಟ್ ಹೇಳಲು ಇದುವೇ ಮುಖ್ಯ ಕಾರಣ.

ರಾಜಿನಾಮೆ ಮೊದಲೋ, ಅನರ್ಹತೆ ದೂರು ಮೊದಲೋ

ಅನರ್ಹಗೊಂಡಿರುವ 17 ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮುಟಳ್ಳಿ ವಿರುದ್ಧ ಅವರು ಶಾಸಕರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮೊದಲೇ ಅನರ್ಹತೆ ದೂರು ದಾಖಲಾಗಿತ್ತು. ಆದರೆ, ನಂತರದಲ್ಲಿ ಆ ಕುರಿತು ವಿಚಾರಣೆ ನಡೆಸದೆ ಸ್ಪೀಕರ್ ಅದನ್ನು ಬದಿಗಿಟ್ಟಿದ್ದರು. ಇನ್ನುಳಿದಂತೆ 15 ಶಾಸಕರು ರಾಜಿನಾಮೆ ಸಲ್ಲಿಸಿದ ಬಳಿಕ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿತ್ತು. ಈ ಪೈಕಿ 10 ಮಂದಿಯ ರಾಜಿನಾಮೆ ಸಮರ್ಪಕವಾಗಿಲ್ಲ ಎಂದು ಹೇಳಿದ್ದ ಸ್ಪೀಕರ್ ಸಮರ್ಪಕ ರೀತಿಯಲ್ಲಿ ರಾಜಿನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಹೀಗಾಗಿ ಅವರು ಮೊದಲು ಸಲ್ಲಿಸಿದ್ದ ರಾಜಿನಾಮೆ ಮತ್ತು ಎರಡನೇ ಬಾರಿ ರಾಜಿನಾಮೆ ಸಲ್ಲಿಸುವುದರ ಮಧ್ಯೆ ಶಾಸಕರನ್ನು ಅನರ್ಹಗೊಳಿಸುವಂತೆ ದೂರು ದಾಖಲಾಗಿತ್ತು.

Also Read: ಉಪಚುನಾವಣೆ: ಚುನಾವಣಾ ಆಯೋಗದ ನಿರ್ಧಾರ ಸರಿಯೇ?

ಈ ಕುರಿತು ಶಾಸಕರ ವಾದ ಏನೆಂದರೆ, ಸ್ಪೀಕರ್ ಇಲ್ಲದ ಕಾರಣ ನಾವು ರಾಜಿನಾಮೆ ಪತ್ರಗಳನ್ನು ಸ್ಪೀಕರ್ ಕಚೇರಿಯ ಕಾರ್ಯದರ್ಶಿಯವರಿಗೆ ಸಲ್ಲಿಸಿ ಅವರಿಂದ ಸ್ವೀಕೃತಿ ಪತ್ರ ಪಡೆದಿದ್ದೆವು. ಅಂದರೆ, ರಾಜಿನಾಮೆ ಪತ್ರ ಸ್ಪೀಕರ್ ಕಚೇರಿ ಸೇರಿದೆ. ಅದು ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿ ಎಂದು ಸ್ಪೀಕರ್ ಸೂಚನೆ ಬಂದಿತ್ತೇ ಹೊರತು ಮೊದಲು ಸಲ್ಲಿಸಿದ್ದ ರಾಜಿನಾಮೆ ಪತ್ರಗಳನ್ನು ಅವರು ತಿರಸ್ಕರಿಸಿರಲಿಲ್ಲ. ಹೀಗಾಗಿ ರಾಜಿನಾಮೆ ಸಲ್ಲಿಸಿದ ಬಳಿಕ ನಮ್ಮ ವಿರುದ್ಧ ಅನರ್ಹತೆ ದೂರು ದಾಖಲಾಗಿದೆ. ಆದರೆ, ಸ್ಪೀಕರ್ ಅವರು ಮೊದಲು ನಾವು ನೀಡಿದ್ದ ರಾಜಿನಾಮೆ ಪತ್ರದ ಬಗ್ಗೆ ತೀರ್ಮಾನ ಕೈಗೊಳ್ಳದೆ ನಂತರ ಬಂದ ಅನರ್ಹತೆ ದೂರು ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ಇದು ಸಾಮಾಜಿಕ ನ್ಯಾಯದ ಉಲ್ಲಂಘನೆ ಎಂಬುದು ಅನರ್ಹ ಶಾಸಕರ ವಾದ.

ಅದೇ ರೀತಿ ಅನರ್ಹತೆ ದೂರಿಗೆ ಸಂಬಂಧಿಸಿದಂತೆ ವಿವರಣೆ ನೀಡಲು ಏಳು ದಿನಗಳ ಕಾಲಾವಕಾಶ ಬೇಕು. ಆದರೆ, ಸ್ಪೀಕರ್ ಅವರು ನಮಗೆ ಮೂರು ದಿನ ಮಾತ್ರ ಕಾಲಾವಕಾಶ ನೀಡಿದ್ದಾರೆ. ಅದರ ಮಧ್ಯೆಯೇ ಹೆಚ್ಚು ದಿನ ಕಾಲಾವಕಾಶ ನೀಡುವಂತೆ ಕೋರಿದ್ದರೂ ಅದನ್ನು ಕೂಡ ಪರಿಗಣಿಸದೆ ನಮ್ಮನ್ನು ಅನರ್ಹಗೊಳಿಸಿದ್ದಾರೆ. ಇಲ್ಲೂ ಸಾಮಾಜಿಕ ನ್ಯಾಯ ಪಾಲಿಸದ ಸ್ಪೀಕರ್ ಉದ್ದೇಶಪೂರ್ವಕವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ ಎಂಬುದು ಅವರ ಮತ್ತೊಂದು ವಾದ. ಹೀಗಾಗಿ ಇಲ್ಲಿ ಅನರ್ಹತೆ ಮತ್ತು ರಾಜಿನಾಮೆ ಕುರಿತು ಸಮಗ್ರ ವಿಚಾರಣೆ ಅಗತ್ಯವಿದೆ ಎಂಬುದು ನ್ಯಾಯಾಲಯದ ಅಭಿಪ್ರಾಯ.

