ಭಾರತ ಸರ್ಕಾರ ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ಭಾರತೀಯ ಆಡಳಿತ , ಅರಣ್ಯ ಹಾಗೂ ಪೋಲೀಸ್ ಸೇವೆಯನ್ನು ಜಾರಿಗೊಳಿಸಿದೆ. ಹಿಂದೆ ಬ್ರಿಟಿಷರ ಕಾಲದಲ್ಲೇ ಇಂಡಿಯನ್ ಸಿವಿಲ್ ಸರ್ವೀಸ್ ಎಂಬ ಸೇವೆಯನ್ನು ಜಾರಿಗೆ ತರಲಾಗಿತ್ತು. ನಂತರ ಅದನ್ನು ಭಾರತೀಯ ಆಡಳಿತ ಸೇವೆ ಎಂದು ಬದಲಾವಣೆ ಮಾಡಲಾಯಿತು. ಈ ಉನ್ನತ ಹುದ್ದೆಗಳಿಗೆ ಸಂವಿಧಾನದ ರಕ್ಷಣೆ ಇದ್ದು ಹೆಚ್ಚಿನ ಅಧಿಕಾರವನ್ನೂ ಹೊಂದಿರುವುದರಿಂದ ಶಾಸಕಾಂಗವು ಈ ಅಧಿಕಾರಿಗಳನ್ನು ಸಕಾರಣವಿಲ್ಲದೆ ಸೇವೆಯಿಂದ ಹೊರಗೆ ಕಳಿಸುವುದು ಅಸಾದ್ಯ. ಹಾಗಾಗಿ ನಮ್ಮ ಯುವ ಪ್ರತಿಭಾವಂತರು ಐಎಎಸ್/ಐಪಿಎಸ್/ ಐಎಫ್‌ಎಸ್ ಅಧಿಕಾರಿಗಳಾಗಬೇಕೆಂಬ ಕನಸು ಕಾಣುವುದು ಸಹಜ.
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಉನ್ನತ ಹುದ್ದೆಗಳಿಗೆ ಐಎಎಸ್‌ಯೇತರ ಅಧಿಕಾರಿಗಳನ್ನು ನೇಮಿಸುತ್ತಿದ್ದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
2014 ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ಕೆಲವು ಸಚಿವಾಲಯಗಳ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗಳಿಗೆ ಐಎಎಸ್‌ಯೇತರ ಹಿರಿಯ ಅಧಿಕಾರಿಗಳನ್ನೇ ನೇಮಿಸಲಾಗುತ್ತಿದೆ. ಸಾಮಾನ್ಯವಾಗಿ ಎಲ್ಲ ಹಿರಿಯ ಐಎಎಸ್ ಅಧಿಕಾರಿಗಳೂ ಸರ್ಕಾರದ ಸಚಿವಾಲಯದ ಮುಖ್ಯಸ್ಥನ ಹುದ್ದೆಗೆ ಏರುವ ಕನಸು, ಗುರಿಯನ್ನು ಹೊಂದಿರುತ್ತಾರೆ. ಈ ಹುದ್ದೆಯಲ್ಲಿ ಸರ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಯಶಸ್ವಿಯಾಗಿ ಜಾರಿಗೊಳಿಸುವ ಅಧಿಕಾರ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲಾಖೆಯೊಂದರ ಕಾರ್ಯಕ್ಷಮತೆ, ದಕ್ಷತೆ ಮತ್ತು ಚಟುವಟಿಕೆ ಯನ್ನು ನಿಯಂತ್ರಿಸುವ ಮತ್ತು ಚುರುಕುಗೊಳಿಸುವ ಅಧಿಕಾರವೂ ಇರುತ್ತದೆ.
ಈ ರೀತಿ ಐಎಎಸ್‌ಯೇತರ ಅಧಿಕಾರಿಗಳ ನೇಮಕದಿಂದಾಗಿ ಹಿರಿಯ ಐಎಎಸ್ ಅಧಿಕಾರಿಗಳಿಗೆ ಇರಿಸು ಮುರಿಸೂ ಅಗಿದೆ. ಈ ತಿಂಗಳ ಮೊದಲ ವಾರದಲ್ಲಿ ಸಂಪುಟ ಸಮಿತಿಯು ನಾಲ್ವರು ಐಎಎಸ್ ಯೇತರ ಅಧಿಕಾರಿಗಳನ್ನು ಕಾರ್ಯದರ್ಶಿ ಹುದ್ದೆಗೆ ನೇಮಿಸಿತು. ಇದರಲ್ಲಿ ಇಂಡಿಯನ್ ರೆವಿನ್ಯೂ ಸರ್ವೀಸ್ ನ ಜಾರಿ ನಿರ್ದೇಶನಾಲಯದ ನಿರ್ದೆಶಕ ಸಂಜಯ್ ಕುಮಾರ್ ಮಿಶ್ರ ಅವರಿಗೆ ಪದೋನ್ನತಿ ನೀಡಿ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇದಕ್ಕೂ ಮೊದಲು ಅನುರಾಧ ಮಿತ್ರ ಅವರನ್ನು ಅಧಿಕೃತ ಭಾಷಾ ವಿಭಾಗದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.