ಸ್ಪೀಕರ್ ಅನರ್ಹತೆಗೆ ಕಾಲಮಿತಿ ನಿಗದಿಪಡಿಸಬಹುದೇ?

ಇದರ ಜತೆಗೆ ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿರುವುದು ಕೂಡ ಇತ್ಯರ್ಥಗೊಳಿಸಲು ಜಟಿಲವಾದ ವಿಷಯವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಅವರಿಗೆ ಇದೆಯಾದರೂ ಅದಕ್ಕೆ ಕಾಲಮಿತಿ ನಿಗದಿಪಡಿಸುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ, 17 ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಒಂದು ಕಾಲಮಿತಿ ನಿಗದಿಪಡಿಸಿದ್ದಾರೆ. ಅರೆ ನ್ಯಾಯಾಂಗ ಅಧಿಕಾರ ಹೊಂದಿರುವವರು ವಿವೇಚನಾಧಿಕಾರ ಬಳಸಿ ನಿರ್ಧಾರ ಕೈಗೊಳ್ಳಬಹುದು. ಅದರಂತೆ ಸ್ಪೀಕರ್ ಇಂತಿಷ್ಟು ಅವಧಿಗೆ ಎಂದು ಅನರ್ಹತೆ ಆದೇಶ ಹೊರಡಿಸಿದ್ದಾರೆ.

ಸಮಸ್ಯೆ ಉದ್ಭವವಾಗಿದ್ದೇ ಇಲ್ಲಿ. ಸ್ಪೀಕರ್ ಅವರ ಆದೇಶದ ಪ್ರಕಾರ ಅನರ್ಹಗೊಂಡಿರುವ 17 ಮಂದಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆ ಪ್ರವೇಶಿಸುವಂತಿಲ್ಲ. ಚುನಾವಣಾ ಆಯೋಗದ ಪ್ರಕಾರ ಅನರ್ಹತೆಗೆ ಒಳಗಾದವರು ಉಪ ಚುನಾವಣೆಗೆ ಸ್ಪರ್ಧಿಸಬಹುದು. ಈ ವಿರೋಧಾಭಾಸದಿಂದಾಗಿ 17 ಶಾಸಕರು ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದು. ಆದರೆ, ವಿಧಾನಸಭೆ ಪ್ರವೇಶಿಸುವಂತಿಲ್ಲ ಎನ್ನುವಂತಾಗುತ್ತದೆ. ಚುನಾವಣೆಗೆ ಸ್ಪರ್ಧಿಸಬಹುದು ಎಂದಾದರೆ ಗೆದ್ದು ವಿಧಾನಸಭೆ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಲು ಸಾಧ್ಯವೇ? ಇಲ್ಲಿ ಸ್ಪೀಕರ್ ಆದೇಶವನ್ನು ಪಾಲಿಸಬೇಕೋ? ಚುನಾವಣಾ ಆಯೋಗದ ನಿಯಮ ಪಾಲಿಸಬೇಕೋ? ಎಂಬ ಪ್ರಶ್ನೆ ಎದುರಾಗುತ್ತದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದ ಬಳಿಕವೇ ಅನರ್ಹತೆ ಪ್ರಕರಣದ ಕುರಿತು ತೀರ್ಪು ನೀಡಬೇಕಾಗಿರುವುದರಿಂದಲೇ ಸುಪ್ರೀಂ ಕೋರ್ಟ್ ಉಪ ಚುನಾವಣೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ. ಅಕ್ಟೋಬರ್ 22ರಿಂದ ಮತ್ತೆ ವಿಚಾರಣೆ ನಡೆಯಲಿದ್ದು, ಅದು ಮುಗಿದು ಅಂತಿಮ ಆದೇಶ ಹೊರಬೀಳುವವರೆಗೆ 17 ಶಾಸಕರ ಕ್ಷೇತ್ರಗಳಿಗೆ ಚುನಾವಣೆ ನಡೆಸುವಂತಿಲ್ಲ. ಅಷ್ಟರ ಮಟ್ಟಿಗೆ ಅನರ್ಹ ಶಾಸಕರು ಬಚಾವ್. ಆದರೆ, ವಿಚಾರಣೆ, ಚುನಾವಣೆ ಮುಂದಕ್ಕೆ ಹೋಗುತ್ತಿದ್ದಂತೆ ಅವರ ಅಧಿಕಾರದ ಅವರ ಕನಸನ್ನು ಕೂಡ ಮುಂದೂಡುತ್ತಾ ಹೋಗಬೇಕಾಗುತ್ತದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...