ಕೆಲವು ಸಚಿವಾಲಯಗಳಲ್ಲಿ ಐಎಎಸ್‌ಯೇತರ ಅಧಿಕಾರಿಗಳನ್ನು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದರೂ ಅಲ್ಲಿನ ಸಚಿವಾಲಯಗಳಲ್ಲಿನ ಮುಖ್ಯಸ್ಥರು ಹಿರಿಯ ತಜ್ಞರೇ ಆಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥರಾಗಿ ಹಿರಿಯ ವಿದೇಶಾಂಗ ಸೇವೆಯ ಅಧಿಕಾರಿ ಇದ್ದಾರೆ. ಅದೇ ರೀತಿ ರೈಲ್ವೇ ಸಚಿವಾಲಯದಲ್ಲಿ ರೈಲ್ವೇ ಸೇವೆಯ ಹಿರಿಯ ಅಧಿಕಾರಿ ಮುಖ್ಯಸ್ಥರಾಗಿದ್ದಾರೆ. ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವ ಐಎಎಸ್ ಯೇತರ ಅಧಿಕಾರಿಗಳನ್ನು ಅವರು ಪಾಂಡಿತ್ಯ ಹೊಂದಿಲ್ಲದ ಇಲಾಖೆಗಳ ಕಾರ್ಯದರ್ಶಿಗಳನ್ನಾಗಿ ನೇಮಿಸುವುದರಿಂದ ಈ ಅಧಿಕಾರಿ ವೃಂದದಲ್ಲಿ ತಾವೂ ಉನ್ನತ ಹುದ್ದೆ ಅಲಂಕರಿಸುವ ಅವಕಾಶ ಹೆಚ್ಚಿದೆ ಎಂದು ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ. ಏಕೆಂದರೆ ಇದಕ್ಕೂ ಮೊದಲು ಜೀವಮಾನವಿಡೀ ಅವರು ಐಎಎಸ್ ಅಧಿಕಾರಿಗಳ ಕೈ ಕೆಳಗೇ ಕೆಲಸ ಮಾಡಬೇಕಾಗಿತ್ತು.
2010 ರಿಂದ 2014 ರ ವರೆಗೆ ಯಾವುದೇ ಐಎಎಸ್ ಯೇತರ ಅಧಿಕಾರಿಯನ್ನು ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿಲ್ಲ. 2014 ರಲ್ಲಿ ಇಬ್ಬರು , 2015 ರಲ್ಲಿ ನಾಲ್ವರು, 2016 ರಲ್ಲಿ ಆರು, 2017 ರಲ್ಲಿ ಇಬ್ಬರು ಹಾಗೂ 2018 ರಲ್ಲಿ ಆರು ಮಂದಿಗೆ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಈ ರೀತಿ ನೇಮಕಾತಿ ಮಾಡುವುದರಲ್ಲಿ ತಪ್ಪೇನಿದೆ ? ಇದರಿಂದ ಬದಲಾವಣೆಗೆ ಅವಕಾಶವಾಗಿದೆ ಎಂಬ ಅಭಿಪ್ರಾಯ ನಾನ್ ಐಎಎಸ್ ಅಧಿಕಾರಿ ವೃಂದದಲ್ಲಿದೆ. ಏಕೆಂದರೆ ಕೆಲವು ವೇಳೆ ಸರ್ಕಾರ ಐಎಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳನ್ನು ತಮಗೆ ಸಂಭಂಧವೇ ಪಡದ ಇಲಾಖೆಗಳಿಗೆ ಮುಖ್ಯಸ್ಥರನ್ನಾಗಿ ನೇಮಿಸುವುದಿಲ್ಲವೇ ಎಂದು ಒರ್ವರು ಹೇಳುತ್ತಾರೆ.
2014 ಕ್ಕೂ ಮೊದಲು ಐಎಎಸ್ ಯೇತರ ಅಧಿಕಾರಿಗಳನ್ನು ಉಪ ಕಾರ್ಯದರ್ಶಿ ಹುದ್ದೆಗಳ ವರೆಗೆ ಸೇವೆ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗುತಿತ್ತು. ಈ ಬೆಳವಣಿಗೆಯಿಂದ ಐಎಎಸ್ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ . .
ಇದು ನಿಷ್ಠಾವಂತ ಅಧಿಕಾರಶಾಹಿಯನ್ನು ಖಾತರಿಪಡಿಸುವ ಒಂದು ಖಚಿತವಾದ ಮಾರ್ಗವಾಗಿದೆ. ಇತರ ಸೇವೆಗಳ ಅಧಿಕಾರಿಗಳು ಇದ್ದಕ್ಕಿದ್ದಂತೆ ಬಡ್ತಿ ಪಡೆಯಲು ಪ್ರಾರಂಭಿಸಿದಾಗ, ಅವರು ರಾಜಕೀಯ ನಾಯಕರ ಇಚ್ಚೆಗೆ ಅನುಗುಣವಾಗಿ ವರ್ತಿಸಬೇಕಾಗುತ್ತದೆ . ಅದು ಅವರಿಗೆ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ” ಎಂದು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ. ಮತ್ತೊಬ್ಬರ ಪ್ರಕಾರ ಇದೊಂದು ಹಳೆಯ ಚಿಂತನೆ ಆಗಿದ್ದು ಹಿಂದಿನ ಸರ್ಕಾರಗಳು ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ ಎಂದರು.
ಸರ್ಕಾರ ಅರ್ಹತೆಯನ್ನು , ಕಾರ್ಯ ಕ್ಷಮತೆಯನ್ನು ಪರಿಗಣಿಸದೆ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಕಾರ್ಯದರ್ಶಿ ಮಟ್ಟದ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದು ಆಡಳಿತ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾದ್ಯತೆ ಹೆಚ್ಚಿದೆ.